Sunday, 24th November 2024

Hoax Bomb Threats: ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ; ಭದ್ರತಾ ನಿಯಮ ಬಿಗಿಗೊಳಿಸಲು ಸರ್ಕಾರದ ಚಿಂತನೆ

Hoax Bomb Threats

ಹೊಸದಿಲ್ಲಿ: ದೇಶದಲ್ಲಿ ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕುವ ಪ್ರಕರಣ ಹೆಚ್ಚಾಗುತ್ತಿದ್ದು, ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ʼʼಹಲವು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಹುಸಿ ಬಾಂಬ್ ಕರೆ ಬರುತ್ತಿರುವ ಹಿನ್ನಲೆಯಲ್ಲಿ ಇದನ್ನು ಎದುರಿಸಲು ಕೇಂದ್ರ ಸರ್ಕಾರ ಶಾಸನಾತ್ಮಕ ಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆʼʼ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮ್ ಮೋಹನ್ ನಾಯ್ಡು (K Rammohan Naidu) ಸೋಮವಾರ (ಅಕ್ಟೋಬರ್‌ 21) ತಿಳಿಸಿದ್ದಾರೆ (Hoax Bomb Threats).

ಅಕ್ಟೋಬರ್ 14ರಿಂದ 7 ದಿನಗಳಲ್ಲಿ ಸುಮಾರು 100 ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದ ನಂತರ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ನಾಗರಿಕರ ಸುರಕ್ಷತೆ ಸರ್ಕಾರದ ಮೊದಲ ಆದ್ಯತೆ ಎಂದು ರಾಮ್‌ ಮೋಹನ್‌ ನಾಯ್ಡು ಘೋಷಿಸಿದ್ದಾರೆ. ಅಂತಹ ಬೆದರಿಕೆ ಕರೆಗಳನ್ನು ಮಾಡುವವರನ್ನು ಗುರುತಿಸಿ ನೋ ಫೈ ಲಿಸ್ಟ್‌ (ಹಾರಾಟ ನಿಷೇಧ ಪಟ್ಟಿ)ಗೆ ಸೇರಿಸಲು ನಿಯಮಗಳಿಗೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಅಂತಹ ಬೆದರಿಕೆಗಳನ್ನು ಹಾಕುವುದನ್ನುಅಪರಾಧವನ್ನಾಗಿ ಘೋಷಿಸಿ ಕಠಿಣ ಶಿಕ್ಷೆ ಹಾಗೂ ದಂಡ ವಿದಿಸಲಾಗುವುದು ಎಂದೂ ವಿವರಿಸಿದ್ದಾರೆ.

1982ರ ವಿಮಾನ ಭದ್ರತಾ ನಿಯಮಗಳಿಗೆ ತಿದ್ದುಪಡಿ ತರಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಸಚಿವರು ಹೇಳಿದ್ದೇನು?

ʼʼಅಗತ್ಯವಿದ್ದರೆ ಸಚಿವಾಲಯದಿಂದ ಕೆಲವು ಶಾಸನಾತ್ಮಕ ನಿಯಮಗಳನ್ನು ಯಾರಿಗೆ ತರಲು ಚಿಂತನೆ ನಡೆಸಿದ್ದೇವೆ. ಮುಖ್ಯವಾಗಿ 2 ವಿಚಾರಗಳಲ್ಲಿ ಬದಲಾವಣೆಗೆ ಮುಂದಾಗಿದ್ದೇವೆ. ಮೊದಲನೆಯದಾಗಿ ವಿಮಾನ ಭದ್ರತಾ ನಿಯಮಗಳಲ್ಲಿ ತಿದ್ದುಪಡಿ. ಈ ನಿಯಮಗಳನ್ನು ಬದಲಾಯಿಸುವ ಮೂಲಕ ನಾವು ಅಪರಾಧಿಯನ್ನು ನೋ ಫೈ ಲಿಸ್ಟ್‌ಗೆ ಸೇರಿಸಲಿದ್ದೇವೆ. ಎರಡನೆಯದಾಗಿ ವಾಯು ಯಾನ ಭದ್ರತಾ ನಿಯಮಗಳಿಗೆ ತಿದ್ದುಪಡಿ ತರುವುದುʼʼ ಎಂದು ರಾಮ್ ಮೋಹನ್ ನಾಯ್ಡು ವಿವರಿಸಿದ್ದಾರೆ.

“ಕಳೆದ ವಾರ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ 8 ವಿಮಾನಗಳನ್ನು ಬೇರೆ ಕಡೆ ತುರ್ತು ಭೂ ಸ್ಪರ್ಶ ಮಾಡಲಾಗಿದೆ. ಪ್ರತಿ ಬೆದರಿಕೆಯನ್ನು ನಾವು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಲಾಗುತ್ತಿದೆ. ನಾವು ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಎಲ್ಲಿಯೂ ರಾಜಿ ಮಾಡಿಕೊಳ್ಳುತ್ತಿಲ್ಲ. ಹೆಚ್ಚಿನವು ಹುಸಿ ಬೆದರಿಕೆಗಳಾಗಿದ್ದರೂ, ನಾವು ಅವುಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಿಲ್ಲ. ನಾವು ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದೇವೆ” ಎಂದು ಸಚಿವರು ತಿಳಿಸಿದ್ದಾರೆ.

ಪ್ರೋಟೋಕಾಲ್ ತುಂಬಾ ಕಠಿಣವಾಗಿದೆ ಮತ್ತು ಕಟ್ಟುನಿಟ್ಟಾದ ಕಾರ್ಯವಿಧಾನಗಳನ್ನು ಅನುಸರಿಸಬೇಕಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ವಿಮಾನಯಾನ ಸಂಸ್ಥೆಗಳೊಂದಿಗೆ ಹಲವು ಸಭೆಗಳನ್ನು ನಡೆಸಲಾಗಿದೆ ಮತ್ತು ಪ್ರಯಾಣಿಕರ ಅನಾನುಕೂಲತೆಯನ್ನು ಕಡಿಮೆ ಮಾಡಲು ಅಭಿಪ್ರಾಯ ಕೋರಲಾಗಿದೆ ಎಂದು ಹೇಳಿದ್ದಾರೆ.

“ನಾವೆಲ್ಲರೂ ಒಂದು ಸಾಮಾನ್ಯ ಗುರಿಯನ್ನು ಸಾಧಿಸಲು ಕೆಲಸ ಮಾಡುತ್ತಿದ್ದೇವೆ. ಒಂದು ವಿಮಾನವನ್ನು ಬೇರೆಡೆ ಲ್ಯಾಂಡಿಂಗ್‌ ಮಾಡಿಸುವುದು ಅಥವಾ ವಿಳಂಬ ಮಾಡುವುದು ಸಹ ನಮಗೆ ಬೇಕಿಲ್ಲ. ಬೆದರಿಕೆಗಳ ಬಗ್ಗೆ ತನಿಖೆಯನ್ನು ವೇಗಗೊಳಿಸಲು ನಾವು ಗೃಹ ಸಚಿವಾಲಯ ಮತ್ತು ರಾಜ್ಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಪ್ರಯಾಣಿಕರ ಸುರಕ್ಷತೆ, ಭದ್ರತೆ ಮತ್ತು ಅವರ ಸುಗಮ ಪ್ರಯಾಣವು ನಮ್ಮ ಆದ್ಯತೆ” ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Bomb Threat : ‘ತೋಳ ಬಂತು ಕತೆಯಾಯ್ತು’ ವಿಮಾನಗಳಿಗೆ ಬಾಂಬ್‌ ಬೆದರಿಕೆ! 32 ಪ್ರಕರಣಗಳಲ್ಲಿ ಒಂದು ವಿಮಾನವಷ್ಟೇ ತುರ್ತು ಭೂಸ್ಪರ್ಶ