ಬೆಂಗಳೂರು: ಪ್ರಜ್ವಲ್ ರೇವಣ್ಣರನ್ನು ಟೀಕಿಸುವ ಭರದಲ್ಲಿ ಮಹಿಳೆಯರ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ರಾಹುಲ್ ಗಾಂಧಿ (Rahul Gandhi) ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ವಜಾಗೊಳಿಸಿದೆ. ಸೋಮವಾರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಅರ್ಜಿದಾರರಿಗೆ 25 ಸಾವಿರ ರೂ. ದಂಡ ವಿಧಿಸಿ ಅರ್ಜಿ ವಜಾ ಮಾಡಿದೆ.
ಕಳೆದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್ನ ಉಚ್ಚಾಟಿತ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು 400 ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿ, ಅವರ ವಿಡಿಯೊಗಳನ್ನು ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕವಾಗಿ ಸುಳ್ಳು ಹರಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮಕೈಗೊಳ್ಳಲು ನಿರ್ದೇಶಿಸಬೇಕು ಎಂದು ಕೋರಿ ಆಲ್ ಇಂಡಿಯಾ ದಲಿತ ಆಕ್ಷನ್ ಕಮಿಟಿಯು ರಾಷ್ಟ್ರೀಯ ಅಧ್ಯಕ್ಷ ಚಿ.ನಾ. ರಾಮು ಮತ್ತು ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ದೇವರಾಜ್ ಅವರ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಸೋಮವಾರ ಅರ್ಜಿಯ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾ. ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠವು, ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ವಜಾಗೊಳಿಸಿ, ಅರ್ಜಿದಾರರಿಗೆ 25 ಸಾವಿರ ದಂಡ ವಿಧಿಸಿದೆ.
ಅರ್ಜಿದಾರರ ಪರ ವಕೀಲ ಎಸ್.ಎಸ್. ರವಿಶಂಕರ್ ವಾದ ಮಂಡಿಸಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಮತಕ್ಕಾಗಿ ಪ್ರಜ್ವಲ್ ರೇವಣ್ಣ 400 ಮಹಿಳೆಯರನ್ನು ಅತ್ಯಾಚಾರ ಮಾಡಿ, ವಿಡಿಯೊ ಮಾಡಿಕೊಂಡಿದ್ದಾರೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಭಾರತೀಯ ಮಹಿಳೆಯರ ಘನತೆಗೆ, ವಿಶೇಷವಾಗಿ ಹಾಸನದ ಮಹಿಳೆಯರ ಘನತೆಗೆ ಹಾನಿ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮಕ್ಕೆ ಆದೇಶಿಸಬೇಕು ಎಂದು ಕೋರಿದರು.
ಈ ಸುದ್ದಿಯನ್ನೂ ಓದಿ | Prajwal Revanna Case: ಅತ್ಯಾಚಾರ ಕೇಸ್ನಲ್ಲಿ ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್; 3 ಜಾಮೀನು ಅರ್ಜಿ ವಜಾ!
ರಾಹುಲ್ ಗಾಂಧಿ ಅವರನ್ನು ಪ್ರತಿನಿಧಿಸಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು, ದುರುದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಆಕ್ಷೇಪಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ವಜಾ ಮಾಡಿದೆ.
ಏನಿದು ಪ್ರಕರಣ?
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ 2024ರ ಮೇ 2ರಂದು ಶಿವಮೊಗ್ಗದಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ ಅವರು ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ, ವಿಡಿಯೊ ಮಾಡಿಕೊಂಡಿದ್ದಾರೆ. ಇಂತಹ ಅಭ್ಯರ್ಥಿಯ ಪರವಾಗಿ ಮತ ಕೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರ ಕ್ಷಮೆ ಕೋರಬೇಕು ಎಂದು ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆಯ ಮೂಲಕ ಮಹಿಳೆಯ ಘನತೆಗೆ ವಿಶೇಷವಾಗಿ ಹಾಸನ ಭಾಗದ ಮಹಿಳೆಯರ ಘನತೆಗೆ ರಾಹುಲ್ ಹಾನಿ ಮಾಡಿದ್ದಾರೆ. ಸುಳ್ಳು ಸುದ್ದಿ ಹರಡುವ ಮೂಲಕ ಮತಗಳಿಕೆಗೆ ಪ್ರಕರಣವನ್ನು ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಿಐಎಲ್ನಲ್ಲಿ ಮನವಿ ಮಾಡಲಾಗಿತ್ತು.