ಹೊಸದಿಲ್ಲಿ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆ (Wayanad Bypolls)ಗೆ ದಿನಾಂಕ ಘೋಷಣೆಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಸ್ಪರ್ಧಿಸಲಿದ್ದು, ಬುಧವಾರ (ಅಕ್ಟೋಬರ್ 23) ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡವಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತಿತರರು ಭಾಗವಹಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಯ ಹಿನ್ನೆಲೆಯಲ್ಲಿ ಸೋಮವಾರ (ಅಕ್ಟೋಬರ್ 21) ಪ್ರಿಯಾಂಕಾ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕಲ್ಪೆಟ್ಟ ಬಸ್ ನಿಲ್ದಾಣದಿಂದ ರೋಡ್ ಶೋ ಆರಂಭಿಸಲಿದ್ದಾರೆ. ಬಳಿಕ 12 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸಲಿದ್ದಾರೆ. ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖ್ಯಮಂತ್ರಿಗಳು, ರಾಜ್ಯ ಮತ್ತು ದೇಶದ ಉನ್ನತ ಮಟ್ಟದ ನಾಯಕರು ರೋಡ್ ಶೋ ವೇಳೆ ಉಪಸ್ಥಿತರಿರುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
केरल की वायनाड संसदीय सीट पर नामांकन और चुनावी अभियान से पहले आज भारतीय राष्ट्रीय कांग्रेस अध्यक्ष श्री मल्लिकार्जुन खरगे जी से मुलाकात कर उनका मार्गदर्शन और आशीर्वाद लिया। pic.twitter.com/lGxWvIiH9X
— Priyanka Gandhi Vadra (@priyankagandhi) October 21, 2024
ಚುನಾವಣಾ ಆಯೋಗ ಕಳೆದ ವಾರ ವಯನಾಡು ಕ್ಷೇತ್ರದ ಉಪ ಚುನಾವಣೆಯ ದಿನಾಂಕ ಘೋಷಿಸಿದೆ. ನವೆಂಬರ್ 13ರಂದು ಇಲ್ಲಿ ಮತದಾನ ನಡೆಯಲಿದೆ. ನ. 23ರಂದು ಫಲಿತಾಂಶ ಪ್ರಕಟವಾಗಲಿದೆ.
ಚುನಾವಣೆಗೆ ಪ್ರಿಯಾಂಕಾ ಪ್ರವೇಶ
5 ವರ್ಷಗಳ ಹಿಂದೆ ಸಕ್ರೀಯ ರಾಜಕೀಯಕ್ಕೆ ಧುಮುಕಿದ ಪ್ರಿಯಾಂಕಾ ಗಾಂಧಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅದೂ ತಮ್ಮ ಸಹೋದರ ರಾಹುಲ್ ಗಾಂಧಿಗೆ ರಾಜಕೀಯವಾಗಿ ಮರುಹುಟ್ಟು ನೀಡಿದ ವಯನಾಡು ಕ್ಷೇತ್ರದ ಮೂಲಕ ಎನ್ನುವುದು ವಿಶೇಷ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿರುವ ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ಕೇರಳದ ವಯನಾಡು ಎರಡೂ ಕಡೆ ರಾಹುಲ್ ಗಾಂಧಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಜಯಭೇರಿ ಭಾರಿಸಿದ್ದರು. 2019ರಲ್ಲಿ ಉತ್ತರ ಪ್ರದೇಶದ ಅಮೇಥಿ ಮತ್ತು ವಯನಾಡಿನಲ್ಲಿ ಸ್ಪರ್ಧಿಸಿದ್ದ ಅವರು ಅಮೇಥಿಯಲ್ಲಿ ಬಿಜೆಪಿಯ ಸ್ಲೃತಿ ಇರಾನಿ ವಿರುದ್ಧ ಸೋತಿದ್ದರು. ವಯನಾಡಿನಲ್ಲಿ ಸತತ ಎರಡನೇ ಬಾರಿ ಜಯ ಗಳಿಸಿದ್ದ ಅವರು ಅನಿವಾರ್ಯವಾಗಿ ಅಲ್ಲಿನ ಸ್ಥಾನವನ್ನು ತ್ಯಜಿಸಿದ್ದಾರೆ. ಹೀಗಾಗಿ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಬೇಕು ಎಂದು ಆಗ್ರಹಿಸಿದ್ದರು.
ಪ್ರಿಯಾಂಕಾ ಗಾಂಧಿ ಆಯ್ಕೆಯಾದರೆ ಇದೇ ಮೊದಲ ಬಾರಿಗೆ ಸಂಸದೆಯಾಗಿ ಸಂಸತ್ ಪ್ರವೇಶಿಸಲಿದ್ದಾರೆ. ಮೊದಲ ಬಾರಿಗೆ ಗಾಂಧಿ ಕುಟುಂಬದ ಮೂವರು ಸದಸ್ಯರಾದ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಒಟ್ಟಿಗೆ ಸಂಸತ್ತಿನಲ್ಲಿ ಇರಲಿದ್ದಾರೆ. ಈ ಬಾರಿ ಸೋನಿಯಾ ಗಾಂಧಿ ರಾಯ್ ರಾಯ್ ಬರೇಲಿ ಕ್ಷೇತ್ರವನ್ನು ಮಗನಿಗಾಗಿ ತ್ಯಾಗ ಮಾಡಿ ರಾಜ್ಯಸಭೆಯತ್ತ ಮುಖ ಮಾಡಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿಯೇ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯುತ್ತಾರೆ ಎಂಬ ವದಂತಿ ಇತ್ತು. ಆಗ ಬಿಜೆಪಿ ಅಲೆಯನ್ನು ತಡೆಯಲು ಕಾಂಗ್ರೆಸ್ ವಾರಣಾಸಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲಿದೆ ಎಂದೇ ಊಹಿಸಲಾಗಿತ್ತು. ಆದರೆ ಅವರು ಸ್ಪರ್ಧಿಸಿರಲಿಲ್ಲ. ಕೊನೆಗೂ ಕಾರ್ಯಕರ್ತರ ಆಶಯದಂತೆ ಅವರು ಇದೀಗ ಸ್ಪರ್ಧೆಗೆ ಮನಸ್ಸು ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Wayanad Bypolls: ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಎದುರಿಸಲು ಸಜ್ಜಾದ ಬಿಜೆಪಿಯ ನವ್ಯಾ ಹರಿದಾಸ್ ಹಿನ್ನೆಲೆ ಕುತೂಹಲಕರ!