ಹೊಸದಿಲ್ಲಿ: ಬಹಿಷ್ಕೃತ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ (Taslima Nasreen) ಅವರು ಭಾರತದಲ್ಲಿ ಉಳಿಯಲು ಅವಕಾಶ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಜುಲೈಯಲ್ಲಿ ಮುಕ್ತಾಯಗೊಂಡ ತಮ್ಮ ಭಾರತೀಯ ನಿವಾಸದ ಪರವಾನಗಿಯನ್ನು ಸರ್ಕಾರವು ಇನ್ನೂ ನವೀಕರಿಸಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ ಭಾರತವನ್ನು ತಮ್ಮ 2ನೇ ಮನೆ ಎಂದು ಬಣ್ಣಿಸಿದ್ದಾರೆ.
ʼʼಅಮಿತ್ ಶಾ ಅವರಿಗೆ ನಮಸ್ಕಾರ. ನಾನು ಭಾರತದಲ್ಲಿಯೇ ನೆಲೆಸಲು ಬಯಸುತ್ತೇನೆ. ಯಾಕೆಂದರೆ ಈ ಅದ್ಭುತ ದೇಶವನ್ನು ನಾನು ಪ್ರೀತಿಸುತ್ತೇನೆ. ಕಳೆದ 20 ವರ್ಷಗಳಿಂದ ಇದು ನನ್ನ ಎರಡನೇ ಮನೆಯಾಗಿದೆ. ಆದರೆ ಗೃಹ ಸಚಿವಾಲಯ (MHA) ನನ್ನ ನಿವಾಸದ ಪರವಾನಗಿಯನ್ನು ಕಳೆದ ಜುಲೈಯಿಂದ ನವೀಕರಿಸಿಲ್ಲ. ಈ ಬಗ್ಗೆ ಆತಂಕ ಎದುರಾಗಿದೆ. ಇಲ್ಲೇ ನೆಲೆಸಲು ಅನುಮತಿ ನೀಡಿದರೆ ಕೃತಜ್ಞಳಾಗಿರುತ್ತೇನೆʼʼ ಎಂದು ತಸ್ಲೀಮಾ ನಸ್ರೀನ್ ಬರೆದುಕೊಂಡಿದ್ದಾರೆ.
.@AmitShah Dear AmitShahji 🙏Namaskar. I live in India because I love this great country. It has been my 2nd home for the last 20yrs. But MHA has not been extending my residence permit since July22. I'm so worried.I would be so grateful to you if you let me stay. Warm regards.🙏
— taslima nasreen (@taslimanasreen) October 21, 2024
ಕೋಮುವಾದದ ಕಟು ಟೀಕಾಕಾರರಾಗಿದ್ದ ನಸ್ರೀನ್ 1994ರಿಂದಲೂ ದೇಶಭ್ರಷ್ಟರಾಗಿ ಬದುಕುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಕೋಮುವಾದ ಮತ್ತು ಮಹಿಳಾ ಸಮಾನತೆಯ ಬಗ್ಗೆ ಕೃತಿ ಬರೆಯುತ್ತಿದ್ದ ಅವರು ಇಸ್ಲಾಮಿಕ್ ಮೂಲಭೂತವಾದಿಗಳಿಂದ ಟೀಕೆಗಳನ್ನು ಎದುರಿಸಿದ ನಂತರ ದೇಶವನ್ನು ತೊರೆದಿದ್ದರು.
ವಿವಾದಾತ್ಮಕ ಅಂಶಗಳ ಕಾರಣದಿಂದ ತಸ್ಲೀಮಾ ನಸ್ರೀನ್ ಬರೆದಿರುವ ʼಲಜ್ಜಾʼ (1993) ಕಾದಂಬರಿ ಮತ್ತು ಆತ್ಮಕಥೆ ʼಅಮರ್ ಮೆಯೇಬೆಲʼ (1998) ಪುಸ್ತಕಗಳನ್ನು ಬಾಂಗ್ಲಾದೇಶ ಸರ್ಕಾರ ನಿಷೇಧಿಸಿದೆ. ಭಾರತದಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಬಂಗಾಳಿ ಹಿಂದೂಗಳ ಮೇಲೆ ನಡೆದ ಹಿಂಸಾಚಾರ, ಅತ್ಯಾಚಾರ, ಲೂಟಿ ಮತ್ತು ಹತ್ಯೆಗಳ ಬಗ್ಗೆ ʼಲಜ್ಜಾʼ ಕಾದಂಬರಿ ಬೆಳಕು ಚೆಲ್ಲಿದೆ. ಈ ಕಾರಣಕ್ಕೆ ಅಲ್ಲಿನ ಆಡಳಿತದ ಕೆಂಗಣ್ಣಿಗೆ ಈ ಕೃತಿ ಗುರಿಯಾಗಿತ್ತು.
10 ವರ್ಷಗಳ ಕಾಲ ಸ್ವೀಡನ್, ಜರ್ಮನಿ, ಫ್ರಾನ್ಸ್ ಮತ್ತು ಅಮೆರಿಕದಲ್ಲಿ ನೆಲೆಸಿದ್ದ ಅವರು 2004ರಲ್ಲಿ ಕೋಲ್ಕತ್ತಾಗೆ ಆಗಮಿಸಿದ್ದರು. 2007ರವರೆಗೆ ಇಲ್ಲೇ ನೆಲೆಸಿದ್ದರು. ನಂತರ ಅವರು 3 ತಿಂಗಳ ಕಾಲ ದಿಲ್ಲಿಯಲ್ಲಿದ್ದರು. 2008ರಲ್ಲಿ ಭಾರತವನ್ನು ತೊರೆದು ಅವರು ಅಮೆರಿಕಕ್ಕೆ ತೆರಳಿದರು. ಕೆಲವು ವರ್ಷಗಳ ನಂತರ ನಸ್ರೀನ್ ಮತ್ತೆ ಭಾರತಕ್ಕೆ ಮರಳಿದರು. ಸ್ವಿಡಿಷ್ ಪೌರತ್ವವನ್ನು ಹೊಂದಿರುವ ತಸ್ಲೀಮಾ ನಸ್ರೀನ್ 2011ರಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ.
ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಗಲಭೆ ಮತ್ತು ಪ್ರಧಾನಿ ಹುದ್ದೆ ತ್ಯಜಿಸಿ ಪಲಾಯನ ಮಾಡಿದ್ದ ಶೇಖ್ ಹಸೀನಾ ಪ್ರಕರಣದ ಬಗ್ಗೆ ಮಾತನಾಡಿದ್ದ ಸ್ಲೀಮಾ ನಸ್ರೀನ್ ಅವರು, ʼʼಇಸ್ಲಾಮಿಕ್ ತೀವ್ರಗಾಮಿಗಳು ಯುವಕರನ್ನು ಭಾರತ ವಿರೋಧಿ, ಹಿಂದೂ ವಿರೋಧಿ ಮತ್ತು ಪಾಕಿಸ್ತಾನ ಪರ ಮಾತನಾಡಲು ಬ್ರೈನ್ ವಾಶ್ ಮಾಡುತ್ತಿದ್ದಾರೆʼʼ ಎಂದು ಹೇಳಿದ್ದರು. “ಹಿಂದೂಗಳ ವಿರುದ್ಧದ ಹಿಂಸಾಚಾರ, ಪತ್ರಕರ್ತರನ್ನು ಗುರಿಯಾಗಿಸಿ ದಾಳಿ ನಡೆಸುವುದು ಮತ್ತು ಜೈಲುಗಳಿಂದ ಭಯೋತ್ಪಾದಕರನ್ನು ಬಿಡುಗಡೆ ಮಾಡುವಂತಹ ಇತ್ತೀಚಿನ ಕ್ರಮಗಳು ಖಂಡನೀಯʼʼ ಎಂದು ವಿವರಿಸಿದ್ದರು.
ಈ ಸುದ್ದಿಯನ್ನೂ ಓದಿ: CJI Chandrachud: ದೇವರ ಮೂಲಕ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಇತ್ಯರ್ಥ; ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್