Friday, 22nd November 2024

Credit Card: ಕ್ರೆಡಿಟ್ ಕಾರ್ಡ್ ಕಳೆದು ಹೋದಾಗ ಮಾಡಲೇಬೇಕಾದ 6 ಕೆಲಸಗಳಿವು

Credit Card

ಕ್ರೆಡಿಟ್ ಕಾರ್ಡ್‌ಗಳನ್ನು (Credit Card) ಎಷ್ಟು ಜೋಪಾನವಾಗಿ ಇರಿಸಿದರೂ ಸಾಲದು. ಯಾಕೆಂದರೆ ಎಲ್ಲಾದರೂ ಇದು ಕಳೆದು ಹೋದರೆ ದುರ್ಬಳಕೆಯಾಗುವ (Credit Card Misuse) ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಅಥವಾ ಕಳವಾದರೆ (Credit card is lost or stolen) ಏನು ಮಾಡಬೇಕು ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಂಡಿರುವುದು ಬಹುಮುಖ್ಯ.

ಕ್ರೆಡಿಟ್ ಕಾರ್ಡ್ ಅನ್ನು ಭದ್ರವಾಗಿ ಇರಿಸಬೇಕು. ಒಂದು ವೇಳೆ ಹೀಗೆ ಇರಿಸದೇ ಹೋದ ಕಾರ್ಡ್ ಕಳವಾದರೆ ಅಥವಾ ಕಳೆದು ಹೋದರೆ ಸಾಕಷ್ಟು ಮಾನಸಿಕ ಒತ್ತಡವನ್ನು ಉಂಟು ಮಾಡುತ್ತದೆ. ಹೀಗಾಗಿ ಹಣಕಾಸನ್ನು ರಕ್ಷಿಸಲು ತ್ವರಿತ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಕ್ರೆಡಿಟ್ ಕಾರ್ಡ್ ಕಳೆದುಹೋದ ತಕ್ಷಣ ಮಾಡಬೇಕಾದ ಆರು ಪ್ರಮುಖ ಕೆಲಸಗಳಿವೆ. ಯಾಕೆಂದರೆ ಇದು ನಿಮ್ಮ ಖಾತೆಯ ಹಣವನ್ನು ಭದ್ರಪಡಿಸಿಕೊಳ್ಳಲು ಇರುವ ಪ್ರಮುಖ ದಾರಿಯಾಗಿದೆ.

ತಕ್ಷಣ ಬ್ಯಾಂಕ್‌ಗೆ ಮಾಹಿತಿ ನೀಡಿ

ಕ್ರೆಡಿಟ್ ಕಾರ್ಡ್ ಕಳೆದುಹೋಗಿದೆ ಎಂಬುದು ಅರಿವಾದ ತಕ್ಷಣ ಮೊದಲು ಮಾಡಬೇಕಾದ ಕೆಲಸ ಬ್ಯಾಂಕ್ ಅನ್ನು ಸಂಪರ್ಕಿಸುವುದು. ಕಳೆದುಹೋದ ಕಾರ್ಡ್ ಬಗ್ಗೆ ಬ್ಯಾಂಕ್ ಗೆ ದೂರು ನೀಡಲು ಎರಡು ವಿಧಾನಗಳಿವೆ.

ಮೊದಲನೆಯದ್ದು ಆನ್‌ಲೈನ್ ಬ್ಯಾಂಕಿಂಗ್ ನಲ್ಲಿ ಖಾತೆಗೆ ಲಾಗ್ ಇನ್ ಮಾಡಿ ಅಲ್ಲಿ ಕಳೆದುಹೋದ ಕಾರ್ಡ್ ಅನ್ನು ನಿರ್ಬಂಧಿಸಲು ಇರುವ ಆಯ್ಕೆಯನ್ನು ಪರಿಶೀಲಿಸಿ.

ಇನ್ನೊಂದು ಬ್ಯಾಂಕ್‌ನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಪ್ರತಿನಿಧಿಯೊಂದಿಗೆ ನೇರವಾಗಿ ಮಾತನಾಡಿ. ಅನಧಿಕೃತ ವಹಿವಾಟುಗಳನ್ನು ತಡೆಯಲು ಕಾರ್ಡ್ ಅನ್ನು ನಿರ್ಬಂಧಿಸಲು ಹೇಳಿ. ಅವರು ನೀಡುವ ಮಾರ್ಗದರ್ಶನವನ್ನು ಅನುಸರಿಸಿ.

ಕ್ರೆಡಿಟ್ ಕಾರ್ಡ್ ಅನ್ನು ಯಾರೂ ಬಳಸದಂತೆ ಮಾಡಲು ತಕ್ಷಣವೇ ಅದನ್ನು ನಿರ್ಬಂಧಿಸುವುದು ಅತ್ಯಗತ್ಯ.

Credit Card

ಪಾಸ್‌ವರ್ಡ್‌ ಬದಲಾಯಿಸಿ

ಕ್ರೆಡಿಟ್ ಕಾರ್ಡ್ ಕಳೆದು ಹೋದ ತಕ್ಷಣ ಆ ಕ್ರೆಡಿಟ್ ಕಾರ್ಡ್‌ಗೆ ಲಿಂಕ್ ಮಾಡಲಾಗಿರುವ ಎಲ್ಲಾ ಖಾತೆಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸಬೇಕು. ಆನ್‌ಲೈನ್ ಶಾಪಿಂಗ್ ಸೈಟ್‌ಗಳು, ಚಂದಾದಾರಿಕೆ ಸೇವೆ, ಕಾರ್ಡ್ ವಿವರಗಳನ್ನು ಸಂಗ್ರಹಿಸಲಾಗಿರುವ ಇತರ ಯಾವುದೇ ಪ್ಲ್ಯಾಟ್‌ಫಾರ್ಮ್‌ಗಳಿದ್ದರೂ ಅಲ್ಲಿ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ. ಅಕ್ಷರ, ಸಂಖ್ಯೆ ಮತ್ತು ವಿಶೇಷ ಅಕ್ಷರಗಳ ಮಿಶ್ರಣವನ್ನು ಒಳಗೊಂಡಿರುವ ಅನನ್ಯ ಪಾಸ್‌ವರ್ಡ್‌ಗಳನ್ನು ಆಯ್ಕೆ ಮಾಡಿ. ಇದು ನಿಮ್ಮ ಖಾತೆಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಪೊಲೀಸರಿಗೆ ದೂರು ನೀಡಿ

ಕ್ರೆಡಿಟ್ ಕಾರ್ಡ್ ವಂಚನೆಯಿಂದ ರಕ್ಷಿಸಿಕೊಳ್ಳಲು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ. ಅಲ್ಲಿ ಕಳೆದುಹೋದ ಕಾರ್ಡ್‌ಗೆ ಸಂಬಂಧಿಸಿದಂತೆ ವಿವರಗಳನ್ನು ಸಲ್ಲಿಸಿ. ಇದು ಕಾರ್ಡ್‌ನಿಂದಾದ ಅನಧಿಕೃತ ವಹಿವಾಟುಗಳ ವಿರುದ್ಧ ನಿಮಗೆ ರಕ್ಷಣೆಯನ್ನು ನೀಡುತ್ತದೆ. ಅಲ್ಲದೇ ಎಫ್‌ಐಆರ್ ಹೊಂದುವುದು ಬದಲಿ ಕಾರ್ಡ್ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.

ಕ್ರೆಡಿಟ್ ಕಾರ್ಡ್ ವಿವರಗಳನ್ನು ಪರಿಶೀಲಿಸಿ

ಕ್ರೆಡಿಟ್ ಕಾರ್ಡ್ ಕುರಿತು ಬರುವ ಸಂದೇಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಇದು ಯಾವುದೇ ಅನಧಿಕೃತ ಚಟುವಟಿಕೆಯನ್ನು ತಡೆಯಲು ತಕ್ಷಣವೇ ಬ್ಯಾಂಕ್‌ಗೆ ವರದಿ ಮಾಡಿ. ಇದು ನಿಮಗಾಗುವ ನಷ್ಟವನ್ನು ಕಡಿಮೆ ಮಾಡುತ್ತದೆ. ಬ್ಯಾಂಕ್ ಯಾವುದೇ ಮೋಸದ ವಹಿವಾಟುಗಳ ವಿರುದ್ಧ ತ್ವರಿತ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಕಾರ್ಡ್ ಕಳೆದು ಹೋದ ಬಳಿಕವೂ ಬರುವ ಸಂದೇಶಗಳ ಬಗ್ಗೆ ಪರಿಶೀಲನೆ ನಡೆಸುವುದು ಉತ್ತಮ ಅಭ್ಯಾಸವಾಗಿದೆ.

Credit Card

ಕ್ರೆಡಿಟ್ ಬ್ಯೂರೋವನ್ನು ಸಂಪರ್ಕಿಸಿ

ಕ್ರೆಡಿಟ್ ಕಾರ್ಡ್ ಕಳೆದುಹೋದ ಬಳಿಕ ಬ್ಯಾಂಕ್ ಗೆ ವರದಿ ನೀಡಿದ ಮೇಲೆ ಎಚ್ಚರಿಕೆಗಾಗಿ ಕ್ರೆಡಿಟ್ ಬ್ಯೂರೋವನ್ನು ಸಂಪರ್ಕಿಸಿ. ಇದು ಕ್ರೆಡಿಟ್ ಸ್ಕೋರ್ ಅನ್ನು ರಕ್ಷಿಸಲು, ವಂಚನೆಯ ಖಾತೆಗಳನ್ನು ತೆರೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ. ಕ್ರೆಡಿಟ್ ವರದಿಯ ಕುರಿತು ಪರಿಶೀಲಿಸುತ್ತಿರಿ.

Hoax Bomb Threats: ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ; ಭದ್ರತಾ ನಿಯಮ ಬಿಗಿಗೊಳಿಸಲು ಸರ್ಕಾರದ ಚಿಂತನೆ

ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ

ಕ್ರೆಡಿಟ್ ಕಾರ್ಡ್ ಕಳೆದು ಹೋದ ತಕ್ಷಣ ಖಾತೆಗಳನ್ನು ಸುರಕ್ಷಿತವಾಗಿರಿಸಲು ತುರ್ತು ಕ್ರಮ ಅತ್ಯಗತ್ಯ. ಬಳಿಕ ಹೊಸ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬ್ಯಾಂಕ್ ಅನ್ನು ಸಂಪರ್ಕಿಸಿ. ಹಳೆಯ ಕಾರ್ಡ್ ಅನ್ನು ನಿರ್ಬಂಧಿಸಿದಾಗ ಖಾತೆಯು ಸಕ್ರಿಯವಾಗಿ ಉಳಿಯುತ್ತದೆ. ಇದು ಬದಲಿ ಕಾರ್ಡ್ ಪಡೆಯಲು ಅನುಮತಿಸುತ್ತದೆ. ಹೆಚ್ಚಾಗಿ ಕ್ರೆಡಿಟ್ ಕಾರ್ಡ್ ಬಳಸದೇ ಇದ್ದರೆ ಹೊಸ ಕಾರ್ಡ್ ಅಗತ್ಯವಿದೆಯೇ ಎಂದು ಪರಿಗಣಿಸಿ. ಒಂದು ವೇಳೆ ಅಗತ್ಯವಾಗಿಲ್ಲದೇ ಇದ್ದರೆ ಅದನ್ನು ಮುಚ್ಚುವುದು ಒಳ್ಳೆಯದು.