Saturday, 23rd November 2024

Martin Box Office Collection: ಬಾಕ್ಸ್‌ ಆಫೀಸ್‌ನಲ್ಲಿ ‘ಮಾರ್ಟಿನ್‌’ ಅಬ್ಬರ ಹೇಗಿದೆ? 10 ದಿನಗಳಲ್ಲಿ ಧ್ರುವ ಸರ್ಜಾ ಚಿತ್ರ ಗಳಿಸಿದ್ದೆಷ್ಟು?

Martin Box Office Collection

ಬೆಂಗಳೂರು: ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಅಭಿನಯದ ʼಮಾರ್ಟಿನ್‌ʼ ಚಿತ್ರ ಅಕ್ಟೋಬರ್‌ 11ರಂದು ತೆರೆಕಂಡಿದೆ. ವಿವಿಧ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಭರಪೂರ ಆ್ಯಕ್ಷನ್‌ ದೃಶ್ಯಗಳಿಗೆ, ಧ್ರುವ ಸರ್ಜಾ ಅವರ ಡೆಡಿಕೇಷನ್‌ಗೆ ಹಲವರು ಮೆಚ್ಚುಗೆ ಸೂಚಿಸಿದ್ದರೂ ಅದೇ ಹಳೆ ಕಥೆ, ನೀರಸ ಚಿತ್ರಕಥೆ ಅನೇಕರಿಗೆ ಬೇಸರ ತರಿಸಿದೆ. ಎ.ಪಿ.ಅರ್ಜುನ್‌ (A.P.Arjun) ನಿರ್ದೇಶನದ ʼಅದ್ಧೂರಿʼ ಚಿತ್ರದಲ್ಲಿ ನಟಿಸಿದ್ದ ಧ್ರುವ ಸರ್ಜಾ ಮತ್ತೊಮ್ಮೆ ಅವರೊಂದಿಗೆ ಕೈಜೋಡಿಸಿದ ʼಮಾರ್ಟಿನ್‌ʼ ಸಿನಿಮಾ ಆ ಕಾರಣಕ್ಕಾಗಿ ಬಿಡುಗಡೆಗೆ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದಂತು ಹೌದು. ಇದೀಗ ಚಿತ್ರ ರಿಲೀಸ್‌ ಆಗಿ 10 ದಿನ ಪೂರ್ತಿಯಾಗಿದ್ದು ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು ಎನ್ನುವ ವಿವರ ಇಲ್ಲಿದೆ (Martin Box Office Colletion).

ಮೂಲಗಳ ಪ್ರಕಾರ ʼಮಾರ್ಟಿನ್‌ʼ 10 ದಿನಗಳಲ್ಲಿ 20 ಕೋಟಿ ರೂ. ಕ್ಲಬ್‌ ಸೇರಿದೆ. ಇದುವರೆಗಿನ ಕಲೆಕ್ಷನ್‌ ಸುಮಾರು 21 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮೊದಲ ದಿನ ವಿವಿ‍ಧ ಭಾಷೆಗಳಲ್ಲಿ ʼಮಾರ್ಟಿನ್‌ʼ 6.7 ಕೋಟಿ ರೂ. ಗಳಿಸಿತ್ತು. ಆದರೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಗಳಿಕೆ ಕುಂಟುತ್ತಾ ಸಾಗಿತು. ಮೊದಲ ವಾರ 19.4 ಕೋಟಿ ರೂ. ಗಳಿಸುವಲ್ಲಿ ಶಕ್ತವಾದ ಚಿತ್ರ ಎರಡನೇ ವಾರವಾದ ಭಾನುವಾರ ಗಳಿಸಿದ್ದು 45 ಲಕ್ಷ ರೂ. ಸದ್ಯ ವಿವಿಧೆಡೆ ಸುರಿಯುತ್ತಿರುವ ಧಾರಾಕಾರ ಮಳೆಯೂ ಗಳಿಕೆ ಮೇಲೆ ಸ್ವಲ್ಪ ಮಟ್ಟಿನ ಪ್ರಭಾನ ಬೀರಿದೆ ಎಂದು ತಜ್ಞರು ಊಹಿಸಿದ್ದಾರೆ.

ಹಿರಿಯ ನಟ ಅರ್ಜುನ್‌ ಸರ್ಜಾ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಉದಯ್‌ ಕೆ. ಮೆಹ್ತಾ ನಿರ್ಮಾಣದ ಈ ಸಿನಿಮಾದ ಬಜೆಟ್‌ ಸುಮಾರು 150 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ವಿವಿಧ ಭಾರತೀಯ ಭಾಷೆಗಳ ಜತೆಗೆ ರಷ್ಯಾ, ಕೊರಿಯಾ, ಚೈನೀಸ್ ಸೇರಿದಂತೆ ಹಲವು ಭಾಷೆಯಲ್ಲಿಯೂ ಇದು ತೆರೆಗೆ ಬರಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಲೆಕ್ಷನ್‌ ಹೆಚ್ಚಾಗುವ ನಿರೀಕ್ಷೆ ಇದೆ.

ಒಟಿಟಿಗೆ ಯಾವಾಗ?

ಇನ್ನೊಂದು ವಾರದಲ್ಲಿ ‘ಮಾರ್ಟಿನ್’ 25 ಕೋಟಿ ರೂ. ಕ್ಲಬ್ ಸೇರಬಹುದು ಎನ್ನಲಾಗುತ್ತಿದೆ. ಸದ್ಯ ಕಲೆಕ್ಷನ್‌ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಭಾರತಾದ್ಯಂತ ಸುಮಾರು 350 ಥಿಯೇಟರ್‌ಗಳಲ್ಲಿ ತೆರೆಕಂಡ ʼಮಾರ್ಟಿನ್‌ʼ ಯಾವಾಗ ಒಟಿಟಿಗೆ ಯಾವಾಗ ಲಗ್ಗೆ ಇಡಲಿದೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಝೀ5 ದಾಖಲೆಯ ಮೊತ್ತಕ್ಕೆ ಒಟಿಟಿ ಹಕ್ಕನ್ನು ಪಡೆದುಕೊಂಡಿದೆ ಎನ್ನಲಾಗುತ್ತಿದೆ. ನವೆಂಬರ್‌ ಕೊನೆಯ ಭಾಗದಲ್ಲಿ ಮಾರ್ಟಿನ್‌ ಒಟಿಟಿಯಲ್ಲಿ ಪ್ರಸಾರ ಕಾಣುವ ಸಾಧ್ಯತೆ ಇದೆ.

ʼಮಾರ್ಟಿನ್‌ʼ ಚಿತ್ರದಲ್ಲಿ ಧ್ರುವ ಸರ್ಜಾ ಅರ್ಜುನ್‌ ಸಕ್ಸೇನಾ ಮತ್ತು ಮಾರ್ಟಿನ್‌ ಎಂಬ ಎರಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ಅನ್ವೇಷಿ ಜೈನ್‌, ಸುಕೃತಾ ವಾಗ್ಲೆ, ಚಿಕ್ಕಣ್ಣ, ಯೋಗೇಶ್‌, ಸಾಧು ಕೋಕಿಲ, ಮಾಳವಿಕಾ ಅವಿನಾಶ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Pawan Kalyan: ಸಿನಿರಂಗಕ್ಕೆ ಪವನ್‌ ಕಲ್ಯಾಣ್‌ ಪುತ್ರನ ಎಂಟ್ರಿ ಶೀಘ್ರ; ಯಾವ ಚಿತ್ರ?