Tuesday, 19th November 2024

Basavaraja Bommai: ಯಾರಿಗೂ ಟಿಕೆಟ್ ಕೊಡಿಸುವ ಭರವಸೆ ನೀಡಿರಲಿಲ್ಲ ಎಂದ ಬಸವರಾಜ ಬೊಮ್ಮಾಯಿ

Basavaraja Bommai

ಹಾವೇರಿ: ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಯಾರಿಗೂ ಟಿಕೆಟ್ ಕೊಡಿಸುವ ಭರವಸೆ ನೀಡಿರಲಿಲ್ಲ. ನಾನು ಕಾರ್ಯಕರ್ತರಿಗೆ ಅನ್ಯಾಯ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾವಿ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತುಕೊಟ್ಟು ತಪ್ಪಿದ್ದಾರೆ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಸ್ಪಷ್ಟವಾಗಿ ಹೇಳುತ್ತೇನೆ. ನಾನು ಯಾರಿಗೂ ಟಿಕೆಟ್ ಕೊಡಿಸುತ್ತೇನೆ ಎಂದು ಮಾತುಕೊಟ್ಟಿಲ್ಲ. ಸುಮಾರು 50 ಜನ ಆಕಾಂಕ್ಷಿಗಳು ಇದ್ದರು, ಎಲ್ಲರಿಗೂ ಪಕ್ಷದ ನಿರ್ಧಾರಕ್ಕೆ ಬದ್ದನಾಗಿರಬೇಕು ಅಂತಾ ಒಂದೇ ಮಾತು ಹೇಳಿದ್ದೆ. ಇದು ನನ್ನ ನಿರ್ಣಯ ಅಲ್ಲ,‌ ಪಕ್ಷದ ನಿರ್ಣಯ. ನಾನು ಯಾರಿಗೂ ಮಾತುಕೊಟ್ಟಿಲ್ಲ.‌ ಮಾತು ತಪ್ಪಿಲ್ಲ ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಕಿತ್ತೂರು ರಾಣಿ ಚೆನ್ನಮ್ಮ ಅಂಚೆ ಚೀಟಿ ಬಿಡುಗಡೆಗೆ ಕೇಂದ್ರದ ಸಿದ್ಧತೆ

ಗೆಲ್ಲುವ ದೃಷ್ಟಿಯಿಂದ ಟಿಕೆಟ್ ನೀಡಿದೆ

ನನ್ನ ಮಗನನ್ನು ನಿಲ್ಲಿಸಲು ಆಸಕ್ತಿ ಇರಲಿಲ್ಲ. ಕೊನೆಯ ಘಳಿಗೆವರಿಗೂ ಬೇಡ ಅಂತಾ ಹೇಳಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಟಿಕೆಟ್ ನೀಡಿದೆ. ಗೆಲ್ಲುವ ದೃಷ್ಟಿಯಿಂದ ಟಿಕೆಟ್ ನೀಡಿದೆ, ತೀರ್ಮಾನ ಮಾಡಿದೆ. ಪಕ್ಷದ ಆದೇಶವನ್ನು ಪರಿಪಾಲನೆ ಮಾಡುವುದು ನನ್ನ ಕಾರ್ಯ. ಕೇಂದ್ರ ಗೃಹ ಸಚಿವ ಅಮಿಶ್ ಷಾ ಮಾತನಾಡಿ ಟಿಕೆಟ್ ಫೈನಲ್ ಮಾಡಿದ್ದಾರೆ ಎಂದು ಹೇಳಿದರು.

ಸಾಮಾನ್ಯ ಕಾರ್ಯಕರ್ತರಿಗೆ ಅನ್ಯಾಯ ಆಗಿದೆ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಕಾರ್ಯಕರ್ತರಿಗೆ ಅನ್ಯಾಯ ಮಾಡಿಲ್ಲ. ಶ್ರೀಕಾಂತ್ ದುಂಡಿಗೌಡರ ಜತೆ ಮಾತನಾಡುತ್ತೇನೆ. ಮನವೊಲಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | R Ashok: ಸಿಎಂ ಕುಂಭಕರ್ಣರಂತೆ ನಿದ್ದೆ ಮಾಡುವುದನ್ನು ಬಿಟ್ಟು ಸಭೆ ನಡೆಸಲು ಆರ್‌. ಅಶೋಕ್‌ ಆಗ್ರಹ!

ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿ ಸರಿಪಡಿಸುವ ಕಾರ್ಯ ಮಾಡುತ್ತದೆ

ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿ.ಪಿ. ಯೋಗೇಶ್ವರ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇವತ್ತಿನ ಬೆಳವಣಿಗೆ ಗೊತ್ತಿಲ್ಲ. ನಿನ್ನೆ‌ ತಡರಾತ್ರಿ ಮನವೊಲಿಸಲು ಪ್ರಯತ್ನ ನಡೆದಿತ್ತು. ರಾಷ್ಟ್ರೀಯ ವರಿಷ್ಠರು ಮಾತುಕತೆ ಮಾಡಿ ಮನವೊಲಿಸುವ ಕಾರ್ಯ ಮಾಡುತ್ತಾರೆ. ಸರಿಯಾಗುತ್ತದೆ ಅನ್ನುವ ವಿಶ್ವಾಸ ಇದೆ. ಸಿ.ಪಿ. ಯೋಗೇಶ್ವರ್‌ಗೆ ಸ್ವರ್ಧೆ ಮಾಡುವ ಆಸೆ ಇದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಕ್ಷೇತ್ರ ಆಗಿದ್ದು, ಅವರಿಬ್ಬರೂ ಮಾತುಕತೆ ಮಾಡಿಕೊಂಡು ಹೊಂದಾಣಿಕೆ ಆಗಬೇಕಿತ್ತು. ತಡವಾಗಿದ್ದಕ್ಕೆ ಈ ನಿರ್ಧಾರಕ್ಕೆ ಬಂದಿರಬಹುದು. ನಮ್ಮ ಪಕ್ಷದ ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿ ಸರಿಪಡಿಸುವ ಕಾರ್ಯ ಮಾಡುತ್ತದೆ. ಸಿ.ಪಿ‌.ಯೋಗೇಶ್ವರ್‌ ಕಾಂಗ್ರೆಸ್ ಮುಖಂಡರ ಜತೆ ಸಂಪರ್ಕದಲ್ಲಿರುವ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.