ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
ʼಬ್ರಿಕ್ಸ್’ ಎಂದರೆ ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ ದೇಶಗಳ ಒಕ್ಕೂಟ. ಈ ದೇಶಗಳನ್ನು
ಈ ಹಿಂದೆ ಮುಂದುವರಿಯುತ್ತಿರುವ ದೇಶಗಳು ಎನ್ನುತ್ತಿದ್ದರು. ಇತ್ತೀಚಿಗೆ ಆರ್ಥಿಕ ಜಗತ್ತಿನಲ್ಲಿ ಇವುಗಳನ್ನು ‘ಎಮರ್ಜಿಂಗ್ ಕಂಟ್ರೀಸ್’ ಅಥವಾ ‘ಎಮರ್ಜಿಂಗ್ ಮಾರ್ಕೆಟ್’ ಎನ್ನಲಾಗುತ್ತದೆ. ಈ ವರ್ಷದ ‘ಬ್ರಿಕ್ಸ್’ ಸಭೆ ನಡೆಯುತ್ತಿರುವುದು ರಷ್ಯಾದ ಕಝನ್ ಎನ್ನುವ ಜಾಗದಲ್ಲಿ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು (ಅ.22) ಕಝನ್‌ಗೆ ಹೊರಟಿದ್ದಾರೆ. ಈ ತಿಂಗಳ 22-23-24ರಂದು ಅಂದರೆ ೩ ದಿನಗಳ ಕಾಲ ಈ ಸಭೆ ನಡೆಯಲಿದೆ. ಭಾರತದ ಮಟ್ಟಿಗೆ ಇದು ಮಹತ್ವದ ಸಭೆಯಾಗಲಿದೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ದಿನದಿಂದ ರಷ್ಯಾದ ಮೇಲೆ ಜಗತ್ತಿನ ಬಹುತೇಕ ದೇಶಗಳು ಮುನಿಸಿಕೊಂಡಿವೆ. ಭಾರತವು ಜಗತ್ತಿನ ದೃಷ್ಟಿಯಲ್ಲಿ ವಿಲನ್ ಆಗಲು ಬಯಸದೆ, ರಷ್ಯಾಕ್ಕೆ ಬಹಿರಂಗ ಬೆಂಬಲವನ್ನು ನೀಡಿಲ್ಲ. ಇತ್ತ ರಷ್ಯಾದ ಜತೆಗಿನ ಬಾಂಧವ್ಯ ಕೆಡದಂತೆ ನೋಡಿಕೊಂಡು ಅದನ್ನು ಉಳಿಸಿಕೊಂಡು ಬಂದಿದೆ.
ಕುಟುಂಬದಲ್ಲಿನ ಸಂಬಂಧಗಳನ್ನೇ ಉಳಿಸಿಕೊಳ್ಳಲು ಆಗದೆ ಪರದಾಡುವ ಈ ಕಾಲಘಟ್ಟದಲ್ಲಿ ಜಾಗತಿಕ
ಮಟ್ಟದಲ್ಲಿ ಈ ರೀತಿಯ ಸಂಬಂಧ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ‘ಕಚ್ಚು ಎಂದರೆ ಕಪ್ಪೆಗೆ ಕೋಪ, ಬೇಡ ಎಂದರೆ ಹಾವಿಗೆ ಸಿಟ್ಟು’ ಇಂಥ ಪರಿಸ್ಥಿತಿ ನಿಭಾಯಿಸುವುದು ನಿಜಕ್ಕೂ ಕಷ್ಟ. ಭಾರತ ಕೂಡ ಕಳೆದ ಐದಾರು ವರ್ಷದಿಂದ ‘ದ್ವಂದ್ವ’ ಅಥವಾ ‘ದ್ವಿಮುಖ’ ನೀತಿಯನ್ನು ಪಾಲಿಸುತ್ತಿದೆ. ಅತ್ತ ಜಗತ್ತಿನ ಎಲ್ಲರ ಮುಂದೆ ಸುಭಗ ನಾಗಿರಬೇಕು, ಇತ್ತ ರಷ್ಯಾದ ಸ್ನೇಹ ಕೂಡ ಬೇಕು. ಅಮೆರಿಕ ದೇಶ ಬಹಳ ಹಿಂದಿನಿಂದ ತನ್ನ ದ್ವಿಮುಖ ನೀತಿಗೆ ಪ್ರಸಿದ್ಧಿ ಪಡೆದಿದೆ. ‘ವೆಪನ್ ಆಫ್ ಮಾಸ್ ಡಿಸ್ಟ್ರಕ್ಷನ್’ ಇದೆ ಎಂದು ಇರಾಕ್ ಮೇಲೆ ಅದು ದಾಳಿ ಮಾಡಿತು. ಅಲ್ಲಿ ಏನೂ ಇರಲಿಲ್ಲ.
ಮಜಾ ನೋಡಿ, ಅಮೆರಿಕದ ಮೇಲೆ ಯಾರೂ ‘ಸ್ಯಾಂಕ್ಷನ್’ ಅಂದರೆ ‘ಬಹಿಷ್ಕಾರ’ ಹಾಕಲಿಲ್ಲ. ಆದರೆ ನಿಮಗೆ ಗೊತ್ತೇ, ಅಮೆರಿಕ ಸೇರಿದಂತೆ ‘ಆಟಕ್ಕುಂಟು ಲೆಕ್ಕಕಿಲ್ಲ’ ಎನ್ನುವ ಸಣ್ಣ ಪುಟ್ಟ ದೇಶಗಳು ಕೂಡ ರಷ್ಯಾದ ಮೇಲೆ ಸ್ಯಾಂಕ್ಷನ್ ಜಡಿದಿವೆ. ಹೀಗೆ ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಒಟ್ಟು ಸ್ಯಾಂಕ್ಷನ್‌ಗಳ ಲೆಕ್ಕ ಲಕ್ಷವನ್ನ ಮೀರುತ್ತದೆ. ಹೌದು
ಸರಿಯಾಗಿ ಓದಿದ್ದೀರಿ- ಲಕ್ಷಕ್ಕೂ ಮೀರಿದ ಬಹಿಷ್ಕಾರ ರಷ್ಯಾದ ಮೇಲಿದೆ. ದೇಶಗಳ, ವ್ಯಕ್ತಿಗಳ ಹೀಗೆ ಎಲ್ಲವನ್ನೂ ಲೆಕ್ಕ ಮಾಡಿದರೆ ರಷ್ಯಾ ಜಗತ್ತಿನಲ್ಲಿ ಎಲ್ಲಾ ದೇಶಗಳಿಗಿಂತ ಹೆಚ್ಚು ಬಹಿಷ್ಕಾರ ಹಾಕಿಸಿಕೊಂಡ ದೇಶ ಎನ್ನುವ ಕುಖ್ಯಾತಿಗೆ ಭಾಜನವಾಗಿದೆ.
ಇಷ್ಟೆ ಸ್ಯಾಂಕ್ಷನ್‌ನಿಂದ ಮತ್ತು ಉಕ್ರೇನ್ ಜತೆಗಿನ ಯುದ್ಧಕ್ಕೆಂದು ನೀರಿನಂತೆ ಖರ್ಚಾಗುತ್ತಿರುವ ಹಣದ ನಡುವೆ ರಷ್ಯಾ ಹೇಗೆ ಸರ್ವೈವ್ ಆಗುತ್ತಿದೆ ಎನ್ನುವ ಕುತೂಹಲ ನಿಮಗಿದ್ದೇ ಇರುತ್ತದೆ ಅಲ್ವಾ? ಅದಕ್ಕೇ ಇವತ್ತಿನ ಅಂಕಣ
ದಲ್ಲಿ ಅದರ ಬಗ್ಗೆ ಒಂದಷ್ಟು ಬರೆಯುತ್ತೇನೆ. ಇದು ನಿಮ್ಮ ಕುತೂಹಲವನ್ನ ಕೆರಳಿಸುವುದಕ್ಕೆ ಮಾತ್ರ. ಎಲ್ಲವನ್ನೂ ಇಲ್ಲಿ ಬರೆಯಲು ಸಾಧ್ಯವಿಲ್ಲ. ಹೀಗಾಗಿ ಉಳಿದದ್ದು ನೀವೇ ಹುಡುಕಿ ಓದಿಕೊಳ್ಳುತ್ತೀರಿ ಎಂದು ನನಗೆ ಗೊತ್ತಿದೆ. ವಿಷಯಕ್ಕೆ ಬರುವ ಮುಂಚೆ ‘ಏನಿದು ಇಂಟರ್‌ನ್ಯಾಷನಲ್ ಸ್ಯಾಂಕ್ಷ?’ ಎನ್ನುವುದನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಈ ಪ್ರಪಂಚವನ್ನ ನಾವು ಒಂದು ಪುಟ್ಟ ಊರು ಎಂದುಕೊಳ್ಳೋಣ. ಆ ಊರಿನಲ್ಲಿ 194 ಮನೆಗಳಿವೆ ಎಂದುಕೊಳ್ಳಿ. ಈ ಪ್ರತಿ ಮನೆಯೂ ಒಂದೊಂದು ದೇಶ!
ಒಂದು ಊರಿನಲ್ಲಿ ರೀತಿ- ನೀತಿಗಳಿಗೆ ವಿರುದ್ಧ ಹೋದರೆ ಹೇಗೆ ನಿಗದಿತ ಮನೆಯವರನ್ನ ಊರಿನಿಂದ ಹೊರ ಹಾಕುವುದು ಅಥವಾ ಅವರಿಗೆ ಬಹಿಷ್ಕಾರ ಹಾಕುವುದು ಮಾಡುತ್ತಾರೋ, ಥೇಟ್ ಹಾಗೆಯೇ ಜಾಗತಿಕ ಮಟ್ಟದಲ್ಲಿ ಕೂಡ ಆಗುತ್ತದೆ. ಪುಟ್ಟ ಹಳ್ಳಿಯಲ್ಲಿ ರೆಬೆಲ್ ಮನೆಯವರೊಂದಿಗೆ ಯಾವುದೇ ವ್ಯಾಪಾರ-ವಹಿವಾಟು ಇಟ್ಟುಕೊಳ್ಳ ಬಾರದು, ಅವರಿಗೆ ಕುಡಿಯುವ ನೀರು ಕೊಡಬಾರದು ಹೀಗೆ ಅವರನ್ನ ಊರಿನ ಮುಖ್ಯವಾಹಿನಿಯಿಂದ ಬೇರ್ಪಡಿಸ ಲಾಗುತ್ತದೆ. ಅವರೊಂದಿಗೆ ಎಲ್ಲಾ ರೀತಿಯ ಸಂಪರ್ಕವನ್ನ ಕೂಡ ಕಡಿದುಕೊಳ್ಳಲಾಗುತ್ತದೆ. ಆ ಮನೆಯವರಿಗೆ ಊರಿನ ಮುಖ್ಯಸ್ಥ ಅಥವಾ ಊರಿನವರು ಹೇಳಿದಕ್ಕೆ ತಲೆ ಆಡಿಸುವುದು ಬಿಟ್ಟು ಬೇರೆ ದಾರಿಯೇ ಉಳಿಯುವುದಿಲ್ಲ.
ಈಗ ರಷ್ಯಾ ವಿಷಯಕ್ಕೆ ಬನ್ನಿ. ಜಗತ್ತಿಗೆ ಜಗತ್ತೇ ಇದರ ವಿರುದ್ಧ ತಿರುಗಿ ಬಿದ್ದಿದೆ. ಜಗತ್ತಿನ ಬಹುತೇಕ ದೇಶಗಳು ರಷ್ಯಾದೊಂದಿಗೆ ಯಾವುದೇ ವಾಣಿಜ್ಯ ವಹಿವಾಟು ನಡೆಸಲು ಹಿಂದೇಟು ಹಾಕುತ್ತಿವೆ. ರಷ್ಯಾ ದೇಶ ಉಕ್ರೇನ್ ಮೇಲೆ ದಾಳಿ ಮಾಡಿದುದರ ಪರಿಣಾಮವಾಗಿ ಈ ರೀತಿಯ ಸ್ಯಾಂಕ್ಷನ್‌ಗೆ ತುತ್ತಾಗಿದೆ. ಮೊದಲೇ ಹೇಳಿದಂತೆ ಲಕ್ಷಕ್ಕೂ ಹೆಚ್ಚು ನಿರ್ಬಂಧಗಳಿಗೆ ರಷ್ಯಾ ಒಳಗಾಗಿದೆ.
ಅವುಗಳಲ್ಲಿ ಅತ್ಯಂತ ಪ್ರಮುಖವಾದ ನಾಲ್ಕು ಸ್ಯಾಂಕ್ಷನ್‌ಗಳು ಹೀಗಿವೆ: 1) ರಷ್ಯಾದ ಪ್ರಮುಖ ಬ್ಯಾಂಕ್‌ಗಳನ್ನ ‘ಸ್ವಿ-
ಪೇಮೆಂಟ್ ಕ್ಲಿಯರಿಂಗ್ ನೆಟ್‌ವರ್ಕ್’ನಿಂದ ತೆಗೆದುಹಾಕಿರುವುದು. ಇದರಿಂದ ರಷ್ಯಾಕ್ಕೆ ಹಣ ಕಳಿಸುವುದು ಬಂದಾಗುತ್ತದೆ, ರಷ್ಯಾ ದಿಂದ ಹೊರಕ್ಕೆ ಹಣ ಕಳಿಸುವುದು ಕೂಡ ಅಸಾಧ್ಯವಾಗುತ್ತದೆ. ದೇಶದಲ್ಲಿ ಅಡಚಣೆ
ಆಗುವುದಿಲ್ಲ, ಜಾಗತಿಕ ಹಣ ವಹಿವಾಟಿಗೆ ಕಡಿವಾಣ ಬೀಳುತ್ತದೆ.
2) ವಿದೇಶದಲ್ಲಿನ ರಷ್ಯಾ ಸರಕಾರದ ಆಸ್ತಿಪಾಸ್ತಿಗಳನ್ನ ಮಟ್ಟುಗೋಲು ಹಾಕಿಕೊಳ್ಳುವುದು.
3) ರಷ್ಯಾದ ತೈಲವನ್ನ ಕೊಳ್ಳದಂತೆ ಮಾಡಿರುವುದು.
೪) ರಷ್ಯಾಕ್ಕೆ ಅವಶ್ಯಕವಾಗಿ ಬೇಕಾಗುವ ವಸ್ತುಗಳನ್ನ ಇತರೆ ದೇಶಗಳು ಪೂರೈಸದಂತೆ ತಡೆಯೊಡ್ಡಿರುವುದು.
ಇದರ ಜತೆಗೆ ಯಾವುದೇ ತಂತ್ರಜ್ಞಾನ ವಿನಿಮಯವಾಗದಂತೆ ತಡೆದಿರುವುದು, ರಷ್ಯಾ ಸರಕಾರದ ಮಹತ್ತರ ಹುದ್ದೆಯಲ್ಲಿರುವವರಿಗೆ ಬೇರೆ ಕಡೆ ಟ್ರಾವೆಲ್ ಮಾಡದ ಹಾಗೆ ರಿಸ್ಟ್ರಿಕ್ಟ್ ಮಾಡಿರುವುದು ಕೂಡ ಸ್ಯಾಂಕ್ಷನ್ ಅಡಿಯಲ್ಲಿ
ಬರುತ್ತದೆ. ಬೇರೆ ಯಾವುದೇ ದೇಶವಾಗಿದ್ದರೂ ಈ ವೇಳೆಗೆ ಇಂಥ ಸ್ಯಾಂಕ್ಷನ್‌ಗಳಿಂದ ಬಸವಳಿದು ‘ತಪ್ಪಾಯ್ತು’ ಎಂದು ಕೇಳುತ್ತಿದ್ದವು. ಆದರೆ ರಷ್ಯಾ ಮಾತ್ರ ಯುದ್ಧದ ವಿಷಯದಲ್ಲಿ ಇನ್ನಷ್ಟು ಅಗ್ರೆಸಿವ್ ಆಗಿ ವರ್ತಿಸುತ್ತಿದೆ.
ನೆನಪಿರಲಿ ಸಾಮಾನ್ಯ ದಿನಗಳಿಗಿಂತ ಬಹಳ ಹೆಚ್ಚಿನ ಹಣ ಯುದ್ಧಕ್ಕೆ ಖರ್ಚಾಗುತ್ತದೆ. ಹೀಗೆ ಬಹಳಷ್ಟು
ಹಣವನ್ನ ಯುದ್ಧಕ್ಕೆ ಖರ್ಚು ಮಾಡಿ ಕೂಡ ಇಷ್ಟೊಂದು ಸ್ಯಾಂಕ್ಷನ್ ಅನ್ನು ರಷ್ಯಾ ಹೇಗೆ ತಡೆದುಕೊಳ್ಳಲು ಸಾಧ್ಯ?
ಮ್ಯಾಕ್ ಡೊನಾಲ್ಡನಂಥ ಈಟೆರಿಯದಿಂದ ಬಹುದೊಡ್ಡ ವಿದೇಶಿ ಉದ್ದಿಮೆಗಳು ರಷ್ಯಾವನ್ನ ತೊರೆದು ಹೋಗಿದ್ದವು. ಸ್ಯಾಂಕ್ಷನ್ ಇನ್ನೂ ಮುಗಿದಿಲ್ಲ ಆದರೆ ನಿಧಾನವಾಗಿ ಮ್ಯಾಕ್ ಡೊನಾಲ್ಡ್ ರಿ-ಓಪನ್ ಆಗಿದೆ, ಉದ್ದಿಮೆಗಳು ನಿಧಾನವಾಗಿ ಮರಳುತ್ತಿವೆ. ರಷ್ಯಾ ಡಾಲರ್ ಬಳಸುವುದನ್ನ ಬಿಟ್ಟು ಬಿಟ್ಟಿದೆ.
ಸ್ಯಾಂಕ್ಷನ್‌ಗಳಿಂದ ರೂಬೆಲ್ ಬೆಲೆ ಪಾತಾಳಕ್ಕೆ ಕುಸಿದಿತ್ತು. ಹೌದು ಎಲ್ಲವನ್ನೂ ನಾವು ಡಾಲರಿನೊಂದಿಗೆ ತಾಳೆ ಹಾಕುವುದರಿಂದ ಹೀಗಾಗುವುದು ಸಹಜ. ರಷ್ಯಾ ಡಾಲರ್ ಡಿಚ್ ಮಾಡಿ ರೂಬೆಲ್‌ನಲ್ಲಿ ವ್ಯವಹರಿಸುವುದಾಗಿ ಜಾಗತಿಕವಾಗಿ ಕೂಗಿ ಹೇಳಿತು. ಅಮೆರಿಕದ ‘ಡ್ಯುಯೆಲ್ ಪಾಲಿಸಿ’ಯನ್ನ ಭಾರತ ಮತ್ತು ಚೀನಾ ಕೂಡ ಪಾಲಿಸಿ ಕೊಂಡು ಬರುತ್ತಿವೆ. ಚೀನಾ ದಶಕದಿಂದ ಈ ಸ್ಥಿತಿಯಲ್ಲಿದೆ, ಭಾರತ ಕಳೆದ ಐದಾರು ವರ್ಷದಿಂದ ತನಗೆ ಲಾಭವಾಗುವುದಿದ್ದರೆ ದ್ವಂದ್ವ ನೀತಿಯನ್ನ ಅನುಸರಿಸಲು ನಾಚಿಕೆ ಪಟ್ಟುಕೊಳ್ಳುತ್ತಿಲ್ಲ.
ಹೀಗಾಗಿ ಚೀನಾ ಮತ್ತು ಭಾರತ ಸ್ಯಾಂಕ್ಷನ್ ಅನ್ನು ಗಾಳಿಗೆ ತೂರಿ ರಷ್ಯಾದಿಂದ ತೈಲವನ್ನ ಆಮದು ಮಾಡಿ ಕೊಳ್ಳುತ್ತಿವೆ. ಎಕ್ಸ್‌ಚೇಂಜ್ ಉಳಿತಾಯದಲ್ಲಿ ಇದರಿಂದ ಲಾಭವಾಗುತ್ತದೆ. ತೈಲ ಬೆಲೆಯಲ್ಲೂ ಒಂದಷ್ಟು ಡಿಸ್ಕೌಂಟ್ ಸಿಗುತ್ತದೆ ಅಂದರೆ ಭಾರತವೇಕೆ ಬಿಟ್ಟೀತು? ವಿದೇಶಾಂಗ ವ್ಯವಹಾರ ನೋಡಿಕೊಳ್ಳುವ ದಕ್ಷ ಟೀಮ್, ಹೊಸ ವಿದೇಶಾಂಗ ನೀತಿಗಳು, ಭಾರತಕ್ಕೆ ಇತರೆ ದೇಶಗಳು ದಿಗ್ಬಂಧನ ಹೇರಲು ಆಗದಂತೆ ತಡೆದಿವೆ.
ಇದರ ಜತೆಗೆ ಕ್ರಿಪ್ಟೋ ರಷ್ಯಾದ ಪಾಲಿಗೆ ವರದಾನವಾಗಿದೆ. ರಷ್ಯಾದ ಹ್ಯಾಕರ್ ಟೀಮ್ ಸದಾ ಸನ್ನದ್ಧ ಸ್ಥಿತಿಯಲ್ಲಿ ರುತ್ತದೆ. ಯುರೋಪಿನಲ್ಲಿ ಚಳಿ ಆಗಲೇ ಶುರುವಾಗಿದೆ. ಜನವರಿ ಮತ್ತು ಫೆಬ್ರವರಿ ಅತಿ ಹೆಚ್ಚು ಚಳಿ ತಿಂಗಳುಗಳು. ರಷ್ಯಾದಿಂದ ಗ್ಯಾಸ್ ತರಿಸಿಕೊಳ್ಳದೆ ಯುರೋಪ್‌ಗೆ ಬೇರೆ ಯಾವ ಆಯ್ಕೆಯೂ ಇಲ್ಲ. ರಷ್ಯಾ ದೇಶಕ್ಕೆ ಬೇಕಾಗಿರುವ ಪದಾರ್ಥಗಳನ್ನ ಪೂರೈಸದಿದ್ದರೆ ಹೇಗೆ ರಷ್ಯಾ ಪತನವಾಗುತ್ತದೋ ಹಾಗೆ ಯುರೋಪು ಚಳಿಯಿಂದ ಸಾಯುತ್ತದೆ. ‘ಹಿಟ್ಟು ಹಳಸಿದೆ ನಾಯಿ ಹಸಿದಿದೆ’ ಎನ್ನುವ ಮಾತಿನಂತೆ ಎರಡೂ ಕಡೆಯಲ್ಲೂ ಕಾಂಪ್ರೊಮೈಸ್ ಆಗುವ ಪರಿಸ್ಥಿತಿ ಉದ್ಭವವಾಗಿದೆ.
ರಷ್ಯಾ ತನ್ನ ತೈಲ, ಗ್ಯಾಸ್ ಬೆಲೆಯನ್ನ ಏರಿಸಿದರೆ ಯುರೋಪ್‌ನಲ್ಲಿ ಬ್ರಿಟನ್ ಮೊದಲ ಬಲಿಯಾಗಲಿದೆ. ಈಗಾಗಲೇ
ಬ್ರಿಟನ್ ಆರ್ಥಿಕವಾಗಿ ಜರ್ಜರಿತವಾಗಿದೆ. ಅಲ್ಲಿನ ಅರ್ಧಕ್ಕೂ ಹೆಚ್ಚು ಜನರಿಗೆ ಇಲೆಕ್ಟ್ರಿಕ್ ಬಿಲ್ ಕಟ್ಟಲು ಆಗುತ್ತಿಲ್ಲ. ಸಾಮಾನ್ಯ ದಿನಗಳಲ್ಲಿ 100 ಪೌಂಡ್ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಬ್ರಿಟಿಷರು, ರಷ್ಯಾ-ಉಕ್ರೇನ್ ಯುದ್ಧ ಶುರುವಾದ ದಿನದಿಂದ 300 ರಿಂದ 400 ಪೌಂಡ್ ವಿದ್ಯುತ್ ಬಿಲ್ ತೆರಬೇಕಾಗಿದೆ. ಅಲ್ಲಿನ ಬಹುತೇಕ ನಿವೃತ್ತರಿಗೆ ಇದನ್ನು ಭರಿಸಲು ಆಗುತ್ತಿಲ್ಲ. ಚಳಿಗಾಲದಲ್ಲಿ ಹೀಟಿಂಗ್ ಸಮಸ್ಯೆಯಿಂದ ಸಾವನ್ನು ಅಪ್ಪುವ ಹಿರಿಯ ನಾಗರಿಕರ ಸಂಖ್ಯೆ ಅಲ್ಲಿ ಹೆಚ್ಚಿದೆ.
ಸಿಗ್ನಲ್ ವರ್ಕ್ ಆಗದ ಬೆಂಗಳೂರಿನ ಸರ್ಕಲ್ ನಲ್ಲಿ ಟ್ರಾಫಿಕ್ ಜಾಮ್ ಆದ ಪರಿಸ್ಥಿತಿ ಎಲ್ಲೆಡೆ ಮನೆ ಮಾಡಿದೆ. ಎಡೆ ಲಾಕ್ ಆಗಿದೆ. ಇಂಚು ಹಿಂದೆ ಮುಂದೆ ಹೋಗಲು ಆಗುತ್ತಿಲ್ಲ, ಎಲ್ಲರೂ ಹಾರನ್ ಹೊಡೆಯುವವರೇ! ಯಾರು ಯಾರಿಗೆ ಹಾರನ್ ಹೊಡೆಯುತ್ತಿzರೆ ಮತ್ತು ಏಕೆ? ಎನ್ನುವುದು ಯಾರಿಗೂ ಗೊತ್ತಿಲ್ಲ. ಎಲ್ಲರೂ ನಿಂತ ನಿಂತು
ತಾವು ಸರಿಯಾಗಿದ್ದೇವೆ ಬೇರೆಯವರು ಅಡ್ಡ ನಿಂತು ಟ್ರಾಫಿಕ್ ಜಾಮ್ ಮಾಡುತ್ತಿದ್ದಾರೆ ಎನ್ನುವ ಮನೋಭಾವ ದಲ್ಲಿ, ‘ಥು ಹಾಳು ಜನ ಕಣ್ರೀ, ಕಾಮನ್ ಸೆ ಇಲ್ಲ’ ಎಂದು ಗೊಣಗುವಂತೆ, ಜಾಗತಿಕ ಮಟ್ಟದಲ್ಲಿ ಗೊಣಗಾಟ ಕಳೆದ ಎರಡು ವರ್ಷದಿಂದ ಕೇಳಿಬರುತ್ತಿದೆ.
ಚಳಿ ಹೆಚ್ಚುತ್ತಾ ಹೋದಂತೆ ಟ್ರಾಫಿಕ್ ಕರಗುವ ಸಾಧ್ಯತೆಯನ್ನ ಅಲ್ಲಗಳೆಯಲುಬಾರದು. ಏನೇ ಹೇಳಿ ಟ್ರಾಫಿಕ್
ಜಾಮ್ ಕೂಡ ಎಷ್ಟೊತ್ತು ಅಂತ ಇರಲು ಸಾಧ್ಯ? ಎಲ್ಲಾ ಪ್ರಾರಂಭಕ್ಕೂ ಒಂದು ಅಂತ್ಯ ಇದ್ದೇ ಇರುತ್ತದೆ ಅಲ್ವಾ? ಈ ಬಿಕ್ಕಟ್ಟು ಪರಿಹಾರ ನರೇಂದ್ರನಿಂದ ಮಾತ್ರ ಸಾಧ್ಯ ಎನ್ನುವುದು ಜಾಗತಿಕ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಇದಕ್ಕೆ ಕಾರಣವಿಲ್ಲದೆ ಇಲ್ಲ. ಪುಟಿನ್ ಅಷ್ಟು ಸುಲಭಕ್ಕೆ ಯಾರನ್ನೂ ಗೌರವಿಸುವ, ನಂಬುವ ವ್ಯಕ್ತಿಯಲ್ಲ. ಆತ ಮಿಲಿಟರಿಯಿಂದ, ಗುಪ್ತಚರ ದಳದಿಂದ ಮೇಲೆದ್ದು ಬಂದ ವ್ಯಕ್ತಿ. ಸಹಜವಾಗೇ ಆತ ‘ಟ್ರ ನೋ ಒನ್’ ಎನ್ನುವ ಪಾಲಿಸಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಂದವನು. ಆದರೆ ಬಾಡಿ ಬಿಹೇವಿಯರ್ ನೋಡಿ ಸೈಕಾಲಜಿ
ಊಹಿಸುವ, ಲಿಪ್ ಸಿಂಕ್ ನೋಡಿ ಇದನ್ನು ಹೇಳಿದರು ಎಂದು ಊಹಿಸುವ ತಜ್ಞರ ಪ್ರಕಾರ ಪುಟಿನ್ ನರೇಂದ್ರ ಮೋದಿಯವರನ್ನು ಬಹಳವಾಗಿ ಗೌರವಿಸುತ್ತಾರೆ.
ವ್ಯಕ್ತಿಗತ ಸಂಬಂಧಗಳಂತೆ ಜಾಗತಿಕವಾಗಿ ದೇಶಗಳ ಸಂಬಂಧ ಕೂಡ ಬಹಳ ಸೂಕ್ಷ್ಮ. ಗಮನಿಸಿ ನೋಡಿ- ಉಕ್ರೇನ್ ಎಂಬುದು ರಷ್ಯಾ ದೇಶದ ‘ಬ್ರೇಕ್ ಅವೇ’ ದೇಶ. ಅಂದರೆ ಹಿಂದೆ ಯುಎಸ್‌ಎಸ್‌ಆರ್ ಇದ್ದಾಗ ಉಕ್ರೇನ್ ರಷ್ಯಾದ
ಭಾಗವಾಗಿತ್ತು. ಉಕ್ರೇನ್ ಎಂಬುದು ರಷ್ಯಾ ಮತ್ತು ಐರೋಪ್ಯ ದೇಶಗಳನ್ನು ಬೆಸೆಯುವ ಕಾರಿಡಾರ್; ಅದರಲ್ಲೂ ಉಕ್ರೇನ್ ದೇಶದ ಕ್ರಿಮಿಯ ಎನ್ನುವ ಪ್ರದೇಶದ ಮೇಲೆ ರಷ್ಯಾ ದಾಳಿ ಮಾಡಿ ವಶಪಡಿಸಿಕೊಳ್ಳಲು ಇದೇ ಕಾರಣ.
ಅಮೆರಿಕ ತನ್ನ ಪ್ರಭಾವ ಬಳಸಿ, ಉಕ್ರೇನ್ ಮೂಲಕ ಈ ಕಾರಿಡಾರನ್ನು ರಷ್ಯಾ ಬಳಸದಂತೆ ಮಾಡಿದರೆ ಆಗ
ವ್ಯಾವಹಾರಿಕವಾಗಿ ಅದು ರಷ್ಯಾಕ್ಕೆ ಬಹಳ ನಷ್ಟ ಉಂಟುಮಾಡುತ್ತದೆ. ಅಮೆರಿಕದ ಈ ಆಟ ಕಂಡು ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿತ್ತು. ಎಲ್ಲರ ಕಣ್ಣಿಗೆ ರಷ್ಯಾ ಕೆಟ್ಟವನಾಗಿ ಕಾಣುತ್ತದೆ. ನೀವು ಈ ಸಾಲುಗಳನ್ನು ಓದುತ್ತಿದ್ದೀರಿ ಎಂದರೆ ಭಾರತದ ಮಟ್ಟಿಗೆ ಈ ಸಭೆ ಅದೇಕೆ ಅಷ್ಟೊಂದು ಮಹತ್ವವನ್ನು ಪಡೆದುಕೊಂಡಿದೆ ಎನ್ನುವುದರ ಸುಳಿವು ನಿಮಗೆ ಸಿಗುತ್ತದೆ.
ಇದನ್ನೂ ಓದಿ: Rangaswamy Mookanahally Column: ಬಹುಕೋಟಿ ಡಾಲರ್ ವ್ಯವಹಾರದ ಗೇಮಿಂಗ್ !