ಬೆಂಗಳೂರು: ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಪುನಶ್ಚೇತನ ಶಿಬಿರದಲ್ಲಿರುವ ಭಾರತದ ಪ್ರಧಾನ ವೇಗಿ ಮೊಹಮ್ಮದ್ ಶಮಿ(Mohammed Shami) ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ. ಒಂದೆರಡು ದೇಶಿ ಕ್ರಿಕೆಟ್ ಪಂದ್ಯಗಳನ್ನಾಡಿ ಮುಂದಿನ ತಿಂಗಳ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಲಿದ್ದೇನೆ ಎಂದಿದ್ದಾರೆ.
ಭಾನುವಾರ ಬೆಂಗಳೂರು ಟೆಸ್ಟ್ ಮುಗಿದ ಬಳಿಕ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ನೇತೃತ್ವದಲ್ಲಿ ಶುಭಮನ್ ಗಿಲ್ ಸೇರಿ ಕೆಲ ಬ್ಯಾಟರ್‌ಗಳಿಗೆ ಶಮಿ ನೆಟ್ಸ್‌ನಲ್ಲಿ ಸಂಪೂರ್ಣ ದೈಹಿಕ ಕ್ಷಮತೆಯೊಂದಿಗೆ ಬೌಲಿಂಗ್ ನಡೆಸಿ ಗಮನ ಸೆಳೆದಿದ್ದರು. ಈ ವೇಳೆಯೇ ಶಮಿ ಶೀಘ್ರದಲ್ಲಿ ಭಾರತ ತಂಡ ಸೇರಲಿದ್ದಾರೆ ಎನ್ನಲಾಗಿತ್ತು. ಇದೀಗ ತಮ್ಮ ಪುನರಾಗಮನದ ಬಗ್ಗೆ ಸ್ವತಃ ಶಮಿಯೇ ಉತ್ತರ ನೀಡಿದ್ದಾರೆ.
“ನಾನು ಬೌಲಿಂಗ್ ನಡೆಸಿದ ರೀತಿಯಿಂದ ನನಗೆ ಸಮಾಧಾನವಾಗಿದೆ. ಇದಕ್ಕೂ ಮುನ್ನ ಅರ್ಧ ರನ್‌ಅಪ್‌ನಿಂದ ಬೌಲಿಂಗ್ ಆರಂಭಿಸುತ್ತಿದ್ದೆ. ಆದರೆ ಈಗ ಎಂದಿನಂತೆ 100 ಪ್ರತಿಶತ ಸಾಮರ್ಥ್ಯದೊಂದಿಗೆ ಬೌಲಿಂಗ್ ನಡೆಸುತ್ತಿದ್ದೇನೆ. ನಾನೀಗ ನೋವಿನಿಂದ 100 ಪ್ರತಿಶತ ಮುಕ್ತನಾಗಿದ್ದೇನೆ. ಯಾವುದೇ ಸಮಸ್ಯೆ ಇಲ್ಲ. ವರ್ಷಾಂತ್ಯದಲ್ಲಿ ನಡೆಯುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಲಭ್ಯನಾಗುತ್ತೇನೋ ಇಲ್ಲವೋ ಎಂಬುದನ್ನು ಅರಿಯಲು ಎಲ್ಲರೂ ಕುತೂಹಲಗೊಂಡಿದ್ದಾರೆ. ಇದಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆʼ ಎಂದು ಶಮಿ ಹೇಳಿದರು.
ಮೂಲಗಳ ಪ್ರಕಾರ ಆಸೀಸ್ ಪ್ರವಾಸಕ್ಕೂ ಮುನ್ನ ಶಮಿ 2 ರಣಜಿ ಪಂದ್ಯಗಳನ್ನು ಆಡಿ ತಮ್ಮ ಸಾರ್ಮರ್ಥ ಪರೀಕ್ಷೆ ತೋರಲಿದ್ದಾರೆ ಎನ್ನಲಾಗಿದೆ. ಕೇರಳ ವಿರುದ್ಧ ತವರಲ್ಲಿ ಹಾಗೂ ಕರ್ನಾಟಕ ವಿರುದ್ಧ ಬೆಂಗಳೂರಿನಲ್ಲಿಶಮಿ ರಣಿ ಆಡುವ ಸಾಧ್ಯತೆ ಇದೆ. ಈ ಹಿಂದಿನ ಎರಡೂ ಆಸ್ಟ್ರೇಲಿಯಾ ಪ್ರವಾಸದಲ್ಲಿಯೂ ಶಮಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ್ದರು. ಎಂಟು ಪಂದ್ಯಗಳಲ್ಲಿ 32.16 ಸರಾಸರಿಯಲ್ಲಿ 6/56 ರ ಅತ್ಯುತ್ತಮ ಅಂಕಿ ಅಂಶಗಳೊಂದಿಗೆ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಎರಡು ಬಾರಿ ಐದು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಶಮಿ ಪಂದ್ಯವಾಡದೆ ಸರಿ ಸುಮಾರು ಒಂದು ವರ್ಷಗಳೇ ಕಳೆದಿವೆ. 2023 ಏಕದಿನ ವಿಶ್ವಕಪ್ ಫೈನಲ್ ಅವರ ಕೊನೆಯ ಪಂದ್ಯವಾಗಿತ್ತು. ಇದಾದ ಬಳಿಕ ಅವರು ಲಂಡನ್‌ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಇದನ್ನೂ ಓದಿ IND vs NZ 2nd Test: ದ್ವಿತೀಯ ಟೆಸ್ಟ್‌ಗೂ ಕೇನ್ ವಿಲಿಯಮ್ಸನ್ ಅಲಭ್ಯ
ಭಾರತ ಮತ್ತು ಆಸೀಸ್ ನಡುವಣ ಬಾರ್ಡರ್ –ಗಾವಸ್ಕರ್ ಟೆಸ್ಟ್ ಸರಣಿ ನವೆಂಬರ್ 22ರಿಂದ ಜನವರಿ 7ರವರೆಗೆ ನಡೆಯಲಿದೆ. ಐದು ಪಂದ್ಯಗಳ ಸರಣಿ ಇದಾಗಿದೆ. ಪರ್ತ್, ಅಡಿಲೇಡ್, ಬ್ರಿಸ್ಬೇನ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಪಂದ್ಯಗಳು ನಡೆಯಲಿದೆ. ಇದರಲ್ಲಿ ಅಡಿಲೇಡ್ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಆಗಿರಲಿದೆ.
ವೇಳಾಪಟ್ಟಿ
ಮೊದಲ ಟೆಸ್ಟ್: ನವೆಂಬರ್ 22-26, ಪರ್ತ್
ಎರಡನೇ ಟೆಸ್ಟ್: ಡಿಸೆಂಬರ್ 6-10, ಅಡಿಲೇಡ್ (ಹಗಲು ರಾತ್ರಿ)
ಮೂರನೇ ಟೆಸ್ಟ್: ಡಿಸೆಂಬರ್ 14-18, ಬ್ರಿಸ್ಬೇನ್
ನಾಲ್ಕನೇ ಟೆಸ್ಟ್: ಡಿಸೆಂಬರ್ 26-30, ಮೆಲ್ಬೋರ್ನ್
ಐದನೇ ಟೆಸ್ಟ್: ಜನವರಿ 3-7, ಸಿಡ್ನಿ