Friday, 22nd November 2024

MP Dr K Sudhakar: ಗಂಗಮ್ಮನಗುಡಿ ರಸ್ತೆ ಅಗಲೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ : ಸಂಸದ ಸುಧಾಕರ್ ಆಕ್ರೋಶ

ಚಿಕ್ಕಬಳ್ಳಾಪುರ: ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾದ ಎಂಜಿ ರಸ್ತೆ, ಬಿ.ಬಿರಸ್ತೆಗಳ ನಡುವೆ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುವುದರಿಂದ ನಗರದ ಸಂಚಾರಕ್ಕೆ ಎದುರಾಗಿರುವ ಕಂಟಕ ನಿವಾರಣೆ ಆಗಲಿದೆ. ಚಿಕ್ಕಬಳ್ಳಾಪುರಕ್ಕೆ ಕೀರ್ತಿ ತಂದಿರುವ ಬಜಾರ್‌ ರಸ್ತೆ, ಎಂಜಿ ರಸ್ತೆಗಳ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳುವ ಏಕೈಕ ಕಾರಣಕ್ಕೆ ವಿಸ್ತರಣೆಗೆ ಮುಂದಾಗಿರುವುದು ಖಂಡನೀಯ. ನಾನು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂಸದ ಸುಧಾಕರ್ ಕಿಡಿ ಕಾರಿದರು.

ನಗರದ ಜಿಲ್ಲಾಡಳಿತ ಭವನದ ಸಂಸದರ ಕಛೇರಿಯಲ್ಲಿ ಸೋಮವಾರ ನಡೆಸಿದ ಸಾರ್ವಜನಿಕರ ಭೇಟಿ ಮತ್ತು ಕುಂದು ಕೊರತೆ ಸ್ವೀಕಾರ ಸಭೆಯ ನಂತರ  ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ನಗರ ಪ್ರದೇಶದಲ್ಲಿ ಜನರು ಮನೆ ಮಳಿಗೆಗಳನ್ನು ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಬೆಂಗಳೂರು ಮಹಾ ನಗರದಲ್ಲಿ ಕೂಡ ಚಿಕ್ಕಪೇಟೆ, ಅಕ್ಕಿಪೇಟೆ,ಅವೆನ್ಯು ರಸ್ತೆ ಕೂಡ 20 ಅಡಿ ರಸ್ತೆಗಳೇ ಆಗಿವೆ. ಅಲ್ಲಿ ಎಂದೂ ಕೂಡ ಒಡೆದು ಹಾಕುವ ಕೆಲಸ ಮಾಡಿಲ್ಲ. ಹೊಡೆದು ಹಾಕಿದರೆ ಅವರ ಬದುಕಿನ ಪರಿಸ್ಥಿತಿ ಏನು? ಇಲ್ಲಿ ಸುಮ್ಮನೆ ಸ್ಥಳೀಯ ಶಾಸಕರು ಜನರಿಗೆ ತೊಂದರೆ ಕೊಡಬೇಕು ಎಂಬ ಒಂದೇ ಕಾರಣದಿಂದ ಅಲ್ಲಿ ಅಗಲೀಕರಣ ಮಾಡಲು ಹೊರಟಿದ್ದಾರೆ.

ಇದರಿಂದ ಏನೂ ಬಹಳ ಉಪಯೋಗ ಆಗುವುದಿಲ್ಲ. ನಾನು ಈಗಾಗಲೇ ೩೦೦ ಕೋಟಿ ರೂಪಾಯಿಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಎಂಜಿ ರಸ್ತೆಯಲ್ಲಿ ಮಾಡಿಸಿದ್ದೇನೆ. ಎನ್‌ಹೆಚ್ ಚದಲಪುರದಿಂದ ಹಿಡಿದು ಚಿಕ್ಕ ಬಳ್ಳಾಪುರ ನಗರ ಹಾದು ಹೋಗುವಂತೆ 58 ಕೋಟಿ ರೂಪಾಯಿಗಳಲ್ಲಿ ರಸ್ತೆ ಮಾಡಿಸಿದ್ದೇನೆ.ಈಗ ಹೊಸದಾಗಿ ಚಿಕ್ಕಬಳ್ಳಪುರದಿಂದ ಡಿಸಿ ಕಚೇರಿವರೆಗೆ ಕೂಡ ಬೈಪಾಸ್ ರಸ್ತೆ ಮಾಡಿಸುತ್ತಿದ್ದೇನೆ. ಇವೆಲ್ಲಾ ಕೇಂದ್ರ ಸರಕಾರದ ಯೋಜನೆಗಳೇ ಆಗಿವೆ. ಇಷ್ಟೆಲ್ಲಾ ರಸ್ತೆಗಳು ಇರುವಾಗ, ಸುಗಮವಾಗಿ ಸಂಚಾರ ನಿರ್ವಹಣೆ ಆಗಲಿದೆ. ಯಾವುದೂ ಕೂಡ ಸಮಸ್ಯೆ ಆಗಲ್ಲ. ಆದರೆ ಇವು ಯಾವುದನ್ನು ಕೂಡ ಅರ್ಥ ಮಾಡಿಕೊಳ್ಳದೆ ಹಠಕ್ಕೆ ಬಿದ್ದವಂತೆ ಅವರ ಮನೆ ಹೊಡೆಯುತ್ತೇವೆ, ಇವರ ಅಂಗಡಿ ಹೊಡೆಯುತ್ತೇವೆ ಎನ್ನುತ್ತಿರುವುದು ಸರಿಯಲ್ಲಎಂದು ಕಿಡಿ ಕಾರಿದರು

ಇದು ಕೇವಲ ನಗರ ಪ್ರದೇಶಕ್ಕೆ ಅಲ್ಲ, 40-50 ವರ್ಷ ಹಿಂದೆ ಕಟ್ಟಿರುವ ಮನೆಗಳಿಗೂ ಕೂಡ ಇದೇ ರೀತಿ ಬೆದರಿಸು ವುದು, ಯಾರೋ ಅವರ ಕಡೆಯವರನ್ನು ಕಳಿಸಿ ಕರೆಸಿ ನಮ್ಮ ಜತೆ ಇದ್ದರೆ ರಕ್ಷಣೆ ಮಾಡುತ್ತೇವೆ ಎಂದು ಮಾಡು ತ್ತಿದ್ದಾರೆ. ಇದೆಲ್ಲಾ ಬಹಳ ದಿನ ನಡೆಯುವುದಿಲ್ಲ ಎಂದು ಶಾಸಕರಿಗೆ ನೇರ ಎಚ್ಚರಿಕೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರು,ಅವರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ, ಜನರ ಸಂಕಷ್ಟವನ್ನು ಅರ್ಥ ಮಾಡಿ ಕೊಳ್ಳುವ ಕೆಲಸ ಮಾಡುತ್ತಿಲ್ಲ. ಗಂಗಮ್ಮ ಗುಡಿ ರಸ್ತೆಯಲ್ಲಿರುವ ಅಂಗಡಿಗಳನ್ನು ಒಡೆಯುವ ಅವಶ್ಯಕತೆಯೇನೂ ಇಲ್ಲ. ಒಡೆದು ಹಾಕುವುದಕ್ಕೆ ಸುಲಭ. ಕಟ್ಟುವುದು ಸುಲಭವಲ್ಲ. ನೀವು ಒಡೆಯುವುದು ಜನರ ಬದುಕನ್ನು, ನೀನೇನಾ ಪೈಲ್ವಾನ್, ಇದನ್ನು ಬೇಕಾದರೆ ಏಕಮುಖ ಸಂಚಾರ ಮಾಡಿ,ಪಾದಚಾರಿ ಮಾರ್ಗ ವಿಸ್ತರಿಸಿ ಎಸ್ಪಿ ಜತೆ.ಡಿಸಿ ಜತೆ ಕುಳಿತು ಸಮಾಲೋಚನೆ ಮಾಡಿದರೆ ಪರಿಹಾರ ದೊರೆಯಲಿದೆ.

ಡಿಸಿ ಅವರೇಕೋ ಬೆಂಗಳೂರು ಗ್ರಾಮಾಂತರದಲ್ಲಿದ್ದಂತೆ ಇಲ್ಲಿ ಕೆಲಸ ಮಾಡುತ್ತಿಲ್ಲ. ಅವರು ಮನಸೋ ಇಚ್ಚೇ ನಡೆದುಕೊಳ್ಳುತ್ತಿದ್ದಾರೆ, ನಾನು ಅವರಿಗೆ ಪೋನ್ ಮಾಡಿ ಮಾತನಾಡುತ್ತೇನೆ. ಇದು ನಗರದ ಹೃದಯ ಭಾಗದಲ್ಲಿರ ತಕ್ಕಂತ ರಸ್ತೆ. ಇದನ್ನು ಅಭಿವೃದ್ಧಿ ಮಾಡಲು ಏನಾದರೂ ಅನುದಾನ ತಂದಿದ್ದೀರಾ? ಏನ ಇಲ್ಲ. ಇದರ ಬದಲಿಗೆ ನಗರಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ಮಾರ್ಗಗಳಲ್ಲಿ ರಸ್ತೆ ಅಗಲೀಕರಣ ಮಾಡಲಿ. ಇಲ್ಲಿ ಅಗಲೀಕರಣ ಮಾಡುವುದನ್ನು ಕೈಬಿಡಬೇಕು ಇಲ್ಲವಾದಲ್ಲಿ ಬಜಾರ್‌ ರಸ್ತೆ , ಗಂಗಮ್ಮ ಗುಡಿರಸ್ತೆ ಅಂಗಡಿ ಮುಂಗಟ್ಟೆ ವ್ಯಾಪಾರಿಗಳ ಜತೆ ಸಭೆ ನಡೆಸಿ ಕಾನೂನು ರೀತಿ ಏನು ಕ್ರಮಗೊಳ್ಳಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Chikkaballapur: ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಜನಗಣತಿ ಸಮೀಕ್ಷಾ ವರದಿ ಕೂಡಲೇ ಜಾರಿ ಜಾರಿಗೊಳಿಸಬೇಕು