ನವದೆಹಲಿ: ಭಾರತ ಕುಸ್ತಿ ಫೆಡರೇಷನ್ನ ಅಂದಿನ ಅಧ್ಯಕ್ಷ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ, ಬೆದರಿಕೆ ಸೇರಿ ಹಲವು ಆರೋಪ ಮಾಡಿ ಜಂತರ್ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳ ನಡುವೆ ಒಡಕು ಮೂಡಿದಂತಿದೆ. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಭಜರಂಗ್ ಪೂನಿಯಾ, ವಿನೇಶ್ ಫೋಗಟ್ ವಿರುದ್ಧ ಕುಸ್ತಿಪಟು ಸಾಕ್ಷಿ ಮಲಿಕ್(Sakshi Malik) ಆಕ್ರೋಶ ಹೊರಹಾಕಿದ್ದಾರೆ. ಕಳೆದ ವರ್ಷ ಏಷ್ಯನ್ ಗೇಮ್ಸ್ ಟ್ರಯಲ್ಸ್ನಿಂದ ವಿನಾಯಿತಿ ನೀಡುವ ಪ್ರಸ್ತಾವಕ್ಕೆ ವಿನೇಶ್ ಫೋಗಟ್(Vinesh Phogat) ಮತ್ತು ಭಜರಂಗ್ ಪೂನಿಯಾ(Bajrang Punia) ಅವರು ಒಪ್ಪಿಕೊಂಡಿದ್ದರಿಂದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ನಡೆಯುತ್ತಿದ್ದ ಧರಣಿ, ಹೋರಾಟದ ವರ್ಚಸ್ಸು ಕಳೆಗುಂದಿತು ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆಗೊಂಡ ತಮ್ಮ ಕೃತಿ ‘ವಿಟ್ನೆಸ್’ನಲ್ಲಿ ಸಾಕ್ಷಿ ಈ ವಿಚಾರವನ್ನು ಬರೆದುಕೊಂಡಿದ್ದಾರೆ. ಏಳು ಮಂದಿ ಮಹಿಳಾ ಕುಸ್ತಿಪಟುಗಳಿಗೆ ಬ್ರಿಜ್ಭೂಷಣ್ ಶರಣ್ ಸಿಂಗ್ ಒಕ್ಕೂಟದ ಅಧ್ಯಕ್ಷರಾಗಿದ್ದ ವೇಳೆ ಲೈಂಗಿಕ ಕಿರುಕುಳ ನೀಡಿದ್ದರೆಂದು ದೂರಿ ಅವರ ವಿರುದ್ಧ ಜಂತರ್ಮಂತರ್ನಲ್ಲಿ ನಡೆದ ಧರಣಿಯಲ್ಲಿ ಬಜರಂಗ್, ವಿನೇಶ್ ಮತ್ತು ಸಾಕ್ಷಿ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ಬ್ರಿಜ್ಭೂಷಣ್ ವಿರುದ್ಧ ಮಾಡಲಾಗಿರುವ ಲೈಂಗಿಕ ಕಿರುಕುಳದ ಪ್ರಕರಣ ಇನ್ನೂ ದೆಹಲಿ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ. ಅಂದು ವಿನೇಶ್ ಮತ್ತು ಭಜರಂಗ್ ಟ್ರಯಲ್ಸ್ನಿಂದ ವಿನಾಯಿತಿ ಪಡೆದ ಕಾರಣ ನಮ್ಮ ಹೋರಾಟಕ್ಕೆ ಕೆಟ್ಟ ಹೆಸರು ಬಂತು ಎಂದು ಸಾಕ್ಷಿ ಹೇಳಿದ್ದಾರೆ.
‘ಸ್ವಹಿತಾಸಕ್ತಿ ಮತ್ತೊಮ್ಮೆ ಕೆಲಸ ಮಾಡಿತು. ಅಂದು ಅವರು ವಿನಾಯಿತಿ ಪಡೆದಿದ್ದರಿಂದ ಒಳ್ಳೆಯದೇನೂ ಆಗಲಿಲ್ಲ. ಅವರ ನಿರ್ಧಾರವು, ನಮ್ಮ ಹೋರಾಟದ ವರ್ಚಸ್ಸಿಗೆ ಹಿನ್ನಡೆ ಉಂಟು ಮಾಡಿತು. ನಾವು ಸ್ವಹಿತಾಸಕ್ತಿ ಮುಂದಿಟ್ಟುಕೊಂಡು ಹೋರಾಟ ನಡೆಸಿದೆವು ಎಂದು ಅನೇಕ ಬೆಂಬಲಿಗರು ಯೋಚಿಸುವಂಥ ಪರಿಸ್ಥಿತಿ ತಂದುಕೊಂಡೆವು’ ಎಂದು ಸಾಕ್ಷಿ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ಬಿಜೆಪಿಯಲ್ಲಿರುವ ತಮ್ಮ ಸಂಬಂಧಿ ಬಬಿತಾ ಫೋಗಟ್ಗೆ ಸ್ವಾರ್ಥವಿತ್ತು. ಅವರು ನಮ್ಮ ಹೋರಾಟಕ್ಕೆ ನೀಡಿದ ಬೆಂಬಲ ತೋರಿಕೆಯದ್ದಾಗಿತ್ತು ಎಂದಿದ್ದಾರೆ.
ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ
ಬಾಲ್ಯದಲ್ಲಿ ಮನೆಪಾಠದ ಶಿಕ್ಷಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಸಾಕ್ಷಿ ಬರೆದುಕೊಂಡಿದ್ದಾರೆ. ಅಂದು ನಡೆದ ಘಟನೆಯನ್ನು ನಾನು ಕುಟುಂಬದ ಜತೆ ಹೇಳಿಕೊಳ್ಳಲಾಗಲಿಲ್ಲ. ಅದು ನನ್ನ ತಪ್ಪು ಎಂದು ಭಾವನೆ ಮೂಡಿದ್ದರಿಂದ ಸುಮ್ಮನಾದೆ. ನನ್ನ ಶಾಲಾ ದಿನಗಳಲ್ಲಿ ಮನೆಪಾಠ ಹೇಳಿಕೊಡುತ್ತಿದ್ದ ಶಿಕ್ಷಕ ದೈಹಿಕ ಶೋಷಣೆ ಮಾಡುತ್ತಿದ್ದ. ಹೊತ್ತಲ್ಲದ ಹೊತ್ತಿನಲ್ಲಿ ಪಾಠಕ್ಕೆ ಕರೆಯುತ್ತಿದ್ದ. ಅನುಚಿತವಾಗಿ ಅಂಗಸ್ಪರ್ಷ ಮಾಡಲು ಯತ್ನಿಸುತ್ತಿದ್ದ. ಆದರೆ ತಾಯಿಗೆ ನಾನು ಆ ಬಗ್ಗೆ ಎಂದೂ ಹೇಳಲಿಲ್ಲ ಎಂದು ಹೇಳಿದ್ದಾರೆ.