ಚೆನೈ: ತಮಿಳುನಾಡಿನ (Tamil Nadu) ಮೇಲೆ ಹಿಂದಿ ಹೇರಿಕೆ ಪ್ರಯತ್ನಗಳನ್ನು ತಡೆಯಲು ತಮ್ಮ ಮಕ್ಕಳಿಗೆ ತಮಿಳಿನ ಹೆಸರನ್ನು ಇಡಬೇಕು ಎಂದು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್(Udhayanidhi Stalin) ಮಂಗಳವಾರ ಹೇಳಿದ್ದಾರೆ. ಬಿಜೆಪಿ(BJP ) ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಸ್ಟಾಲಿನ್ “ತಮಿಳುನಾಡಿನಲ್ಲಿ ಹಿಂದಿ (Imposing Hindi in Tamil Nadu) ಹೇರಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಅದು ಸಾಧ್ಯವಾಗುವುದಿಲ್ಲ. ಪೋಷಕರು ತಮ್ಮ ಮಕ್ಕಳಿಗೆ ಸುಂದರವಾದ ತಮಿಳು ಹೆಸರನ್ನು ಇಡಬೇಕು,” ಕಾರ್ಯಕ್ರಮವೊಂದರಲ್ಲಿ ಅವರು ಅವರು ಹೇಳಿದರು.
ಪೋಷಕರು ತಮ್ಮ ಮಗುವಿಗೆ ಸುಂದರವಾದ ತಮಿಳು ಹೆಸರನ್ನುಇಡಬೇಕು ಎಂದು ನಾನು ನಿಮ್ಮಲ್ಲಿ ವಿನಂತಿಸುತ್ತೇನೆ. ಅನೇಕರು ತಮಿಳುನಾಡಿನ ಮೇಲೆ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ನಾವು ತಮಿಳನ್ನು ರಕ್ಷಣೆ ಮಾಡಬೇಕು. ಆಗ ನಮ್ಮ ನಾಡಗೀತೆಯಲ್ಲಿರುವ (ತಮಿಳು ತಾಯಿ ವಾಳ್ತು) ದ್ರಾವಿಡಂ ಪದ ತೆಗೆಯಲು ಪ್ರಯತ್ನ ಪಟ್ಟಿದ್ದರು, ಈಗ ಹೊಸ ಶಿಕ್ಷಣ ನೀತಿಯ ಮೂಲಕ ಹಿಂದಿ ಹೇರಲು ಪ್ರಯತ್ನಿಸುತ್ತಿದ್ದಾರೆ. ಈ ಮೊದಲು ತಮಿಳುನಾಡಿನ ಹೆಸರನ್ನೇ ಬದಲಾಯಿಸಲು ಪ್ರಯತ್ನಿಸಿದ್ದರು. ತಮಿಳರು ಬದುಕಿರುವವರೆಗೆ ತಮಿಳು, ತಮಿಳುನಾಡು ಮತ್ತು ದ್ರಾವಿಡಂ ಅನ್ನು ಯಾರಿಗೂ ಮುಟ್ಟಲಾಗುವುದಿಲ್ಲ ಎಂದು ಹೇಳಿದ್ದಾರೆ.
ಸಮಾಜ ಸುಧಾರಕ ಪೆರಿಯಾರ್ ಅವರು ಸಾಮಾಜಿಕ ಪಿಡುಗು ‘ಸತಿ’ ವಿರುದ್ಧ ಹೋರಾಡಿದ್ದಾರೆ. ನಾನು ಅವರ ಆದರ್ಶಗಳನ್ನು ಪರಿಪಾಲಿಸುತ್ತೇನೆ. ನಾನು ಸನಾತನ ಧರ್ಮವನ್ನು ಗೌರವಿಸುತ್ತೇನೆ. ಸಂಸ್ಕೃತಿಯ ಕುರಿತ ತನ್ನ ಹೇಳಿಕೆಗಳನ್ನು ತಿರುಚಲಾಯಿತು. ದೇಶದಾದ್ಯಂತ ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಯಿತು. ನಾನು ನನ್ನ ಹಿರಿಯರು ಹಾಕಿಕೊಟ್ಟ ಆದರ್ಶವನ್ನು ಪಾಲಿಸುತ್ತೇನೆ ಎಂದರು.
30 ವರ್ಷಗಳ ಹಿಂದೆ ಡಿಎಂಕೆಯ ನಾಯಕ ಎಂ ಕರುಣಾನಿಧಿ ಅವರು ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಸಮಾನ ಪಾಲು ಸಿಗುವಂತೆ ಮಾಡಿದ್ದರು. ಅದೇ ಹಾದಿಯಲ್ಲೇ ಇಂದಿನ ಮುಖ್ಯಮಂತ್ರಿಗಳು ಮಹಿಳಾ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಉಚಿತ ಬಸ್ ಪ್ರಯಾಣ ಯೋಜನೆಯು ಕೋಟಿಗಟ್ಟಲೆ ಮಹಿಳೆಯರಿಗೆ ಪ್ರಯೋಜನ ನೀಡಿದೆ. ಅನೇಕ ರಾಜ್ಯಗಳಿಗೆ ಈ ಯೋಜನೆಯು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: MK Stalin: 16 ಮಕ್ಕಳನ್ನು ಹೊಂದುವಂತೆ ಕರೆ ನೀಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್; ಕಾರಣವೇನು?
ಕೆಲವು ದಿನಗಳ ಹಿಂದೆ ಉದಯನಿಧಿ ಸ್ಟಾಲಿನ್ ತಂದೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಮಾತನಾಡುತ್ತಾ “ಹಿಂದಿನ ಕಾಲದಲ್ಲಿ ಹಿರಿಯರು ನವ ದಂಪತಿಗಳಿಗೆ 16 ಬಗೆಯ ಸಂಪತ್ತು ಹೊಂದುವಂತೆ ಆಶೀರ್ವದಿಸುತ್ತಿದ್ದರು. ಬಹುಶಃ ಈಗ 16 ಬಗೆಯ ಸಂಪತ್ತಿನ ಬದಲು 16 ಮಕ್ಕಳನ್ನು ಹೊಂದುವಂತೆ ಆಶೀರ್ವಾದ ನೀಡುವ ಸಮಯ ಬಂದಿದೆ ಎಂದಿದ್ದರು.
ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ದಕ್ಷಿಣ ಭಾರತ ರಾಜ್ಯಗಳ ಜನರು ಹೆಚ್ಚಿನ ಮಕ್ಕಳನ್ನು ಹೊಂದಬೇಕು ಎಂದು ಕರೆ ನೀಡಿದ್ದರು. ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗುವ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಹ ಜೇಳಿದ್ದರು. ಈ ಬೆನ್ನಲ್ಲೇ ತಮಿಳುನಾಡು ಸಿಎಂ ದಂಪತಿ ಹಚ್ಚೆಚ್ಚು ಮಕ್ಕಳನ್ನು ಹೊಂದುವಂತೆ ಕರೆ ನೀಡಿದ್ದರು.