Friday, 22nd November 2024

Hoax Bomb Threats: ದೇಶದ ವಿವಿಧೆಡೆಗಳ ಸಿಆರ್‌ಪಿಎಫ್‌ ಶಾಲೆಗಳಿಗೆ ಬಾಂಬ್‌ ಬೆದರಿಕೆ

Hoax Bomb Threats

ಹೊಸದಿಲ್ಲಿ: ದೇಶದಲ್ಲಿ ಹುಸಿ ಬಾಂಬ್‌ ಬೆದರಿಕೆ ಪ್ರಕರಣ ಹೆಚ್ಚಾಗುತ್ತಿದೆ (Hoax Bomb Threats). ವಿಮಾನಗಳಿಗೆ ಬರುತ್ತಿದ್ದ ಬೆದರಿಕೆ ಇದೀಗ ಶಾಲೆಗಳಿಗೂ ವಿಸ್ತರಣೆಯಾಗಿದೆ. ದಿಲ್ಲಿ, ಹೈದರಾಬಾದ್​ ಸೇರಿ ದೇಶದ ವಿವಿಧ ಭಾಗಗಳ ಹಲವು ಕೇಂದ್ರೀಯ ಮೀಸಲು ಪಡೆ (CRPF) ಶಾಲೆಗಳಿಗೆ ಸೋಮವಾರ (ಅಕ್ಟೋಬರ್‌ 21) ರಾತ್ರಿ ಬಾಂಬ್‌ ಬೆದರಿಕೆ ಬಂದಿದೆ. ದಿಲ್ಲಿಯ ಸಿಆರ್‌ಪಿಎಫ್‌ ಶಾಲೆಗೆ 2 ಬೆದರಿಕೆ ಬಂದರೆ, ಹೈದರಾಬಾದ್‌ ಸಿಆರ್‌ಪಿಎಫ್‌ ಶಾಲೆಗೆ 1 ಬೆದರಿಕೆ ಸಂದೇಶ ಬಂದಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ʼʼಈ ಎಲ್ಲ ಶಾಲಾ ಆಡಳಿತ ಮಂಡಳಿಗಳಿಗೆ ಇಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆʼʼ ಎಂದು ಮೂಲಗಳು ತಿಳಿಸಿವೆ. ದಿಲ್ಲಿ ರೋಹಿಣಿಯ ಪ್ರಶಾಂತ್‌ ವಿಹಾರ್‌ನ ಸಿಆರ್‌ಪಿಎಫ್‌ ಶಾಲೆಯಲ್ಲಿ ಭಾನುವಾರ ಸಂಭವಿಸಿದ ಭೀಕರ ಸ್ಫೋಟದ 1 ದಿನದ ಬಳಿಕ ಈ ಬೆದರಿಕೆ ಬಂದಿದೆ. ಭಾನುವಾರ ಬೆಳಗ್ಗೆ ಏಕಾಏಕಿ ಶಾಲೆಯ ತಡೆಗೋಡೆ ಬ್ಲಾಸ್ಟ್‌ ಆಗಿತ್ತು. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಸಮೀಪದಲ್ಲಿ ನಿಲ್ಲಿಸಿದ ವಾಹನಗಳಿಗೆ, ಪಕ್ಕದ ಅಂಗಡಿಗಳ ಬೋರ್ಡ್‌ಗಳಿಗೆ ಅಲ್ಪ ಸ್ವಲ್ಪ ಹಾನಿಯಾಗಿದ್ದು ಬಿಟ್ಟರೆ ಹೆಚ್ಚನ ಅನಾಹುತ ಸಂಭವಿಸಿಲ್ಲ.

ರೋಹಿಣಿಯ ಸಿಆರ್‌ಪಿಎಫ್‌ ಶಾಲೆಯ ಬಳಿ ನಡೆದ ಸ್ಫೋಟಕ್ಕೆ ಖಲಿಸ್ತಾನಿ ಸಂಪರ್ಕ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸರು ಸೋಮವಾರ ಸಾಮಾಜಿಕ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್‌ಗೆ ಪತ್ರ ಬರೆದಿದ್ದಾರೆ. ಭಾರತೀಯ ಏಜೆಂಟರು ಖಲಿಸ್ತಾನ ಪರ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡಿದ್ದಕ್ಕೆ ಪ್ರತೀಕಾರವಾಗಿ ಈ ಸ್ಫೋಟ ನಡೆದಿದೆ ಎಂದು ಹೇಳಿಕೊಂಡಿರುವ ಟೆಲಿಗ್ರಾಮ್‌ ಚಾನೆಲ್ ಬಗ್ಗೆ ಮಾಹಿತಿ ಕೋರಿದ್ದಾರೆ.

ಭಾನುವಾರ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳ ನಂತರ ‘ಜಸ್ಟಿಸ್ ಲೀಗ್ ಇಂಡಿಯಾ’ ಎಂಬ ಟೆಲಿಗ್ರಾಮ್‌ ಚಾನೆಲ್‌ನಲ್ಲಿ “ಖಲಿಸ್ತಾನ್ ಜಿಂದಾಬಾದ್” ವಾಟರ್ ಮಾರ್ಕ್ ಹೊಂದಿರುವ ವಿಡಿಯೊವನ್ನು ಪೋಸ್ಟ್‌ ಮಾಡಲಾಗಿತ್ತು. “ನಮ್ಮ ಧ್ವನಿಯನ್ನು ಅಡಗಿಸಲು, ನಮ್ಮ ಸದಸ್ಯರನ್ನು ಗುರಿಯಾಗಿಸಲು ಗೂಂಡಾಗಳನ್ನು ನೇಮಿಸಿಕೊಳ್ಳಬಹುದು ಎಂದು ಭಾರತೀಯ ಸಂಸ್ಥೆ ಭಾವಿಸಿದರೆ ಅದಕ್ಕಿಂತ ಮೂರ್ಖತನ ಬೇರಿಲ್ಲ. ಯಾವುದೇ ಸಮಯದಲ್ಲಿ ದಾಳಿ ಮಾಡಲು ನಾವು ಎಷ್ಟು ಸಮರ್ಥರಾಗಿದ್ದೇವೆ ಎಂದು ಅವರು ಊಹಿಸಲು ಸಾಧ್ಯವಿಲ್ಲ” ಎಂದು ಸ್ಫೋಟದ ವಿಡಿಯೊ ಪೋಸ್ಟ್‌ ಮಾಡಿ ಎಚ್ಚರಿಕೆಯ ಸಂದೇಶ ನೀಡಲಾಗಿತ್ತು.

ʼʼಜಸ್ಟಿಸ್ ಲೀಗ್ ಇಂಡಿಯಾ ಚಾನಲ್‌ ಬಗ್ಗೆ ವಿವರಗಳನ್ನು ತಿಳಿಯಲು ಟೆಲಿಗ್ರಾಮ್‌ ಸಂಸ್ಥೆಗೆ ಪತ್ರ ಬರೆದಿದ್ದೇವೆʼʼ ಎಂದು ದಿಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ʼʼಬಿಳಿ ಟಿ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ ಶನಿವಾರ ರಾತ್ರಿ ಸ್ಫೋಟ ನಡೆದ ಸ್ಥಳದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಕಂಡುಬಂದಿದೆ. ಬಾಂಬ್ ಇಟ್ಟವನು ಆತನೇ ಎನ್ನುವುದನ್ನು ಪತ್ತೆ ಹಚ್ಚಲು ತನಿಖೆ ಕೈಗೆತ್ತಿಕೊಂಡಿದ್ದೇವೆʼʼ ಎಂದು ಅವರು ವಿವರಿಸಿದ್ದಾರೆ.

ಸ್ಫೋಟ ನಡೆದ ಸ್ಥಳದ ಸಮೀಪ ಹಲವು ಸ್ಟಾಲ್‌ಗಳಿದ್ದು, ಶನಿವಾರ ರಾತ್ರಿ ಇಲ್ಲಿ ನೂರಾರು ಮಂದಿ ನೆರೆದಿದ್ದರು. ಇದು ಕೂಡ ತನಿಖೆಯನ್ನು ಸಂಕೀರ್ಣಗೊಳಿಸಿದೆ. ಸ್ಥಳದ ಬಳಿ ಕಾಣಿಸಿಕೊಂಡ 12ಕ್ಕೂ ಹೆಚ್ಚು ಅನುಮಾನಾಸ್ಪದರನ್ನು ಪ್ರಶ್ನಿಸಲಾಗಿದೆ. ಆದರೆ ಪೊಲೀಸರಿಗೆ ಇಲ್ಲಿಯವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Delhi Blast: CRPF ಶಾಲೆ ಬಳಿ ಭಾರೀ ಸ್ಫೋಟ; ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ; ಬೈಕ್‌ ಸವಾರ ಜಸ್ಟ್‌ ಮಿಸ್‌!