Tuesday, 19th November 2024

Jabalpur blast: ಬಾಂಬ್‌, ಸ್ಫೋಟಕ ವಸ್ತು ತಯಾರಿಕಾ ಕಾರ್ಖಾನೆಯಲ್ಲಿ ಭಾರೀ ಬ್ಲಾಸ್ಟ್‌; 2 ಬಲಿ, 15 ಮಂದಿಗೆ ಗಾಯ

Jabalpur blast

ಭೋಪಾಲ್‌: ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಭಾರೀ ಸ್ಫೋಟ(Jabalpur blast) ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಧ್ಯಪ್ರದೇಶದ ಜಬಲ್ಪು‌ರದಲ್ಲಿ ಈ ಘಟನೆ ನಡೆದಿದ್ದು, ಬರೋಬ್ಬರಿ 12 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಂಬ್‌ಗಳು ಮತ್ತು ಸ್ಫೋಟಕಗಳನ್ನು ತಯಾರಿಸುವ ಸೆಂಟ್ರಲ್ ಸೆಕ್ಯುರಿಟಿ ಇನ್‌ಸ್ಟಿಟ್ಯೂಟ್ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ. ಗಾಯಗೊಂಡಿರುವವರಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿದ್ದು, ಒಬ್ಬ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಖಾನೆಯ ರೀಫಿಲಿಂಗ್ ವಿಭಾಗದಲ್ಲಿ ಸ್ಫೋಟ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ತುರ್ತು ಚಿಕಿತ್ಸೆಗಾಗಿ ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರಲ್ಲಿ ಇಬ್ಬರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದರೆ, ಮತ್ತೊಬ್ಬ ಕಾರ್ಮಿಕ ನಾಪತ್ತೆಯಾಗಿದ್ದಾನೆ. ನಾಪತ್ತೆಯಾಗಿರುವ ಕಾರ್ಮಿಕ ಸ್ಫೋಟ ಸಂಭವಿಸಿದ ವಿಭಾಗದ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳು ತಕ್ಷಣ ಸ್ಥಳಕ್ಕೆ ಧಾವಿಸಿದ್ದು,ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಗಾಯಗೊಂಡ ಒಟ್ಟು 15 ಮಂದಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಯಾವುದೇ ಸಾವು ಸಂಭವಿಸಿದೆ ಎಂದು ಕಾರ್ಖಾನೆ ಆಡಳಿತ ಇನ್ನೂ ಖಚಿತಪಡಿಸಿಲ್ಲ. ಸಿಡಿಮದ್ದು ತುಂಬುವ ಪ್ರಕ್ರಿಯೆಯಲ್ಲಿ, ಕಾರ್ಖಾನೆಯ F-6 ವಿಭಾಗದ 200 ಅನ್ನು ನಿರ್ಮಿಸುವಲ್ಲಿ ಹೈಡ್ರಾಲಿಕ್ ವ್ಯವಸ್ಥೆಯು ಅಸಮರ್ಪಕವಾಗಿ ಕಾರ್ಯನಿರ್ವಹಿಸಿತು. ಅದರ ಪರಿಣಾಮವಾಗಿ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಸ್ಫೋಟ ತೀವ್ರಯೆ ಎಷ್ಟಿತ್ತು ಎಂದರೆ ಅದು ಐದು ಕಿಲೋಮೀಟರ್‌ಗಳಷ್ಟು ದೂರದ ಪ್ರದೇಶಗಳಲ್ಲಿ ಕೇಳಿಸಿತು. ಸ್ಥಳೀಯ ನಿವಾಸಿಗಳು ಆರಂಭದಲ್ಲಿ ಭೂಕಂಪ ಸಂಭವಿಸಿದೆ ಎಂದು ಭಾವಿಸಿದ್ದರು.

ಸ್ಫೋಟದಪರಿಣಾಮದಿಂದಾಗಿ ಕಟ್ಟಡದ ಒಂದು ಭಾಗವೂ ಕುಸಿದು, ಅನೇಕ ಕಾರ್ಮಿಕರು ಗಾಯಗೊಂಡಿದ್ದಾರೆ. ಈ ಕಾರ್ಖಾನೆ ರಕ್ಷಣಾ ಉತ್ಪಾದನಾ ಇಲಾಖೆಯ ಅಡಿಯಲ್ಲಿ ಪ್ರಮುಖ ಯುದ್ಧಸಾಮಗ್ರಿ ಉತ್ಪಾದನಾ ಘಟಕವಾಗಿದೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಸ್ಫೋಟದ ಹಿಂದಿನ ನಿಖರ ಕಾರಣ ತನಿಖೆ ಪೂರ್ಣಗೊಂಡ ನಂತರ ತಿಳಿಯಲಿದೆ. ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ ಆದರೆ ಕಾರ್ಖಾನೆಯವರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಎರಡು ದಿನಗಳ ಹಿಂದೆ ದೆಹಲಿಯಲ್ಲಿರುವ ಕೇಂದ್ರೀಯ ಮೀಸಲು ಪಡೆ(CRPF) ಶಾಲೆಯ ಬಳಿ ಭಾರೀ ಸ್ಫೋಟವೊಂದು ಸಂಭವಿಸಿತ್ತು. ರೋಹಿಣಿಯ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಸಿಆರ್‌ಪಿಎಫ್ ಶಾಲೆಯ ಹೊರಗೆ ಸ್ಫೋಟ(Delhi Blast) ಸಂಭವಿಸಿದ್ದು, ಏಕಾಏಕಿ ಶಾಲೆಯ ತಡೆಗೋಡೆ ಬ್ಲಾಸ್ಟ್‌ ಆಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು. ಇನ್ನುಸುಮಾರು ಎರಡು ಕಿ.ಮೀ ದೂರದವರೆಗೆ ಸ್ಫೋಟದ ಸದ್ದು ಕೇಳಿಸಿದೆ.

ಇನ್ನು ಸ್ಥಳಕ್ಕೆ ದೌಡಯಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG) ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಶಾಲೆಯ ಗೋಡೆ, ಸಮೀಪದ ಅಂಗಡಿಗಳು ಮತ್ತು ಕಾರಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದಾಗ ಅಕ್ಕಪಕ್ಕದಲ್ಲಿ ಯಾರು ಇದ್ದರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮೊಬೈಲ್ ನೆಟ್‌ವರ್ಕ್ ಡೇಟಾವನ್ನು ಸಂಗ್ರಹಿಸಿದ್ದಾರೆ, ಇದು ಕಚ್ಚಾ ಬಾಂಬ್ ಎಂದು ಶಂಕಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Delhi Blast: CRPF ಶಾಲೆ ಬಳಿ ಭಾರೀ ಸ್ಫೋಟ; ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ; ಬೈಕ್‌ ಸವಾರ ಜಸ್ಟ್‌ ಮಿಸ್‌!