Saturday, 23rd November 2024

Tumkur News: ಜೆಜೆಎಂ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸೂಚನೆ

ತುಮಕೂರು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜಲ ಜೀವನ್ ಮಿಷನ್(ಜೆಜೆಎಂ)  ಯೋಜನೆಯಡಿ ಕೈಗೊಂಡಿ ರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಗ್ರಾಮೀಣ ಕುಡಿಯುವ ನೀರಿನ ಸಹಾಯಕ ಇಂಜಿನಿಯರ್‌ಗೆ ಸೂಚನೆ ನೀಡಿದರು.

ಜೆಜೆಎಂ ಕಾಮಗಾರಿ ಪರಿಶೀಲನೆಗಾಗಿ ಜಿಲ್ಲೆಯ ಶಿರಾ ತಾಲೂಕು ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮಾರನಗೆರೆ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು, ಜಲ ಜೀವನ್ ಮಿಷನ್ ಯೋಜನೆಯಡಿ ನಿರ್ಮಾಣ ಮಾಡುವ ಕಾಮಗಾರಿಗಳ ಅಂತರ್ಗತ ಪೈಪ್‌ಲೈನ್ ಮತ್ತು ಗೇಟ್‌ವಾಲ್ವ್ ಗಳ ಮಾಹಿತಿಯನ್ನೊಳಗೊಂಡ ವಿಲೇಜ್ ಕೀ ಮ್ಯಾಪನ್ನು ಕಾಮಗಾರಿ ಮುಗಿದ ಕೂಡಲೇ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಬೇಕು. ವಿಸ್ತೃತ ಯೋಜನಾ ವರದಿಯಲ್ಲಿರುವಂತೆ, ಅಂದಾಜು ಪಟ್ಟಿಯಲ್ಲಿ ನಿಗಧಿಪಡಿಸಿದಂತೆ ಕಾಮಗಾರಿ ಅನುಷ್ಠಾನವಾಗಿರಬೇಕು. ಮನೆ ಮುಂದೆ ಅಳವಡಿಸುವ ನಳ ಸಂಪರ್ಕ ಸೇರಿ ಕಾಮಗಾರಿಗಳಲ್ಲಿ ಬಳಸುವ ಎಲ್ಲ ಸಾಮಗ್ರಿಗಳು ಗುಣಮಟ್ಟದ್ದಾಗಿರಬೇಕು ಎಂದು ಸೂಚನೆ ನೀಡಿದರು.  

ರತ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೀನಿ ಕಂಪನಿಗೆ ಭೇಟಿ ನೀಡಿ, ವಿವಿಧ ರೀತಿಯ ಜೀನಿ ಉತ್ಪನ್ನಗಳ ಮಾಹಿತಿ ಪಡೆದರು. ಉತ್ಪನ್ನ ತಯಾರಿಕೆಗೆ ಅಗತ್ಯ ಧಾನ್ಯಗಳನ್ನು ಸ್ಥಳೀಯ ರೈತರಿಂದಲೇ ಖರೀದಿ ಮಾಡಿದರೆ ರೈತರಿಗೂ ಅನುಕೂಲವಾಗುತ್ತದೆ ಎಂದು ಜೀನಿ ಮಾಲೀಕರಿಗೆ ಸಲಹೆ ನೀಡಿದರು.

ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಮಕ್ಕಳ ಪಾಲನೆ-ಪೋಷಣೆಗಾಗಿ ರತ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗುಂಟೆ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಕೂಸಿನ ಮನೆಗೆ ಭೇಟಿ ನೀಡಿ, ಮಕ್ಕಳ ಪಾಲನೆ-ಪೋಷಣೆ, ಆಹಾರ ವಿತರಣೆ, ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ದಾಖಲಾತಿಗಳನ್ನು ಪರಿಶೀಲಿಸಿದರು.     

ಈ ವೇಳೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ಹರೀಶ್, ಸಹಾಯಕ ನಿರ್ದೇಶಕ(ಗ್ರಾ.ಉ.) ಕನಕಪ್ಪ ಹನುಮಪ್ಪ ಮೇಲುಸಕ್ರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಆರ್.ನಾಗರಾಜು, ಎಚ್. ಆರ್.ಜುಂಜೇಗೌಡ, ತಾಂತ್ರಿಕ ಸಂಯೋಜಕ ಜಿ.ಪುನೀತ್ ಕುಮಾರ್ ಇದ್ದರು.