Saturday, 23rd November 2024

IND vs NZ 2nd Test: ಗಿಲ್‌ ಫಿಟ್‌, ರಾಹುಲ್‌ಗೆ ಕೊಕ್‌!

ಪುಣೆ: ಕುತ್ತಿಗೆ ನೋವಿಗೆ ತುತ್ತಾಗಿ ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದ ಯುವ ಬ್ಯಾಟರ್‌ ಶುಭ್‌ಮನ್ ಗಿಲ್(shubman gill) ಫಿಟ್‌ ಆಗಿದ್ದು ದ್ವಿತೀಯ ಟೆಸ್ಟ್‌ನಲ್ಲಿ(IND vs NZ 2nd Test) ಕಣಕ್ಕಿಳಿಯುವುದು ಖಚಿತವಾಗಿದೆ. ಮಂಗಳವಾರ ನಡೆದ ಅಭ್ಯಾಸದಲ್ಲಿ ಗಿಲ್‌ ನೆಟ್ಸ್‌ನಲ್ಲಿ ಸಂಪೂರ್ಣ ದೈಹಿಕ ಕ್ಷಮತೆಯೊಂದಿಗೆ ಬ್ಯಾಟಿಂಗ್‌(shubman gill practice) ಅಭ್ಯಾಸ ನಡೆಸಿದ್ದಾರೆ. ಗಿಲ್‌ ಆಗಮನದಿಂದ ರಾಹುಲ್‌ಗೆ ಕೊಕ್‌ ಖಚಿತ.

ಟೀಮ್ ಇಂಡಿಯಾದ ಸಹಾಯಕ ಕೋಚ್ ರಿಯಾನ್ ಟೆನ್ ದೋಸ್ಹಾಟೆ ಕೂಡ ಗಿಲ್‌ ಫಿಟ್‌ ಆಗಿದ್ದು ದ್ವಿತೀಯ ಪಂದ್ಯಕ್ಕೆ ಲಭ್ಯ ಎಂದು ತಿಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಗಿಲ್‌ ಅಲಭ್ಯತೆಯಲ್ಲಿ ಸರ್ಫರಾಜ್‌ ಖಾನ್‌ಗೆ ಅವಕಾಶ ನೀಡಲಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದರೂ ದ್ವಿತೀಯ ಇನಿಂಗ್ಸ್‌ನಲ್ಲಿ ಅದೂ ಕೂಡ ತಂಡ ಸಂಕಷ್ಟದಲ್ಲಿ ಇದ್ದ ವೇಳೆ ಸರ್ಫರಾಜ್‌ 150 ರನ್‌ ಬಾರಿಸಿ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಿದ್ದರು. ಹೀಗಾಗಿ ದ್ವಿತೀಯ ಟೆಸ್ಟ್‌ನಲ್ಲಿಯೂ ಅವರು ಆಡುವ ಬಳಗದಲ್ಲಿ ಕಾಣಿಸಬಹುದು. ಎರಡೂ ಇನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್‌ ತೋರಿದ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರನ್ನು ಕೈಬಿಟ್ಟು ಗಿಲ್‌ ಅವರನ್ನು ಆಡಿಸುವ ಸಾಧ್ಯತೆ ಅಧಿಕ.

ಇದನ್ನೂ ಓದಿ Commonwealth 2026: ಬ್ಯಾಡ್ಮಿಂಟನ್, ಶೂಟಿಂಗ್, ಹಾಕಿ, ಕ್ರಿಕೆಟ್‌ಗೆ ಕತ್ತರಿ; ಭಾರತಕ್ಕೆ ಭಾರೀ ನಷ್ಟ

ಶುಭಮನ್‌ ಗಿಲ್‌ ಬಾಂಗ್ಲಾ ವಿರುದ್ಧದ ಟೆಸ್ಟ್‌ನಲ್ಲಿ ಶತಕ ಬಾರಿಸಿ ಮತ್ತು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಹೀಗಾಗಿ ಅವರು ದ್ವಿತೀಯ ಟೆಸ್ಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಬಹುದು. ಆಗ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು. ಬೆಂಗಳೂರು ಟೆಸ್ಟ್‌ನಲ್ಲಿ ಅತ್ಯಂತ ಕಳಪೆ ಬೌಲಿಂಗ್‌ ನಡೆಸಿದ ಮೊಹಮ್ಮದ್‌ ಸಿರಾಜ್‌ ಕೈಬಿಟ್ಟು ಅವರ ಸ್ಥಾನದಲ್ಲಿ ಆಕಾಶ್‌ ದೀಪ್‌ ಅವಕಾಶ ಪಡೆಯಬಹುದು.

ಪುಣೆಯಲ್ಲಿ ಭಾರತ ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಆಡಲಿದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕೆ ರಣಜಿ ಆಡುತ್ತಿದ್ದ ವಾಷಿಂಗ್ಟನ್‌ ಸುಂದರ್‌ ಅವರನ್ನು ದಿಢೀರ್‌ ಆಗಿ ತಂಡಕ್ಕೆ ಸೇರ್ಪಡೆಗೊಳಿಸಿದಂತಿದೆ. ಕಪ್ಪು ಮಣ್ಣಿನಿಂದ ತಯಾರಿಸಲಾದ ಪಿಚ್‌ ಇದಾಗಿರುವ ಕಾರಣ ಪಿಚ್‌ ನಿಧಾನಗತಿಯಲ್ಲಿ ವರ್ತಿಸುವ ಸಾಧ್ಯತೆ ಇದೆ. ಪುಣೆಯಲ್ಲಿ ಭಾರತ ಈವರೆಗೆ ಕೇವಲ 2 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು ತಲಾ ಒಂದು ಸೋಲು ಮತ್ತು ಗೆಲುವು ಕಂಡಿದೆ. 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 333 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿದ್ದ ಭಾರತ, 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್‌ ಗೆಲುವು ಸಾಧಿಸಿತ್ತು.

ಅನುಭವಿ ಆರ್‌.ಅಶ್ವಿನ್‌ ಮತ್ತು ರವೀಂದ್ರ ಜಡೇಜಾ ಮೊದಲ ಆಯ್ಕೆ ಸ್ಪಿನ್ನರ್‌ಗಳಾದರೆ ಮೂರನೇ ಸಿನ್ನರ್‌ ಸ್ಥಾನಕ್ಕೆ ಕುಲ್‌ದೀಪ್‌, ಅಕ್ಷರ್‌ ಮತ್ತು ವಾಷಿಂಗ್ಟನ್‌ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬ್ಯಾಟಿಂಗ್‌ನಲ್ಲಿ ನರೆವಾಗಬಲ್ಲರು ಎಂಬ ಕಾರಣಕ್ಕೆ ವಾಷಿಂಗ್ಟನ್‌ ಸುಂದರ್‌ ಅಥವಾ ಅಕ್ಷರ್‌ಗೆ ಸ್ಥಾನ ಸಿಗಬಹುದು.