Wednesday, 23rd October 2024

Bengaluru News: ಆತ್ಮನಿರ್ಭರ ಸರ್ಜಿಕಲ್‌ ರೊಬಾಟ್‌; ಆರೋಗ್ಯ ಕ್ಷೇತ್ರದಲ್ಲಿ ಇದು ಹೊಸ ಮೈಲಿಗಲ್ಲು: ಡಾ. ಸಿ.ಎನ್‌. ಮಂಜುನಾಥ್‌

Bengaluru News

ಬೆಂಗಳೂರು: ಸ್ವದೇಶಿ ಶಸ್ತ್ರಚಿಕಿತ್ಸಾ ರೋಬೋಟಿಕ್‌ ವ್ಯವಸ್ಥೆ ‘ಎಸ್‌ಎಸ್‌ಐ ಮಂತ್ರ’ ಕ್ಕೆ (Bengaluru News) ನಗರದ ಪ್ರಕ್ರಿಯ ಆಸ್ಪತ್ರೆಯಲ್ಲಿ ಸಂಸದ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್‌. ಮಂಜುನಾಥ್‌ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದೇಶದ ಆರೋಗ್ಯ ಸುಧಾರಣೆಯಲ್ಲಿ ಇದೊಂದು ಹೊಸ ಮೈಲಿಗಲ್ಲಾಗಿದೆ. ಪ್ರಕ್ರಿಯ ಹಾಸ್ಪಿಟಲ್ಸ್‌ ಅಸಾಧಾರಣ ರೋಗಿಗಳ ಆರೈಕೆಗೆ ನಿರಂತರವಾಗಿ ಆದ್ಯತೆ ನೀಡುತ್ತಿದೆ. ಪಾರದರ್ಶಕತೆ ಮತ್ತು ಸೇವಾ ಮನೋಭಾವದಿಂದ ಸಮಾಜದ ಎಲ್ಲಾ ವರ್ಗದವರಿಗೆ ಆರೋಗ್ಯ ಸೇವೆ ಒದಗಿಸುತ್ತಿವೆ. ಅತ್ಯುನ್ನತ ಉತ್ಕೃಷ್ಟ ತಜ್ಞರು ಮತ್ತು ಸಿಬ್ಬಂದಿಗಳ ತಂಡ ಸೂಪರ್ ಸ್ಪೆಷಾಲಿಟಿ ಸೇವೆಗಳಿಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಈಗ ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಪರಿಚಯಿಸಿರುವ ಪ್ರಕ್ರಿಯ ಹಾಸ್ಪಿಟಲ್ಸ್‌ ಶಸ್ತ್ರಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ಹಾಗೂ ತನ್ನ ರೋಗಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ ಡಾ. ಸಿ.ಎನ್‌. ಮಂಜುನಾಥ್‌ ಅವರು, ಜತೆಗೆ ರೋಬೋಟಿಕ್ ಆಧಾರಿತ ಶಸ್ತ್ರಚಿಕಿತ್ಸೆಯ ಹಲವು ಉಪಯೋಗಗಳನ್ನು ವಿವರಿಸಿದರು. ಕಡಿಮೆ ನೋವು, ಆಸ್ಪತ್ರೆಯಲ್ಲಿ ಕಡಿಮೆ ವಾಸ್ತವ್ಯ, ಶೀಘ್ರ ಚೇತರಿಕೆ ಮತ್ತು ವೇಗವಾಗಿ ದೈನಂದಿನ ಚಟುವಟಿಕೆಗಳಿಗೆ ವಾಪಸ್‌ ಆಗುವುದು ರೋಬೋಟಿಕ್‌ ಶಸ್ತ್ರಚಿಕಿತ್ಸೆಯ ಪ್ರಯೋಜನಗಳಾಗಿವೆ. ಈ ತಂತ್ರಜ್ಞಾನದೊಂದಿಗೆ, ಪ್ರಕ್ರಿಯಾ ಹಾಸ್ಪಿಟಲ್ಸ್‌ ತನ್ನ ರೋಗಿಗಳಿಗೆ ಕನಿಷ್ಠ ದರದಲ್ಲಿ ಶಸ್ತ್ರಚಿಕಿತ್ಸೆಯ ಅನುಕೂಲದ ಮೂಲಕ ವಿಶ್ವದರ್ಜೆಯ ಆರೈಕೆಯನ್ನು ಪ್ರಸ್ತುತ ಪಡಿಸುತ್ತದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Autoimmune Disorder : ಕೊರೊನಾ ಬಳಿಕ ರೋಗ ನಿರೋಧಕ ಶಕ್ತಿಯಲ್ಲಿ ಗಣನೀಯ ಇಳಿಕೆ; ಸಂಶೋಧನೆ ವರದಿ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಎಸ್‌. ಮುನಿರಾಜು, ಕೋವಿಡ್‌ ಸಂದರ್ಭದಲ್ಲಿ ಪ್ರಕ್ರಿಯ ಆಸ್ಪತ್ರೆ‌ ಈ ಭಾಗದಲ್ಲಿ ಉತ್ತಮ ಹೆಸರು ಮಾಡಿದೆ. ನಿರಂತರವಾಗಿ ರೋಗಿಗಳಿಗೆ ಗುಣಮಟ್ಟದ ಸೇವೆಯನ್ನು ನೀಡಲು ತೊಡಗಿಸಿಕೊಂಡಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಸ್ಪತ್ರೆಗಳು ಸ್ವದೇಶಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಈ ಅತ್ಯಾಧುನಿಕ ತಂತ್ರಜ್ಞಾನಗಳು ಕಡಿಮೆ ವೆಚ್ಚದಲ್ಲಿ ಎಲ್ಲ ವರ್ಗದ ಜನರನ್ನು ತಲುಪಬೇಕು ಎಂದು ಹೇಳಿದರು.

ಈ ವೇಳೆ ಡಾ. ಕಾಮಿನಿ ರಾವ್‌ ಮಾತನಾಡಿ, ಪ್ರಕ್ರಿಯ ಆಸ್ಪತ್ರೆ ತನ್ನದೇ ಆದ ವಿಭಿನ್ನ ರೀತಿಯಲ್ಲಿ ಜನರನ್ನು ತಲುಪಲು ಪ್ರಯತ್ನಿಸುತ್ತಿದೆ. ಸ್ವದೇಶಿ ತಂತ್ರಜ್ಞಾನದ ಬಳಕೆ ಜತೆಗೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಒಳ್ಳೆಯ ಹೆಸರು ಮಾಡುತ್ತಿದೆ ಎಂದು ತಿಳಿಸಿದರು.

ಪ್ರಕ್ರಿಯ ಹಾಸ್ಪಿಟಲ್ಸ್‌ ಸಿಇಒ ಡಾ. ಶ್ರೀನಿವಾಸ್‌ ಚಿರಕುರಿ ಮಾತನಾಡಿ, ಎಸ್‌ಎಸ್‌ಐ ಮಂತ್ರ ರೋಬೋಟಿಕ್‌ ವ್ಯವಸ್ಥೆಯು ಶಸ್ತ್ರಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದನ್ನು ಶೇ.88ಕ್ಕಿಂತ ಹೆಚ್ಚು ಸ್ವದೇಶಿ ಉತ್ಪನ್ನಗಳ ಮೂಲಕ ತಯಾರಿಸಲಾಗಿದ್ದು, ಈ ಬಹುಮುಖ ರೋಬೋಟ್ ಜನರಲ್ ಸರ್ಜರಿ, ಸ್ತ್ರೀರೋಗಶಾಸ್ತ್ರ , ಮೂತ್ರಶಾಸ್ತ್ರ ಹಾಗೂ ಕ್ಯಾನ್ಸರ್ ಸೇರಿ ಅನೇಕ ವಿಭಾಗಗಳಲ್ಲಿ ಸೇವೆ ಸಲ್ಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಸಾಟಿಯಿಲ್ಲದ ನಿಖರ ಫಲಿತಾಂಶವನ್ನು ನೀಡಲಿದ್ದು, ಸ್ಥಳೀಯವಾಗಿಯೇ ತಯಾರಿಸಿರುವುದರಿಂದ ಎಲ್ಲ ವರ್ಗದ ರೋಗಿಗಳಿಗೆ ಸುಲಭ ಮತ್ತು ಕೈಗೆಟುಕುವ ದರದಲ್ಲಿ ಸೇವೆಯನ್ನು ನೀಡಲಿದೆ ಎಂದು ಹೇಳಿದರು.

ಆತ್ಮನಿರ್ಭರ ಭಾರತದ ಉಪಕ್ರಮ

ಎಸ್‌ಎಸ್‌ಐ ಮಂತ್ರವು ಭಾರತದ ಸ್ವಾವಲಂಬನೆಗೆ ಹೆಮ್ಮೆಯ ಉದಾಹರಣೆಯಾಗಿದೆ. ಆತ್ಮನಿರ್ಭರ ಭಾರತ್ ಉಪಕ್ರಮದ ಭಾಗವಾಗಿರುವ ಈ ರೋಬೋಟಿಕ್ ವ್ಯವಸ್ಥೆ ವಿಶ್ವದ ಅತ್ಯುತ್ತಮ ಶಸ್ತ್ರಚಿಕಿತ್ಸಾ ತಂತ್ರಜ್ಞಾನಕ್ಕೆ ಸ್ಪರ್ಧೆಯೊಡ್ಡಲಿದೆ ಎಂದ ಡಾ. ಶ್ರೀನಿವಾಸ್‌ ಚಿರಕುರಿ, ವೈದ್ಯರ ತಂಡಕ್ಕೆ ಶಸ್ತ್ರಚಿಕಿತ್ಸೆ ನಡೆಯುವ ಜಾಗವನ್ನು ‘3D’ಯಲ್ಲಿ ನೋಡಲು ಎಸ್‌ಎಸ್‌ಐ ಮಂತ್ರ ಅನುವು ಮಾಡಿಕೊಡುತ್ತದೆ. ಇದರಿಂದ ಶಸ್ತ್ರಚಿಕಿತ್ಸೆ ನಿಖರ, ನೋವುರಹಿತ ಹಾಗೂ ಆರಾಮದಾಯಕವಾಗಿ ಇರಲಿದೆ ಎಂದು ಹೇಳಿದರು.

ಇನ್ನೂ, ಸಾಂಪ್ರದಾಯಿಕವಾಗಿ ಭಾರತದಲ್ಲಿ ಆರೋಗ್ಯ ಸೇವೆಯು ಆಮದು ಮಾಡಿಕೊಳ್ಳುವ ಉಪಕರಣಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದು ಚಿಕಿತ್ಸಾ ವೆಚ್ಚವನ್ನು ಕೂಡ ಹೆಚ್ಚಿಸುತ್ತಿದೆ. ಇದರ ನಡುವೆ ಸ್ಥಳೀಯ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಹೆಚ್ಚುತ್ತಿದ್ದು, ಪ್ರಕ್ರಿಯ ಹಾಸ್ಪಿಟಲ್ಸ್‌ ನಂತಹ ಖಾಸಗಿ ಸಂಸ್ಥೆಗಳು ಭಾರತೀಯರಿಗೆ ಸುಧಾರಿತ ತಂತ್ರಜ್ಞಾನವನ್ನು ಒದಗಿಸಲು ಸ್ಥಳೀಯ ಆವಿಷ್ಕಾರದೊಂದಿಗೆ ಕೆಲಸ ಮಾಡುತ್ತಿವೆ. ಇದು ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ಕೊಡುವುದಲ್ಲದೇ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದರು.

ಈ ಸುದ್ದಿಯನ್ನೂ ಓದಿ | Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

ಇದೇ ವೇಳೆ ಮಾತನಾಡಿದ ರೋಬೋಟಿಕ್‌ ಸರ್ಜನ್‌ ಡಾ. ಸಂತೋಷ್‌, ರೋಬೋಟಿಕ್‌ ನೆರವಿನ ಶಸ್ತ್ರಚಿಕಿತ್ಸೆಯು ನಿಖರತೆಯನ್ನು ಹೆಚ್ಚಿಸಲಿದೆ. ಎಸ್‌ಎಸ್‌ಐ ಮಂತ್ರ ನೀಡುವ 3D ವೀವ್‌ ಮೂಲಕ ಸುಲಭವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಬಹುದಾಗಿದ್ದು, ಈ ಹಿಂದೆ ಶಸ್ತ್ರಚಿಕಿತ್ಸೆ ಮಾಡಲು ಕಷ್ಟಕರವಾದ ಅಂಗಾಂಗ ಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಬಹುದು ಎಂದು ತಿಳಿಸಿದರು. ಇನ್ನು, ಈ ರೋಬೋಟಿಕ್‌ ಶಸ್ತ್ರಚಿಕಿತ್ಸೆ ಹೃದಯ ಮತ್ತು ಮೃದು ಅಂಗಾಂಶ ಶಸ್ತ್ರಚಿಕಿತ್ಸೆಗಳಲ್ಲಿ ಗೇಮ್‌ ಚೆಂಜರ್‌ ಆಗಲಿದೆ ಎಂದು ರೋಬೋಟಿಕ್‌ ಸರ್ಜನ್‌ ಡಾ ಹಬೀಬ್‌ ಹೇಳಿದರು. ಈ ಸಂದರ್ಭದಲ್ಲಿ ಡಾ. ಪ್ರಕಾಶ್ ರಾಮಚಂದ್ರ ಉಪಸ್ಥಿತರಿದ್ದರು.