Wednesday, 23rd October 2024

HD Kumaraswamy: ಚನ್ನಪಟ್ಟಣ ಟಿಕೆಟ್ ವಿಷಯಕ್ಕೆ ನೆಲದವರೆಗೂ ಬಗ್ಗಿದ್ದೇನೆ, ಇನ್ನೂ ಬಗ್ಗಲು ನನ್ನಿಂದ ಸಾಧ್ಯವಿಲ್ಲ ಎಂದ ಕುಮಾರಸ್ವಾಮಿ

HD Kumaraswamy

ಬೆಂಗಳೂರು: ಚನ್ನಪಟ್ಟಣ (Channapatna) ಟಿಕೆಟ್ ವಿಷಯಕ್ಕೆ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ. ನನ್ನ ತಾಳ್ಮೆ, ಸಹನೆಗೂ ಮಿತಿ ಇದೆ. ಅಭ್ಯರ್ಥಿ ವಿಷಯದಲ್ಲಿ ಕಾರ್ಯಕರ್ತರ ಭಾವನೆಗಳಿಗೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಿಳಿಸಿದರು. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ನನಗೆ ಭಯವೇ ಇಲ್ಲ

ಈ ರಾಜ್ಯದಲ್ಲಿ ನನ್ನಷ್ಟು ಉಪ ಚುನಾವಣೆಗಳನ್ನು ಎದುರಿಸಿದ, ಯಶಸ್ವಿಯಾಗಿ ನಿಭಾಯಿಸಿದ ವ್ಯಕ್ತಿ ಇನ್ನೊಬ್ಬರಿಲ್ಲ, ಎಂತೆಂತಹ ಚುನಾವಣೆಗಳನ್ನು, ಅಗ್ನಿಪರೀಕ್ಷೆಗಳನ್ನು ಎದುರಿಸಿದ್ದೇನೆ. ಚನ್ನಪಟ್ಟಣ ಚುನಾವಣೆ ಎದುರಿಸುವುದಕ್ಕೆ ನನಗೆ ಭಯವೇ..? ಸಾಧ್ಯವೇ ಇಲ್ಲ ಎಂದು ಕೇಂದ್ರ ಸಚಿವರು ಗುಡುಗಿದರು.

ನಿಮ್ಮಂತ ಕಾರ್ಯಕರ್ತರು ಜತೆಯಲ್ಲಿ ಇರಬೇಕಾದರೆ ನಾವು ಹೆದುರುತ್ತೇವೆಯೇ? ನೆಲದವರಿಗೆ ಬಗ್ಗಿದ್ದೇನೆ, ಜೆಡಿಎಸ್ ಮುಗಿಸಲು ಅನೇಕರು ನಮ್ಮಿಂದಲೇ ಬೆಳೆದವರು ಎಂತೆತ ಮಾತಾಡಿದ್ದಾರೆ. ಮೋದಿ, ಶಾ ಸಂಬಂಧ ಹಾಳು ಮಾಡಿಕೊಳ್ಳಲಾರೆ. ನಾನು ಬಗ್ಗಿರುವುದು ಅಧಿಕಾರಕ್ಕಾಗಿ ಅಲ್ಲಾ. ವೈಯಕ್ತಿಕವಾಗಿ ನಾನು ಮಾಡದಿರುವ ತಪ್ಪಿಗೆ ತಲೆಕೊಟ್ಟಿದ್ದೇನೆ. ಈ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂಲೋತ್ಪಾಟನೆ ಮಾಡಬೇಕು ಎನ್ನುವ ಪ್ರಧಾನಿ ಮೋದಿ ಸಂಕಲ್ಪಕ್ಕೆ ಹೆಗಲಾಗಿ ನಿಂತಿದ್ದೇನೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | Bengaluru News: ಆತ್ಮನಿರ್ಭರ ಸರ್ಜಿಕಲ್‌ ರೊಬಾಟ್‌; ಆರೋಗ್ಯ ಕ್ಷೇತ್ರದಲ್ಲಿ ಇದು ಹೊಸ ಮೈಲಿಗಲ್ಲು: ಡಾ. ಸಿ.ಎನ್‌. ಮಂಜುನಾಥ್‌

ನಾಲ್ಕು ತಿಂಗಳಾಯಿತು ನಾನು ಮಂತ್ರಿಯಾಗಿ. ಆರೋಗ್ಯ ಹಾಳು ಮಾಡಿಕೊಂಡು ಏತಕ್ಕಾಗಿ ಇಷ್ಟೆಲ್ಲಾ ಮಾಡಬೇಕು. ನನ್ನಿಂದ ಜನರಿಗೆ ಅಲ್ಪಸ್ವಲ್ಪವಾದರೂ ಸಹಾಯ ಆಗುತ್ತದೆಯೇ ಎಂದು ಒಡ್ಡಾಡುತ್ತಿದ್ದೇನೆ. ಎನ್‌ಡಿಎ ಮೈತ್ರಿ ಭದ್ರವಾಗಿದೆ. ಪ್ರಧಾನಿ ಮೋದಿ ಅವರು ದೇವೇಗೌಡರಿಗೆ ಕೊಡುವ ಗೌರವವನ್ನು ಯಾರಿಗೂ ಕೊಡಲ್ಲ. ಅವರಿಬ್ಬರ ನಡುವಿನ ಗೌರವಭಾವ ಎಂತದ್ದು ಎನ್ನುವುದನ್ನು ನಾನು ನೋಡಿದ್ದೇನೆ. ಆ ಸಂಬಂಧಕ್ಕೆ ಚ್ಯುತಿ ಬರಬಾರದು. ಅದಕ್ಕಾಗಿ ಬಗ್ಗಿದ್ದೇನೆ, ಇನ್ನೂ ಬಗ್ಗಿ ಎಂದರೆ ನನ್ನಿಂದ ಸಾಧ್ಯವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್‌ನಿಂದಲೇ ಟಿಕೆಟ್ ಕೊಡಿ ಎಂದಿದ್ದರು ನಡ್ಡಾ

ನವದೆಹಲಿಯಲ್ಲಿ ಭೇಟಿಯಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಅವರಿಗೆ (ಯೋಗೇಶ್ವರ್) ರಾಜೀನಾಮೆ ಕೊಟ್ಟು ಜೆಡಿಎಸ್‌ನಿಂದ ಚುನಾವಣೆಗೆ ನಿಲ್ಲುವುದಕ್ಕೆ ಹೇಳುತ್ತೇವೆ ಎಂದು ಹೇಳಿದ್ದರು. ನಾನು ಈ ಸಂಬಂಧ ಉಳಿಯಬೇಕು, ಒಂದು ಸ್ಥಾನ ಮುಖ್ಯವಲ್ಲ, ಎನ್‌ಡಿಎ ಮೈತ್ರಿ ಗೆಲ್ಲಬೇಕು ಎಂದು ಹೇಳುತ್ತಲೇ ಇದ್ದೇನೆ. ಮೋದಿ, ಅಮಿತ್ ಶಾ, ನಡ್ಡಾ ಅವರಂತಹ ನಾಯಕರ ಜತೆ ಸಂಬಂಧ ಮಾಡಿಕೊಳ್ಳಬೇಕಾ? ಎಂದು ಅವರು ಕಿಡಿಕಾರಿದರು.

ದೆಹಲಿಯ ಬಿಜೆಪಿ ನಾಯಕರು ಜೆಡಿಎಸ್ ಪಕ್ಷಕ್ಕೆ ಬಹಳ ಗೌರವ ಕೊಟ್ಟಿದ್ದಾರೆ. ನನಗೆ ಕೆಲಸ ಮಾಡಲು ಮುಕ್ತ ಅವಕಾಶ ನೀಡಿದ್ದಾರೆ. ಏನೇ ಮನವಿ ಮಾಡಿದರೂ ತಕ್ಷಣ ಸ್ಪಂದಿಸುತ್ತಿದ್ದಾರೆ. ನಿಮ್ಮ ಭಾವನೆಗಳಿಗೆ ಧಕ್ಕೆ ಆಗದಂತೆ ನಿರ್ಧಾರ ಮಾಡುತ್ತೇನೆ. ನಿಮ್ಮ ಮಾತಿಗೆ ಗೌರವ ನೀಡುತ್ತೇನೆ. ಕಾರ್ಯಕರ್ತರು ಒಟ್ಟಾಗಿರಿ, ಯಾರಿಗೂ ತಲೆಬಾಗಬೇಕಿಲ್ಲ. ಗೌರವಕ್ಕೆ ತಲೆಬಾಗೊಣ,‌ ಇನ್ನು ಮೂರು ದಿನ‌ ಸಮಯ ಇದೆ. ನನ್ನ ಕಾರ್ಯಕರ್ತರ ಭಾವನೆಯೇ ಅಂತಿಮ. ಸಮಯ ಕೊಡಿ ಎಂದು ಕುಮಾರಸ್ವಾಮಿ ಅವರು ಕಾರ್ಯಕರ್ತರನ್ನು ಮನವಿ ಮಾಡಿಕೊಂಡರು.

ಈ ಸುದ್ದಿಯನ್ನೂ ಓದಿ | Ovarian Cancer: ಅಂಡಾಶಯದ ಕ್ಯಾನ್ಸರ್‌; 65 ವರ್ಷದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಕಾಂಗ್ರೆಸ್ ಪಕ್ಷದವರು ಕುತಂತ್ರ ಮಾಡಿ ನಮ್ಮ ಪಕ್ಷವನ್ನು ಪಾತಾಳಕ್ಕೆ ತುಳಿದಿದ್ದಾರೆ. ಅವರು ತುಳಿದಷ್ಟೂ ನಾವು ಪ್ರಬಲವಾಗಿ ಎದ್ದು ಬಂದಿದ್ದೇವೆ. ಲೋಕಸಭೆ ಚುನಾವಣೆಗೆ ಮೊದಲು ಜೆಡಿಎಸ್ ಮುಗಿದೇ ಹೋಯಿತು ಎಂದು ಜಾಗಟೆ ಹೊಡೆಯುತ್ತಿದ್ದರು. ಈಗ ಇದೇ ಕುಮಾರಸ್ವಾಮಿ ಏನು ಎನ್ನುವುದು ಅವರಿಗೆ ಅರ್ಥವಾಗಿದೆ. ಇಂಥ ಕಾಂಗ್ರೆಸ್‌ನವರಿಗೆ ನಾನು ಹೆದರಲ್ಲ. ಚಿನ್ನದಂತಹ ಕಾರ್ಯಕರ್ತರು ಇದ್ದೀರಿ. ಧೈರ್ಯವಾಗಿ ಚುನಾವಣೆ ಎದುರಿಸೋಣ. ಇದೊಂದು ಅಗ್ನಿಪರೀಕ್ಷೆ ನಿಜ, ಹಾಗಂತ ಎದೆಗುಂದಬೇಕಿಲ್ಲ ಎಂದು ಕಾರ್ಯಕರ್ತರಿಗೆ ಅವರು ಮನವಿ ಮಾಡಿದರು.

ಕಾರ್ಯಕರ್ತರ ಆಗ್ರಹಕ್ಕೆ ಮಣಿದು ಭಾಷಣ ಮೊಟಕುಗೊಳಿಸಿದ ಎಚ್‌ಡಿಕೆ

ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ಕೊಡಬೇಕು, ಯಾವುದೇ ಕಾರಣಕ್ಕೂ ಯೋಗೇಶ್ವರ್ ಅವರಿಗೆ ಕೊಡಬಾರದು ಎಂದು ಚನ್ನಪಟ್ಟಣ ಕಾರ್ಯಕರ್ತರು ಗದ್ದಲ ಎಬ್ಬಿಸಿದರು. ನಿಖಿಲ್ ಕುಮಾರಸ್ವಾಮಿ ಅವರು ಭಾಷಣ ಮಾಡುವಾಗಲೂ ಪದೇಪದೆ ಅಡ್ಡಿಪಡಿಸಿ, ನಿಖಿಲ್ ಅವರ ಹೆಸರನ್ನು ಘೋಷಣೆ ಮಾಡುವಂತೆ ಒತ್ತಾಯಿಸಿದರು.

ನಮ್ಮನ್ನು ಯೋಗೇಶ್ವರ್ ಹಿಂಸಿಸಿದ್ದಾರೆ. ನೀವು ಶಾಸಕರಾಗಿದ್ದಾಗಲೇ ನಮಗೆ ಕೊಡಬಾರದ ಕಾಟ ಕೊಟ್ಟರು. ಆ ವ್ಯಕ್ತಿಯೇ ಶಾಸಕರಾಗಿದ್ದಾಗ ಜೆಡಿಎಸ್ ಕಾರ್ಯಕರ್ತರು ಪ್ರತಿದಿನವೂ ಪೊಲೀಸ್ ಠಾಣೆಗೆ ಅಲೆಯಬೇಕಾಗಿತ್ತು. ಒಂದು ವೇಳೆ ನೀವು ನಿಖಿಲ್ ಅವರನ್ನು ಬಿಟ್ಟು ಯೋಗೇಶ್ವರ್‌ಗೆ ಮಣೆ ಹಾಕಿದರೆ ನಮ್ಮ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಕಾರ್ಯಕರ್ತರು ಹಠ ಹಿಡಿದರು.

ಕಾರ್ಯಕರ್ತರ ಕೂಗಾಟ, ಆಕ್ರೋಶದ ಕಾರಣದಿಂದ ಕುಮಾರಸ್ವಾಮಿ ಅವರು ಭಾಷಣ ಮುಂದುವರಿಸಲು ಆಗಲಿಲ್ಲ. ಮೊದಲು ನಿಖಿಲ್ ಅವರ ಹೆಸರು ಘೋಷಣೆ ಮಾಡಿ, ಆಮೇಲೆ ಬೇಕಾದರೆ ನಿಮ್ಮ ಭಾಷಣ ಕೇಳುತ್ತೇವೆ ಎಂದರು. ಕೊನೆಗೆ, ನನ್ನ ಆರೋಗ್ಯ ಸರಿ ಇಲ್ಲ. ಮಾತನಾಡಲು ಅವಕಾಶ ಕೊಡಿ ಎಂದರೂ ಕಾರ್ಯಕರ್ತರು ಕೇಳಲಿಲ್ಲ. ಕೊನೆಗೂ ಗದ್ದಲದಲ್ಲಿಯೇ ಕೇಂದ್ರ ಸಚಿವರು ಭಾಷಣ ಮೊಟಕು ಮಾಡಿದರು.

ಈ ಸುದ್ದಿಯನ್ನೂ ಓದಿ | Rekke Iddare Saake Book: ರೆಕ್ಕೆ ಇದ್ದರೆ ಸಾಕೆ?; ನಟಿ ಶ್ವೇತಾ ಶ್ರೀವಾಸ್ತವ್‌ ಸಿನಿಪಯಣದ ಅನುಭವ ಕಥನ

ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಮಾಜಿ ಸಚಿವರಾದ ಸಾ ರಾ ಮಹೇಶ್, ವೆಂಕಟರಾವ್ ನಾಡಗೌಡ, ಶಾಸಕ ಶರಣು ಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಜಯಮುತ್ತು, ಹಾಪಕಾಮ್ಸ್ ದೇವರಾಜು, ಹಿರಿಯ ಮುಖಂಡ ಪ್ರಸನ್ನ, ಜಯರಾಂ ಹಾಗೂ ಇತರರು ವೇದಿಕೆಯ ಮೇಲಿದ್ದರು.