Sunday, 24th November 2024

Actor Yash: ʼರಾಮಾಯಣʼದಲ್ಲಿ ಅಭಿನಯಿಸುತ್ತಿದ್ದಾರಾ ಯಶ್?‌ ಕೊನೆಗೂ ಮೌನ ಮುರಿದ ರಾಕಿಂಗ್‌ ಸ್ಟಾರ್‌ ಹೇಳಿದ್ದೇನು?

ಮುಂಬೈ: ಹೊಂಬಾಳೆ ಫಿಲ್ಸ್ಮ್‌(Hombale Films) ಬ್ಯಾನರ್‌ನಲ್ಲಿ ನಿರ್ಮಾಣವಾದ ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಕೆ.ಜಿ.ಎಫ್‌. (KGF) ಸರಣಿ ಚಿತ್ರಗಳ ಮೂಲಕ ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಬದಲಾಗಿದ್ದಾರೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅವರ ಮುಂದಿನ ಚಿತ್ರಗಳಿಗಾಗಿ ಇಡೀ ದೇಶವೇ ಕಾಯುವಂತಾಗಿದೆ. ಪ್ಯಾನ್‌ ಇಂಡಿಯಾ ʼಟಾಕ್ಸಿಕ್‌ʼ (Toxic) ಚಿತ್ರದಲ್ಲಿ ಯಶ್‌ ನಟಿಸುತ್ತಿರುವುದು ಈಗಾಗಲೇ ಅಧಿಕೃತವಾಗಿ ಘೋಷಣೆಯಾಗಿದ್ದು, ಚಿತ್ರೀಕರಣವೂ ಆರಂಭವಾಗಿದೆ. ಇದರ ಜತೆಗೆ ಅವರು ಬಾಲಿವುಡ್‌ನ ʼರಾಮಾಯಣʼ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಎಲ್ಲೂ ಹೊರ ಬಿದ್ದಿರಲಿಲ್ಲ. ಇದೀಗ ಸ್ವತಃ ಯಶ್‌ ಅವರೇ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ʼದಿ ಹಾಲಿವುಡ್‌ ರಿಪೋರ್ಟರ್‌ ಇಂಡಿಯಾʼ ಯೂಟ್ಯೂಬ್‌ ಚಾನಲ್‌ ಜತೆಗೆ ಮಾತನಾಡಿದ ಯಶ್‌ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ನಿತೇಶ್‌ ತಿವಾರಿ ನಿರ್ದೇಶನದ ಮುಂದಿನ ಬಾಲಿವುಡ್‌ ಚಿತ್ರ ʼರಾಮಾಯಣʼದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.

ರಾವಣ ಪಾತ್ರದಲ್ಲಿ ಯಶ್‌

ʼದಂಗಲ್‌ʼ, ʼಛಿಛೋರೆʼಯಂತಹ ಸೂಪರ್‌ ಹಿಟ್‌ ಹಿಂದಿ ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ನಿತೇಶ್‌ ತಿವಾರಿ ʼರಾಮಾಯಣʼ ಚಿತ್ರ ಕೈಗೆತ್ತಿಕೊಂಡಾಗ ಅದರಲ್ಲಿ ಯಶ್ ರಾವಣನ ಪಾತ್ರ ಮಾಡುತ್ತಾರೆ ಎನ್ನಲಾಗಿತ್ತು.ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಎಲ್ಲೂ ಮಾಹಿತಿ ಬಿಟ್ಟು ಕೊಡದ ಕಾರಣ ಯಶ್‌ ನಟಿಸುವುದು ಅನುಮಾನ ಎಂದೂ ಹೇಳಲಾಗಿತ್ತು. ಇದೀಗ ಯಶ್‌ ಈ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಈ ಚಿತ್ರದಲ್ಲಿ ತಾವು ರಾವಣನ ಪಾತ್ರ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ರಣಬೀರ್‌ ಕಪೂರ್‌ ರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾವಣನನ್ನು ಹೊರತುಪಡಿಸಿ ಬೇರೆ ಯಾವುದೇ ಪಾತ್ರವನ್ನು ತಾವು ನಿರ್ವಹಿಸುವುದಿಲ್ಲ ಎಂದು ಯಶ್‌ ಸ್ಪಷ್ಟಪಡಿಸಿದ್ದಾರೆ.

ಯಶ್‌ ಹೇಳಿದ್ದೇನು?

ನಿರ್ಮಾಪಕ ನಮಿತ್‌ ಮಲ್ಹೋತ್ರಾ ಜತೆ ಚಿತ್ರದ ಬಗ್ಗೆ ಮಾತುಕತೆ ನಡೆಸಿದ ಸಂದರ್ಭವನ್ನು ಅವರು ಮೆಲುಕು ಹಾಕಿದ್ದಾರೆ. ʼʼಚಿತ್ರದ ಬಗ್ಗೆ ನಮಿತ್‌ ಮಲ್ಹೋತ್ರಾ ಹೊಂದಿದ್ದ ದೃಷ್ಟಿಕೋನ, ಅವರ ಕನಸು ನನ್ನ ಮೇಲೆ ಪ್ರಭಾವ ಬೀರಿತು. ಈ ಚಿತ್ರದಲ್ಲಿ ರಾವಣನ ಪಾತ್ರ ನಿರ್ವಹಿಸುತ್ತೀರಾ? ಎಂದು ಅವರು ನನ್ನನ್ನು ಪ್ರಶ್ನಿಸಿದರುʼʼ ಎಂದು ಯಶ್‌ ಹೇಳಿದ್ದಾರೆ. “ಪಾತ್ರವನ್ನು ಪಾತ್ರದಂತೆ ಪರಿಗಣಿಸದಿದ್ದರೆ ಸಿನಿಮಾ ತಯಾರಾಗುವುದಿಲ್ಲ. ಆ ರೀತಿಯ ಬಿಗ್‌ ಬಜೆಟ್ ಚಿತ್ರ ಮಾಡಲು ಹಲವು ನಟರು ಜತೆಗೆ ಕೆಲಸ ಮಾಡಬೇಕಾಗುತ್ತದೆ. ಸ್ಟಾರ್‌ಡಮ್‌ ಮೀರಿ ಪಾತ್ರವನ್ನು ಒಪ್ಪಿಕೊಳ್ಳಬೇಕು. ನಾವು ಯೋಜನೆ ಮತ್ತು ದೃಷ್ಟಿಕೋನಕ್ಕೆ ಮೊದಲ ಆದ್ಯತೆ ನೀಡಬೇಕುʼʼ ಎಂದು ಯಶ್‌ ತಿಳಿಸಿದ್ದಾರೆ. ಮಾತುಕತೆಯ ಬಳಿಕ ನಟಿಸುವ ಜತೆಗೆ ಚಿತ್ರ ಸಹ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದರಂತೆ.

ರಾವಣ ಪಾತ್ರದ ಬಗ್ಗೆ ಮಾತನಾಡಿ “ಇದು ತುಂಬಾ ಆಕರ್ಷಕ ಪಾತ್ರ. ರಾಮಾಯಣದಲ್ಲಿ ‘ನೀವು ಬೇರೆ ಯಾವ ಪಾತ್ರವನ್ನು ನಿರ್ವಹಿಸುತ್ತೀರಾ?’ ಎಂದು ನನ್ನನ್ನು ಕೇಳಿದರೆ ಬಹುಷಃ ಇಲ್ಲ ಎನ್ನುತ್ತಿದ್ದೆ. ನಟನಾಗಿ ರಾವಣ ಪಾತ್ರ ನಿರ್ವಹಿಸುವುದು ನನಗೆ ಸವಾಲಾಗಿದೆ. ಜತೆಗೆ ರೋಮಾಂಚಕಾರಿ ಸಂಗತಿಯೂ ಹೌದು. ಈ ಪಾತ್ರದ ಛಾಯೆ ಮತ್ತು ಸೂಕ್ಷ್ಮತೆಗಳನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ಅದನ್ನು ವಿಭಿನ್ನ ರೀತಿಯಲ್ಲಿ ಪ್ರಸ್ತುತಪಡಿಸಲು ನನಗೆ ಅಪಾರ ಅವಕಾಶವಿದೆ. ಒಬ್ಬ ನಟನಾಗಿ ನಾನು ಪಾತ್ರ ನಿರ್ವಹಿಸಲು ತುಂಬಾ ಉತ್ಸುಕನಾಗಿದ್ದೇನೆʼʼ ಎಂದು ತಿಳಿಸಿದ್ದಾರೆ.

ʼರಾಮಾಯಣʼ ಚಿತ್ರದ ಬಗ್ಗೆ

ʼರಾಮಾಯಣʼ ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸ ಈಗಾಗಲೇ ಆರಂಭವಾಗಿದೆ. ಕೆಲವು ದಿನಗಳ ಹಿಂದೆ ಚಿತ್ರೀಕರಣದ ದೃಶ್ಯ ಸೋರಿಕೆಯಾಗಿ ವೈರಲ್‌ ಆಗಿತ್ತು. 2025ರಲ್ಲಿ ಚಿತ್ರ ತೆರೆ ಕಾಣುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ: Aamir Khan : ಅನುರಾಗ್ ಬಸು ನಿರ್ದೇಶನದ ಕಿಶೋರ್‌ ಕುಮಾರ್‌ ಬಯೋಪಿಕ್‌ನಲ್ಲಿಆಮೀರ್‌ ಖಾನ್‌!