Wednesday, 23rd October 2024

Dr N Someshwara Column: ಕಾಸರಕ ಎಂಬ ಕಹಿವಸ್ತುವನ್ನು ಬಲ್ಲಿರಾ ?

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಭೂಮಿಯ ಮೇಲಿರುವ ಅತ್ಯಂತ ಕಹಿ ವಸ್ತು ಯಾವುದು? ಖಂಡಿತ ಹಾಗಲಕಾಯಿಯೂ ಅಲ್ಲ, ಬೇವಿನಕಾಯಿ
ಯಂತೂ ಅಲ್ಲವೇ ಅಲ್ಲ. ಅದು ಕಾಸರಕ! ಕನ್ನಡದಲ್ಲಿ ಕಾಸರಕ, ಇಂಗ್ಲಿಷಿನಲ್ಲಿ ‘ಕ್ವಾಕರ್ ಬಟನ್ಸ್’ ಹಾಗೂ ಸಸ್ಯಶಾಸ್ತ್ರೀಯವಾಗಿ ‘ಸ್ಟ್ರಿಕ್ನಸ್ ನಕ್ಸ್ ವೋಮಿಕ’ ಎಂದು ಹೆಸರುವಾಸಿಯಾಗಿರುವ ಈ ಮರದ ತವರು ಭಾರತ. ಶ್ರೀಲಂಕಾ, ಬಾಂಗ್ಲಾ ಮತ್ತು ಬರ್ಮಾ ದೇಶಗಳಲ್ಲಿ, ಕರ್ನಾಟಕದ ಮಲೆನಾಡಿನಲ್ಲಿ ಹೇರಳವಾಗಿ ಬೆಳೆಯುತ್ತದೆ.

ಈ ಮರದ ಬೀಜಗಳಲ್ಲಿ ‘ಸ್ಟ್ರಿಕ್ನಿನ್’ ಎಂಬ ರಾಸಾಯನಿಕವಿದೆ. ಇದು ಎಷ್ಟು ಕಹಿಯೆಂದರೆ, ಒಂದು ಎಂ.ಎಲ್. ಸ್ಟ್ರಿಕ್ನಿನ್ ನನ್ನು 700 ಲೀಟರ್ ನೀರಿನಲ್ಲಿ ಬೆರೆಸಿದರೂ, ತನ್ನ ಕಹಿಲಕ್ಷಣವನ್ನು ತೋರುತ್ತದೆ. ಕಾಸರಕವು ಮಧ್ಯಮ ಗಾತ್ರದ ಮರ. ಸುಮಾರು 20 ಮೀಟರ್ ಎತ್ತರ ಬೆಳೆಯುತ್ತದೆ. ಎಲೆಗಳು 10 ಸೆಂ.ಮೀ. ಉದ್ದ, 7 ಸೆಂ.ಮೀ. ಅಗಲ ವಿರುತ್ತದೆ. ಪುಟ್ಟ ಪುಟ್ಟ ಹೂವು ಗಳು. ತೆಳುಹಸಿರು ಬಣ್ಣ. ತುತ್ತೂರಿಯ ಹಾಗಿರುತ್ತವೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಹೂ ಬಿಡುವುದುಂಟು. ಹೂ ಬಿಟ್ಟಾಗ ಅದರಿಂದ ಅತ್ಯಂತ ಕೆಟ್ಟ ವಾಸನೆಯು
ಹೊಮ್ಮುತ್ತದೆ. ಸಣ್ಣ ಸೇಬಿನ ಗಾತ್ರದ ಹಣ್ಣುಗಳನ್ನು ಬಿಡುತ್ತದೆ. ಹಣ್ಣು ಕಿತ್ತಳೆಯಿಂದ ಕೆಂಪು ಬಣ್ಣದವರೆಗೆ ವಿವಿಧ
ಛಾಯೆಗಳಲ್ಲಿರುತ್ತದೆ. ಹಣ್ಣಿನ ಒಳಗೆ ಮಾಂಸಲವಾದ ಲೋಳೆಯುಕ್ತ ಬಿಳಿಯ ಭಾಗವಿರುತ್ತದೆ. ಅದರ ಒಳಗೆ
ಐದು ಬೀಜಗಳಿರುತ್ತವೆ. ಒಂದೊಂದು ಬೀಜವೂ ಚಪ್ಪಟೆ ಯಾಗಿದ್ದು, ನಮ್ಮ ಕೋಟಿನ ಗುಂಡಿಯನ್ನು ಹೋಲುತ್ತದೆ.
ಬೀಜದ ಮೈಮೇಲೆ ನವಿರಾದ ರೋಮರಾಶಿಯಿರುತ್ತದೆ.

ಕಾಸರಕದ ಕುಲಕ್ಕೆ ಸೇರಿದ 58 ಪ್ರಭೇದಗಳು ಏಷ್ಯಾದಲ್ಲಿ, 64 ಪ್ರಭೇದಗಳು ಅಮೆರಿಕದಲ್ಲಿ ಹಾಗೂ 75 ಪ್ರಭೇದ ಗಳು ಆಫ್ರಿಕದಲ್ಲಿ ಇವೆ. ಕಾಸರಕವು ನಮಗೆ ತಿಳಿದಿರುವ ಉಗ್ರ ವಿಷಗಳಲ್ಲಿ ಒಂದು. ಕಾಸರಕದಲ್ಲಿರುವ ಸ್ಟ್ರಿಕ್ನಿನ್ ಒಂದು ಆಲ್ಕಲಾಯ್ಡ್. ಸಸ್ಯವು ತನ್ನ ಆತ್ಮರಕ್ಷಣೆಗೆ ಸಿದ್ಧಪಡಿಸಿಟ್ಟುಕೊಂಡಿರುವ ವಸ್ತು. ಕೆಫೀನ್, ನಿಕೋಟಿನ್, ಕೊಕೇನ್, ಕ್ವಿನೈನ್, ಮಾರ್ಫಿನ್, ಕಾಲ್ಚಿಸಿನ್ ಈ ಎಲ್ಲ ವಸ್ತುಗಳೂ ಆಲ್ಕಲಾಯ್ಡುಗಳೇ!

ಇವೆಲ್ಲವೂ ಮೂಲತಃ ಕಹಿವಸ್ತುಗಳಾದರೂ ವಿಷ ಪದಾರ್ಥಗಳಲ್ಲ. ಹಿತ-ಮಿತ ಪ್ರಮಾಣದಲ್ಲಿ ಇವು ಉತ್ತಮ ಔಷಧ
ಗಳಾಗಿ ವರ್ತಿಸುತ್ತವೆ. ಆದರೆ ಸ್ಟ್ರಿಕ್ನಿನ್ ಮಾತ್ರ ಈ ಸರ್ವನಿಯಮಕ್ಕೆ ಒಂದು ಅಪವಾದ. ಇದು ಪ್ರಧಾನವಾಗಿ
ನರವಿಷ. ಅಂದರೆ ಮನುಷ್ಯನ ನರಮಂಡಲದ ಮೇಲೆ ದುಷ್ಪರಿಣಾಮವನ್ನು ಬೀರಿ, ಸ್ನಾಯುಗಳನ್ನು ನಿಶ್ಚೇಷ್ಟಿತ
ಗೊಳಿಸಿ, ಉಸಿರನ್ನು ನಿಲ್ಲಿಸಿ ಸಾವನ್ನು ತರುತ್ತದೆ. ಹಾಗಾಗಿ ಮಧ್ಯ ಮತ್ತು ದಕ್ಷಿಣ ಅಮೆರಿಕದ ಬುಡಕಟ್ಟಿನ ಜನರು
‘ಕ್ಯುರೇರ್’ ಎಂಬ ವಿಷವನ್ನು ಬಾಣಗಳಿಗೆ ಸವರಿ ಬೇಟೆಯಾಡುತ್ತಿದ್ದರು. ‘ಕ್ಯುರೇರ್’ ಎನ್ನುವುದು ಹಲವು ಸಸ್ಯಗಳ
ರಸದಿಂದ ತಯಾರಾದ ಲೇಪನ. ಈ ಬಾಣಕ್ಕೆ ತುತ್ತಾದ ಪ್ರಾಣಿಗಳು ಸಾಯುತ್ತಿರಲಿಲ್ಲ. ಆದರೆ ಚಲಿಸಲಾಗದೆ
ನಿಶ್ಚೇಷ್ಟಿತವಾಗುತ್ತಿದ್ದವು. ಅಂಥ ಸಸ್ಯಗಳಲ್ಲಿ ಕಾಸರಕದ ಸೋದರ ಸಂಬಂಧಿಯಾದ ಹಾಗೂ ಅಮೆರಿಕದಲ್ಲಿ
ಬೆಳೆಯುವ ‘ಸ್ಟ್ರಿಕ್ನಸ್ ಟಾಕ್ಸೆಫೆರ’ ಸಹ ಸೇರಿದೆ.

ವ್ಯಕ್ತಿಯ ದೇಹದಲ್ಲಿ ಸ್ಟ್ರಿಕ್ನಿನ್ ವಿಷವು ಪ್ರವೇಶಿಸಿದ 15-60 ನಿಮಿಷಗಳಲ್ಲಿ ರೋಗಲಕ್ಷಣಗಳು ಆರಂಭವಾಗು
ತ್ತವೆ. ಮೊದಲು ವ್ಯಕ್ತಿಯಲ್ಲಿ ತಳಮಳವು ಕಂಡುಬರುತ್ತದೆ. ವಿನಾಕಾರಣ ಭಯಗ್ರಸ್ತನಾಗುತ್ತಾನೆ. ಸಣ್ಣಪುಟ್ಟ ಶಬ್ದಕ್ಕೆಲ್ಲ ಬೆಚ್ಚಿ ಬೀಳುತ್ತಾನೆ. ಚಡಪಡಿಕೆ ತೀವ್ರವಾಗುತ್ತದೆ. ಸ್ನಾಯುಗಳು ಸೆಟೆದುಕೊಳ್ಳತೊಡಗುತ್ತವೆ. ಜ್ವರವು ಆರಂಭವಾಗುತ್ತದೆ. ಇದರೊಡನೆ ವ್ಯಕ್ತಿಯ ಮೂತ್ರಪಿಂಡಗಳು ಹಾಗೂ ಯಕೃತ್ತು ನಾಶವಾಗಲಾರಂಭಿಸುತ್ತವೆ. ಮೊದಲು ಮುಖ ಮತ್ತು ಕುತ್ತಿಗೆಯಲ್ಲಿ ಸ್ನಾಯುಸೆಡೆತವು ಆರಂಭವಾಗುತ್ತವೆ.

ನಂತರ ಎದೆ, ಹೊಟ್ಟೆ, ಸೊಂಟ ಮತ್ತು ಕಾಲುಗಳತ್ತ ಹರಡುತ್ತದೆ. ಸೆಟೆದುಕೊಂಡ ತಲೆ ಮತ್ತು ಕುತ್ತಿಗೆಯು ನೆಲೆ ಬಿಟ್ಟು ಮೇಲೇಳುತ್ತವೆ. ಎದೆ, ಹೊಟ್ಟೆ ಮತ್ತು ಸೊಂಟದ ಸ್ನಾಯುಗಳು ಸೆಟೆದುಕೊಂಡು ಬಿಲ್ಲಿನ ಆಕಾರವನ್ನು
ತಳೆಯುತ್ತವೆ. ಬೆನ್ನುಮೂಳೆಯೂ ಬಾಗುತ್ತದೆ. ಸೆಡೆತವು ಕಾಲುಗಳಿಗೆ ಸಂಪೂರ್ಣ ವ್ಯಾಪಿಸಿದಾಗ, ಬಾಗಿದ ಬಿಲ್ಲಿನಂಥ
ದೇಹವು ತಲೆ ಮತ್ತು ಕಾಲ್ಬೆರಳುಗಳ ಮೇಲೆ ಮಾತ್ರ ನಿಂತಿರುತ್ತವೆ. ವ್ಯಕ್ತಿಗೆ ಪ್ರಜ್ಞೆಯಿರುತ್ತದೆ, ತನಗೇನಾಗುತ್ತಿದೆ ಎನ್ನುವುದು ನಿಚ್ಚಳವಾಗಿ ತಿಳಿಯುತ್ತಿರುತ್ತದೆ.

ಕಣ್ಣುಗುಡ್ಡೆಗಳು ಹೊರಬೀಳುತ್ತಿವೆಯೇನೋ ಎನ್ನಿಸುವಷ್ಟು ಹೊರಬಂದಿರುತ್ತವೆ, ಪಾಪೆಗಳು ಅರಳಿರುತ್ತವೆ. ಆದರೆ ಕ್ರಮೇಣ ಉಸಿರಾಟದ ಸ್ನಾಯುಗಳು ನಿಶ್ಚೇಷ್ಟಿತವಾಗಲಾರಂಭಿಸುತ್ತವೆ. ತುಟಿಗಳು ಅರ್ಧಚಂದ್ರಾಕೃತಿಯಲ್ಲಿ ಬಾಗುತ್ತವೆ. ದವಡೆ ಸ್ನಾಯುಗಳು ಸೆಟೆದುಕೊಂಡು, ನೋಡಿದರೆ ನಗುತ್ತಿರುವನೋ ಎಂಬಂತೆ ಭಾಸವಾಗುತ್ತದೆ. ಆದರೆ ಅದು ಸಾಮಾನ್ಯ ನಗುವಲ್ಲ, ಮೃತ್ಯುಸೂಚಕ ನಗು. ಇದನ್ನು ‘ಅಣಕುವಾಡಿನ ನಗು’ ಅಥವಾ ‘ರಿಸಸ್ ಸಾರ್ಡೋನಿಕಸ್’ ಎನ್ನುತ್ತಾರೆ. ಹಾಗೆಯೇ ಬಿಲ್ಲಿನಂತೆ ಬಾಗಿರುವ ದೇಹವನ್ನು ‘ಬೆಂಬಾಗುವಿಕೆ’ ಅಥವಾ ‘ಒಫಿಸ್ತೋ ಟೋನಸ್’ ಎನ್ನುವುದುಂಟು. ಹೀಗೆ ಬಾಗಿರುವ ವ್ಯಕ್ತಿಯ ಉಸಿರಾಟದ ಸ್ನಾಯುಗಳು ವಿಫಲವಾಗುವುದರ ಜತೆಗೆ ತೀವ್ರ ಸೆಳವು ಬಂದು, ಮಿದುಳಿನ ಕೆಲಸ ಸ್ಥಗಿತಗೊಳ್ಳುವ ಕಾರಣ ವ್ಯಕ್ತಿ ಸಾಯುತ್ತಾನೆ.

ಇಂಥ ಉಗ್ರವಿಷವನ್ನು ವೈದ್ಯಕೀಯದಲ್ಲಿ ಬಳಸುತ್ತಿದ್ದರು ಎಂದರೆ ಆಶ್ಚರ್ಯವಾಗುತ್ತದೆ. ಆಯುರ್ವೇದದ
ಪ್ರಮುಖ ಗ್ರಂಥಗಳಾದ ವಾಗ್ಭಟನ ‘ರಸರತ್ನಾಕರ’, ಭಾವ ಮಿಶ್ರನ ‘ಭಾವಪ್ರಕಾಶ’ ಕಾಸರಕವನ್ನು ‘ಕುಚಿಲ’ ಅಥವಾ
‘ವಿಷತಿಂಡುಕ’ ಎಂದು ಕರೆದಿವೆ. ‘ಭಾವಪ್ರಕಾಶ’ವು ಕಾಸರಕವನ್ನು ಶುದ್ಧೀಕರಿಸಿದ ನಂತರವೇ ಔಷಧದ ರೂಪ ದಲ್ಲಿ ಬಳಸಬೇಕು ಎನ್ನುತ್ತದೆ ಹಾಗೂ ಶುದ್ಧೀಕರಣದ ಈ 3 ವಿಧಾನಗಳನ್ನು ಸೂಚಿಸುತ್ತದೆ:

೧. ಕಾಸರಕದ ಬೀಜಗಳನ್ನು ಹಾಲು/ನೀರು ಅಥವಾ ಮೂಲಿಕೆಗಳ ಕಷಾಯದಲ್ಲಿ ಹಲವು ದಿನ ನೆನೆಯಿಸಬೇಕು.
೨. ಬೀಜಗಳನ್ನು ಹಾಲಿನಲ್ಲಿ ಅಥವಾ ಮೂಲಿಕೆಗಳ ಕಷಾಯದಲ್ಲಿ ಕುದಿಸಬೇಕು.

೩. ಕೆಲವು ಸಲ, ಕಾಸರಕದ ಬೀಜಗಳನ್ನು ನೆನೆಯಿಸಿ, ಮತ್ತೆ ಮತ್ತೆ ತೊಳೆದು ಬಿಸಿಲಿನಲ್ಲಿ ಒಣಗಿಸಿ ನಂತರ ಔಷಧ
ನಿರ್ಮಾಣದಲ್ಲಿ ಬಳಸಬೇಕು.

ಆಯುರ್ವೇದ ವಿಧಿವಿಧಾನಗಳನ್ನು ಚೆನ್ನಾಗಿ ಬಲ್ಲ ಹಿರಿಯ ವೈದ್ಯರು ಮಾತ್ರ ಕಾಸರಕವನ್ನು ಶುದ್ಧೀಕರಿಸಿ
ಔಷಧರೂಪದಲ್ಲಿ ಬಳಸಬಲ್ಲರು. ಶುದ್ಧೀಕರಿಸಿದ ಕಾಸರಕವನ್ನು ಅಜೀರ್ಣ, ಮಲಬದ್ಧತೆ ಮತ್ತು ಹಸಿವಿಲ್ಲದಿರುವಿಕೆ
ಯನ್ನು ಸುಧಾರಿಸಲು ಬಳಸಬಹುದು. ಲಕ್ವ ಮತ್ತು ಅಪಸ್ಮಾರದಲ್ಲಿ ನರಗಳು ಹಾಗೂ ನರಮಂಡಲ ರೋಗಗಳಲ್ಲಿ
ಇದನ್ನು ಪ್ರಚೋದಕವಾಗಿ (ಸ್ಟಿಮ್ಯುಲೆಂಟ್) ಬಳಸಬಹುದು. ಕೀಲುನೋವನ್ನು (ಆರ್ಥ್ರೈಟಿಸ್) ಶಮನಗೊಳಿ
ಸಲು, ಮಲೇರಿಯ ಒಳಗೊಂಡಂತೆ ವಿವಿಧ ಜ್ವರಗಳಲ್ಲಿ ಉಪಯೋಗಿಸಬಹುದು. ೧೯ನೇ ಶತಮಾನದ ‘ಆಯು
ರ್ವೇದ ಸಾರಸಂಗ್ರಹ’ವು ಸಹ ಶುದ್ಧೀಕರಿಸಿದ ಕಾಸರಕವನ್ನು ಲಕ್ವ, ಸೆಳವು, ಕೀಲುವಾತಕಿ ಮತ್ತು ಜೀರ್ಣಾಂಗ ಸಮಸ್ಯೆಗಳ ನಿವಾರಣೆಗೆ ಬಳಸಬಹುದು ಎನ್ನುತ್ತದೆ.

ಜತೆಗೆ ಕಾಸರಕವು ಔಷಧವಾಗಿ ಹಾಗೂ ವಿಷವಾಗಿ ವರ್ತಿಸಬಲ್ಲ ಅಂತರ ಅತ್ಯಂತ ಸೂಕ್ಷ್ಮ ಪ್ರಮಾಣದಲ್ಲಿ ಇರುವು ದರಿಂದ ಬಹಳ ಎಚ್ಚರಿಕೆಯಿಂದ ಬಳಸಬೇಕು ಎನ್ನುವ ಕಿವಿಮಾತನ್ನೂ ಹೇಳುತ್ತದೆ. ಸಿದ್ಧವೈದ್ಯಕೀಯದಲ್ಲಿ ಇದನ್ನು ಶೂಲಹರವಾಗಿ (ಕೀಲು ನೋವನ್ನು ನಿಯಂತ್ರಿಸಲು), ಅಗ್ನಿದೀಪನವಾಗಿ (ಜೀರ್ಣ ಶಕ್ತಿ ಹೆಚ್ಚಿಸಲು), ವಾತಹರವಾಗಿ (ನರಸಮಸ್ಯೆ ನಿವಾರಿ ಸಲು) ಹಾಗೂ ಮೇಧ್ಯವಾಗಿ (ನರಮಂಡಲವನ್ನು ಪ್ರಚೋದಿಸಿ, ಎಲ್ಲ ಕೆಲಸ ಕಾರ್ಯಗಳನ್ನು ಚುರುಕಾಗಿ, ಪರಿಣಾ ಮಕಾರಿಯಾಗಿ ನಿರ್ವಹಿಸಲು) ಬಳಸಲಾಗುತ್ತದೆ.

ಆಧುನಿಕ ಒಲಿಂಪಿಕ್ ಸ್ಪರ್ಧೆಗಳು ಆರಂಭವಾದ ಮೇಲೆ, 3ನೇ ಒಲಿಂಪಿಕ್ ಸ್ಪರ್ಧೆಗಳು 1904ರಲ್ಲಿ ಸೈಂಟ್ ಲೂಯಿಸಿ, ಮಿಸ್ಸೌರಿಯಲ್ಲಿ ನಡೆದವು. ಇಲ್ಲಿ ಅತ್ಯಂತ ಕಠಿಣವಾದ ಮ್ಯಾರಥಾನ್ ಓಟವು ಆರಂಭವಾಯಿತು. ವಿಪರೀತ ಬಿಸಿಲು, ಸೆಕೆ. ಹಳ್ಳ ದಿಣ್ಣೆಗಳಿಂದ ಕೂಡಿದ ರಸ್ತೆ. 32 ಜನರು ಭಾಗವಹಿಸಿದರು, ಆದರೆ 14 ಜನರು ಮಾತ್ರ ಸ್ಪರ್ಧೆಯನ್ನು ಪೂರ್ಣಗೊಳಿಸಿದರು. ಥಾಮಸ್ ಹಿಕ್ಸ್ ಅಮೆರಿಕದ ಮ್ಯಾರಥಾನ್ ಓಟಗಾರ. ಈತನ ತರಬೇತುದಾರರು ಬ್ರಾಂಡಿ ಯಲ್ಲಿ ಸ್ಟ್ರಿಕ್ನಿನ್ ಬೆರೆಸಿ ನೀಡಿದರು. ಅಂದಿನ ಮ್ಯಾರಥಾನ್ ಓಟದಲ್ಲಿ ಬ್ರಾಂಡಿಯಂಥ ಪ್ರಚೋದಕ ಪಾನೀಯಗಳಿಗೆ ನಿರ್ಬಂಧವಿರಲಿಲ್ಲ. ಹಾಗಾಗಿ, ಕೇಂದ್ರ ನರಮಂಡಲವನ್ನು ಪ್ರಚೋದಿಸಬಲ್ಲ ಸ್ಟ್ರಿಕ್ನಿನ್‌ನನ್ನು ನಿಗದಿತ ಪ್ರಮಾಣದಲ್ಲಿ ನೀಡಲು ತರಬೇತುದಾರರು ನಿರ್ಧರಿಸಿದರು.

19 ಮೈಲಿ ದೂರ ಓಡಿದ್ದ ಹಿಕ್ಸ್ ಸುಸ್ತಾದವನಂತೆ ಕಂಡಾಗ ಮೊಟ್ಟೆಯ ಬಿಳಿಯ ಭಾಗದಲ್ಲಿ ಸ್ಟ್ರಿಕ್ನಿನ್ ಬೆರೆಸಿ
ಅವನಿಗೆ ತಿನ್ನಲು ನೀಡಿದರು ಹಾಗೂ ಕುಡಿಯಲು ಬ್ರಾಂಡಿಯನ್ನು ಕೊಟ್ಟರು. ಹಿಕ್ಸ್ ಚೈತನ್ಯ ಬಂದವನಂತೆ ಓಡಲಾರಂಭಿಸಿದ. ೨೩ನೇ ಮೈಲಿಯನ್ನು ತಲುಪಿದ. ಇನ್ನೊಂದು ಡೋಸ್ ಸ್ಟ್ರಿಕ್ನಿನ್ ಬ್ರಾಂಡಿಯನ್ನು ನೀಡಿದರು. ಸ್ಪರ್ಧೆ ಮುಗಿಯುವ ವೇಳೆಗೆ ಹಿಕ್ಸ್ ಸಂಪೂರ್ಣ ದಣಿದಿದ್ದ, ಅಂತೂ ಇಂತೂ ತೂರಾಡುತ್ತಾ ಬಂದು ವಿಜಯದ ಗೆರೆ ಮುಟ್ಟಿದ.

ಕೂಡಲೆ ಕುಸಿದುಬಿದ್ದ, ನಂತರ ಭ್ರಮಾವಸ್ಥೆಗೆ ಒಳಗಾದ. ಥಾಮಸ್ ಹಿಕ್ಸ್‌ನನ್ನು ವಿಜಯಿಯೆಂದು ಘೋಷಿಸಿದರು.
ಆದರೆ ತದನಂತರದ 15೧೫ನೇ ಶತಮಾನದಲ್ಲಿ ಕಾಸರಕವನ್ನು ಇಲಿ ಪಾಷಾಣ ರೂಪದಲ್ಲಿ ಭಾರತದಿಂದ ಬ್ರಿಟನ್ನಿಗೆ ಕೊಂಡೊಯ್ದರು. ಅಲ್ಲಿನ ಇಲಿಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಿದರು (ನೆನಪಿಸಿಕೊಳ್ಳಿ: ಕುವೆಂಪು ಅವರ ಕವನ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’). ಜತೆಗೆ ಬೀದಿನಾಯಿ, ಬೆಕ್ಕುಗಳನ್ನೂ ಕೊಂದರು. 1818ರಲ್ಲಿ, ಫ್ರೆಂಚ್ ರಸಾಯನ ವಿಜ್ಞಾನಿಗಳಾದ ಪಿಯರಿ-ಜೋಸೆಫ್ ಪೆಲ್ಲೆಟಿಯರ್ ಮತ್ತು ಜೋಸೆಫ್ ಬೈನೈಮ್ ಕೆವಂಟು, ಕಾಸರಕ ದಲ್ಲಿನ ಪ್ರಮುಖ‌ ಆಲ್ಕಲಾಯ್ಡ್ ಸ್ಟ್ರಿಕ್ನಿನ್‌ನನ್ನು ಪ್ರತ್ಯೇಕಿಸಿ, ಇದರ ವಿಷ ಗುಣಲಕ್ಷಣಗಳನ್ನು ವಿವರಿಸಿದರು. ನಂತರ ಸರ್ ರಾಬರ್ಟ್ ರಾಬಿನ್ಸಸ್ 1946ರಲ್ಲಿ ಇದರ ರಾಸಾಯನಿಕ ಸ್ವರೂಪವನ್ನು ಪತ್ತೆ ಹಚ್ಚಿದರು.

ಕಾಸರಕವು ಬ್ರಿಟನ್ನಿನವರ ಮೇಲೆ ಎಂಥ ಪರಿಣಾಮವನ್ನು ಬೀರಿತೆಂದರೆ, ಅಲ್ಲಿನ ಸಾಹಿತಿಗಳು ತಮ್ಮ ಕಥೆ, ಕಾದಂಬರಿಗಳಲ್ಲಿ ಕಾಸರಕ/ಸ್ಟ್ರಿಕ್ನಿನ್ ಲಕ್ಷಣಗಳನ್ನು ಬಳಸಲಾರಂಭಿಸಿದರು. ಎಚ್.ಜಿ.ವೆಲ್ಸ್ 1895ರಲ್ಲಿ ಬರೆದ ‘ದಿ ಇನ್ವಿಸಿಬಲ್ ಮ್ಯಾನ್’ ಎಂಬ ಕಥೆಯಲ್ಲಿ “ಡಾ.ಗ್ರಿಫಿನ್ ಅವರಿಗೆ ಸ್ಟ್ರಿಕ್ನಿನ್ ತುಂಬಾ ಉಪಯುಕ್ತವೆನಿಸಿತು. ತಮಗೆ ಹತಾಶೆಯಾದಾಗ, ಕೆಟ್ಟ ಕನಸು ಬಿದ್ದಾಗ, ಕೆಲಸ ಮಾಡಲು ಉತ್ಸಾಹವಿಲ್ಲದಾದಾಗ ಸ್ಟ್ರಿಕ್ನಿನ್ ತೆಗೆದುಕೊಳ್ಳುತ್ತಿದ್ದರು. ಆಗ ಅವರಲ್ಲಿ ನವಶಕ್ತಿ ಮೂಡುತ್ತಿತ್ತು” ಎಂದು ಉಲ್ಲೇಖಿಸಿದರು. ಸರ್ ಆರ್ಥರ್ ಕಾನನ್ ಡಾಯ್ಲ್ ವೃತ್ತಿಯಿಂದ ವೈದ್ಯರು. ಹಾಗಾಗಿ ಅವರಿಗೆ ಅಂದಿನ ವಿಷವಸ್ತುಗಳ ಪರಿಚಯವಿದ್ದು, ತಮ್ಮ ಕಥೆಗಳಲ್ಲಿ ಸ್ಟ್ರಿಕ್ನಿನ್ ಒಳಗೊಂಡಂತೆ ಹಲವು ವಿಷಗಳ ಬಳಕೆಯ ಬಗ್ಗೆ ಬರೆದರು. ತಮ್ಮ ‘ದಿ ಅಡ್ವೆಂಚರ್ ಆಫ್ ಸ್ಪೆಕಲ್ಡ್ ಬ್ಯಾಂಡ್’ ಮತ್ತು ‘ದಿ ಸೈನ್ ಆಫ್ ಫಾರ್’ ಕಥೆಗಳಲ್ಲಿ ಸ್ಟ್ರಿಕ್ನಿನ್ ವಿಷವನ್ನು ಅವರು ಪ್ರಸ್ತಾಪಿಸಿದ್ದಾರೆ.

ಈ ವಿಷದ ಪರಿಪೂರ್ಣ ಸ್ವರೂಪವನ್ನು ನಿಖರವಾಗಿ ವರ್ಣಿಸಿದವರು ಅಗಾಥ ಕ್ರಿಸ್ಟಿ. ವೃತ್ತಿಯಿಂದ ನರ್ಸ್ ಆಗಿದ್ದ ಅವರಿಗೆ ವಿಷವಸ್ತುಗಳ ಪರಿಚಯವಿತ್ತು. ‘ದಿ ಮಿಸ್ಟೀರಿಯಸ್ ಅಫರ್ಸ್ ಅಟ್ ಸ್ಟೈಲ್ಸ್’ ಎಂಬ ತಮ್ಮ ಮೊದಲ ಕಾದಂಬರಿಯಲ್ಲಿಯೇ ಚಾಣಾಕ್ಷ ಪತ್ತೆದಾರ ‘ಹರ್ಕ್ಯೂಲ್ ಪಾಯ್ರಟ್ ’ನನ್ನು ಅವರು ಪರಿಚಯಿಸಿದರು. ‘ಎಮಿಲಿ ಇಂಗಲ್ಥಾರ್ಪ್’ ಎಂಬ ಮಹಿಳೆ ಸ್ಟ್ರಿಕ್ನಿನ್ ವಿಷಪ್ರಾಶನಕ್ಕೆ ಒಳಗಾಗುತ್ತಾಳೆ. ಈಕೆಯ ಸಾವಿನ ವರ್ಣನೆಯು, ಮೇಲೆ ವಿವರಿಸಿದ ಸ್ಟ್ರಿಕ್ನಿನ್ ವಿಷಲಕ್ಷಣಗಳನ್ನು ಹೋಲುತ್ತದೆ. ಎಮಿಲಿ ಹೇಗೆ ವಿಷಪ್ರಾಶನಕ್ಕೆ ಒಳಗಾದಳು ಎನ್ನುವುದನ್ನು ಪಾಯ್ರಟ್ ಪತ್ತೆಹಚ್ಚುತ್ತಾನೆ. ‘ಡಂಬ್ ವಿಟ್ನೆಸ್’ ಎಂಬ ತಮ್ಮ ಕಥೆಯಲ್ಲಿ ಅಗಾಥ ‘ಎಮಿಲಿ ಅರುಂಡೇಲ್’ ಎಂಬುವವಳ ಮೇಲೆ ಕಾಸರಕದ ವಿಷಪ್ರಯೋಗವಾಗುವುದನ್ನು ಪ್ರಸ್ತಾಪಿಸಿ, ಆಕೆ ಹೇಗೆ ತಪ್ಪಿಸಿಕೊಳ್ಳುತ್ತಾಳೆ ಎಂಬುದನ್ನು ವಿವರಿಸಿದ್ದಾರೆ.

ಆಧುನಿಕ ವೈದ್ಯಕೀಯದಲ್ಲಿ ಕಾಸರಕವನ್ನು ಅಥವಾ ಸ್ಟ್ರಿಕ್ನಿನ್‌ನನ್ನು ಯಾವುದೇ ಚಿಕಿತ್ಸೆಯಲ್ಲಿ ಬಳಸುವುದಿಲ್ಲ.
ಅಕಸ್ಮಾತ್ತಾಗಿ ಕಾಸರಕವನ್ನು ಸೇವಿಸಿದವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಬೇಕಾಗುತ್ತದೆ. ಆದರೆ ಲಂಗೂರ್ ಮಂಗ,
ಮಂಗಟ್ಟೆ ಹಕ್ಕಿ ಮತ್ತು ಹಣ್ಣುಗಳನ್ನು ತಿನ್ನುವ ಬಾವಲಿ ಕಾಸರಕದ ಹಣ್ಣನ್ನು ಆರಾಮವಾಗಿ ತಿನ್ನುತ್ತವೆ! ಕಾಸರಕವು ಯಾವುದೇ ವಿಷ ಪ್ರಭಾವವನ್ನು ಬೀರದಂತೆ ಪ್ರಕೃತಿಯು ಅವುಗಳಿಗೆ ರಕ್ಷಣೆಯನ್ನು ನೀಡಿದೆ.

ಇದನ್ನೂ ಓದಿ: Dr N Someswara Column: ಮಿಯಾಸ್ಮ ಎಂಬ ಮೌಢ್ಯವು ಛಿದ್ರವಾದಾಗ !