Monday, 25th November 2024

Ganesh Bhat Column: ಭಾರತದ ಮುಂದಿರುವ ರಾಜತಾಂತ್ರಿಕ ಸವಾಲುಗಳು

ವಿಶ್ಲೇಷಣೆ

ಗಣೇಶ್‌ ಭಟ್‌, ವಾರಣಾಸಿ

ಹತ್ತು ವರ್ಷಗಳ ಹಿಂದಿನವರೆಗೆ, ಪಾಕಿಸ್ತಾನದ ಭಯೋತ್ಪಾದನಾ ನೀತಿಗೆ ಎದುರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲವನ್ನು ಗಳಿಸುವುದೇ ಭಾರತದ ವಿದೇಶಾಂಗ ನೀತಿಯ ಬಹುದೊಡ್ಡ ಗುರಿಯಾಗಿತ್ತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೇರಿದಂತೆ ಜಾಗತಿಕ ಮಟ್ಟದ ಅಧಿವೇಶನಗಳಲ್ಲಿ ಭಾರತದ ಪ್ರಧಾನಮಂತ್ರಿ ಮತ್ತು ವಿದೇಶಾಂಗ
ಸಚಿವರ ಭಾಷಣಗಳು, ಪಾಕಿಸ್ತಾನದ ಭಯೋತ್ಪಾದನಾ ನೀತಿಯನ್ನು ಖಂಡಿಸುವುದಕ್ಕಷ್ಟೇ ಸೀಮಿತವಾಗಿದ್ದವು.

ಆಗ ಭಾರತವು ಅಮೆರಿಕ ಅಥವಾ ಚೀನಾಗಳ ಹಿತಾಸಕ್ತಿಗಳಿಗೆ ಯಾವುದೇ ತೊಂದರೆಯನ್ನು ಉಂಟುಮಾಡುವ ಸ್ಥಿತಿಯಲ್ಲಿರದ ಕಾರಣ, ಪಾಕಿಸ್ತಾನದ ಹೊರತಾಗಿ ಯಾವ ದೇಶಗಳೂ ಭಾರತದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವ ಪ್ರಮೇಯ ಇರಲಿಲ್ಲ. ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು ತನ್ನ ವಿದೇಶಾಂಗ ವ್ಯವಹಾರಗಳಲ್ಲಿ ‘ಇಂಡಿಯಾ ಫಸ್ಟ್’ ಎಂಬ ನೀತಿಯನ್ನು ಪಾಲಿಸತೊಡಗಿತು. ಯಾವುದೇ ವಿದೇಶಿ ಒತ್ತಡಗಳಿಗೆ ಮಣಿಯದೆ ತನ್ನ ಹಿತಾಸಕ್ತಿಗೆ ಅನುಗುಣವಾದ ನಿರ್ಣಯಗಳನ್ನಷ್ಟೇ ಭಾರತ ತಳೆಯತೊಡಗಿತು.

ಈ ಬೆಳವಣಿಗೆಯಿಂದಾಗಿ ಮೊದಲು ಗಾಬರಿಗೊಂಡಿದ್ದು ನೆರೆರಾಷ್ಟ್ರ ಚೀನಾ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ
ಕಾಯಂ ಸದಸ್ಯನಾಗಿರುವ ಚೀನಾ ತನ್ನ ‘ವೀಟೋ ಪವರ್’ ಬಳಸಿ, ವಿಶ್ವಸಂಸ್ಥೆಯಲ್ಲಿ ಭಾರತವು ಮಂಡಿಸುವ ವಿಚಾರಗಳಿಗೆ ಹಿನ್ನಡೆಯಾಗುವಂತೆ ಮಾಡುತ್ತಿತ್ತು. ಪಾಕಿಸ್ತಾನದ ಉಗ್ರರನ್ನು ‘ಜಾಗತಿಕ ಉಗ್ರರು’ ಎಂದು ವಿಶ್ವ ಸಂಸ್ಥೆಯು ಘೋಷಿಸುವಂತೆ ಮಾಡಲು ಭಾರತವು ಮಾಡುತ್ತಿದ್ದ ಎಲ್ಲಾ ಪ್ರಯತ್ನಗಳಿಗೆ ಚೀನಾ ಅಡ್ಡಗಾಲು ಹಾಕುತ್ತಿತ್ತು. ಮ್ಯಾನ್ಮಾರ್‌ನ ಸ್ವಿಟ್ಲೆ, ಶ್ರೀಲಂಕಾದ ಹಂಬನ್‌ಟೋಟ ಬಂದರು, ಪಾಕಿಸ್ತಾನದ ಗ್ವಾದಾರ್ ಬಂದರು, ಆಫ್ರಿಕಾದ ಜಿಬೌಟಿ ಹೀಗೆ ಭಾರತವನ್ನು ಸುತ್ತುವರಿದಿರುವ ಆಯಕಟ್ಟಿನ ಸ್ಥಳಗಳಲ್ಲಿ ‘ಸ್ಟ್ರಿಂಗ್ ಆಫ್ ಪರ್ಲ್’ ಹೆಸರಿನ ಸೇನಾ‌ ನೆಲೆಗಳನ್ನು ಸ್ಥಾಪಿಸಿ ಭಾರತದ ಮೇಲೆ ದಿಗ್ಬಂಧನ ಹೇರಲು ಚೀನಾ ಯತ್ನಿಸಿತು.

ಮಾತ್ರವಲ್ಲದೆ ‘ಬೆಲ್ಟ್ ಆಂಡ್ ರೋಡ್ ಇನಿಷಿಯೆಟಿವ್’ ಎಂಬ ತನ್ನ ಮಹತ್ವಾಕಾಂಕ್ಷಿ ಯೋಜನೆಯಡಿಯಲ್ಲಿ ‘ಒನ್ ಬೆಲ್ಟ್ ಒನ್ ರೋಡ್’ (ಒಬಿಒಆರ್) ಹೆಸರಿನ ರಸ್ತೆ ಕಾಮಗಾರಿಗಳನ್ನು, ಭಾರತದ ಆಕ್ಷೇಪಗಳ ನಡುವೆಯೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಚೀನಾ ಆರಂಭಿಸಿತು. ಜತೆಗೆ, ಭಾರತದ ವಿರುದ್ಧ ನಿಲುವು ತಳೆಯುವಂತೆ ಅದು ನೇಪಾಳ ಮತ್ತು ಮಾಲ್ಡೀವ್ಸ್ ದೇಶಗಳಿಗೆ ಕುಮ್ಮಕ್ಕು ನೀಡಿತು.

ಈ ನಡುವೆ ಚೀನಾ ಸೇನೆಯು 2017ರಲ್ಲಿ ಡೋಕ್ಲಾಂ ಪ್ರದೇಶದಲ್ಲಿ ಮತ್ತು 2020ರಲ್ಲಿ ಗ್ಯಾಲ್ವಾನ್ ಗಡಿಭಾಗದಲ್ಲಿ
ಭಾರತೀಯ ಸೇನೆಯ ಜತೆ ಚಕಮಕಿಗೆ ಇಳಿದಿತ್ತು. ಚೀನಾದ ‘ಸ್ಟ್ರಿಂಗ್ ಆಫ್ ಪರ್ಲ್’ ಯೋಜನೆಗೆ ಪ್ರತಿಯಾಗಿ ಭಾರತವು‌ ‘ನೆಕ್ಲೇಸ್ ಆಫ್ ಡೈಮಂಡ್ಸ್’ ಉಪಕ್ರಮವನ್ನು ಜಾರಿ‌ ಮಾಡಿತು.

ಅಂದರೆ, ಚೀನಾವನ್ನು ಸುತ್ತುವರಿದಿರುವ ಮಂಗೋಲಿಯಾ, ಜಪಾನ್, ವಿಯೆಟ್ನಾಂ, ಮ್ಯಾನ್ಮಾರ್, ಸಿಂಗಾಪುರ, ಇಂಡೋನೇಷ್ಯಾ, ಒಮಾನ್, ಇರಾನ್ ಇತ್ಯಾದಿ ದೇಶಗಳ ಜತೆಗಿನ ಬಾಂಧವ್ಯವನ್ನು ಗಟ್ಟಿಗೊಳಿಸುವಿಕೆ, ಭಾರತದ ಕರಾವಳಿಯುದ್ದಕ್ಕೂ ಕಣ್ಗಾವಲನ್ನು ಹೆಚ್ಚಿಸುವಿಕೆ, ಬಂದರುಗಳ ಸಂಖ್ಯೆಯನ್ನು ವಧಿಸುವಿಕೆ ಇವು ಸದರಿ ಉಪಕ್ರಮದಲ್ಲಿ ಸೇರಿದ್ದವು.

ಚೀನಾದ ‘ಒಬಿಒಆರ್’ ಯೋಜನೆಯನ್ನು ಭಾರತವು ಎಲ್ಲಾ ಜಾಗತಿಕ ವೇದಿಕೆಗಳಲ್ಲೂ ವಿರೋಧಿಸುತ್ತಿದೆ. ಪಾಕಿಸ್ತಾನದ ‘ಬಲೂಚಿಸ್ತಾನ್ ಲಿಬರೇಷನ್ ಆರ್ಮಿ’ಯು ‘ಒಬಿಒಆರ್’ ಯೋಜನೆಯ ‘ಚೀನಾ-ಪಾಕಿಸ್ತಾನ ಇಕನಾಮಿಕ್ ಕಾರಿಡಾರ್’ ಉಪಕ್ರಮಕ್ಕೆ ಅಡ್ಡಿಯನ್ನು ಉಂಟುಮಾಡುತ್ತಿದ್ದು, ಚೀನಾದ ಅಧಿಕಾರಿಗಳು ಮತ್ತು ಕೆಲಸಗಾರರ ಮೇಲೆ ಆತ್ಮಹತ್ಯಾ ದಾಳಿಗಳನ್ನು ಮಾಡಿ ಈ ಉಪಕ್ರಮವನ್ನು ಚೀನಾ ಸ್ಥಗಿತಗೊಳಿಸುವಂತೆ
ಮಾಡುತ್ತಿದೆ. ನೇಪಾಳವು ಭಾರತದ ಜತೆಗಿನ ತನ್ನ ಉತ್ತಮ ಬಾಂಧವ್ಯವನ್ನು ಮುಂದುವರಿಸಿದೆ.

ಮಾಲ್ಡೀವ್ಸ್ ವಿರುದ್ಧ ಭಾರತ ಕೈಗೊಂಡ ನಿಷ್ಠುರ ರಾಜತಾಂತ್ರಿಕ ನಿಲುವುಗಳಿಗೆ ಬೆದರಿದ ಆ ದೇಶದ ಅಧ್ಯಕ್ಷ ಮೊಹಮ್ಮದ್ ಮುಯಿಝು ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಭಾರತದ ಜತೆಗೆ ಉತ್ತಮ ಬಾಂಧವ್ಯ ಬೆಳೆಸಿ ಕೊಳ್ಳುವೆಡೆಗೆ ಹೆಜ್ಜೆಹಾಕಿದ್ದಾರೆ. ಡೋಕ್ಲಾಂ ಮತ್ತು ಗ್ಯಾಲ್ವಾನ್‌ಗಳಲ್ಲಿ ಭಾರತೀಯ ಸೈನಿಕರಿಂದ ಪೆಟ್ಟುತಿಂದ
ನಂತರ ಭಾರತದ ಗಡಿಯನ್ನು ಅತಿಕ್ರಮಿಸುವ ದುಸ್ಸಾಹಸಕ್ಕೆ ಚೀನಾ ಕೈಹಾಕಿಲ್ಲ.

ಇನ್ನು ಕೆನಡಾ ವಿಷಯಕ್ಕೆ ಬರೋಣ. ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೊ ಆಡಳಿತವು ಖಲಿಸ್ತಾನ್ ಭಯೋತ್ಪಾದಕ ರನ್ನು ಬೆಂಬಲಿಸಿ ಭಾರತದ ತೀವ್ರ ಅಸಮಾಧಾನಕ್ಕೆ ಗುರಿಯಾಗಿರುವುದು ಇತ್ತೀಚಿನ ಕೆಲ ವರ್ಷಗಳ ಬೆಳವಣಿಗೆ. ಕೆನಡಾದಲ್ಲೀಗ ಟ್ರುಡೊ ಜನಪ್ರಿಯತೆ ತೀವ್ರವಾಗಿ ಕುಸಿದಿದೆ. ಭಾರತಕ್ಕೆ ಅಪಾಯಕಾರಿಯಾಗಿರುವ ಖಲಿಸ್ತಾನಿ ಉಗ್ರರಿಗೆ ನೆಲೆ ನೀಡದಂತೆ ಕೆನಡಾಕ್ಕೆ ಭಾರತವು ಕಳೆದ ೭ ವರ್ಷಗಳಿಂದ ಹೇಳುತ್ತಿದ್ದರೂ, ಕೆನಡಾ ಅಂಥವರಿಗೆ ತನ್ನ ಪೌರತ್ವವನ್ನು ಕೊಟ್ಟಿದೆ.

ಖಲಿಸ್ತಾನಿ ಉಗ್ರರನ್ನು ತನ್ನಲ್ಲಿಗೆ ಗಡಿಪಾರು ಮಾಡುವಂತೆ ಭಾರತವು 27 ಬಾರಿ ಮನವಿ ಮಾಡಿದ್ದರೂ ಅದಕ್ಕೆ ಕೆನಡಾ ಸ್ಪಂದಿಸಿಲ್ಲ. ದೇಶದ ಕೃಷಿ ವಲಯದ ಸುಧಾರಣೆಗೆ ಭಾರತ ಸರಕಾರವು ಜಾರಿಗೆ ತಂದಿದ್ದ ಕಾಯ್ದೆಗಳ ವಿರುದ್ಧ ಪಂಜಾಬಿನ ರೈತರನ್ನು ಎತ್ತಿಕಟ್ಟಿದ್ದು ಇದೇ ಖಲಿಸ್ತಾನಿಗಳು. ಇವರ ವೋಟಿನ ಆಸೆಗೆ ಬಿದ್ದ ಟ್ರುಡೊ, ಭಾರತದಲ್ಲಿ ನಡೆಯುತ್ತಿದ್ದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಇದಕ್ಕೆ ಭಾರತ ತನ್ನ
ಅಸಮಾಧಾನ ವನ್ನು ವ್ಯಕ್ತಪಡಿಸಿದ್ದರೂ ಅದನ್ನು ಟ್ರುಡೊ ಸರಕಾರ ನಿರ್ಲಕ್ಷಿಸುತ್ತಾ ಬಂತು.

ಕಳೆದ ವರ್ಷ, ಕೆನಡಾದಲ್ಲಿ ಅಜ್ಞಾತ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಿಂದಾಗಿ ಖಲಿಸ್ತಾನಿ ಉಗ್ರ ಹರ್ ದೀಪ್ ಸಿಂಗ್ ನಿಜ್ಜರ್ ಹತನಾದ. ಈತನೊಬ್ಬ ಭಯೋತ್ಪಾದಕ ನೆಂದು ಭಾರತವು 2020ರಲ್ಲೇ ಘೋಷಿಸಿತ್ತು. ನಿಜ್ಜರ್ ಸಾವಿಗೆ ಭಾರತವೇ ಕಾರಣವೆಂದು ಟ್ರುಡೊ ಸರಕಾರ ಆರೋಪಿಸಿದ್ದರ ಜತೆಗೆ, ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಈ ಸಾವಿಗೆ ಸಂಚು ಹೂಡಿದ್ದಾರೆಂದು ಆರೋಪಿಸಿ 6 ಮಂದಿ ಅಧಿಕಾರಿ ಗಳನ್ನು ಇತ್ತೀಚೆಗೆ ಉಚ್ಚಾಟಿಸಿತು. ಇದಕ್ಕೆ ಪ್ರತಿಯಾಗಿ, ಭಾರತದಲ್ಲಿನ ಕೆನಡಾದ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಇಲ್ಲಿಂದ ತೊಲಗುವಂತೆ ಭಾರತವೂ ಸೂಚಿಸಿತು.

ನಿಜ್ಜರ್ ಸಾವಿನ ಹಿಂದೆ ಭಾರತದ ಕೈವಾಡವಿದೆಯೆಂದು ಕೆನಡಾ ಹೇಳುತ್ತಾ ಬಂದಿದ್ದರೂ, ಆ ಆರೋಪವನ್ನು ಸಾಬೀತು ಮಾಡುವ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ಕೆನಡಾ ದಲ್ಲಿನ ಖಲಿಸ್ತಾನಿಗಳ ಆಟಾಟೋಪಗಳಿಂದ ಬೇಸತ್ತಿರುವ ಅಲ್ಲಿನ ಪ್ರಜೆಗಳು ಮತ್ತು ವಿಪಕ್ಷಗಳು ಟ್ರುಡೊವನ್ನು ಟೀಕಿಸುತ್ತಿದ್ದಾರೆ. ಏನೇ ಕಸರತ್ತು ಮಾಡಿದರೂ ಕುಸಿದಿರುವ ಟ್ರುಡೊ ಜನಪ್ರಿಯತೆ ಮತ್ತೆ ಸುಧಾರಣೆಯಾಗುವ ಸಾಧ್ಯತೆಗಳಿಲ್ಲ. ಟ್ರುಡೊ ಖಲಿಸ್ತಾನ್ ಪರವಾಗಿ ನಿಂತಿರುವುದನ್ನು ಅಲ್ಲಿನ ವಿಪಕ್ಷ ನಾಯಕ ಪಿಯರೆ ಪೊಲಿಯೆವ್ರ್ ಬಲವಾಗಿ ಟೀಕಿಸಿದ್ದಾರೆ.

ಕೆನಡಾದಲ್ಲಿ 2025ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಟ್ರುಡೊ ಸೋತು, ಪಿಯರೆ ಗೆದ್ದು ಪ್ರಧಾನಿಯಾಗುವ ಸಾಧ್ಯತೆಯಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದವರೆಗೆ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಏರುಗತಿಯಲ್ಲಿತ್ತು; 2021ರಲ್ಲಿ ಜೋ ಬೈಡನ್ ಗದ್ದುಗೆಗೆ ಏರಿದ ನಂತರ ಈ ಬಾಂಧವ್ಯ ಸ್ವಲ್ಪ ಮಟ್ಟಿಗೆ ಕುಸಿಯಿತು. ಇದಕ್ಕೆ ಕಾರಣಗಳು ಹಲವು. ಬೈಡನ್ ಡೆಮಾಕ್ರಟಿಕ್ ಪಕ್ಷದ ಸಮರ್ಥಕರಾದರೆ, ದಾನಿಗಳು ಮತ್ತು ನೀತಿನಿರೂಪಕ ರಲ್ಲಿ ಹೆಚ್ಚಿನವರು ಲಿಬರಲ್ ಗಳು, ಸೋಷಲಿಸ್ಟ್‌ಗಳು ಹಾಗೂ ಎಡಪಂಥೀಯರು.

ಭಾರತ- ವಿರೋಧಿ ಜಾರ್ಜ್ ಸೊರೋಸ್‌ನಂಥವರು ಡೆಮಾಕ್ರಟಿಕ್ ಪಕ್ಷದ ಪ್ರಮುಖ ದಾನಿಗಳು. ಭಾರತದಲ್ಲಿರುವ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯವಾದಿ ಸರಕಾರವನ್ನು ಕೆಳಗಿಳಿಸಬೇಕೆಂದು ಅಂತಾರಾಷ್ಟ್ರೀಯ ಹುನ್ನಾರ ಮಾಡುತ್ತಿರುವಾತ ಈ ಸೊರೋಸ್. ಅಮೆರಿಕ ಸರಕಾರವಿಂದು ಭಾರತದ ವಿರುದ್ಧ ನಿಲುವುಗಳನ್ನು ತಳೆಯು ತ್ತಿರುವುದರ ಹಿಂದೆ ಸೊರೋಸ್ ಬಳಗದ ಕೈವಾಡವಿದೆ. ಅಮೆರಿಕದ ಈಗಿನ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಪಕ್ಷದ ಮುಂದಿನ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೂಡ ಉಪಾಧ್ಯಕ್ಷೆಯಾಗುವ ಮೊದಲು, ‘ಕಾಶ್ಮೀರವು ಪಾಕಿಸ್ತಾನಕ್ಕೆ ಸೇರಿದ್ದು’ ಎಂದು ಪ್ರತಿಪಾದಿಸುತ್ತಿದ್ದವರೇ.

ಈಕೆಯ ಸೋದರಿಯ ಮಗಳಾದ ಮೀನಾ ಹ್ಯಾರಿಸ್ ಕೂಡ ಭಾರತ-ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದುದುಂಟು.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ವಿಚಾರದಲ್ಲಿ ಭಾರತವು ರಷ್ಯಾದ ವಿರುದ್ಧ ನಿಲ್ಲಬೇಕೆಂಬುದು ಅಮೆರಿಕದ ಆಗ್ರಹ. ಭಾರತಕ್ಕೆ ರಷ್ಯಾ ರಿಯಾಯಿತಿ ದರದಲ್ಲಿ ತೈಲವನ್ನು ಮಾರುತ್ತಿದೆ, ಅದಕ್ಕೆ ಹಣದ ಪಾವತಿ ಯಾಗುತ್ತಿರುವುದೂ ಭಾರತೀಯ ರುಪಾಯಿಯ ಮೂಲಕವೇ. ಭಾರತವು ಹೀಗೆ ರಷ್ಯಾದಿಂದ ತೈಲವನ್ನು ಖರೀದಿಸು ವುದಕ್ಕೆ ಅಮೆರಿಕ ಮತ್ತು ಐರೋಪ್ಯ ದೇಶಗಳು ಆಕ್ಷೇಪಿಸಿದ್ದುಂಟು; ‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ’ ಎಂದು ಅಮೆರಿಕ ಸರಕಾರದ ಆಯೋಗವು ವರದಿಯನ್ನು ಕೊಟ್ಟಿದ್ದುಂಟು.

ಇನ್ನೊಂದು ಸ್ವಾರಸ್ಯಕರ ಸಂಗತಿ ಗೊತ್ತಾ? ‘2024ರ ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ನೇತೃತ್ವದ
ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ಅಮೆರಿಕ ಹಸ್ತಕ್ಷೇಪ ಮಾಡಿದೆ’ ಎಂದು ವರದಿ ಮಾಡಿದ್ದ ರಷ್ಯಾದ ‘ಸುಟ್ನಿಕ್’ ಮಾಧ್ಯಮ, ‘ಮೈತ್ರಿಪಕ್ಷಗಳು ಎನ್‌ಡಿಎ ಮೈತ್ರಿಕೂಟವನ್ನು ತೊರೆಯುವಂತೆ ಮಾಡಲು ಆಂಧ್ರಪ್ರದೇಶದ ಚರ್ಚುಗಳ ಮೂಲಕ ಅಮೆರಿಕದ ರಹಸ್ಯದಳಗಳು ಯತ್ನಿಸುತ್ತಿವೆ’ ಎಂದೂ ಹೇಳಿತ್ತು. ಇದಕ್ಕೆ ಪುಷ್ಟಿ ನೀಡುವಂತೆ, ಅಮೆರಿಕದ ರಾಯಭಾರ ಕಚೇರಿಯ ಅಧಿಕಾರಿಗಳು ಚಂದ್ರಬಾಬು ನಾಯ್ಡು, ಅಸಾದುದ್ದೀನ್ ಒವೈಸಿ, ಒಮರ್ ಅಬ್ದುಲ್ಲಾ ಮುಂತಾದವರನ್ನು ಭೇಟಿ ಮಾಡಿದ್ದರು.

ಅಮೆರಿಕದ ‘ಡೀಪ್ ಸ್ಟೇಟ್’ ಭಾರತದ ವಿರುದ್ಧವಾಗಿ ಕೆಲಸ ಮಾಡುತ್ತಿದ್ದು, ನಮ್ಮ ಇಂದಿನ ಕೇಂದ್ರ ಸರಕಾರ
ವನ್ನು ಕೆಳಗಿಳಿಸಿ ತನ್ನ ಕೈಗೊಂಬೆಯಂತಿರುವ ಸರಕಾರವನ್ನು ಪ್ರತಿಷ್ಠಾಪಿಸುವುದು ಅದರ ಉದ್ದೇಶವಾಗಿದೆ. ಏಕೆಂದರೆ, ಭಾರತವು ಜಾಗತಿಕ ಶಕ್ತಿಯಾಗಿ ಬೆಳೆಯುವುದು ಅಮೆರಿಕದ ಸ್ಥಾಪಿತ ಹಿತಾಸಕ್ತಿಗಳಿಗೆ ಇಷ್ಟವಿಲ್ಲ. ಇತ್ತೀಚೆಗೆ, ಅಮೆರಿಕ ಮತ್ತು ಕೆನಡಾಗಳ ನಡುವೆ ಓಡಾಡುತ್ತಿರುವ ಖಲಿಸ್ತಾನ್ ಉಗ್ರನಾದ ಗುರು ಪತ್ವಂತ್‌ಸಿಂಗ್ ಪನ್ನುವಿನ ಮೇಲೆ ನಡೆದ ಕೊಲೆಯತ್ನದಲ್ಲಿ ಭಾರತದ ‘ರಾ’ ಗೂಢಚಾರ ಸಂಸ್ಥೆಯ ಮಾಜಿ ಅಧಿಕಾರಿ ವಿಕಾಸ್ ಯಾದವ್ ಭಾಗಿಯಾಗಿದ್ದಾರೆಂದು ಆರೋಪಿಸಿರುವ ಅಮೆರಿಕದ ಎಫ್‌ ಬಿಐ, ಅವರಿಗಾಗಿ ವಾಂಟೆಡ್ ನೋಟಿಸ್ ಅನ್ನು ಪ್ರಕಟಿಸಿದೆ. ಈ ಎಲ್ಲ ಬೆಳವಣಿಗೆಗಳು ಅಮೆರಿಕವು ಭಾರತದ ವಿರುದ್ಧ ಸಾಗುತ್ತಿರುವುದನ್ನು ಸೂಚಿಸುತ್ತವೆ.

ಆದರೆ ಭಾರತದ ಇಂದಿನ ವಿದೇಶಾಂಗ ನೀತಿಯು ಹಿಂದೆಂದಿಗಿಂತಲೂ ಹೆಚ್ಚು ದೃಢವಾಗಿದೆ. ‘ಇಂಡಿಯಾ -ಸ್ಟ್’ ತತ್ವವನ್ನು ಪಾಲಿಸುತ್ತಿರುವ ಭಾರತವಿಂದು ತನ್ನ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಕೆಲಸ ಮಾಡುತ್ತಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ‘ಸತ್ಯದ ಬಾಂಬ್’ ಸಿಡಿಸುವುದರಲ್ಲಿ ನಿಷ್ಣಾತರು. “ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ವಿರೋಧಿಸುವ ಐರೋಪ್ಯ ದೇಶಗಳು, ಸ್ವತಃ ರಷ್ಯಾದಿಂದ ತೈಲವನ್ನು ಆಮದುಮಾಡಿಕೊಳ್ಳುತ್ತಿವೆ” ಎಂಬ ಹೇಳಿಕೆ ನೀಡುವ ಮೂಲಕ ಅವರು ಐರೋಪ್ಯ ದೇಶಗಳ ದ್ವಿಮುಖ
ನೀತಿಯನ್ನು ಬಯಲುಮಾಡಿದ್ದಾರೆ.

ಭಾರತವು ರಷ್ಯಾದಿಂದ ‘ಎಸ್-400’ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವುದಕ್ಕೆ ಅಮೆರಿಕ ಮಾಡಿರುವ ಆಕ್ಷೇಪಣೆಗೆ ಅವರು ಉತ್ತರಿಸುತ್ತಾ, “ಅಗತ್ಯ ಸಂದರ್ಭಗಳಲ್ಲಿ (ಪಾಕಿಸ್ತಾನದ ಜತೆಗಿನ ಸೆಣಸಾಟದ ವೇಳೆ) ಭಾರತಕ್ಕೆ ಶಸಾಸಗಳನ್ನು ಪೂರೈಸಿರುವುದು ರಷ್ಯಾ ಮಾತ್ರ; ಹೀಗಾಗಿ ನಾವು ಯುದ್ಧೋಪಕರಣಗಳ ಬಿಡಿಭಾಗಗಳ ಪೂರೈಕೆಗಾಗಿ ರಷ್ಯಾವನ್ನೇ ಅವಲಂಬಿಸಿದ್ದೇವೆ” ಎಂದು ಹೇಳಿ ರಷ್ಯಾದ ಜತೆಗಿನ ಈ ಒಪ್ಪಂದವನ್ನು ಸಮರ್ಥಿಸಿಕೊಂಡಿದ್ದಾರೆ.

ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಇದೆ ಎಂಬುದಾಗಿ ಅಮೆರಿಕದ ಸಿಐಆರ್‌ಎಫ್ ಮಾಡಿರುವ ವರದಿಗೆ ವಿದೇಶಾಂಗ‌ ಸಚಿವಾಲಯವು ಖಾರವಾಗಿ ಪ್ರತಿಕ್ರಿಯಿಸುತ್ತಾ, “ಈ ವರದಿಯು ಪೂರ್ವಗ್ರಹ ಪೀಡಿತವಾಗಿದೆ. ಅಮೆರಿಕವು ತನ್ನ ದೇಶದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವೆಡೆಗೆ ಗಮನ ಹರಿಸಲಿ” ಎಂದು ಚುರುಕು ಮುಟ್ಟಿಸಿತ್ತು. ರಷ್ಯಾದ ‘ಸುಟ್ನಿಕ್’ ಮಾಧ್ಯಮದ ಪ್ರಸಾರವನ್ನು ಭಾರತದಲ್ಲಿ ನಿಷೇಧಿಸಬೇಕೆಂಬ ಅಮೆರಿಕದ ಸೂಚನೆಗೆ ಭಾರತವು ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಿಲ್ಲ.

ಅಮೆರಿಕದಲ್ಲಿ ಮಹಾಚುನಾವಣೆ ಸಮೀಪಿಸುತ್ತಿದ್ದು, ಡೊನಾಲ್ಡ್ ಟ್ರಂಪ್ ಗೆಲ್ಲುವ ಸಾಧ್ಯತೆಗಳಿವೆಯೆಂದು ಅಲ್ಲಿನ ಸಮೀಕ್ಷೆಗಳು ಹೇಳುತ್ತಿವೆ. ತಾವು ಅಧಿಕಾರಕ್ಕೆ ಬಂದರೆ ‘ಡೀಪ್ ಸ್ಟೇಟ್’ ಅನ್ನು ನಾಶಮಾಡುವುದಾಗಿ ಟ್ರಂಪ್ ಹೇಳಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ಪುನಃ ಹಳಿಗೆ ಬರಬಹುದು.

(ಲೇಖಕರು ಹವ್ಯಾಸಿ ಬರಹಗಾರರು)

ಇದನ್ನೂ ಓದಿ: Ganesh Bhat Column: ಸಾಧಿಸಿದ್ದು ಇಷ್ಟು, ಸಾಧಿಸಬೇಕಾದ್ದು ಇನ್ನಷ್ಟು !