Wednesday, 23rd October 2024

Fake Court Busted : ಭೂ ವ್ಯಾಜ್ಯಗಳೇ ಈತನ ಟಾರ್ಗೆಟ್‌; ಐದು ವರ್ಷದಿಂದ ನಕಲಿ ಕೋರ್ಟ್ ನಡೆಸುತ್ತಿದ್ದ ಮೋಸಗಾರನ ಸೆರೆ!

Fake Court Busted

ಅಹ್ಮದಾಬಾದ್: ನಕಲಿ ಕೋರ್ಟ್‌ ಸೃಷ್ಟಿಸಿ ಭೂವ್ಯಾಜ್ಯಗಳ ಕುರಿತು ತೀರ್ಪು ನೀಡುತ್ತಿದ್ದ ಮೋಸಗಾರನನ್ನು (Fake Court Busted) ಪೊಲೀಸರು ಬಂಧಿಸಿದ್ದಾರೆ. 2019 ರಿಂದ ಗಾಂಧಿನಗರ ಪ್ರದೇಶದಲ್ಲಿ ಯಾರಿಗೂ ಗೊತ್ತಾಗದಂತೆ ಜಡ್ಜ್‌ ವೇಷ ಧರಿಸಿ ತೀರ್ಪುಗಳನ್ನು ನೀಡುತ್ತಾ ಜನಪ್ರಿಯತೆ ಗಳಿಸಿದ್ದ ಆತ ಕೊನೆಗೂ ಪೊಲೀಸರು ಬಲೆಗೆ ಬಿದ್ದಿದ್ದಾನೆ. ಮೋರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ ಬಂಧನಕ್ಕೊಳಗಾದ ಮೋಸಗಾರ. ಮೋಸದಲ್ಲಿ ಆತ ಎಷ್ಟು ನಿಖರ ಎಂದರೆ ಜನರು ಅದು ನಿಜವಾದ ಕೋರ್ಟ್‌ ಎಂಬುದಾಗಿಯೇ ಐದು ವರ್ಷ ನಂಬಿದ್ದರು. ಇನ್ನೂ ಹೆಚ್ಚೆಂದರೆ ತನ್ನ ತೀರ್ಪನ್ನು ನಿಜವಾದ ಕೋರ್ಟ್‌ ಅರ್ಜಿಯ ಜತೆ ಸಲ್ಲಿಸುವಷ್ಟು ದೊಡ್ಡ ಧೈರ್ಯ ಮಾಡಿದ್ದ. ಆದರೆ ಅದುವೇ ಆತನ ಮೋಸಕ್ಕೆ ಅಂತ್ಯವಾಡಿದೆ.

ಮಾಸ್ಟರ್ ಮೈಂಡ್ ಕ್ರಿಶ್ಚಿಯನ್ ತನ್ನ ಕಚೇರಿಯನ್ನೇ ಕೋರ್ಟ್‌ ರೂಮ್ ಆಗಿ ಪರಿವರ್ತಿಸಿದ್ದ.ನಿಜವಾದ ಜಡ್ಜ್‌ ನೀಡುವಂತೆಯೇ ತೀರ್ಪುಗಳನ್ನು ನೀಡಿದ್ದ ಎಂಬುದಾಗಿ ಪೊಲೀಸರು ಹೇಳಿದ್ದಾರೆ . ಆರಂಭಿಕ ತನಿಖೆ ಪ್ರಕಾ, ಕ್ರಿಶ್ಚಿಯನ್ ಭೂ ವಿವಾದಗಳಲ್ಲಿ ಸಿಲುಕಿರುವ ಜನರನ್ನೇ ತನ್ನ ಬಲೆಗೆ ಬೀಳಿಸುತ್ತಿದ್ದ,ಕಷ್ಟದಲ್ಲಿರುವ ವ್ಯಕ್ತಿಗಳನ್ನು ಬೇಟೆಯಾಡಿದ್ದ. ದೊಡ್ಡ ಪಾಲು ತೆಗೆದುಕೊಂಡು ನ್ಯಾಯ ನೀಡುತ್ತಿದ್ದ.

2019ರಲ್ಲಿ ಕ್ರಿಶ್ಚಿಯನ್ ಮೋಸ ಶುರು ಮಾಡಿದ್ದ. ಪ್ರಕರಣವು ಜಿಲ್ಲಾಧಿಕಾರಿ ಅಧೀನದಲ್ಲಿರುವ ಸರ್ಕಾರಿ ಭೂಮಿಗೆ ಸಂಬಂಧಿಸಿದ್ದು. ನಕಲಿ ಕೋರ್ಟ್ ರೂಮ್‌ ಸೃಷ್ಟಿ ಮಾಡಿಕೊಂಡು ತನಗೆ ದುಡ್ಡು ಕೊಟ್ಟವನ ಪರವಾಗಿ ಆತ ನ್ಯಾಯ ತೀರ್ಪು ನೀಡಿದ್ದ. ಮಧ್ಯಸ್ಥಿಕೆ ಕಾಯ್ದೆಯಡಿ ಸರ್ಕಾರವು ತನ್ನನ್ನು “ಅಧಿಕೃತ ಮಧ್ಯಸ್ಥಿಕೆದಾರ” ಆಗಿ ನೇಮಿಸಿದೆ ಎಂದು ಹೇಳಿಕೊಂಡಿದ್ದ. ಪ್ರಕರಣದಲ್ಲಿ ವಂಚಕ ಕ್ರಿಶ್ಚಿಯನ್ ತನ್ನ ‘ನ್ಯಾಯಾಲಯದಲ್ಲಿ’ ನಕಲಿ ವಿಚಾರಣೆ ಪ್ರಾರಂಭಿಸಿದ್ದ. ತನಗೆ ಬೇಕಾದವನ ಪರ ಆದೇಶ ಹೊರಡಿಸಿದ್ದ. ಆ ಭೂಮಿಯ ಕಂದಾಯ ದಾಖಲೆಗಳಲ್ಲಿ ತನ್ನ ಕಕ್ಷಿದಾರನ ಹೆಸರನ್ನು ಸೇರಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶ ನೀಡಿದ್ದ.

ನಿಜವಾದ ಕೋರ್ಟ್‌ನಲ್ಲಿ ಮೋಸ ಬಯಲು

ತನ್ನ ಆದೇಶ ಜಾರಿಗೆ ಬರುವಂತೆ ಮಾಡಲು ಕ್ರಿಶ್ಚಿಯನ್ ಇನ್ನೊಬ್ಬ ವಕೀಲರ ಮೂಲಕ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಅಲ್ಲಿ ಮೋಸದ ಆದೇಶವನ್ನು ಲಗತ್ತಿಸಿದ್ದ. ಈ ವೇಳೆ ಆತನ ಮೋಸ ಬಯಲಾಗಿದೆ.

ಇದನ್ನೂ ಓದಿ: Muslim personal laws : ನಾಲ್ಕು ಮದುವೆಯಾಗುವುದು ಮುಸ್ಲಿಂ ಪುರುಷರ ಹಕ್ಕು ಎಂದ ಹೈಕೋರ್ಟ್‌

ಕ್ರಿಶ್ಚಿಯನ್ ಮಧ್ಯಸ್ಥಿಕೆದಾರನಲ್ಲ ಅಥವಾ ನ್ಯಾಯಮಂಡಳಿಯ ಆದೇಶವು ನೈಜವಲ್ಲ ಎಂದು ನ್ಯಾಯಾಲಯದ ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ಅವರಿಗೆ ಗೊತ್ತಾಗಿದೆ. ಅವರ ದೂರಿನ ನಂತರ, ಇಲ್ಲಿನ ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 170 (ಸಾರ್ವಜನಿಕ ಸೇವಕನಂತೆ ನಟಿಸುವುದು) ಮತ್ತು 419 (ವ್ಯಕ್ತಿಗತವಾಗಿ ಮೋಸ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಮಧ್ಯಸ್ಥಿಕೆ ನ್ಯಾಯಮಂಡಳಿಯ ನ್ಯಾಯಾಧೀಶರಂತೆ ನಟಿಸುವ ಮೂಲಕ ಮತ್ತು ಕಾನೂನು ವಿವಾದಗಳನ್ನು ನಿರ್ಣಯಿಸಲು ಸಮರ್ಥ ನ್ಯಾಯಾಲಯದಿಂದ ಮಧ್ಯಸ್ಥಿಕೆದಾರನಾಗಿ ನೇಮಕಗೊಂಡಿದ್ದೇನೆ ಎಂದು ಹೇಳಿ ಅನುಕೂಲಕರ ಆದೇಶಗಳನ್ನು ಹೊರಡಿಸುವ ಮೂಲಕ ಜನರನ್ನು ವಂಚಿಸಿದ ಆರೋಪದ ಮೇಲೆ ಮೋಸಗಾರನನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಆರೋಪಿ ವಿರುದ್ಧ 2015ರಲ್ಲಿಯೂ ಮಣಿನಗರ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದಾರೆ.