ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
ಒಂದು ಭೂಕಂಪ, ಸುನಾಮಿ, ಪ್ರವಾಹ ಮಾಡದ ಆರ್ಥಿಕ ಹಿಂಜರಿತವನ್ನು ಒಂದು ವೈರಸ್ ಮಾಡಿರುವ ವಿಷಯ ನಮಗೆಲ್ಲ ತಿಳಿದೇ ಇದೆ. ಚೀನಾ ದೇಶವು ಕಡಿಮೆ ಗುಣಮಟ್ಟದ ವಸ್ತುಗಳನ್ನು ತಯಾರಿಸಿ ಹಲವು ದೇಶಗಳಿಗೆ ರಫ್ತು ಮಾಡುವುದರಲ್ಲಿ ಹೆಚ್ಚಿನ ಹೆಸರು ಮಾಡಿದೆ.
ಇಂತಹ ದೇಶವು ಉತ್ತಮ ಗುಣಮಟ್ಟದ ವೈರಸ್ ಕರೋನಾವನ್ನು ಮಾತ್ರ ಇಡೀ ಜಗತ್ತಿಗೆ ಪಸರಿಸಿದೆ. ಸಾವಿರಾರು ಕಿ.ಮೀ.ದೂರದ ವುಹಾನ್‌ನ ಖಾಸಗಿ ಲ್ಯಾಬ್ ಒಂದರಿಂದ ಹೊರಬಂದ ಕರೋನಾ ವೈರಸ್ ಇಡೀ ಜಗತ್ತಿನ ಆರ್ಥಿಕತೆಯನ್ನೇ ಬುಡ ಮೇಲು ಮಾಡಿದ್ದು ಮಾತ್ರ ಸುಳ್ಳಲ್ಲ. ನಾವು ನಮ್ಮ ಅಪ್ಪ, ಅಮ್ಮ, ಅಜ್ಜ, ಅಜ್ಜಿಯಂದಿರ ಬಾಯಲ್ಲಿ ಆಗಾಗ ಅವರ ಕಾಲದಲ್ಲಿ ’ಪ್ಲೇಗ್’, ’ಕಾಲರಾ’, ’ಮಲೇರಿಯ’ ತರಹದ ಕಾಯಿಲೆಗಳು ಬಂದು ಲಕ್ಷಾಂತರ ಜನರು ಸತ್ತರೆಂದು ಕೇಳಿದ್ದೆವು. ಈಗ ನಾವೂ ಸಹ ನಮ್ಮ
ಮೊಮ್ಮೊಕ್ಕಳಿಗೆ ಹೇಳಿಕೊಳ್ಳಲು ನಮ್ಮ ಕಾಲದಲ್ಲಿ ’ಕರೋನಾ’ವೆಂಬ ದೊಡ್ಡ ಕಾಯಿಲೆಯೊಂದು ಬಂದಿತ್ತೆನ್ನಬಹುದು.
ಜಗತ್ತಿನ ದೊಡ್ಡಣ್ಣ ಅಮೆರಿಕ ದೇಶದ ಆರ್ಥಿಕತೆಯನ್ನೇ ಬುಡಮೇಲು ಮಾಡಿದ ವೈರಸ್ ಇದು. ಯೂರೋಪಿನ ಹಲವು ಮುಂದುವರೆದ ರಾಷ್ಟ್ರಗಳ ಆರ್ಥಿಕತೆಯನ್ನೇ ಹಾಳುಮಾಡಿದ ವೈರಸ್ ಇದು. ಭಾರತದಲ್ಲೂ ಇಪ್ಪತ್ತೊಂದು ದಿನಗಳ ಕಾಲದ ’ಲಾಕ್‌ಡೌನ್’ ಘೋಷಿಸುವ ಮೂಲಕ ಆರ್ಥಿಕತೆಯ ಪೆಟ್ಟನ್ನು ಅನುಭವಿಸಬೇಕಾಯಿತು. ಜಗತ್ತಿನಾದ್ಯಂತ ಟ್ರಿಲಿಯನ್ ಡಾಲರ್ ಗಟ್ಟಲೆ ಆರ್ಥಿಕ ವ್ಯವಹಾರ ನೋಡ ನೋಡುತ್ತಲೇ ಬೀದಿಗೆ ಬಿತ್ತು. ಅಮೆರಿಕದ ಅಧ್ಯಕ್ಷ ’ಡೊನಾಲ್ಡ್ ಟ್ರಂಪ್ ’ ಮಾತ್ರ ತನ್ನ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಿಲ್ಲ, ಕೆಲವು ರಾಜ್ಯಗಳು ಮಾತ್ರ ತಮ್ಮ ವಿವೇಚನೆಗೆ ತಕ್ಕಂತೆ ಲಾಕ್‌ಡೌನ್ ಮಾಡಿದ್ದವು.
ಬಹುಷ್ಯ ಅಮೆರಿಕ ಅಧ್ಯಕ್ಷನಿಗೆ ಕರೋನಾ ವಿರುದ್ಧ ಮನೆಯೊಳಗೇ ಕುಳಿತು ಹೋರಾಡುವ ಅನಿವಾರ್ಯತೆಯಿಲ್ಲವೆಂದು
ಮೊದಲೇ ಅರಿವಾಗಿತ್ತೋ ಏನೋ! ಆದರೆ ಭಾರತದ ಪರಿಸ್ಥಿತಿ ಹಾಗಿರಲಿಲ್ಲ ಅಮೇರಿಕಾ ದೇಶದಲ್ಲಿದ್ದಂತಹ ವೈದ್ಯಕೀಯ ಸೌಲಭ್ಯಗಳು ಭಾರತದಲ್ಲಿರಲಿಲ್ಲ, ಭಾರತದ ಜನಸಂಖ್ಯೆ ನೂರಾ ಮೂವತ್ತೇಳು ಕೋಟಿ, ಅಮೆರಿಕದ ಜನಸಂಖ್ಯೆೆ 35 ಕೋಟಿ. ಅಮೆರಿಕ ದೇಶದ ಮೂರರಷ್ಟಿರುವ ಭಾರತದ ಜನರನ್ನು ಅಷ್ಟು ಸುಲಭವಾಗಿ ಹೊರಗೆ ಬಿಟ್ಟು ಕರೋನಾ ವಿರುದ್ಧ ಹೋರಾ ಡಿಸಲು ಮೊದಮೊದಲು ಸಾಧ್ಯವಿರಲಿಲ್ಲ.
ಸಂಪೂರ್ಣ ಲಾಕ್‌ಡೌನ್ ಮಾಡಿಲ್ಲದೆಯೇ ಅಮೆರಿಕ ದೇಶದ ಜಿಡಿಪಿ ಪಾತಾಳಕ್ಕೆ ಇಳಿದಿತ್ತು, ಇನ್ನು ಸಂಪೂರ್ಣ ಲಾಕ್‌ಡೌನ್ ಮಾಡಿದ್ದ ಭಾರತದ ಆರ್ಥಿಕ ಪರಿಸ್ಥಿತಿ ಏನಾಗಿರಬೇಡವೆಂದು ಹೇಳುವುದು ಬೇಡ. ನಿಮಗೂ ಸಹ ವಾಟ್ಸ್‌ಆ್ಯಪ್‌ಗಳಲ್ಲಿ ಅಂಕೆ ಸಂಖ್ಯೆಗಳು ಬಂದಿರಬಹುದು. ಭಾರತದ ಜಿ.ಡಿ.ಪಿಯು ಶೇ. (-23%) ಕ್ಕೆ ಇಳಿದಾಕ್ಷಣ ಕಾಂಗ್ರೆಸಿನ ನಾಯಕರು ಬಾಯಿಗೆ ಬಂದಂತೆ
ಮಾತನಾಡಿದರು. ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದ ಇಳಿಕೆಯನ್ನು ಕಂಡಿರಲಿಲ್ಲವೆಂದು ಸಿಕ್ಕ ಸಿಕ್ಕ ಕಡೆಯೆಲ್ಲ ಹೇಳಲಾರಂಭಿಸಿದರು, ನರೇಂದ್ರ ಮೋದಿಯೇ ಇದಕ್ಕೆ ನೇರ ಹೊಣೆ ಹಾಗಾಗಿ ಉತ್ತರಿಸಬೇಕೆಂದು ಹೇಳಿದರು.
ಇದು ಭಾರತ ಕಂಡನಂತಹ ಅತ್ಯಂತ ಕಳಪೆ ಜಿಡಿಪಿ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ, ಆದರೆ ಅದಕ್ಕೆ ನರೇಂದ್ರ ಮೋದಿ ಕಾರಣವೆಂಬುದು ಮಾತ್ರ ಶುದ್ಧ ಸುಳ್ಳು. ಇಡೀ ಜಗತ್ತೇ ಕರೋನಾ ಹೊಡೆತದಿಂದ ಆರ್ಥಿಕವಾಗಿ ಬಳಲುತ್ತಿರುವಾಗ ಇನ್ನು ಭಾರತವು ಮಾತ್ರ ಹೇಗೆ ಮುಂದುವರೆಯಲು ಸಾಧ್ಯ ? ಯೂರೋಪಿನ ದೇಶಗಳಾದ ಇಟಲಿ, ಜರ್ಮನಿ, ಫ್ರಾನ್ಸ್, ಬ್ರಿಟಿಷ್ ದ್ವೀಪ ಗಳು, ಸ್ಪೇನ್ ಪ್ರತಿನಿತ್ಯ ಕರೋನಾ ಹಾವಳಿಯಿಂದ ಆರ್ಥಿಕತೆಯಲ್ಲಿ ಹೊಡೆತ ತಿನ್ನುತ್ತಿದ್ದರೆ ಭಾರತವು ಹೇಗೆ ತಾನೆ ಮುಂದು ವರೆಯಲು ಸಾಧ್ಯ ? ಕರೋನಾ ಭಯದಿಂದಾಗಿ ಜನರು ಮನೆಯೊಳಗೇ ಕುಳಿತ್ತಿದ್ದರೆ, ಯಾವ ವ್ಯವಹಾರವು ತಾನೇ ಚೆನ್ನಾಗಿ ನಡೆಯಲು ಸಾಧ್ಯ ? ಮನೆಯಲ್ಲಿ ಜನರು ಕುಳಿತಿರುವುದರಿಂದ ಓಡಾಡಲು ಬಳಸುತ್ತಿದ್ದ ಆಟೋಗಳಿಗೆ ಪ್ರಯಾಣಿಕರಿಲ್ಲ, ಓಲಾ, ಊಬರ್ ಚಾಲಕರಿಗೆ ಪ್ರಯಾಣಿಕರಿರಲಿಲ್ಲ, ಮೆಟ್ರೋ ಈಗ ತಾನೇ ಶುರುವಾಗಿದೆ, ನಗರ ಸಾರಿಗೆ ಬಸ್ಸುಗಳು ಸಹ ಈಗ ತಾನೇ ಸಂಚಾರ ಪ್ರಾರಂಭಿಸಿವೆ, ಜನರು ಮನೆಯಿಂದ ಆಚೆ ಬಾರದೆ ಹೋಟೆಲುಗಳು ಖಾಲಿ ಹೊಡೆಯುತ್ತಿವೆ, ಜನರಿಲ್ಲದೆ ಮಾಲ್‌ಗಳು ಖಾಲಿ ಹೊಡೆಯುತ್ತಿವೆ, ಖ್ಯಾತ ಶಾಪಿಂಗ್ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು, ಸಿನಿಮಾ ಮಂದಿರಗಳು ತೆರೆದಿರಲಿಲ್ಲ, ಕರೋನಾ ಭಯದಿಂದಾಗಿ ಜನರು ಹೊರಬರದೆ ಇಷ್ಟೆಲ್ಲಾ ವ್ಯವಹಾರಗಳು ಸ್ತಬ್ದವಾಗಿರುವಾಗ, ಎಲ್ಲಿಯ ಆರ್ಥಿಕತೆ, ಎಲ್ಲಿಯ ಅಭಿವೃದ್ಧಿ? ಮನೆಯಲ್ಲಿ ಕುಳಿತು ನರೇಂದ್ರ ಮೋದಿಯವರ ಬಗ್ಗೆ ಟ್ವೀಟ್ ಮಾಡುತ್ತಿರುವ ರಾಹುಲ್ ಗಾಂಧಿ ಕರೋನಾ ಸಮಯದಲ್ಲಿ
ಅದೆಷ್ಟು ಬಾರಿ ಮನೆಯಿಂದ ಹೊರಬಂದಿದ್ದಾರೆ ? ಅವರ ಮಾತನ್ನು ಚಾಚು ತಪ್ಪದೆ ಪಾಲಿಸುವ ಅವರ ಶಿಷ್ಯಂದಿರು ಅದೆಷ್ಟು ಬಾರಿ ಹೊರಗೆ ಬಂದಿದ್ದಾರೆ ? ಒಬ್ಬ ನಾಯಕನನ್ನು ಧೂಷಿಸುವ ಮೊದಲು ಸಾಮಾನ್ಯ ಜ್ಞಾನವಿರಬೇಕು, ಅದನ್ನು ಬಿಟ್ಟು ಜಗತ್ತಿಗೆ ಬೆಂಕಿ ಬಿದ್ದಿರುವಾಗ ನಮ್ಮ ಮನೆಗೆ ಬಿದ್ದಿರುವ ಬೆಂಕಿಗೆ ಕಾರಣ ಮನೆಯ ಯಜಮಾನನೆನ್ನೆಲಾದೀತೇ ? ಮಾರುಕಟ್ಟೆ ಯಲ್ಲಿ ಪ್ರತಿಯೊಂದು ವ್ಯವಹಾರವೂ ಒಂದನ್ನೊಂದು ಅವಲಂಬಿಸಿವೆ, ಒಂದು ವ್ಯವಹಾರಕ್ಕೆ ಪೆಟ್ಟು ಬಿದ್ದರೆ ಅದನ್ನು ನಂಬಿ ರುವ ಎಲ್ಲ ವ್ಯವಹಾರಗಳೂ ಕೆಳಗೆ ಬೀಳುವುದು ಸಹಜ.
ಕರೋನಾ ಭಯದಿಂದಾಗಿ ಜನರೆಲ್ಲರೂ ಮನೆಯೊಳಗಿರುತ್ತಿದ್ದಂತಹ ಸಂಧರ್ಭದಲ್ಲಿ ಹೊರಗಡೆಯ ವ್ಯವಹಾರಗಳು ಸ್ತಬ್ಧ ಗೊಂಡಿದ್ದರ ಪರಿಣಾಮವಾಗಿ ಜಗತ್ತಿನ ಆರ್ಥಿಕತೆಯೂ ಕುಸಿಯಿತು, ಭಾರತದ ಆರ್ಥಿಕತೆಯೂ ಕುಸಿಯಿತು. ಇದಕ್ಕೆಲ್ಲ ಸಂಪೂರ್ಣ ಪರಿಹಾರವೆಂದರೆ ಕರೋನಾ ಲಸಿಕೆ, ಲಸಿಕೆ ಬಂದ ಮೇಲಷ್ಟೇ ಜನರು ಸಂಪೂರ್ಣವಾಗಿ ಹೊರಗೆ ಬರಲು ಸಾಧ್ಯ, ಅಲ್ಲಿಯವರೆಗೂ ಯಾವ ದೇಶದ ಆರ್ಥಿಕತೆಯು ಸಂಪೂರ್ಣವಾಗಿ ಚೇತರಿಕೆಯಾಗಲು ಸಾಧ್ಯವಿಲ್ಲ.
ಕರೋನಾ ಪರಿಣಾಮವಾಗಿ ಕೆಲವೊಂದು ಶಾಶ್ವತ ಬದಲಾವಣೆಗಳು ವ್ಯವಹಾರದಲ್ಲಾಗುವ ಸಂಭವಗಳಿವೆ, ಮನೆಯಿಂದಲೇ ಕೆಲಸ ಮಾಡುತ್ತಿರುವ ಹಲವು ಕಂಪನಿಗಳ ಮಾಲೀಕರಿಗೆ ಉಳಿಕೆಯಾಗುತ್ತಿರುವ ಖರ್ಚುಗಳನ್ನೊಮ್ಮೆ ನೋಡಿದರೆ ’ಕಚೇರಿ’ಯ ಕಲ್ಪನೆಯೇ ಬದಲಾಗಿದೆ, ವಿದ್ಯುತ್ ಚ್ಛಕ್ತಿಯಲ್ಲಿಯೇ ಕೋಟಿಗಟ್ಟಲೇ ಹಣದ ಉಳಿತಾಯವಾಗಿದೆ, ರಸ್ತೆಗಳಲ್ಲಿ ಟ್ರಾಫಿಕ್ ಕಡಿಮೆ ಯಾಗಿದೆ, ಇಖನಂತಹ ಕಂಪನಿಗಳು ಮುಂದಿನ ದಿನಗಳಲ್ಲಿ ಮನೆಯಿಂದಲೇ ಕೆಲಸ ಮಾಡಿಸಲು ನಿರ್ಧರಿಸಿದೆ.
ಇತ್ತೀಚಿಗೆ ಕೆಲವರು ಭಾರತದ ಆರ್ಥಿಕತೆಯನ್ನು ಬಾಂಗ್ಲಾದೇಶದ ಆರ್ಥಿಕತೆಯ ಜೊತೆ ತಾಳೆಹಾಕಿ ನೋಡಿ, ಬಾಂಗ್ಲಾದೇಶವು ಭಾರತವನ್ನು ಆರ್ಥಿಕತೆಯಲ್ಲಿ ಮೀರಿಸಿದೆಯೆಂದು ಹೇಳುತ್ತಿದ್ದರು. ಅವರ ಹೇಳಿಕೆಯೇ ಅವರಲ್ಲಿರುವ ಸಣ್ಣ ಬುದ್ದಿಯನ್ನು ತೋರಿಸುತ್ತಿತ್ತು, ಸಾಮಾನ್ಯ ಜ್ಞಾನವಿರುವವರಾರು ಸಹ ಈ ಮಾಡುವುದಿಲ್ಲ. ಭಾರತ ಹಾಗೂ ಬಾಂಗ್ಲಾದೇಶವನ್ನು ತಾಳೆ ಮಾಡುವುದೂ ಒಂದೇ, ಕಲ್ಲಂಗಡಿ ಹಣ್ಣನ್ನು ನಿಂಬೆ ಹಣ್ಣಿನ ಜತೆ ತಾಳೆ ಮಾಡುವುದೂ ಸಹ ಒಂದೇ. ಇಪ್ಪತ್ತು ಕೋಟಿಯಷ್ಟು ಜನಸಂಖ್ಯೆಯಿರುವ ಬಾಂಗ್ಲಾದೇಶವೆಲ್ಲಿ, ನೂರಾ ಮೂವತ್ತೇಳು ಕೋಟಿ ಜನಸಂಖ್ಯೆಯಿರುವ ಭಾರತವೆಲ್ಲಿ? ಬಾಂಗ್ಲಾದೇಶದ ಜಿಡಿಪಿ 348 ಬಿಲಿಯನ್ ಡಾಲರ್, ಭಾರತದ ಜಿ.ಡಿ.ಪಿ ಮೂರು ಟ್ರಿಲಿಯನ್ ಡಾಲರ್, ಬಿಲಿಯನ್ ಹಾಗೂ ಟ್ರಿಲಿಯನ್‌ಗೆ
ವ್ಯತ್ಯಾಸ ಗೊತ್ತಿಲ್ಲದವರೆಲ್ಲರೂ ಭಾರತವನ್ನು ಬಾಂಗ್ಲಾದೇಶಕ್ಕೆ ತಾಳೆ ಮಾಡಿದ್ದರು.
ಕರೋನಾ ಸಮಯದಲ್ಲಿ ಭಾರತದ ಆರ್ಥಿಕತೆಯ ಕುಸಿತದ ಬಗ್ಗೆ ಮಾತನಾಡುವವರಿಗೆ, ಮನೆಯಿಂದಲೇ ಕುಳಿತು ಕೆಲಸ ಮಾಡಿ ಭಾರತವು ಮಾಡಿರುವ ಸೇವಾ ರಫ್ತು ಬಗ್ಗೆ ಮಾತ್ರ ಮಾತನಾಡುವುದಿಲ್ಲ. ಮನೆಯಿಂದ ಕುಳಿತು ಮಾಡಿರುವ ಕೆಲಸದ ಪರಿಣಾಮ ವಾಗಿ ಹಲವು ದಶಕಗಳ ಬಳಿಕ ಭಾರತವು ಹೆಚ್ಚುವರಿ ಚಾಲ್ತಿ ಖಾತೆಯನ್ನು ಹೊಂದುವಂತಾಗಿದೆ. ಹೆಚ್ಚುವರಿ ಚಾಲ್ತಿ ಖಾತೆ ಯೆಂದರೆ ರಫ್ತು ಆಮದಿಗಿಂತಲೂ ಹೆಚ್ಚಾಗಿರುವುದು, ಕರೋನಾ ಕಾರಣದಿಂದಾಗಿ ಹಲವು ದೇಶಗಳಿಂದ ಆಮದು ಮಾಡಿ ಕೊಳ್ಳುವುದನ್ನು ನಿಷೇದಿಸಿರುವುದೂ ಸಹ ಇದಕ್ಕೆ ಒಂದು ಕಾರಣವಿರಬಹುದು. ಆದರೆ ಇಂತಹ ನಿಷೇಧದ ನಡುವೆಯೂ
ಭಾರತದ ಲಕ್ಷಾಂತರ ಯುವಕ, ಯುವತಿಯರು ಮನೆಯಲ್ಲಿ ಕುಳಿತು ಕೆಲಸ ಮಾಡಿ ಭಾರತದ ರಫ್ತನ್ನು ಹೆಚ್ಚಿಸಿದ್ದರು.
ಭಾರತದ ಬಹುತೇಕ ಹಳ್ಳಿಯ ಜನರು ಕೆಲಸವನ್ನರಸಿ ನಗರಗಳಿಗೆ ಬಂದಿರುವ ವಿಷಯ ಏನು ಗುಟ್ಟಾಗಿ ಉಳಿದಿಲ್ಲ, ಬೆಂಗಳೂರಿನ ಬಹುತೇಕ ಆಟೋ ಚಾಲಕರು, ಕಾರು ಚಾಲಕರು, ಗಾರ್ಮೆಂಟ್ಸ್ ಉದ್ಯೋಗಿಗಳು, ಸಣ್ಣ ಸಣ್ಣ ಕಾರ್ಖಾನೆಯ ಉದ್ಯೋಗಿಗಳು ಊರಿನಲ್ಲಿರುವ ತಮ್ಮ ಅಲ್ಪ ಸ್ವಲ್ಪ ಜಮೀನುಗಳನ್ನು ಬಿಟ್ಟು ನಗರಗಳಿಗೆ ಕೆಲಸವನ್ನರಸಿ ಬಂದವರು. ಇನ್ನು ಭಾರತದ ಇತರ ಹಳ್ಳಿ ಪರಿಸ್ಥಿತಿಯೇನು ಬೇರೆಯಿಲ್ಲ, ಅಲ್ಲಿನ ಬಹುತೇಕ ಕೂಲಿ ಕಾರ್ಮಿಕರು ತಮ್ಮ ಹಳ್ಳಿಯನ್ನು ಬಿಟ್ಟು ಪೇಟೆಗಳಿಗೆ ಕೆಲಸವನ್ನ ರಿಸಿ ಬಂದು ಜೀವನ ಸಾಗಿಸುತ್ತಿದ್ದವರು. ಇವರ ಆಗಮನದಿಂದಾಗಿ ಲಕ್ಷಾಂತರ ಎಕರೆಯ ಕೃಷಿ ಭೂಮಿ ಪಾಳು ಬಿದ್ದದ್ದು ಸುಳ್ಳಲ್ಲ, ನಮ್ಮ ಕಣ್ಣ ಮುಂದೆಯೇ ಹಲವು ಕೃಷಿ ಭೂಮಿಯು ಪಾಳು ಬಿದ್ದಿರುವುದನ್ನು ನೋಡಬಹುದು. ಇನ್ನು ಕೃಷಿ ಭೂಮಿಯಲ್ಲಿ ದುಡಿಯುತ್ತಿದ್ದಂತಹ ಕೂಲಿ ಕಾರ್ಮಿಕರು ನಗರಕ್ಕೆ ಬಂದಂತಹ ಪರಿಣಾಮವಾಗಿ ಹಳ್ಳಿಯಲ್ಲಿ ಕೆಲಸ ಮಾಡಲು ಜನರೇ ಸಿಗು ತ್ತಿರಲಿಲ್ಲ, ಮಲೆನಾಡಿನ ಕಡೆಗೆ ಹೋದರೆ ಅಡಿಕೆ ಕೊಯ್ಯಲು ಜನರು ಸಿಗುತ್ತಿಲ್ಲ, ಹಳೆ ಮೈಸೂರಿನ ಕಡೆಗೆ ಬಂದರೆ ಭತ್ತದ ಜಮೀನಿನ ಕಟಾವು ಮಾಡಲು ಜನರು ಸಿಗುತ್ತಿರಲಿಲ್ಲ, ತುಮಕೂರಿನಲ್ಲಿ ತೆಂಗಿನಕಾಯಿ ಕೀಳಲು ಕೂಲಿಯಾಳುಗಳು ಸಿಗುತ್ತಿರಲಿಲ್ಲ.
ಉತ್ತರ ಕರ್ನಾಟಕ ಬಾಗದ ಬಹುತೇಕ ಕೂಲಿಯಾಳುಗಳು ಬೆಂಗಳೂರಿನ ಸುತ್ತ ಮುತ್ತ ಕಟ್ಟಡ ಕಾಮಗಾರಿಯ ಕೆಲಸದಲ್ಲಿ ತೊಡಗಿ ದ್ದರು. ಉತ್ತರ ಭಾರತದ ಬಹುತೇಕರು ಬೆಂಗಳೂರಿನ ಹಲವು ಹೊಟೇಲುಗಳಲ್ಲಿ ಕೆಲಸ ಮಾಡುತ್ತಿದ್ದರು, ಕಟ್ಟಡ ಕಾಮಗಾರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಕರೋನ ಪರಿಣಾಮವಾಗಿ ಇವರಿಗೆ ಕೆಲಸವಿಲ್ಲದ ಕಾರಣ, ಬಹುತೇಕರು ತಮ್ಮ ತಮ್ಮ ಊರುಗಳಿಗೆ ವಾಪಾಸ್ ಹೋಗಿ ಪಾಲು ಬಿದ್ದಿದಂತಹ ತಮ್ಮ ಜಮೀನಿನಲ್ಲಿ ತಮಗೆ ಬೇಕಾದಂತಹ ಬೆಳೆಯನ್ನು ಬೆಳೆದು ಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೂಲಿಯಾಳುಗಳು ವಾಪಾಸ್ ತಮ್ಮ ಊರುಗಳಿಗೆ ಹೋದುದ್ದರ ಪರಿಣಾಮವಾಗಿ ಕೃಷಿ
ಭೂಮಿಯಲ್ಲಿ ಕೂಲಿಯಾಳುಗಳ ಕೊರತೆಯಿಲ್ಲದಂತಾಗಿದೆ.
ಭಾರತವು ಇಂದಿಗೂ ಸಹ ಕೃಷಿ ಪ್ರಧಾನ ರಾಷ್ಟ್ರವಾಗಿರುವುದರಿಂದ, ಆರ್ಥಿಕತೆಯ ಹೊಡೆತಕ್ಕೆ ಸಿಕ್ಕರೂ ಸಹ ಹೊಟ್ಟೆಗೇನು ಕಡಿಮೆಯಾಗಲಿಲ್ಲ. ಆರ್ಥಿಕ ಹಿಂಜರಿತದಿಂದ ಮೊದಲು ಚೇತರಿಕೆಗೊಂಡ ವಲಯಲವೆಂದರೆ ಕೃಷಿ. ಕೃಷಿಯಲ್ಲಿನ ಜಿ,ಡಿ.ಪಿ ಇಂದೆಂದೂ ಕಾಣದ ಅಭಿವೃದ್ಧಿಯನ್ನು ಕಂಡಿದೆ, ಇದರ ಬಗ್ಗೆ ಯಾರೂ ಸಹ ಮಾತನಾಡುವುದಿಲ್ಲ. ಅಂಕಿ ಸಂಖ್ಯೆಗಳು ಏನೇ ಇದ್ದರೂ ಸರಿ ಕಣ್ಣ ಮುಂದಿನ ವಾಸ್ತವದ ಬಗ್ಗೆ ಮಾತನಾಡಬೇಕು.
13 ವರ್ಷದಲ್ಲಿಯೇ ಅತ್ಯಧಿಕ ಉತ್ಪಾದನೆಯನ್ನು ಅಕ್ಟೋಬರ್‌ನಲ್ಲಿ ಹಲವು ದೊಡ್ಡ ಕಂಪನಿಗಳು ಮಾಡಿವೆ, ಕಾರಣ ನವರಾತ್ರಿ ಯಲ್ಲಿ ಗ್ರಾ ಹಕರು ಖರ್ಚುಮಾಡಿದ ರೀತಿ. ಭಾರತದ ಅತೀ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೋ ಇಂಡಿಯ ಹದಿನಾಲ್ಕು ಲಕ್ಷ ದ್ವಿಚಕ್ರ ವಾಹನಗಳನ್ನು ನವರಾತ್ರಿಯ ಸಮಯದಲ್ಲಿ ಮಾರಾಟ ಮಾಡಿದೆ. ಬಹುತೇಕ ಮಾಧ್ಯಮ ವರ್ಗದ ವರಿಂದ ದೇಶದ ಜನರಿಗೆ ಮುಖ್ಯವಾಗಿ ಬೇಕಿರುವ ದ್ವಿಚಕ್ರ ವಾಹನ ಮಾರಾಟವನ್ನು ನೋಡಿದರೆ, ಆರ್ಥಿಕತೆಯು ಪುನಃ ತನ್ನ
ಏರು ಗತಿಯಲ್ಲಿ ಮುನ್ನುಗ್ಗುತ್ತಿರುವುದು ಕಂಡುಬರುತ್ತಿದೆ.
ಈ ನಡುವೆ ’ಬಜಾಜ್’ ಕಂಪನಿಯವರು ತಮ್ಮ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಆರ್ಥಿಕ ಹಿಂಜರಿತದ ಬಗ್ಗೆ ಮಾತನಾಡಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ’ಹೀರೋ’ ಕಂಪನಿ ಅತ್ಯಧಿಕ ವಾಹನಗಳ ಮಾರಾಟವನ್ನು ಮಾಡಿತ್ತು. ವಿರೋಧಿಗಳು ಕೇವಲ ’ಬಜಾಜ್’ ಕಂಪನಿಯ ಹೇಳಿಕೆಯನ್ನಿಟ್ಟುಕೊಂಡು ಮೋದಿಯನ್ನು ಜರಿದರು, ಸತ್ಯ ಬೇರೆಯದ್ದೇ ಇತ್ತು ’ಬಜಾಜ್’ ಕಂಪನಿಯ ವಾಹನಗಳನ್ನು ಇಷ್ಟ ಪದದ ಜನ ’ಹೀರೋ’ ಕಂಪನಿಯ ಕಡೆಗೆ ಮುಖ
ಮಾಡಿದ್ದರು. ಇಷ್ಟು ಸಾಮಾನ್ಯ ಜ್ಞಾನವಿಲ್ಲದ ವಿರೋಧಿಗಳು ಪುನಃ ತಾವು ತೋಡಿದ್ದ ಖೆಡ್ಡಾಕ್ಕೆ ತಾವೇ ಬಿದ್ದಿದ್ದರು.
ನವರಾತ್ರಿ ಹಾಗೂ ದೀಪಾವಳಿಯ ಸಂದರ್ಭದಲ್ಲಿ ಬಿಲಿಯನ್‌ಗಟ್ಟಲೆ ವ್ಯವಹಾವನ್ನು ಈ ಎರಡೂ ಕಂಪನಿಗಳು ಮಾಡಿವೆ ಲಕ್ಷಾಂತರ ಮೊಬೈಲ್‌ಗಳು ಹಬ್ಬದ ಸಂದರ್ಭದಲ್ಲಿ ಇವರ ಬಳಿ ಮಾರಾಟವಾಗಿವೆ, ಗೃಹ ಬಳಕೆ ವಸ್ತುಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಹೆಚ್ಚಾಗಿ ಮಾರಾಟವಾಗಿವೆ. ನಾಲ್ಕು ಚಕ್ರದ ವಾಹನಗಳ ಮಾರಾಟದಲ್ಲಿ ಶೇ.19% ಏರಿಕೆಯಾಗಿರುವುದನ್ನು ಕಂಡರೆ ಮೇಲ್ವರ್ಗದ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿರುವುದು ಕಂಡುಬರುತ್ತದೆ. ಇಷ್ಟಾದರೂ ಇನ್ನೂ ಆರ್ಥಿಕತೆಯು
ಎದ್ದೇಳುವುದಿಲ್ಲವೆಂದು ಬಾಯಿ ಬಡೆದುಕೊಳ್ಳುವವರಿಗೆ ಏನೂ ಮಾಡಲಾಗುವುದಿಲ್ಲ. ’ಜಿ.ಎಸ.ಟಿ’ ಸಂಗ್ರಹ ಮತ್ತೆ ತಿಂಗಳಿಗೆ ಒಂದು ಲಕ್ಷ ಕೋಟಿಯನ್ನು ತಲುಪಿದೆ, ಹೆಚ್ಚಿನ ಸಂಗ್ರಹವಾದರೆ ಏನರ್ಥ? ಹೆಚ್ಚಿನ ವಸ್ತುಗಳ ಮಾರಾಟವಾಗಿದೆ ಎಂದರ್ಥ ತಾನೆ?
ಮುಂಬೈ ಷೇರು ಸೂಚ್ಯಂಕ ’44000’ ದಾಟಿದೆ, ’ಮಾರ್ಗನ್ ಸ್ಟಾನ್ಲಿ’ ಕಂಪನಿ ಇನ್ನು ಒಂದು ವರ್ಷದಲ್ಲಿ ಷೇರು ಸೂಚ್ಯಂಕ ’50000’ ದಾಟಲಿದೆಯೆಂದು ಹೇಳಿದೆ.
ವಿರೋಧಿಗಳು ಹೇಗಿದ್ದಾರೆಯೆಂದರೆ, ಇದೆ ಕಂಪನಿ ಭಾರತದ ಆರ್ಥಿಕತೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದನ್ನು ನಂಬಲು ತಯಾರಿರುತ್ತಾರೆ, ಆದರೆ ಒಳ್ಳೆಯದನ್ನು ಹೇಳಿದರೆ ತಮ್ಮ ಬಾಯಿಗೆ ಹೊಲಿಗೆಯನ್ನು ಹಾಕಿಕೊಂಡಿರುತ್ತಾರೆ. 2021-22ರ ಆರ್ಥಿಕ ವರ್ಷದಲ್ಲಿ ಭಾರತವು ಶೇ 8.6% ರ ಆರ್ಥಿಕ ಪ್ರಗತಿಯನ್ನು ಕಾಣಲಿದೆಯೆಂದು ಅಂದಾಜಿಸಲಾಗಿದೆ. (ಶೇ.23%)ರ ನಕಾರಾತ್ಮಕ ಪ್ರಗತಿಯಿಂದ ಶೇ. 8.6%ರ ಧನಾತ್ಮಕ ಪ್ರಗತಿಯೆಂದರೆ ಸಾಮಾನ್ಯವಲ್ಲ, ಪಾತಾಳಕ್ಕೆ ಬಿದ್ದವನು ಕೇವಲ ಒಂದು ವರ್ಷದಲ್ಲಿ
ಆಕಾಶಕ್ಕೆ ಹಾರಿದ ಹಾಗೆ. ಐದು ವರ್ಷ ಹಿಂದೆ ಹೋಗಿ ಮತ್ತೆ ಒಂದೇ ವರ್ಷದಲ್ಲಿ ಮುಂದೆ ಬಂದು ಹಳೆಯ ಪ್ರಗತಿಯನ್ನು ಸಾಧಿಸುವುದೆಂದರೆ, ಅದೆಷ್ಟು ಬೇಗ ಅರ್ತಿಕತೆಯು ಚೇತರಿಕೆ ಕಂಡಿದೆಯೆಂಬ ಸತ್ಯದ ಅರಿವಾಗುತ್ತದೆ.
ಭಾರತೀಯರಿಗೆ ಈಗ ಕರೋನಾ ಮಹಾಮಾರಿಯ ಭಯ ಹೆಚ್ಚಾಗಿ ಕಾಣುತ್ತಿಲ್ಲ, ಕರೋನಾಗಿಂತಲೂ ಮನೆಯಲ್ಲಿ ಕುಳಿತು ಅನುಭವಿಸುವ ಕಷ್ಟದ ಪರಿ ಅವರಿಗರಿವಾಗಿದೆ. ಅವರೆಲ್ಲರೂ ಬೀದಿಗಿಳಿದು ತಮ್ಮ ತಮ್ಮ ಹೊಟ್ಟೆ ಪಾಡನ್ನು ನೋಡಿಕೊಳ್ಳಲು ಶುರುಮಾಡಿದ್ದಾರೆ. ಎಷ್ಟು ಬೇಗ ಪಾತಾಳಕ್ಕೆ ಹೋದರೋ ಅಷ್ಟೇ ಬೇಗ ಮೇಲಕ್ಕೆ ಬಂದಿದ್ದಾರೆ, ನಿಧಾನವಾಗಿ ಮಾರುಕಟ್ಟೆಗಳು ತೆರೆದುಕೊಂಡಿವೆ, ಹಬ್ಬಗಳ ಮೂಲಕ ಕರೋನಾ ಭಯವನ್ನು ಜನರು ಮರೆಯುತ್ತಿದ್ದಾರೆ. ಪ್ರವಾಸೋದ್ಯಮವು ಚೇತರಿಕೆ ಯಾಗಲು ದಶಕಗಳೇ ಬೇಕು ಅಂದುಕೊಂಡಿದ್ದ ನಮಗೆ, ಹಲವು ಪ್ರವಾಸಿ ತಾಣಗಳು ನಿಧಾನವಾಗಿ ಜನಜಂಗುಳಿಯಿಂದ ಕೂಡಿವೆ.
ಸಮಸ್ಯೆಯ ನಡುವೆ ಅವಕಾಶವನ್ನು ಹುಡುಕುವ ಪ್ರಯತ್ನಕ್ಕೆ ನಾವು ಕೈ ಹಾಕಿದ್ದೇವೆ, ಆತ್ಮನಿರ್ಭರ ಭಾರತದಡಿಯಲ್ಲಿ ಆವುದು ಮಾಡಿಕೊಳ್ಳುವ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ, ಹೆಚ್ಚಾಗಿ ಸ್ವದೇಶೀ ವಸ್ತುಗಳ ಉತ್ಪಾದನೆಯನ್ನು ಮಾಡುವ ನಿಟ್ಟಿನಲ್ಲಿ ಒಂದು ದೊಡ್ಡ ಅಭಿಯಾನವೇ ಶುರುವಾಗಿದೆ.
ರಾತ್ರಿ ಮಲಗಿ ಬೆಳಗ್ಗೆ ಏಳುವಷ್ಟರಲ್ಲಿ ಎಲ್ಲವನ್ನೂ ಬದಲಾಯಿಸಲು ಸಾಧ್ಯವಿಲ್ಲ, ಈ ಮಟ್ಟದ ಅಭಿಯಾನವು ಕೊನೆಯ ಹಂತ ವನ್ನು ತಲುಪ ಬೇಕಾದರೆ ಎರಡು ದಶಕಗಳಾದರೂ ಬೇಕೇ ಬೇಕು. ಈ ಅಭಿಯಾನವು ಯಶಸ್ವಿಯಾದರೆ ಭಾರತವು ವಿಶ್ವಗುರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕರೋನಾ ವೈರಸ್ ಹಾವಳಿಯಿಂದ ಇಡೀ ಜಗತ್ತಿನ ಆರ್ಥಿಕತೆಯು ತಲೆಕೆಳಗಾಗಿತ್ತು, ಜಗತ್ತಿನೊಂದಿಗೆ ಭಾರತದ ಆರ್ಥಿಕತೆಯೂ ಕೆಳಗೆಬಿದ್ದಿತ್ತು. ಭಾರತದ ಆರ್ಥಿಕತೆಯು ಕೆಳಗೆ ಬಿದ್ದದ್ದು ಎಷ್ಟು ಸತ್ಯವೋ ಪುನಃ ಪುಟಿದೆದ್ದಿರುವುದೂ ಸಹ ಅಷ್ಟೇ ಸತ್ಯ