ಗೌರಿಬಿದನೂರು: ನಗರದ ಇಡಗೂರು ರಸ್ತೆಯಲ್ಲಿರುವ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಆವರಣದಲ್ಲಿ ಭಾನುವಾರ ಹಿಂದೂ ಸಾದರ ನೌಕರರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಅಭಿನಂಧನೆ ಮತ್ತು ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಾದರ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಚ್.ದೇವರಾಜಯ್ಯ ಮಾತನಾಡಿ, ಆಧುನಿಕ ಸಮಾಜದಲ್ಲಿ ಬದುಕಬೇಕಾದರೆ ವಿದ್ಯಾರ್ಥಿಗಳಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ವಿದ್ಯಾರ್ಥಿಗಳು ತಮ್ಮ ಶಾಲಾ ಕಾಲೇಜು ಹಂತದಿ0ದಲೇ ಆಸಕ್ತಿ ಮತ್ತು ಅವದಾನದಿಂದ ವ್ಯಾಸಂಗ ಮಾಡಿ ಉನ್ನತ ಸ್ಥಾನಮಾನ ಪಡೆಯುವ ಪ್ರಯತ್ನ ಮಾಡಬೇಕಾಗಿದೆ. ಸಮುದಾಯವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸದಾ ಬೆನ್ನೆಲುಬಾಗಿ ಶ್ರಮಿಸಲು ಸನ್ನದ್ದವಾಗಿದ್ದು, ಕಳೆದ ೨೬ ವರ್ಷಗಳಿಂದಲೂ ನೌಕರರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡುವ ಮೂಲಕ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ಮಾಡುತ್ತಿದ್ದೇವೆ. ಪೋಷಕರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಮೌಲ್ಯಾಧಾರಿತ ಶಿಕ್ಷಣ ಪಡೆದು ಸಮಾಜ ಮತ್ತು ಸಮುದಾ ಯಕ್ಕೆ ನಾವೆಲ್ಲರೂ ಭವಿಷ್ಯದಲ್ಲಿ ಆಸ್ತಿಗಳಾಗಬೇಕಿದೆ ಎಂದು ಹೇಳಿದರು.
ಕೇಂದ್ರ ಸಂಘದ ಅಧ್ಯಕ್ಷರಾದ ಡಿ.ಈ.ರವಿಕುಮಾರ್ ಮಾತನಾಡಿ, ಸಮುದಾಯವು ಪ್ರಗತಿಯತ್ತ ಸಾಗಬೇಕಾದರೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಯುವಕರಿಗೆ ವ್ಯಾಪಾರ ಮಾಡುವ ಕೌಶಲ್ಯಗಳನ್ನು ಬೆಳೆಸಲು ಮುಂದಾಗಬೇಕಾಗಿದೆ. ಕಳೆದ ಒಂದೂವರೆ ದಶಕದಿಂದ ಸಮುದಾಯವನ್ನು ಹಂತಹಂತವಾಗಿ ಪ್ರಗತಿಯ ಪಥದತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಮುಂದಿನ ದಿನಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆಸರೆಯಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಬಂಧು ಕಾರ್ಯಕ್ರಮವ ಅನುಷ್ಠಾನಗೊಳಿಸಲಾಗುವುದು. ನೌಕರರ ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲೂ ನಾವುಗಳು ಸದಾ ಕೈಜೋಡಿಸುತ್ತೇವೆ ಎಂದು ಹೇಳಿದರು.
ಆರಕ್ಷಕ ವೃತ್ತ ನಿರೀಕ್ಷಕ ಎಂ.ಎ.ವಸಂತ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕಾ ಹಂತದಿಂದಲೇ ನಿರ್ಧಿಷ್ಟ ಗುರಿಯನ್ನು ಇಟ್ಟುಕೊಂಡು ಸಾಧನೆಯ ಮೆಟ್ಟಿಲುಗಳನ್ನೇರಬೇಕಾಗಿದೆ. ಪ್ರತೀ ಹಂತದಲ್ಲೂ ಎದುರಾಗುವ ಸವಾಲುಗಳನ್ನು ನಿರ್ಭೀತಿಯಿಂದ ಎದುರಿಸಿದಲ್ಲಿ ಮಾತ್ರ ಸಮಾಜ ಮತ್ತು ಸಮುದಾಯದಲ್ಲಿ ಮುಖ್ಯವಾಹಿನಿ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ತಮ್ಮ ಬದುಕನ್ನು ಉಜ್ವಲಗೊಳಿಸುವ ಪ್ರಯತ್ನ ದಿಂದ ಓದಬೇಕಾಗಿದೆ ಎಂದು ಹೇಳಿದರು.
ಮುಖಂಡರಾದ ಸಿ.ಆರ್.ನರಸಿಂಹಮೂರ್ತಿ ಮಾತನಾಡಿ, ಸಮುದಾಯವು ಅತ್ಯಂತ ವಿರಳವಾಗಿದ್ದರೂ ಕೂಡ ಸದಾ ಸ್ವಾಭಿಮಾನ ಮತ್ತು ಸ್ವಾವಲಂಭಿಗಳಾಗಿ ಬದುಕು ಸಾಧಿಸುವ ಛಲವನ್ನು ಹೊಂದಿದ್ದೇವೆ. ಸಮುದಾಯದ ಅನೇಕ ಮಂದಿ ಯುವಕರ ಉನ್ನತ ವ್ಯಾಸಂಗ ಪಡೆದು ರಾಜ್ಯ ಮತ್ತು ದೇಶದ ವಿವಿದೆಡೆಗಳಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಅಂತಹ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ವೇದಿಕೆಯಲ್ಲಿನ ಗಣ್ಯರು ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ನೌಕರರನ್ನು ಅಭಿನಂಧಿಸಿದರು.
ಕಾರ್ಯಕ್ರಮದಲ್ಲಿ ಹಿಂದೂ ಸಾದರ ನೌಕರರ ಸಂಘದ ಅಧ್ಯಕ್ಷರಾದ ಸಿ.ಹೆಚ್.ದೇವರಾಜಯ್ಯ ಉಪಾಧ್ಯಕ್ಷರಾದ ಬಿ.ಮಂಜುನಾಥ್, ಕಾರ್ಯದರ್ಶಿ ಎಂ.ಶಿವಪ್ರಸಾದ್, ಖಜಾಂಚಿ ಬಿ.ಟಿ.ಶ್ರೀನಿವಾಸಮೂರ್ತಿ, ಸಂಘಟನಾ ಕಾರ್ಯದರ್ಶಿ ಹೆಚ್.ವಿ.ರಾಮೇಗೌಡ, ನೌಕರರಾದ ಎಂ.ಹೊನ್ನಪ್ಪ, ಜಿ.ಎಂ.ನಾರಾಯಣಗೌಡ, ಕೆ.ವಿ.ರಾಜಣ್ಣ, ಕೆ.ಎಸ್.ಮಂಜುನಾಥ್, ಎಸ್.ಜಿ.ಪ್ರಕಾಶ್, ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಸಮಿತಿಯ ಅಧ್ಯಕ್ಷರಾದ ಆರ್.ವೇಣುಗೋಪಾಲ್ ಮತ್ತು ಸದಸ್ಯರು ಹಾಗೂ ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಿ.ಈ.ರವಿ ಕುಮಾರ್, ನಿರ್ದೇಶಕರು, ಪದಾಧಿಕಾರಿಗಳು, ಜನಾಂಗದ ಹಿರಿಯರು, ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.
ಇದನ್ನೂ ಓದಿ: Chikkaballapur Rain: ಚಿಂತಾಮಣಿಯಲ್ಲಿ ಮಳೆ ಆರ್ಭಟ, ಮಳೆ ಅಬ್ಬರಕ್ಕೆ ವಾಹನ ಸವಾರರ ಪರದಾಟ