ನವದೆಹಲಿ: ಕೆಲ ದಿನಗಳಿಂದ ದೇಶದಲ್ಲಿ ವಿಮಾನಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಾಲು ಸಾಲು ಬಾಂಬ್ ಬೆದರಿಕೆ (Bomb threats) ಸಂದೇಶ ಬರುತ್ತಿವೆ. ಮಂಗಳವಾರ ಒಂದೇ ದಿನದಲ್ಲಿ 49 ಬೆದರಿಕೆ ಸಂದೇಶಗಳು ಬಂದಿದ್ದು ಪ್ರಯಾಣಿಕರು ಆಂತಕಗೊಂಡಿದ್ದಾರೆ. ಅ. 14 ರಿಂದ ಇಲ್ಲಿಯವರೆಗೆ ಸುಮಾರು 250 ಬೆದರಿಕೆ ಕರೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಏರ್ ಇಂಡಿಯಾ ಮತ್ತು ಇಂಡಿಗೋದ ತಲಾ 13 ವಿಮಾನಗಳು, ಆಕಾಶ ಏರ್‌ನ 12 ಮತ್ತು ವಿಸ್ತಾರಾದ 11 ಕ್ಕೂ ಅಧಿಕ ವಿಮಾನಗಳಿಗೆ ಬೆದರಿಕೆ ಸಂದೇಶಗಳು ಬಂದಿವೆ. ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ದೆಹಲಿಯಿಂದ ಟೇಕ್ ಆಫ್ ಅಥವಾ ಲ್ಯಾಂಡ್ ಮಾಡಲು ನಿರ್ಧರಿಸಲಾಗಿದೆ. ಅಧಿಕಾರಿಗಳು ದೆಹಲಿಯ ಇಂದಿರಾ ಗಾಂಧಿ ಇಂಟರ್‌ನ್ಯಾಷನಲ್ (ಐಜಿಐ) ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆಯನ್ನು ಒದಗಿಸಿದ್ದು, ಪೂರ್ಣ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ.
ನಾವು ವಿಮಾನ ನಿಲ್ದಾಣ ಮತ್ತು ವಿಮಾನಗಳನ್ನು ಪರಿಶೀಲಿಸಲು ಸಿಐಎಸ್‌ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಮತ್ತು ಸ್ಥಳೀಯ ಪೊಲೀಸರ ನೆರವನ್ನು ಪಡೆದುಕೊಂಡಿದ್ದೇವೆ. ಕಳೆದ ಕೆಲ ದಿನಗಳಿಂದ ಈ ರೀತಿಯ ಬೆದರಿಕೆ ಸಂದೇಶ ಬರುತ್ತಿದೆ. ಸಂಪೂರ್ಣ ಮುನ್ನೆಚ್ಚರಿಕೆ ತೆಗೆದುಕೊಂಡು ಭದ್ರತೆಯನ್ನು ಒದಗಿಸುತ್ತೇವೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮಾತನಾಡಿ ” ಬಾಂಬ್ ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ಆದಷ್ಟು ಬೇಗ ವಾರಂಟ್ ರಹಿತ ನ್ಯಾಯಾಂಗ ಬಂಧನ ಹಾಗೂ ದೀರ್ಘಾವಧಿಯ ಶಿಕ್ಷೆಯನ್ನು ಶೀಘ್ರವೇ ಜಾರಿಗೊಳಿಸಲಿದೆ . ಹಾಗೂ ಈ ರೀತಿಯ ಪ್ರಕರಣಗಳು ಇನ್ನೂ ಮುಂದುವರಿದರೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ಒದಗಿಸುತ್ತೇವೆ” ಎಂದು ಹೇಳಿದರು.
ನಿರಂತರ ಬೆದರಿಕೆಯಿಂದಾಗಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹಾಗೂ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತಿದೆ. ಸೋಮವಾರ ರಾತ್ರಿ ಏರ್ ಇಂಡಿಯಾ, ಇಂಡಿಗೋ ಹಾಗೂ ವಿಸ್ತಾರದ 10 ವಿಮಾನಗಳಿಗೆ ಬೆದರಿಕೆ ಬಂದಿದ್ದು, ಜೆದ್ದಾಗೆ ಹೋಗುವ ಇಂಡಿಗೋದ ಮೂರು ವಿಮಾನಗಳನ್ನು, ಸೌದಿ ಅರೇಬಿಯಾದ ರಿಯಾದ್ ಮತ್ತು ಕತಾರ್‌ನ ದೋಹಾ ವಿಮಾನ ನಿಲ್ದಾಣಗಳತ್ತ ತಿರುಗಿಸಲಾಗಿತ್ತು.
ಬೆದರಿಕೆ ಸಂದೇಶದ ಬಗ್ಗೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ ಅಕ್ಟೋಬರ್ 22ರಂದು ಏರ್ ಇಂಡಿಯಾದ ಕೆಲವು ವಿಮಾನಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಲಾಗಿದೆ. ನಿಗದಿಪಡಿಸಿದ ಪ್ರೋಟೋಕಾಲ್‌ಗಳನ್ನು ಅನುಸರಿಸಿ ಸಂಬಂಧಿತ ಅಧಿಕಾರಿಗಳನ್ನು ತಕ್ಷಣವೇ ಎಚ್ಚರಿಸಲಾಗಿದೆ. ಭದ್ರತಾ ಏಜೆನ್ಸಿಗಳ ಮಾರ್ಗದರ್ಶನದಂತೆ ಭದ್ರತಾ ಕಾರ್ಯವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ” ಎಂದು ತಿಳಿಸಿದೆ.
ಇದನ್ನೂ ಓದಿ: Hoax Bomb Threats: ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ; ಭದ್ರತಾ ನಿಯಮ ಬಿಗಿಗೊಳಿಸಲು ಸರ್ಕಾರದ ಚಿಂತನೆ
ಹಾರಾಟದ ಮಾರ್ಗಮಧ್ಯೆ ವಿಮಾನಗಳಿಗೆ ಬರುವ ಒಂದು ಬಾಂಬ್ ಬೆದರಿಕೆ ಕರೆಯು ವಿಮಾನಯಾನ ಸಂಸ್ಥೆಗೆ ಏನಿಲ್ಲವೆಂದರೂ 3 ಕೋಟಿ ರೂ. ನಷ್ಟ ಉಂಟು ಮಾಡುತ್ತದೆ. ಇಂಧನ ಭರ್ತಿ, ಬ್ಯಾಗೇಜ್, ಪ್ರಯಾಣಿಕರಿರುವಾಗ ವಿಮಾನದ ತೂಕ ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಬಾಂಬ್ ಬೆದರಿಕೆ ಕರೆಯಿಂದ ತುರ್ತು ಲ್ಯಾಂಡಿಂಗ್ ಅನಿವಾರ್ಯವಾಗಿರುತ್ತದೆ ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ವಿಮಾನಯಾನಗಳ ಸಂಸ್ಥೆ ಹೇಳುತ್ತದೆ.