ತುಮಕೂರು: ಮೈಸೂರು ಸ್ಯಾಂಡಲ್ ಉತ್ಪನ್ನಗಳು ಕನ್ನಡಿಗರ ಜೀವನಾಡಿಯಾಗಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಸಂಸ್ಥೆ ವತಿಯಿಂದ ಹಮ್ಮಿಕೊಂಡಿರುವ ಮೈಸೂರು ಸ್ಯಾಂಡಲ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೈಸೂರು ಮಹಾರಾಜರು ಆರಂಭಿಸಿದ ಸಂಸ್ಥೆಯ ಉತ್ಪನ್ನಗಳು ವಿಶ್ವದಾದ್ಯಂತ ಬಳಸಲ್ಪಡುತ್ತಿವೆ. ಕರ್ನಾಟಕ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಮೈಸೂರು ಸ್ಯಾಂಡಲ್ ಉತ್ಪನ್ನಗಳು ಹೆಚ್ಚು ಜನಮಾನಸ ಗಳಿಸಿವೆ. ಇಂತಹ ಸಂಸ್ಥೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರೆ ನೀಡಿದರು.
ಕೆ ಎಸ್ ಡಿ ಎಲ್ ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಗಂಗಪ್ಪ ಮಾತನಾಡಿ, ಮೈಸೂರು ಸ್ಯಾಂಡಲ್ ಉತ್ಪನ್ನಗಳು ಉತ್ತಮ ಗುಣಮಟ್ಟದೊಂದಿಗೆ ಗ್ರಾಹಕರ ನಂಬಿಕೆ ಗಳಿಸಿವೆ. ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ನಾಗಣ್ಣ, ಗೃಹ ಸಚಿವರ ವಿಶೇಷ ಅಧಿಕಾರಿ ನಾಗಣ್ಣ, ಸಹಾಯಕ ಪ್ರಧಾನ ವ್ಯವಸ್ಥಾಪಕ ಗುರುಪ್ರಸಾದ್, ಶಿವಪ್ರಕಾಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.