ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಮುಖಂಡ ಸಿಪಿ ಯೋಗೇಶ್ವರ್ (CP Yogeshwara) ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರ ಸಮ್ಮುಖದಲ್ಲಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ, ಚನ್ನಪಟ್ಟಣದ ಉಪಚುನಾವಣೆಯಲ್ಲಿ (Channapatna By Election) ಅವರು ಸ್ಪರ್ಧಿಸುವ ಸಾಧ್ಯತೆಯ ಕುರಿತು ಡಿಕೆಶಿ ಸೂಚನೆ ನೀಡಿದ್ದಾರೆ. ಸಿಪಿ ಯೋಗೇಶ್ವರ್ ಹಾಗೂ ಇನ್ನೊಬ್ಬರು ಟಿಕೆಟ್ ಆಕಾಂಕ್ಷಿಯ ಹೆಸರನ್ನು ದಿಲ್ಲಿಗೆ ಕಳಿಸಲಾಗುತ್ತಿದೆ. ಅಲ್ಲಿಂದ ಯಾರ ಹೆಸರು ಅಂತಿಮಗೊಳ್ಳುತ್ತದೋ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಸಿಪಿ ಯೋಗೇಶ್ವರ್, “ನನ್ನ ರಾಜಕೀಯ ಜೀವನ ಪ್ರಾರಂಭಿಸಿದ್ದು ಡಿಕೆ ಶಿವಕುಮಾರ್ ನೇತೃತ್ವದಲ್ಲಿ, ಇಂದು ಮತ್ತೆ ಕಾಂಗ್ರೆಸ್ ಸೇರಿದ್ದೇನೆ. ನನ್ನ ಮುಂದಿನ ರಾಜಕೀಯ ಜೀವನ ಕಾಂಗ್ರೆಸ್‌ನಲ್ಲೆ. ಕಳೆದ ಹಲವಾರು ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿದರೆ, ನಾವು ಕಟ್ಟಿದ ಮನೆಯಲ್ಲಿ ನಾವೇ ವಾಸಿಸಲು ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇದೆ” ಎಂದು ಬಿಜೆಪಿ ನಾಯಕರ ವಿರುದ್ಧದ ತಮ್ಮ ಅಸಮಾಧಾನ ಹೊರಹಾಕಿದರು.
“ಬಿಜೆಪಿ ಜೊತೆಗೆ ಜೆಡಿಎಸ್ ಸೇರಿದ ಬಳಿಕ ಅಲ್ಲಿ ನನ್ನ ರಾಜಕೀಯ ಬೆಳವಣಿಗೆಗೆ ಪೂರಕ ವಾತಾವರಣ ಇಲ್ಲ ಎಂದು ಅರಿವಾಯಿತು. ಸ್ವಯಂ ಪ್ರೇರಣೆಯಿಂದ, ಯಾವುದೇ ಆಕಾಂಕ್ಷೆ ಹಾಗೂ ಒತ್ತಡ ಇಲ್ಲದೆ ಕಾಂಗ್ರೆಸ್ ಸೇರಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಮಾತನಾಡಿ ಆಶೀರ್ವಾದ ಪಡೆದಿದ್ದೇನೆ” ಎಂದರು.
“ಕಾಂಗ್ರೆಸ್ ಸರ್ಕಾರದ ಕ್ರಿಯಾಶೀಲ ಅಭಿವೃದ್ಧಿ ಯೋಜನೆಗಳು ಸಾಕಷ್ಟು ಜಾರಿಯಲ್ಲಿವೆ. ಜನಸಾಮಾನ್ಯರ ಪರವಾಗಿರುವ ಕೆಲಸದಲ್ಲಿ ನಾನೂ ಕೂಡ ಕೈಜೋಡಿಸಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರಿದ್ದೇನೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಯಲ್ಲಿ ನಾನೂ ಪಾಲುದಾರನಾಗಬೇಕು ಎಂದು ನಿರ್ಧರಿಸಿದ್ದೇನೆ” ಎಂದು ಹೇಳಿದರು.
ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಯೋಗೇಶ್ವರ್ ರಾಜಕಾರಣ ಶುರು ಮಾಡಿದ್ದೇ ಕಾಂಗ್ರೆಸ್‌ನಿಂದ; ಅವರು ಬಿಜೆಪಿ ಸೇರಿದಂತೆ ಹಲವು ಪಕ್ಷಗಳನ್ನು ನೋಡಿದ್ದಾರೆ. ಸಹಜವಾಗಿಯೇ ಅವರು ಕಳೆದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ. ರಾಜಕೀಯದಲ್ಲಿ ಅನೇಕ ಭೀನ್ನಾಭಿಪ್ರಾಯ ಬರುತ್ತವೆ. ಅವರು ಇಂದು ಯಾವುದೇ ಷರತ್ತಿಲ್ಲದೆ ಪಕ್ಷಕ್ಕೆ ಸೇರಿದ್ದಾರೆ” ಎಂದರು.
“ನಮ್ಮ ಪಕ್ಷದ ನಾಯಕರ ಸಂಘಟನೆ ಬಳಿಕ ಜೆಡಿಎಸ್ ಮತ್ತು ಬಿಜೆಪಿಯಿಂದ ಹಲವು ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಈಗ ಪಕ್ಷ ಸೇರಿರುವ ನಾಯಕರು ಯಾವುದೇ ರೀತಿಯ ಮುಜುಗರಕ್ಕೆ ಒಳಗಾಗುವುದಿಲ್ಲ; ನಮ್ಮ ನಾಯಕರು ನಿಮ್ಮನ್ನು ಗೌರವಿಸುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡುತ್ತೇವೆ. ನಮ್ಮ ಸರ್ಕಾರ ಸುಭದ್ರವಾಗಿದೆ; ಐದು ವರ್ಷದ ನಂತರವೂ ನಮ್ಮದೇ ಸರ್ಕಾರ ಇರುತ್ತದೆ. ಚನ್ನಪಟ್ಟಣಕ್ಕೆ ವಿಶೇಷ ಆದ್ಯತೆ ಕೊಡುತ್ತೇವೆ” ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರನ್ನು ಯೋಗೇಶ್ವರ್ ಭೇಟಿ ಮಾಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಖಾನ್, ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಡಾ. ಎಂ ಸಿ ಸುಧಾಕರ್, ಮಾಜಿ ಸಂಸದ ಡಿ ಕೆ ಸುರೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷ, ರಾಜ್ಯಸಭೆ ಸದಸ್ಯ ಡಾ. ಜಿ.ಸಿ. ಚಂದ್ರಶೇಖರ್, ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಶಾಸಕರಾದ ಮಾಗಡಿ ಬಾಲಕೃಷ್ಣ, ಡಾ ರಂಗನಾಥ್, ಕದಲೂರು ವಿಜಯ್, ರವಿ ಗಣಿಗ, ಪೊನ್ನಣ್ಣ, ಎಂಎಲ್ಸಿಗಳಾದ ಪುಟ್ಟಣ್ಣ, ನಜೀರ್ ಅಹ್ಮದ್, ದಿನೇಶ್ ಗೂಳಿಗೌಡ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: CP Yogeshwara: ಕೊನೆಗೂ ಕೈಹಿಡಿದ ಸಿಪಿ ಯೋಗೇಶ್ವರ, ಸಿಎಂ ನಿವಾಸದಲ್ಲಿ ಮುಂದಿನ ನಡೆ ಚರ್ಚೆ