Wednesday, 23rd October 2024

Indian Economy : 2025ರಲ್ಲಿ ಭಾರತದ ಆರ್ಥಿಕತೆ ಶೇ.7ರಿಂದ 7.2ರಷ್ಟು ಬೆಳವಣಿಗೆ: ಡೆಲಾಯ್ಟ್ ವರದಿ

Indian economy

ನವದೆಹಲಿ: ಸರ್ಕಾರಿ ಹೂಡಿಕೆಗಳು ಮತ್ತು ಹೆಚ್ಚಿನ ಉತ್ಪಾದನೆಗಳ ಪ್ರಮಾಣ ಹೆಚ್ಚಳದಿಂದಾಗಿ ಭಾರತದ ಆರ್ಥಿಕತೆಯು (Indian Economy) ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7-7.2ರ ಬೆಳವಣಿಗೆ ಕಾಣಬಹುದು. ಆದರೆ, ಜಾಗತಿಕವಾಗಿ ಹಣಕಾಸು ವರ್ಷದ ಮುನ್ನೋಟದ ಪರಿಣಾಮವನ್ನೂ ಎದುರಿಸಲಿದೆ ಎಂದು ಹಣಕಾಸು ಆಡಿಟ್ ಸಂಸ್ಥೆ ಡೆಲಾಯ್ಟ್ ಇಂಡಿಯಾ ಮಂಗಳವಾರ ಹೇಳಿದೆ.

ಉತ್ಪಾದನಾ ವಲಯದ ಅಭಿವೃದ್ಧಿ, ತೈಲ ಬೆಲೆಗಳಲ್ಲಿ ಸ್ಥಿರತೆ ಮತ್ತು ಚುನಾವಣೆಯ ನಂತರ ಅಮೆರಿಕದ ವಿತ್ತೀಯ ಸ್ಥಿರತೆ ಭಾರತದ ಬಂಡವಾಳ ಒಳಹರಿವು ಹೆಚ್ಚಿಸುತ್ತದೆ. ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಕಾಲೀನ ಹೂಡಿಕೆಗಳು ಮತ್ತು ಉದ್ಯೋಗಾವಕಾಶ ಹೆಚ್ಚಿಸಲಿದೆ ಎಂದು ಡೆಲಾಯ್ಟ್ ತನ್ನ ‘ಅಕ್ಟೋಬರ್ 2024 ರ ಇಂಡಿಯಾ ಎಕಾನಮಿ ಔಟ್‌ಲುಕ್‌ನಲ್ಲಿ ಹೇಳಿದೆ.

ಮಾರ್ಚ್ 2025ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇಕಡಾ 6.7 ರಷ್ಟು ಬೆಳೆದಿದೆ. ಇದು ಐದು ತ್ರೈಮಾಸಿಕಗಳಲ್ಲಿ ನಿಧಾನಗತಿಯ ಬೆಳವಣಿಗೆ ಸೂಚಿಸುತ್ತದೆಯಾದರೂ, ಭಾರತವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Chhota Rajan : ಜಯ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಜೀವಾವಧಿ ಶಿಕ್ಷೆ ರದ್ದು ಮಾಡಿದ ಬಾಂಬೆ ಹೈಕೋರ್ಟ್‌

ಆರ್‌ಬಿಐ ಈ ತಿಂಗಳ ಆರಂಭದಲ್ಲಿ ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ 7.2 ರಷ್ಟು ವಿಸ್ತರಿಸುತ್ತದೆ ಎಂದು ಅಂದಾಜಿಸಿತ್ತು. ಹಣದುಬ್ಬರವನ್ನು ತಗ್ಗಿಸುವುದು, ವಿಶೇಷವಾಗಿ ಆಹಾರ, ಉತ್ತಮ ಮಳೆ ಮತ್ತು ದಾಖಲೆಯ ಖಾರಿಫ್ ಬೆಳೆ ಉತ್ಪಾದನೆ, ವರ್ಷದ ದ್ವಿತೀಯಾರ್ಧದಲ್ಲಿ ಸರ್ಕಾರದ ಬಲವಾದ ವೆಚ್ಚ ಮತ್ತು ಉತ್ಪಾದನೆಯಲ್ಲಿ ಹೆಚ್ಚುತ್ತಿರುವ ಹೂಡಿಕೆಯಂತಹ ದೇಶೀಯ ಅಂಶಗಳು ಈ ವರ್ಷದ ಭಾರತದ ಬೆಳವಣಿಗೆಗೆ ಸಹಾಯ ಮಾಡಲಿದೆ.

ರಫ್ತಿನ ಮೇಲೆ ಪರಿಣಾಮ

ಜಾಗತಿಕ ಬೆಳವಣಿಗೆಯ ದೃಷ್ಟಿಕೋನ ಮತ್ತು ಪಾಶ್ಚಿಮಾತ್ಯ ಆರ್ಥಿಕತೆಗಳಲ್ಲಿ ವಿಳಂಬ ಹೊಂದಾಣಿಕೆಯು ಮುಂದಿನ ಹಣಕಾಸು ವರ್ಷದ ಭಾರತದ ರಫ್ತು ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ ವರದಿ ಹೇಳಿದೆ.

ಆದಾಯ ವಿತರಣೆಯ ಸಮತೋಲನಕ್ಕೆ ಭಾರತಕ್ಕೆ ಗುಣಮಟ್ಟದ ಉದ್ಯೋಗಗಳು ಬೇಕಾಗುತ್ತವೆ. ಉತ್ಪಾದನೆಗೆ ಒತ್ತು ನೀಡುವುದು ಮತ್ತು ಸುಧಾರಿತ ಶಿಕ್ಷಣ ಮತ್ತು ವಿಶೇಷ ಕೌಶಲ್ಯಗಳ ಅಗತ್ಯವಿರುವ ಅರೆವಾಹಕಗಳು ಮತ್ತು ಎಲೆಕ್ಟ್ರಾನಿಕ್ಸ್‌ನಂಥ ಉದಯೋನ್ಮುಖ ಕೈಗಾರಿಕೆಗಳ ಹೆಚ್ಚಳ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುತ್ತದೆ” ಎಂದು ಅದು ಹೇಳಿದೆ.