Tuesday, 19th November 2024

Baba Siddique Murder Case: ಸಿದ್ದಿಕಿ ಕೊಲೆಗೆ ಮೊದಲು ಲಾರೆನ್ಸ್ ಬಿಷ್ಣೋಯ್ ಸಹೋದರನ ಜೊತೆ ಸಂಪರ್ಕದಲ್ಲಿದ್ದ ಶೂಟರ್‌ಗಳು

Baba Siddique murder case

ಮುಂಬೈ: ಎನ್‌ಸಿಪಿ ಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಗೆ ಮೊದಲು‌ ಶಂಕಿತ ಶೂಟ‌ರ್‌ಗಳು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್( Lawrence Bishnoi) ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಜತೆ ಸಂಪರ್ಕದಲ್ಲಿದ್ದರು ಎಂದು ಮುಂಬೈನ ಕ್ರೈಂ ಬ್ರಾಂಚ್ ಪೊಲೀಸರು ತಿಳಿಸಿದ್ದಾರೆ.

ಸಿದ್ಧಿಕಿ ಕೊಲೆ ಮಾಡುವ ಮೊದಲು ಶೂಟರ್‌ಗಳು ಅನ್ಮೋಲ್ ಬಿಷ್ಣೋಯ್ ಜೊತೆ ಸ್ನಾಪ್‌ಚಾಟ್ ಮೂಲಕ ಸಂದೇಶ ರವಾನಿಸಿದ್ದರು. ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆರೋಪಿಗಳು ಸ್ನಾಪ್‌ಚಾಟ್(Snap Chat) ಮೂಲಕ ಸಂಪರ್ಕ ಹೊಂದಿದ್ದು, ಅನ್ಮೋಲ್ ಬಿಷ್ಣೋಯ್ ಕೆನಡಾ ಹಾಗೂ ಅಮೆರಿಕದಿಂದ ಅರೋಪಿಗಳ ಜೊತೆ ಸಂವಹನ ನಡೆಸುತ್ತಿದ್ದ. ಅನ್ಮೋಲ್ ಬಿಷ್ಣೋಯ್ ಆರೋಪಿಗಳಿಗೆ ಸ್ನಾಪ್‌ಚಾಟ್ ಮೂಲಕ ನಿರ್ದೇಶನವನ್ನು ನೀಡುತ್ತಿದ್ದ. ತಕ್ಷಣವೇ ಅದನ್ನು ಡಿಲಿಟ್‌ ಮಾಡುತ್ತಿದ್ದ. ಹತ್ಯೆಗೆ ಸಂಚು ರೂಪಿಸುವಲ್ಲಿ ಈತನ ಪಾತ್ರವೂ ಇದೆ ಎಂಬುದು ಪೊಲೀಸ್‌ ತನಿಖೆಯಲ್ಲಿ ತಿಳಿದು ಬಂದಿದೆ.

“ಆರೋಪಿಗಳು ಹ್ಯತ್ಯೆಗೂ ಮುನ್ನ ಅನ್ಮೋಲ್ ಬಿಷ್ಣೋಯ್ ಜೊತೆ ತ್ವರಿತ ಮೆಸೇಜಿಂಗ್‌ ಆಪ್‌ ಮೂಲಕ ಸಂವಹನ ನಡೆಸಿದ್ದಾರೆ. ಅನ್ಮೋಲ್ ಕೆನಡಾ ಹಾಗೂ ಅಮೆರಿಕದಲ್ಲಿ ಶಂಕಿತರ ಜೊತೆ ಸಂಪರ್ಕದಲ್ಲಿದ್ದ. ಮೂವರು ಆರೋಪಿಗಳಿಂದ ನಾಲ್ಕು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆಯಿಂದ ಹ್ಯತೆಗೆ ಕಾರಣ ತಿಳಿದು ಬರಬೇಕಿದೆ” ಎಂದು ಮುಂಬೈನ ಅಪರಾಧ ವಿಭಾಗದ ಪೊಲೀಸರು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Baba Siddique: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಗುಜರಿ ವ್ಯಾಪಾರಿ ಪೊಲೀಸ್‌ ಬಲೆಗೆ; ಬಂಧಿತರ ಸಂಖ್ಯೆ 10ಕ್ಕೆ ಏರಿಕೆ

ಬಾಬಾ ಸಿದ್ದಿಕ್‌ ಹತ್ಯೆಗೆ ಸಂಬಂಧಿಸಿದಂತೆ ಎರಡು ಶೂಟರ್‌ ಹಾಗೂ ಒಬ್ಬ ಶಸ್ತ್ರ ಪೂರೈಕೆದಾರರು ಸೇರಿದಂತೆ ಈಗಾಗಲೆ ಹತ್ತು ಜನರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ಸ್ನಾಪ್‌ಚಾಟ್ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಶೂಟರ್‌ಗಳು ಪ್ರವೀಣ್ ಲೋಂಕರ್ ಹಾಗೂ ಅನ್ಮೋಲ್ ಬಿಷ್ಣೋಯ್ ಅವರೊಂದಿಗೆ ನೇರವಾಗಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಟೋಬರ್‌ 12 ರ ರಾತ್ರಿ 9.30 ರ ವೇಳೆಗೆ ಬಾಬಾ ಸಿದ್ದಿಕಿ ಮುಂಬೈನ ಬಾಂದ್ರಾದಲ್ಲಿರುವ ಮಗ ಶಾಸಕ ಜೀಶಾನ್ ಸಿದ್ದಿಕಿ ಅವರ ಕಚೇರಿಯಿಂದ ಹೊರಟಿದ್ದಾಗ ಗುಂಡಿಕ್ಕಿ ಅವರನ್ನು ಹತ್ಯೆ ಮಾಡಲಾಗಿತ್ತು. ನಂತರ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹತ್ಯೆಯ ಹೊಣೆಯನ್ನು ವಹಿಸಿಕೊಂಡಿತು. 

ಬಾಬಾ ಸಿದ್ದಿಕಿ ಆಪ್ತರಾದ ನಟ ಸಲ್ಮಾನ್‌ ಖಾನ್‌ಗೂ ಈ ಗ್ಯಾಂಗ್ ಬೆದರಿಕೆ ಹಾಕಿ ನಟ ಸಲ್ಮಾನ್ ಖಾನ್ ಅವರಿಂದ 5 ಕೋಟಿ ರೂ. ಸಲ್ಮಾನ್ ಪಾವತಿಸಲು ವಿಫಲವಾದರೆ, ಆತನ ಸ್ಥಿತಿ ಇತ್ತೀಚೆಗೆ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿಗಿಂತ ಕೆಟ್ಟದಾಗಿರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸದಸ್ಯ ಸುಖ್ಬೀರ್ ಬಲ್ಬೀರ್ ಸಿಂಗ್ ಅಲಿಯಾಸ್ ಸುಖಾನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್‌ 16 ರ ರಾತ್ರಿ ಪಾಣಿಪತ್ ಹೋಟೆಲ್‌ನಲ್ಲಿ ಬಂಧಿಸಿದ್ದಾರೆ.