Thursday, 21st November 2024

Building collapse: ಬೆಂಗಳೂರು ಕಟ್ಟಡ ಕುಸಿತ ಪ್ರಕರಣ; ಸಾವಿನ ಸಂಖ್ಯೆ 6ಕ್ಕೇರಿಕೆ, ಮಾಲೀಕ ಸೇರಿ ಇಬ್ಬರು ಅರೆಸ್ಟ್

Building collapse

ಬೆಂಗಳೂರು: ನಗರದ ಕಟ್ಟಡ ಕುಸಿತ ಪ್ರಕರಣದಲ್ಲಿ (Building collapse) ಇದೀಗ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಇದುವರೆಗೂ 13 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮಾಲೀಕ ಭುವನ್ ರೆಡ್ಡಿ, ಗುತ್ತಿಗೆದಾರ ಮುನಿಯಪ್ಪನನ್ನು ಹೆಣ್ಣೂರು ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೃತ ಕಾರ್ಮಿಕನನ್ನು ಸೋಲು ಪಾಸ್ವಾನ್ ಎಂದು ಗುರುತಿಸಲಾಗಿದೆ. ಈತ ಬಿಹಾರ್ ಮೂಲದ ಟೈಲ್ಸ್ ಕಾರ್ಮಿಕ ಎಂದು ಹೇಳಲಾಗುತ್ತಿದೆ. ಇವರಲ್ಲದೆ ದುರಂತದಲ್ಲಿ ತಿರುಪಾಲಿ, ಅರ್ಮಾನ್ ಸೇರಿದಂತೆ ಇದುವರೆಗೂ ಆರು ಕಾರ್ಮಿಕರು ಮೃತಪಟ್ಟಿದ್ದಾರೆ.

ಕಟ್ಟಡದ ಮಾಲೀಕ ಭುವನ್ ರೆಡ್ಡಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುತ್ತೆ ಎಂದು ಅನುಮತಿ ಪಡೆದು, ಆರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕ ಭುವನ್ ರೆಡ್ಡಿ ಹಾಗೂ ಗುತ್ತಿಗೆದಾರ ಮುನಿಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳದಲ್ಲಿ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ರಕ್ಷಣಾ ಕಾರ್ಯಚರಣೆ ಮುಂದುವರಿಸಿದ್ದಾರೆ.

ಆಟಿಕೆಯಂತೆ ಉರುಳಿದ ಕಟ್ಟಡ

ಬೆಂಗಳೂರಿನ ಹೆಣ್ಣೂರು ಬಳಿಯ ಬಾಬುಸಾಬ್ ಪಾಳ್ಯದಲ್ಲಿ ಆರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದು ಇದುವರೆಗೆ 6 ಕಾರ್ಮಿಕರು ಮೃತಪಟ್ಟಿದ್ದಾರೆ. ಮಂಗಳವಾರ ಕಟ್ಟಡ ಕುಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಕಠಿಣ ಕ್ರಮ: ಡಿಕೆ ಶಿವಕುಮಾರ್

ಬೆಂಗಳೂರು: ಬೆಂಗಳೂರು ನಗರದಲ್ಲಿ (Bengaluru news) ಕಟ್ಟಡಗಳ ಫಿಟ್ನೆಸ್ ಪ್ರಮಾಣ ಪತ್ರ, ವಿನ್ಯಾಸ ಸೇರಿದಂತೆ ಪಾಲಿಕೆಯಿಂದ (BBMP) ಅನುಮತಿ ತೆಗೆದುಕೊಳ್ಳದೆ ಕಟ್ಟಡ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಆದಷ್ಟು ಬೇಗ ಇದರ ಬಗ್ಗೆ ಸಮೀಕ್ಷೆ ಕಾರ್ಯ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ತಿ (DCM DK Shivakumar) ತಿಳಿಸಿದರು.

ನಗರದ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿರುವ ಸ್ಥಳಕ್ಕೆ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಸಚಿವರಾದ ಸಂತೋಷ್ ಲಾಡ್, ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರ ಜೊತೆ ಭೇಟಿ ನೀಡಿ ರಕ್ಷಣಾ ಕಾರ್ಯವನ್ನು ವೀಕ್ಷಣೆ ಮಾಡಿದರು. ರಕ್ಷಣಾ ಕಾರ್ಯ ಹಾಗೂ ಕಾರ್ಮಿಕರ ಬಗ್ಗೆ ಚರ್ಚೆ ನಡೆಸಿದರು.

ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಅವರು, “60/40 ಅಳತೆಯ ನಿವೇಶನದಲ್ಲಿ ಇಷ್ಟು ದೊಡ್ಡ ಕಟ್ಟಡ ಕಟ್ಟಿರುವುದು ದೊಡ್ಡ ಅಪರಾಧ. ಅಧಿಕಾರಿಗಳು ಮೂರು ಬಾರಿ ನೋಟಿಸ್ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ನೋಟೀಸ್ ನೀಡಿದರೆ ಸಾಲದು ಅದರ ಬದಲು ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಇದು ನಮಗೆ ದೊಡ್ಡ ಪಾಠವಾಗಿದೆ. ರಕ್ಷಣಾ ಕಾರ್ಯ ಮುಗಿದ ನಂತರ ಮುಂದಿನ ಎರಡು ದಿನಗಳಲ್ಲಿ ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.

“ನಗರದಾದ್ಯಂತ ಅಕ್ರಮ ಕಟ್ಟಡಗಳ ಬಗ್ಗೆ ಸರ್ವೆ ಕಾರ್ಯ ಮಾಡಲಾಗುವುದು. ಕಟ್ಟಡ ವಿನ್ಯಾಸ ಹೊಂದಿರದವರಿಗೆ ಯಾವುದೇ ಕಾರಣಕ್ಕೂ ನೋಂದಣಿ ಮಾಡಿಕೊಡಬಾರದು ಎಂದು ಕಂದಾಯ ಇಲಾಖೆಗೆ ಸೂಚನೆ ನೀಡಲಾಗುವುದು. ಕಡಿಮೆ ದುಡ್ಡಿಗೆ ನಿವೇಶನ ತೆಗೆದುಕೊಂಡು ಮಾರಾಟ ಮಾಡಲು ಈ ರೀತಿ ಮಾಡಲಾಗುತ್ತದೆ. ಇಂತಹ ಅಕ್ರಮಗಳನ್ನು ತಡೆಗಟ್ಟುವ ಕಾರಣಕ್ಕಾಗಿ ರೇರಾ ಕಾಯ್ದೆ ಜಾರಿಯಲ್ಲಿದೆ” ಎಂದರು.

“21 ಕಾರ್ಮಿಕರರು ಕಟ್ಟಡದ ಅವಶೇಷಗಳ ಮಧ್ಯೆ ಸಿಲುಕಿದ್ದಾರೆ. ಇಬ್ಬರು ಕಾರ್ಮಿಕರು ಮೃತ ಪಟ್ಟಿದ್ದಾರೆ. 14 ಜನರ ರಕ್ಷಣೆ ಮಾಡಲಾಗಿದ್ದು, ಏಳು ಮಂದಿ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್ ಡಿಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡದವರು ಅತ್ಯಂತ ಜಾಗರೂಕವಾಗಿ ತರಾತುರಿಯಲ್ಲಿ ರಕ್ಷಣಾ ಕೆಲಸ ಮಾಡುತ್ತಿದ್ದಾರೆ. ಆಂಧ್ರ ಮತ್ತು ಬಿಹಾರ್ ರಾಜ್ಯದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಮೃತಪಟ್ಟಿರುವ ಒಬ್ಬ ಕಾರ್ಮಿಕರ ಗುರುತು ಸಿಕ್ಕಿದ್ದು, ಆತ ಬಿಹಾರದವರು ಎಂದು ತಿಳಿದುಬಂದಿದೆ” ಎಂದರು.

ಇದನ್ನೂ ಓದಿ: DK Shivakumar : ಮಳೆ ಹಿನ್ನೆಲೆ; ಬಿಬಿಎಂಪಿ ನಿಯಂತ್ರಣಾ ಕಚೇರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ, ಪರಿಶೀಲನೆ

“ಕಟ್ಟಡ ನಿರ್ಮಾಣ ಗುತ್ತಿಗೆದಾರ, ನಿವೇಶನದ ಮಾಲೀಕ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ರಕ್ಷಣೆ ಕಾರ್ಯ ಮುಗಿದ ನಂತರ ಕಾರ್ಮಿಕರಿಗೆ ಪರಿಹಾರವನ್ನು ಕೊಡಲಾಗುವುದು” ಎಂದರು.