ತಿರುವನಂತಪುರಂ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆ (Wayanad Bypolls)ಗೆ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆ ಕಳೆಗಟ್ಟಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ರಾಜೀನಾಮೆಯಿಂದ ತೆರವಾದ ಈ ಕ್ಷೇತ್ರಕ್ಕೆ ಯುಡಿಎಫ್ (UDF) ಅಭ್ಯರ್ಥಿಯಾಗಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಬುಧವಾರ (ಅಕ್ಟೋಬರ್ 23) ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ನಾಮಪತ್ರ ಸಲ್ಲಿಕೆ ಅಂಗವಾಗಿ ಆಯೋಜಿಸಿದ್ದ ರೋಡ್ ಶೋ ಮತ್ತು ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ʼʼಸುಮಾರು 35 ವರ್ಷಗಳಿಂದ ವಿವಿಧ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೆ. ಆದರೆ ಇದೇ ಮೊದಲ ಬಾರಿಗೆ ನನಗಾಗಿ ಪ್ರಚಾರ ನಡೆಸುತ್ತಿದ್ದೇನೆʼʼ ಎಂದು ಹೇಳಿದ್ದಾರೆ.
ʼʼ17 ವರ್ಷದವಳಿದ್ದಾಗ ನಾನು ಮೊದಲ ಬಾರಿಗೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾದೆ. ಆ ವೇಳೆ ತಂದೆಗಾಗಿ (ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ) ಪ್ರಚಾರ ನಡೆಸಿದ್ದೆ. ಬಳಿಕ ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕ ಪರ ಪ್ರಚಾರ ಕೈಗೊಂಡಿದ್ದೇನೆ. ಸುಮಾರು 35 ವರ್ಷಗಳಿಂದ ವಿವಿಧ ಪ್ರಚಾರ ಅಭಿಯಾನಗಳಲ್ಲಿ ಪಾಲ್ಗೊಂಡ ನಾನು ಇದೇ ಮೊದಲ ಬಾರಿಗೆ ನನಗಾಗಿ ವೋಟು ಕೇಳುತ್ತಿದ್ದೇನೆ. ಇದೊಂದು ಹೊಸತನದ ಅನುಭವʼʼ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಅವರು ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಕೆಲವು ದಿನಗಳ ಹಿಂದೆ ಇಡೀ ದೇಶವನ್ನೇ ನಡುಗಿಸಿದ್ದ ವಯನಾಡು ಭೂಕುಸಿತ ಪ್ರದೇಶಕ್ಕೆ ಸಹೋದರ ರಾಹುಲ್ ಗಾಂಧಿಯೊಂದಿಗೆ ಭೇಟಿ ನೀಡಿದ್ದಾಗಿ ಪ್ರಿಯಾಂಕಾ ಗಾಂಧಿ ನೆನಪಿಸಿಕೊಂಡಿದ್ದಾರೆ. ದುರಂತ ಪೀಡಿತ ಮುಂಡಕ್ಕೈ ಮತ್ತು ಚೂರಲ್‌ಮಲ ಪ್ರದೇಶಗಳಿಗೆ ತೆರಳಿದ್ದಾಗಿ ತಿಳಿಸಿದ್ದಾರೆ.
Congress General Secretary Smt. @priyankagandhi ji signed her nomination papers in the presence of local Congress leaders.
— Congress (@INCIndia) October 23, 2024
She will shortly begin her roadshow in Kalpetta to thank and seek the blessings of the lovely people of Wayanad. pic.twitter.com/Cu5CBkDHVa
“ವಿನಾಶವನ್ನು ಕಣ್ಣಾರೆ ಕಂಡು ಮನಸ್ಸು ಭಾರವಾಯಿತು. ತಮ್ಮ ಕುಟುಂಬಗಳನ್ನು ಕಳೆದುಕೊಂಡ ಮಕ್ಕಳನ್ನು ನೋಡಿದೆ. ಮಕ್ಕಳನ್ನು ಕಳೆದುಕೊಂಡ ತಾಯಂದಿರನ್ನು ನಾನು ಭೇಟಿಯಾದೆ. ಇಡೀ ಜೀವನವು ಕೊಚ್ಚಿಹೋದ ಜನರ ಜತೆ ಮಾತುಕತೆ ನಡೆಸಿದೆ. ನಾನು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯೂ ಪರಸ್ಪರ ಸಹಾಯ ಮಾಡುವಲ್ಲಿ ನಿರತರಾಗಿದ್ದರು. ಅವರು ಧೈರ್ಯದಿಂದ ಮತ್ತು ಸಹಾನುಭೂತಿಯಿಂದ ಪರಸ್ಪರ ನೆರವಿಗೆ ನಿಂತಿದ್ದರು. ಇದು ನನ್ನ ಮೇಲೆ ಪರಿಣಾಮ ಬೀರಿದೆ. ನಿಮ್ಮ ಸಮುದಾಯದ ಭಾಗವಾಗಿರುವುದಕ್ಕೆ ಸಂತಸವಾಗಿದೆʼʼ ಎಂದು ಪ್ರಿಯಾಂಕಾ ಗಾಂಧಿ ಭಾವುಕರಾಗಿ ನುಡಿದಿದ್ದಾರೆ.
When I was 17 years old, I campaigned for the first time for my father in 1989. It's now 35 years, I have campaigned for my mother, my brother and many of my colleagues in different elections.
— Congress (@INCIndia) October 23, 2024
But this is the first time I'm campaigning for myself. I'm deeply grateful to… pic.twitter.com/6A7JhOPB8C
ರಾಹುಲ್ ಗಾಂಧಿ ಹೇಳಿದ್ದೇನು?
ವಯನಾಡು ನನಗಾಗಿ ಏನು ಮಾಡಿದೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. “ವಯನಾಡು ಲೋಕಸಭೆ ಇಬ್ಬರು ಸಂಸದರನ್ನು ಹೊಂದಲಿದೆ. ಅಧಿಕೃತ ಮತ್ತು ಅನಧಿಕೃತ ಸಂಸದರಾದ ನಾವು ನಿಮ್ಮ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಎತ್ತುತ್ತೇವೆ” ಎಂದು ಅವರು ಭರವಸೆ ನೀಡಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿರುವ ಉತ್ತರ ಪ್ರದೇಶದ ರಾಯ್ ಬರೇಲಿ ಮತ್ತು ವಯನಾಡು ಎರಡೂ ಕಡೆ ರಾಹುಲ್ ಗಾಂಧಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಜಯಭೇರಿ ಭಾರಿಸಿದ್ದರು. ಕೊನೆಗೆ ಅನಿವಾರ್ಯವಾಗಿ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ಇಲ್ಲಿ ಉಪ ಚುನಾವಣೆ ಘೋಷಿಸಲಾಗಿದೆ. ನವೆಂಬರ್ 13ರಂದು ಮತದಾನ ನಡೆದು ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.
ಈ ಸುದ್ದಿಯನ್ನೂ ಓದಿ: Wayanad Bypolls: ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಎದುರಿಸಲು ಸಜ್ಜಾದ ಬಿಜೆಪಿಯ ನವ್ಯಾ ಹರಿದಾಸ್ ಹಿನ್ನೆಲೆ ಕುತೂಹಲಕರ!