Friday, 22nd November 2024

Bomb threat : ವಿಮಾನಗಳ ಮೇಲೆ ಬಾಂಬ್‌ ಬೆದರಿಕೆ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ ಬಳಕೆ

Bomb threat

ನವದೆಹಲಿ: ಕಳೆದ ಕೆಲ ದಿನಗಳಿಂದ ವಿಮಾನಗಳಿಗೆ ನಿರಂತರವಾಗಿ ಬರುತ್ತಿರುವ ಬಾಂಬ್‌ ಬೆದರಿಕೆ (Bomb threat) ಸಂದೇಶದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ (Social media) ಪೋಸ್ಟ್‌ ಕುರಿತು ಚರ್ಚಿಸಲು ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಸಂಕೇತ್ ಎಸ್ ಭೋಂಡ್ವೆ ಅಧ್ಯಕ್ಷತೆಯಲ್ಲಿ ಮಂಗಳವಾರ ಸಂಜೆ ವರ್ಚುವಲ್‌ ಸಭೆ ನಡೆಯಿತು. ಸಭೆಯಲ್ಲಿ ಏರ್‌ ಲೈನ್‌ ಅಧಿಕಾರಿಗಳು ಹಾಗೂ ಏರ್‌ ಇಂಡಿಯಾ ಮತ್ತು ವಿಸ್ತಾರಾದ ಅಧಿಕಾರಿಗಳು ಭಾಗವಹಿಸಿದ್ದರು.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು(Union Ministry of Electronics and Information Technology ) ಸಾಮಾಜಿಕ ಮಾಧ್ಯಮ ಎಕ್ಸ್‌ (X) ಮೇಲೆ ಬುಧವಾರ ಆಕ್ರೋಶ ವ್ಯಕ್ತಪಡಿಸಿದೆ. ಬೆದರಿಕೆ ಸಂದೇಶಗಳು ಎಕ್ಸ್‌ ಮೂಲಕವೇ ಬರುತ್ತಿದ್ದು, ಅಂತಹ ಖಾತೆಯ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದೆ. ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ತಡೆಗಟ್ಟಲು ಕೃತಕ ಬುದ್ಧಿಮತ್ತೆ (Artificial intelligence) ಬಳಸಲು ಸೂಚಿಸಲಾಯಿತು. ಸಾಮಾಜಿಕ ಮಾಧ್ಯಮದ ಉನ್ನತ ಅಧಿಕಾರಿಗಳಿಗೆ ಯಾವುದೇ ಬೆದರಿಕೆ ಅಥವಾ ಅನುಮಾನಾಸ್ಪದ ಪೋಸ್ಟಗಳು ಕಂಡ ಕೂಡಲೇ ಕ್ರಮ ಕೈಗೊಳ್ಳಲು ತಿಳಿಸಿದೆ. ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ, ಭಾರತೀಯ ವಿಮಾನ ಸಂಸ್ಥೆಯ 170 ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ.

ಬೆದರಿಕೆ ಹಾಕುವವರ ವಿರುದ್ಧಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳಲು ಚಿಂತನೆ ನಡೆಸಿದೆ. ಅಪರಾಧಿಗಳನ್ನು ನೊ-ಫ್ಲೈ ಪಟ್ಟಿಗೆ ಸೇರಿಸಲು ಯೋಜನೆ ನಡೆಸಲಾಗುತ್ತಿದೆ. (ವಿಮಾನದಲ್ಲಿ ಪ್ರಯಾಣಿಸುವ ವೇಳೆ ದುರ್ವರ್ತನೆ ತೋರುವ, ಜೀವಬೆದರಿಕೆ ಹಾಕುವ ಪ್ರಯಾಣಿಕರಿಗೆ ಎರಡು ವರ್ಷ ನಿಷೇಧ ವಿಧಿಸುವುದಕ್ಕೆ ನೋ ಫ್ಲೈ ಲಿಸ್ಟ್ ಎಂದು ಹೇಳುತ್ತಾರೆ.)

ಈ ಸುದ್ದಿಯನ್ನೂ ಓದಿ : Bomb threats : ವಿಮಾನಗಳಿಗೆ ಬಾಂಬ್‌ ಬೆದರಿಕೆ ಹಾಕಿದರೆ ವಿಚಾರಣೆಯಿಲ್ಲದೆ ಕಠಿಣ ಶಿಕ್ಷೆ; ಅಧಿಕಾರಿಗಳ ಎಚ್ಚರಿಕೆ

1982 ರ ವಿಮಾನಯಾನ ಸುರಕ್ಷತಾ ಕಾಯ್ದೆಗೆ (SUASCA) ತಿದ್ದುಪಡಿ ಪ್ರಸ್ತಾಪಿಸಲಾಗಿದೆ. ಆ ಮೂಲಕ ಅಪರಾಧಿಗಳನ್ನು ನ್ಯಾಯಾಲಯ ಆದೇಶವಿಲ್ಲದೆ ಬಂಧಿಸಿ ತನಿಖೆ ಪ್ರಾರಂಭಿಸಬಹುದು. ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕುವ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ವಿಮಾನದ ಭದ್ರತಾ ನಿಯಮಗಳಲ್ಲಿ ಬದಲಾವಣೆಗಳನ್ನು ತರಲು ಕಾನೂನು ರೂಪಿಸಲಾಗುತ್ತಿದೆ.

ದಿಲ್ಲಿ ಪೊಲೀಸರು ಕಳೆದ ಎಂಟು ದಿನಗಳಲ್ಲಿ ಅಕಾಸಾ, ಏರ್ ಇಂಡಿಯಾ, ಇಂಡಿಗೋ, ಮತ್ತು ವಿಸ್ತಾರಾ ಸಂಸ್ಥೆಗಳು 90ಕ್ಕೂ ಹೆಚ್ಚು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಹಾಕಿದ ಸಂಬಂಧ ಎಂಟು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ನಿರಂತರ ಬೆದರಿಕೆಯಿಂದಾಗಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಬೆದರಿಕೆ ಬಂದಿದ್ದು, ಕಮಾಂಡರ್‌ ಸೆಂಟರ್‌ ಸ್ಫೋಟಿಸುವುದಾಗಿ ಟ್ವೀಟ್‌ ಮೂಲಕ ಬೆದರಿಕೆ ಹಾಕಲಾಗಿದೆ. ಮಂಗಳೂರು-ದುಬೈ ತಿರುವನಂತಪುರಂ- ಮಸ್ಕತ್‌ ಸೇರಿದಂತೆ ವಿವಿಧ ವಿಮಾನಗಳಲ್ಲಿ ತೆರಳುವ ವಿಮಾನಗಳಲ್ಲಿ ಬಾಂಬರ್‌ಗಳಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧಿಸುತ್ತಿದ್ದು, ಹೆಚ್ಚಿನ ತನಿಖೆಯಿಂದ ಮಾಹಿತಿ ಹೊರಬರಬೇಕು.