Wednesday, 23rd October 2024

BRICS Summit: ಬ್ರಿಕ್ಸ್‌ ಗಾಲಾ ಸಂಗೀತ ಕಾರ್ಯಕ್ರಮದಲ್ಲಿ ವಿಶ್ವ ನಾಯಕರ ಗಮನ ಸೆಳೆದ ʼಕಳಿಂಕʼ; ಈ ಹಾಡಿಗೆ ಇದೆ ಬಾಲಿವುಡ್‌ ಕನೆಕ್ಷನ್‌

BRICS Summit

ಮಾಸ್ಕೋ: ರಷ್ಯಾದ ಕಜಾನ್‌ನಲ್ಲಿ 16ನೇ ಬ್ರಿಕ್ಸ್ ಶೃಂಗಸಭೆ (BRICS Summit) ಆರಂಭವಾಗಿದೆ. ಭಾರತ, ಬ್ರೆಜಿಲ್‌, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ನಾಯಕರು ಈ ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಬ್ರಿಕ್ಸ್ ರಾಷ್ಟ್ರಗಳ ನಿಯೋಗಗಳ ನಾಯಕರನ್ನು ಮಂಗಳವಾರ (ಅಕ್ಟೋಬರ್‌ 22) ಗಾಲಾ ಸಂಗೀತ ಕಾರ್ಯಕ್ರಮ (Gala concert)ಕ್ಕೆ ಕರೆದೊಯ್ಯಲಾಯಿತು. ಈ ಕಾರ್ಯಕ್ರಮ ನಾಯಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ರಷ್ಯಾದ ಜನಪ್ರಿಯ ಹಾಡು ಕಳಿಂಕ (Kalinka)ದ ಪ್ರದರ್ಶನವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಮೆಚ್ಚಿಕೊಂಡಿದ್ದಾರೆ. ಇದೊಂದು ರಷ್ಯಾದ ಜಾನಪದ ಹಾಡಾಗಿದ್ದು, 1860ರಲ್ಲಿ ಇವಾನ್ ಲಾರಿಯೊನೊವ್ ಸಂಗೀತ ಸಂಯೋಜಿಸಿದ್ದಾರೆ. ಈಗ ಇದು ಜಾಗತಿಕವಾಗಿ ಬಹು ಜನಪ್ರಿಯವಾಗಿದೆ.

ಕಳಿಂಕದ ಹಿನ್ನೆಲೆ

ನೈಋತ್ಯ ರಷ್ಯಾದ ನಗರವಾದ ಸರಟೋವ್‌ನಲ್ಲಿ ನಡೆಯುತ್ತಿದ್ದ ನಾಟಕ ಪ್ರದರ್ಶನಕ್ಕಾಗಿ ಮೊದಲು ಈ ಹಾಡನ್ನು ರಚಿಸಲಾಯಿತು. ಈ ಹಾಡು ಸ್ನೋ ಬಾಲ್ ಮರದ ಕುರಿತಾಗಿದ್ದು, ಆಕರ್ಷಕ ಪಲ್ಲವಿಯನ್ನು ಹೊಂದಿದೆ. ಇದು 1 ಶತಮಾನಕ್ಕೂ ಹೆಚ್ಚು ಕಾಲ ಪ್ರೇಕ್ಷಕರನ್ನು ಆಕರ್ಷಿಸಿದೆ. ಇದರಲ್ಲಿನ ಸಾಹಿತ್ಯವು ಪ್ರೀತಿ ಮತ್ತು ಪ್ರಕೃತಿಯ ಮೇಲೆ ಬೆಳಕು ಚೆಲ್ಲುತ್ತದೆ. ಸೋವಿಯತ್ ಸಶಸ್ತ್ರ ಪಡೆಗಳ ಅಧಿಕೃತ ಗಾಯಕ ವೃಂದವಾದ ಅಲೆಕ್ಸಾಂಡ್ರೊವ್ ಎನ್ಸೆಂಬಲ್ ಈ ಹಾಡನ್ನು ಅಳವಡಿಸಿಕೊಂಡ ಬಳಿಕ ʼಕಳಿಂಕʼ 2ನೇ ಮಹಾಯುದ್ಧದ ವೇಳೆ ಮತ್ತಷ್ಟು ಜನಪ್ರಿಯತೆ ಪಡೆಯಿತು. ಇದು ರಾಷ್ಟ್ರೀಯ ಹೆಮ್ಮೆಯ ಗೀತೆಯಾಗಿ ಬೆಳೆಸಲು ಸಹಾಯ ಮಾಡಿತು. ಚಲನಚಿತ್ರಗಳು ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಹಾಡನ್ನು ಹೆಚ್ಚಾಗಿ ಬಳಸಲಾಗುತ್ತಿದೆ. 2018ರಲ್ಲಿ ಮಾಸ್ಕೋದಲ್ಲಿ ನಡೆದ ಫಿಫಾ ವಿಶ್ವಕಪ್‌ ಸಮಾರೋಪ ಸಮಾರಂಭದಲ್ಲಿ ʼಕಳಿಂಕʼವನ್ನು ಪ್ರದರ್ಶಿಸಲಾಗಿತ್ತು.

ಬಾಲಿವುಡ್‌ ಜತೆಗೂ ಇದೆ ಸಂಬಂಧ

ಈ ಹಾಡಿನ ರಾಗವು ಟೆಟ್ರಿಸ್ ಮತ್ತು ಪೇಡೇ 2ನಂತಹ ವಿಡಿಯೊ ಗೇಮ್‌ಗಳಲ್ಲಿಯೂ ಕಾಣಿಸಿಕೊಂಡಿದೆ. ಜತೆಗೆ ಬಾಲಿವುಡ್‌ ಚಿತ್ರವೊಂದರ ಹಾಡಿಗೂ ಸ್ಫೂರ್ತಿಯಾಗಿದೆ. ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್ ಅಭಿನಯದ, 2011ರಲ್ಲಿ ತೆರೆಕಂಡ ʼ7 ಖೂನ್ ಮಾಫ್ʼ ಹಿಂದಿ ಚಿತ್ರದ ʼಡಾರ್ಲಿಂಗ್ʼ ಹಾಡಿಗೂ ʼಕಳಿಂಕʼವೇ ಸ್ಫೂರ್ತಿಯಾಗಿತ್ತು.

ಕೃಷ್ಣ ಭಜನೆಯೊಂದಿಗೆ ಮೋದಿಯನ್ನು ಸ್ವಾಗತಿಸಿದ ರಷ್ಯನ್ನರು

ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾಕ್ಕೆ ತೆರಳಿದ ಪ್ರದಾನಿ ಮೋದಿ ಅವರನ್ನು ಕೃಷ್ಣ ಭಜನೆಯೊಂದಿಗೆ ಸ್ವಾಗತಿಸಲಾಗಿತ್ತು. ಸದ್ಯ ಈ ವಿಡಿಯೊ ವೈರಲ್‌ ಆಗಿದೆ. ಸೀರೆ ಸುತ್ತಿ, ಪಂಚೆ ತೊಟ್ಟು, ಸಾಂಪ್ರದಾಯಿಕ ಬಟ್ಟೆಯಲ್ಲಿ ಕಾಣಿಸಿಕೊಂಡ ರಷ್ಯನ್ನರು ಕೃಷ್ಣನ ಭಜನೆ ಹಾಡುತ್ತ, ಭಾರತದ ಬಾವುಟ ಪ್ರದರ್ಶಿಸಿ, ಕೈ ಮುಗಿದುಕೊಂಡು ಮೋದಿ ಅವರನ್ನು ಬರ ಮಾಡಿಕೊಂಡಿದ್ದರು. ಪ್ರಧಾನಿ ಮೋದಿ ಕೆಲವು ಹೊತ್ತು ಅಲ್ಲೇ ನಿಂತು ನಸುನಗುತ್ತಾ ಅವರೊಂದಿಗೆ ಸಮಯ ಕಳೆದರು. ಬಳಿಕ ಮೋದಿ ಕೂಡ ಕೈ ಮುಗಿದು ಅವರಿಗೆ ವಂದಿಸಿದರು. ಸದ್ಯ ಈ ವಿಡಿಯೊ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Modi Visit Russia : ರಷ್ಯಾ- ಉಕ್ರೇನ್‌ ಸಂಘರ್ಷಕ್ಕೆ ಶಾಂತಿಯುತ ಪರಿಹಾರ; ಪುಟಿನ್‌ಗೆ ಪ್ರಧಾನಿ ಮೋದಿ ಭರವಸೆ