ಹಣಕಾಸಿನ ವಂಚನೆಗಾಗಿ (Financial fraud) ಸೈಬರ್ ವಂಚಕರು (Cyber frauds) ಹೆಚ್ಚಾಗಿ ಬಳಸುತ್ತಿದ್ದ ಅಂತಾರಾಷ್ಟ್ರೀಯ ಕರೆಗಳನ್ನು (Scam Calls) ಗುರುತಿಸಲು ಮತ್ತು ನಿರ್ಬಂಧಿಸಲು ಭಾರತ ಸರ್ಕಾರವು (Indian Government) ಸ್ಪ್ಯಾಮ್ ಕರೆಗಳನ್ನು ಪತ್ತೆ ಹಚ್ಚುವ ವ್ಯವಸ್ಥೆಯನ್ನು ಅಕ್ಟೋಬರ್ 22ರಿಂದ ಪ್ರಾರಂಭಿಸಿದೆ.
ಇಂಟರ್ ನ್ಯಾಷನಲ್ ಇನ್ ಕಮಿಂಗ್ ಸ್ಪೂಫ್ಡ್ ಕಾಲ್ಸ್ ಪ್ರಿವೆನ್ಷನ್ ಸಿಸ್ಟಮ್ ಎಂಬ ಹೊಸ ವ್ಯವಸ್ಥೆಗೆ ಚಾಲನೆ ನೀಡಿದ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಇದು ಸುರಕ್ಷಿತ ಡಿಜಿಟಲ್ ವ್ಯವಸ್ಥೆಯನ್ನು ನಿರ್ಮಿಸುವ ಮತ್ತು ಸೈಬರ್ ಅಪರಾಧದಿಂದ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆಯ ಪ್ರಯತ್ನಗಳ ಮೈಲಿಗಲ್ಲು ಎಂದು ಹೇಳಿದರು.
ಯಾವ ರೀತಿಯಲ್ಲಿ ನಡೆಯುತ್ತದೆ ವಂಚನೆ?
ಇಂಟರ್ ನ್ಯಾಷನಲ್ ಇನ್ ಕಮಿಂಗ್ ಸ್ಪೂಫ್ಡ್ ಕಾಲ್ಸ್ ಪ್ರಿವೆನ್ಷನ್ ಸಿಸ್ಟಮ್ ವ್ಯವಸ್ಥೆಯು ವಂಚನೆ ಕರೆಗಳಿಂದ ನಾಗರಿಕರನ್ನು ರಕ್ಷಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರನ್ನು ವಂಚಿಸಲು ಸೈಬರ್ ವಂಚಕರು ಹೊಸಹೊಸ ವಿಧಾನಗಳನ್ನು ಬಳಸುತ್ತಿದ್ದಾರೆ. ಇದರಲ್ಲಿ ಸ್ಥಳೀಯ ಭಾರತೀಯ ಸಂಖ್ಯೆಯು ಕೂಡ ಒಂದು. ಭಾರತೀಯ ಮೊಬೈಲ್ ಸಂಖ್ಯೆಯ ಮಾದರಿಯ (+91-xxxxxxxxx) ಅಂತಾರಾಷ್ಟ್ರೀಯ ಕರೆ ಗುರುತನ್ನು ಕೂಡ ಭಾರತೀಯ ದೂರ ಸಂಪರ್ಕ ಇಲಾಖೆಯು ಪರಿಚಯಿಸಿರುವ ಹೊಸ ತಂತ್ರಜ್ಞಾನವು ಪತ್ತೆ ಹಚ್ಚಲಿದೆ. ಈ ಮೊಬೈಲ್ ಸಂಖ್ಯೆಗಳು ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಭಾರತದಿಂದಲೇ ಇದನ್ನು ನಿರ್ಮಿಸಲಾಗಿರುತ್ತದೆ.
ಸರ್ಕಾರಿ ಅಧಿಕಾರಿಗಳು, ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುವ ಸೈಬರ್ ಕಳ್ಳರು ವಯಕ್ತಿಕ ಮಾಹಿತಿಗಳನ್ನು ಕದಿಯಲು ಭಾರತೀಯ ಮೊಬೈಲ್ ಸಂಖ್ಯೆಯ ಮಾದರಿಯ ಸಂಖ್ಯೆಯಿಂದ ಕರೆ ಮಾಡುವುದು ಹೊಸ ತಂತ್ರ. ಕಾನೂನು ಬಾಹಿರ ಚಟುವಟಿಕೆಯ ಆರೋಪದಲ್ಲಿ ಸುಳ್ಳು ಬಂಧನದ ಬೆದರಿಕೆ ಹಾಕುತ್ತಾರೆ. ಅವರಿಗೆ ಹೆದರಿ ಅನೇಕರು ರಾಜಿ ಮಾಡಿಕೊಳ್ಳಲು ಮುಂದಾಗಿ ಸಾಕಷ್ಟು ಹಣವನ್ನು ಕಳೆದುಕೊಳ್ಳುತ್ತಾರೆ.
ಇದರಲ್ಲಿ ಹೆಚ್ಚಾಗಿ ಸೈಬರ್ ಕ್ರೈಮ್, ದೂರ ಸಂಪರ್ಕ ಇಲಾಖೆ ಅಧಿಕಾರಿಗಳು ಮೊಬೈಲ್ ಸಂಖ್ಯೆಗಳ ಸಂಪರ್ಕ ಕಡಿತಗೊಳಿಸುತ್ತಾರೆ, ಬಂಧನಕ್ಕೆ ಒಳಗಾಗಬಹುದು, ಕೊರಿಯರ್‌ನಲ್ಲಿ ಡ್ರಗ್ಸ್, ಮಾದಕ ದ್ರವ್ಯ ಸಿಕ್ಕಿದೆ, ಪೊಲೀಸ್ ಅಧಿಕಾರಿಗಳು, ಐಟಿ ಅಧಿಕಾರಿಗಳು, ಸೆಕ್ಸ್ ರಾಕೆಟ್‌ನಲ್ಲಿ ಬಂಧನಕ್ಕೊಳಗಾಗುವ ಬೆದರಿಕೆಯನ್ನು ಹಾಕಲಾಗುತ್ತದೆ.
ಹೇಗೆ ಕೆಲಸ ಮಾಡುತ್ತದೆ?
ವಂಚಕರು ವ್ಯಕ್ತಿಗಳನ್ನು ತಲುಪುವ ಮೊದಲೇ ಇಂಟರ್ ನ್ಯಾಷನಲ್ ಇನ್ ಕಮಿಂಗ್ ಸ್ಪೂಫ್ಡ್ ಕಾಲ್ಸ್ ಪ್ರಿವೆನ್ಷನ್ ಸಿಸ್ಟಮ್ ವ್ಯವಸ್ಥೆಯು ಅಂತಹ ಸಂಖ್ಯೆಗಳನ್ನು ಗುರುತಿಸುತ್ತದೆ ಮತ್ತು ನಿರ್ಬಂಧಿಸುತ್ತದೆ. ಸರ್ಕಾರದ ಮಾಹಿತಿ ಪ್ರಕಾರ ಈ ವ್ಯವಸ್ಥೆಯು ಕಳೆದ 24 ಗಂಟೆಗಳಲ್ಲಿ ಸುಮಾರು 1.35 ಕೋಟಿ ಕರೆಗಳನ್ನು ವಂಚನೆಯ ಕರೆಗಳೆಂದು ಗುರುತಿಸಿದೆ ಮತ್ತು ನಿರ್ಬಂಧಿಸಿದೆ. ಇದು ಒಳಬರುವ ಎಲ್ಲಾ ಅಂತಾರಾಷ್ಟ್ರೀಯ ಕರೆಗಳಲ್ಲಿ ಶೇ. 90ರಷ್ಟಾಗಿದೆ.
Indian Railways: ಭಾರತೀಯ ರೈಲ್ವೇಯಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದ ಜೆನ್ ಎಐ
ಭಾರತೀಯ ಟೆಲಿಕಾಂ ವ್ಯವಸ್ಥೆಯಲ್ಲಿ ಈ ಹೊಸ ಸಿಸ್ಟಮ್ ನ ಅನುಷ್ಠಾನದೊಂದಿಗೆ +91-xxxxxxx ಸಂಖ್ಯೆಯಿಂದ ಬರಬಹುದಾದ ವಂಚನೆಯ ಕರೆಗಳಲ್ಲೂ ಸಾಕಷ್ಟು ಕಡಿತವಾಗುವ ನಿರೀಕ್ಷೆ ಇದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.