Wednesday, 23rd October 2024

Gruha Arogya Scheme: ಗೃಹ ಆರೋಗ್ಯ ಯೋಜನೆಗೆ ಮುಖ್ಯಮಂತ್ರಿಯಿಂದ ಅ.24ರಂದು ಚಾಲನೆ

Gruha Arogya Scheme

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಆರೋಗ್ಯ ಯೋಜನೆಗೆ (Gruha Arogya Scheme) ಕ್ಷಣಗಣನೆ ಆರಂಭವಾಗಿದೆ. ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆ ವಿಚಾರದಲ್ಲಿ ಒಂದು ದೂರದೃಷ್ಟಿಯ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao), ಇದೀಗ ‘ಗೃಹ ಆರೋಗ್ಯ’ ಹೆಸರಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅ.24 ರಂದು ಗುರುವಾರ ಯೋಜನೆಗೆ ಚಾಲನೆ ನೀಡಲಿದ್ದು, ಕೋಲಾರ ಜಿಲ್ಲೆಯಿಂದ ಯೋಜನೆ ಆರಂಭವಾಗಿ, ಜನವರಿ ತಿಂಗಳಿನಲ್ಲಿ ರಾಜ್ಯಾದ್ಯಂತ ಯೋಜನೆ ಜಾರಿಗೆ ಬರಲಿದೆ.

ಅಸಾಂಕ್ರಾಮಿಕ ರೋಗಗಳನ್ನು ಹತೋಟಿಗೆ ತರುವುದು ಗೃಹ ಆರೋಗ್ಯ ಯೋಜನೆಯ ಮುಖ್ಯ ಗುರಿಯಾಗಿದೆ. ದೇಶದಲ್ಲಿ ಅಸಾಂಕ್ರಾಮಿಕ ರೋಗಗಳ (NCD) ಹೆಚ್ಚುತ್ತಿವೆ. ವಿಶೇಷವಾಗಿ ಕರ್ನಾಟಕದಲ್ಲಿ ಶೇಕಡಾ 26.9% ರಷ್ಟು ರಕ್ತದೊತ್ತಡ, ಶೇಕಡಾ 15.6% ರಷ್ಟು ಮಧುಮೇಹ ರೋಗಗಳಿಂದ ಜನರು ಬಳಲುತ್ತಿದ್ದು, ಇದರಿಂದ‌ ಉಂಟುಗುತ್ತಿರುವ ಮರಣ ಹಾಗೂ ಅನಾರೋಗ್ಯ ತೊಡಕುಗಳನ್ನು ತಡೆಗಟ್ಟಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗೃಹ ಆರೋಗ್ಯ ಯೋಜನೆಯನ್ನು ಪರಿಚಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | MB Patil: ಕರ್ನಾಟಕ ಪ್ರಗತಿ ಕೇಂದ್ರಿತ ಹೊಸ ಕೈಗಾರಿಕಾ ನೀತಿ ರಚನೆ: ಎಂ.ಬಿ. ಪಾಟೀಲ್‌

ಅಲ್ಲದೇ ರಾಜ್ಯದಲ್ಲಿ ಶೇಕಡಾ 11.5 % ರಷ್ಟು ಬಾಯಿ ಕ್ಯಾನ್ಸರ್; ಶೇಕಡಾ 26 % ರಷ್ಟು ಸ್ತನ ಕ್ಯಾನ್ಸರ್ ಹಾಗೂ ಶೇಕಡಾ 18.3 % ರಷ್ಟು ಗರ್ಭಕಂಠದ ಕ್ಯಾನ್ಸರ್ ರೋಗಗಳಿಂದ ಜನರು ತತ್ತರಿಸುತ್ತಿದ್ದು, ಈ ರೋಗಗಳಿಗೂ ಪರಿಹಾರ ಒದಗಿಸಲು ಗೃಹ ಆರೋಗ್ಯ ಯೋಜನೆಯಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ.

ಹಳ್ಳಿಗಾಡಿನ ಜನರು ರಕ್ತದೊತ್ತಡ, ಮಧುಮೇಹ ರೋಗಗಳ ತಪಾಸಣೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಇದೀಗ ಆರೋಗ್ಯ ಇಲಾಖೆಯನ್ನೇ ಜನರ ಮನೆ ಬಳಿಗೆ ಕಳಿಸುತ್ತಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ನಮ್ಮ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಿದ್ದಾರೆ. ರೋಗಕ್ಕೆ ತುತ್ತಾದವರಿಗೆ ಸೂಕ್ತ ಔಷಧಿಗಳನ್ನು ತಲುಪಿಸಲಾಗುತ್ತದೆ. ನಮ್ಮ ಜನರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು‌. ಆರಂಭಿಕ ಹಂತದಲ್ಲಿ ರಕ್ತದೊತ್ತಡ ಮಧುಮೇಹವನ್ನ ನಮ್ಮ ಜನರು ನಿರ್ಲಕ್ಷಿಸುತ್ತಾರೆ. ಆದರೆ ದೀರ್ಘಾವಧಿಯಲ್ಲಿ ಈ ರೋಗಗಳೇ ಕಿಡ್ನಿ ವೈಫಲ್ಯ, ಹೃದಯಾಘಾತಗಳಿಗೆ ಕಾರಣವಾಗುತ್ತದೆ. ಗೃಹ ಆರೋಗ್ಯದ ಮುಖಾಂತರ ನಾವು ಈಗಲೇ ತಪಾಸಣೆ ನಡೆಸಿ ಔಷಧಿಗಳನ್ನು ಕೊಟ್ಟರೆ ಮುಂದೆ ಆಗುವ ಜೀವಪಾಯಗಳನ್ನ ತಡೆಗಟ್ಟಬಹುದು. ವಿಶೇಷವಾಗಿ ನಮ್ಮ ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಯಲ್ಲಿ ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ ಎಂಬ ಆಶಯವನ್ನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Diwali Bank Hoildays 2024: ಗಮನಿಸಿ; ದೀಪಾವಳಿ ಪ್ರಯುಕ್ತ ಸತತ 3 ದಿನ ಬ್ಯಾಂಕ್‌ಗಳಿಗೆ ರಜೆ: ಇಲ್ಲಿದೆ ವಿವರ

ಏನಿದು ಗೃಹ ಆರೋಗ್ಯ ಯೋಜನೆ?

ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಸುರಕ್ಷಾಣಾಧಿಕಾರಿಗಳು ಸೇರಿದಂತೆ ಆಶಾ ಕಾರ್ಯಕರ್ತೆಯರು ಪ್ರತಿ ಮನೆಗಳಿಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟ ಜನರ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಲಿದ್ದಾರೆ.
ವಾರದಲ್ಲಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ದಿನಕ್ಕೆ 15 ಮನೆಗಳಂತೆ ಭೇಟಿ ನೀಡಿ ತಪಾಸಣೆ ಕಾರ್ಯ ನಡೆಸಲಿದ್ದಾರೆ.
ಬಾಯಿ ಕ್ಯಾನ್ಸರ್, ಮಹಿಳೆಯರ ಗರ್ಭಕಂಠ ಮತ್ತು ಸ್ತನ ಕ್ಯಾನ್ಸ‌ರ್ ಸೇರಿದಂತೆ ಸಹ ಭೇಟಿಯ ಸಂದರ್ಭದಲ್ಲಿ ಪರೀಕ್ಷಿಸಲಾಗುತ್ತದೆ.
ಅಸಾಂಕ್ರಾಮಿಕ ರೋಗಗಳಿಂದ ದೂರವಿರಲು ಜೀವನಶೈಲಿ ಮಾರ್ಪಾಡು ಮಾಡಲು ಆರೋಗ್ಯ ಸಿಬ್ಬಂದಿಯಿಂದ ಸಲಹೆ ನೀಡಲಾಗುತ್ತದೆ.
ರೋಗಗಳಿಗೆ ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷಧಿಗಳನ್ನು ಮಾತ್ರೆ ಪಟ್ಟಿಗೆ ಮುಖಾಂತರ ಜನರ ಬಳಿಗೆ ಒದಗಿಸಲು ಯೋಜನೆಯಲ್ಲಿ ರೂಪ ರೇಷ ಸಿದ್ಧಪಡಿಸಲಾಗಿದೆ.
ಕೋಲಾರ ಜಿಲ್ಲೆಯಿಂದ ಯೋಜನೆ ಆರಂಭವಾಗುತ್ತಿದ್ದು, ಜನವರಿ ತಿಂಗಳ ಬಳಿಕ ರಾಜ್ಯಾದ್ಯಂತ ಯೋಜನೆ ಜಾರಿಗೆ ಬರಲಿದೆ.