ವಿಶ್ವವಾಣಿ ವಿಶೇಷ
ಬೆಂಗಳೂರು: ಇನ್ಫೊಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ, ಜನಪ್ರಿಯ ಲೇಖಕಿ ಮತ್ತು ರಾಜ್ಯಸಭೆ ಸದಸ್ಯೆ ಸುಧಾ ಮೂರ್ತಿ ಅವರು (Sudha Murthy) ತಮಿಳುನಾಡಿನ ಕುಂಭಕೋಣಂನ (Kumbakonam) ಐವನಲ್ಲೂರಿನಲ್ಲಿ ಶಿವನ ದೇವಾಲಯವನ್ನು ವಿಶಿಷ್ಟವಾಗಿ ನಿರ್ಮಿಸಿದ್ದಾರೆ. ವಿಶೇಷವೆಂದರೆ ಇಲ್ಲಿದ್ದ ಶಿವ ಲಿಂಗ ಸುಮಾರು 1,500 ವರ್ಷಗಳಷ್ಟು ಹಳೆಯದು! ಆದರೆ ಸೂಕ್ತ ಮಂದಿರದ ಆಸರೆ ಇಲ್ಲದೆ ಇದು ಪಾಳು ಬಿದ್ದಿತ್ತು (Sudha Murthy Build Temple).
ಶೀ ವೈದ್ಯನಾಥ ಸ್ವಾಮಿ ಹೆಸರಿನ ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಇತ್ತೀಚೆಗೆ ಸುಧಾ ಮೂರ್ತಿಯವರ ನೇತೃತ್ವದಲ್ಲಿ ಅದ್ಧೂರಿಯಾಗಿ ಮತ್ತು ವಿಧಿವತ್ತಾಗಿ ನಡೆಯಿತು. ಈ ಮಂದಿರವನ್ನು ಸುಧಾ ಮೂರ್ತಿ ಅವರು ಸಂಪೂರ್ಣವಾಗಿ ಹೊಸದಾಗಿ ನಿರ್ಮಿಸಿದ್ದಾರೆ. ಇದರ ಜೀರ್ಣೋದ್ಧಾರದ ಸಂದರ್ಭದಲ್ಲಿ ರಥೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿಂದ ನಡೆದವು. ಈ ಸಂದರ್ಭದಲ್ಲಿ ಸ್ಥಳೀಯ ಭಕ್ತರು ಸುಧಾ ಮೂರ್ತಿ ಅವರನ್ನು ಪ್ರೀತಿಯಿಂದ ಸನ್ಮಾನಿಸಿ, ಅವರ ನಿಸ್ವಾರ್ಥ ಸೇವಾ ಕಾರ್ಯವನ್ನು ಶ್ಲಾಘಿಸಿದರು.
“ಕುಂಭಕೋಣಂ ಬಳಿ ಪಾಳು ಬಿದ್ದ ಅವಶೇಷಗಳ ನಡುವೆ ಸಾವಿರಾರು ವರ್ಷಗಳ ಹಿಂದಿನದು ಎನ್ನಲಾದ ಶಿವಲಿಂಗ ಮಾತ್ರ ಇತ್ತು. ಬಹುಶಃ ದೇವಾಲಯ ಧ್ವಂಸವಾಗಿರಬೇಕು. ದೇವಾಲಯವೊಂದನ್ನು ನಿರ್ಮಿಸಬೇಕೆನ್ನುವುದು ನನ್ನ ಬಾಲ್ಯದ ಕನಸಾಗಿತ್ತು. ಅದು ಈಗ ನನಸಾಗಿದೆʼʼ ಎಂದು ಸುಧಾ ಮೂರ್ತಿ ಅವರು ʼವಿಶ್ವವಾಣಿʼಗೆ ಪ್ರತಿಕ್ರಿಯಿಸಿದರು.
ʼʼಕುಂಭಕೋಣಂನಲ್ಲಿ ಪಾಳು ಬಿದ್ದ ದೇವಾಲಯವೊಂದು ಇರುವುದನ್ನು ಅಲ್ಲಿಯ ಜನ ನನ್ನ ಗಮನಕ್ಕೆ ತಂದು ನೆರವು ಕೋರಿದರು. ಸಾವಿರಾರು ವರ್ಷಗಳ ಹಿಂದಿನ ಶಿವಲಿಂಗ ಇರುವುದಾಗಿಯೂ ಅವರು ತಿಳಿಸಿದರು. ನಾನು ಅಲ್ಲಿ ಹೋಗಿ ನೋಡಿದಾಗ ಶಿವಲಿಂಗ ಬಿಟ್ಟು ಬೇರೇನೂ ಇರಲಿಲ್ಲ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಅಲ್ಲಿ ದೇವಾಲಯ ನಿರ್ಮಿಸಿದ್ದೇನೆ. ನಿರ್ಮಾಣಕ್ಕೆ ಸುಮಾರು ಒಂದು ವರ್ಷ ಹಿಡಿಯಿತು. ಪುರಾತನ ದೇವಾಲಯದ ಮಾದರಿಯಲ್ಲಿ ಇದನ್ನು ವಿಶಿಷ್ಟವಾಗಿ ನಿರ್ಮಿಸಿದ್ದೇವೆʼʼ ಎಂದು ಸುಧಾ ಮೂರ್ತಿ ವಿವರಿಸಿದರು.
ಸುಧಾಮೂರ್ತಿ ಅವರು ದೇಶದ ಅತಿ ಸಿರಿವಂತರ ಸಾಲಿನಲ್ಲಿದ್ದರೂ ಅತ್ಯಂತ ಸರಳತೆ ಮತ್ತು ಅಪಾರ ಸೇವಾ ಕಾರ್ಯದಿಂದ ಜನರ ಮನ ಗೆದ್ದಿದ್ದಾರೆ. ರಾಜ್ಯದ ಹಲವು ದೇವಸ್ಥಾನಗಳಿಗೆ ಅವರು ವಿಶಿಷ್ಟ ಕೊಡುಗೆ ನೀಡಿದ್ದಾರೆ. ದೇವಸ್ಥಾನಗಳ ಉತ್ಸವದ ಸಂದರ್ಭದಲ್ಲಿ ಸಕ್ರಿಯವಾಗಿ ಸಾಮಾನ್ಯ ಭಕ್ತರಂತೆ ಭಾಗಿಯಾಗುತ್ತಿದ್ದಾರೆ. ಕೆಲವೊಮ್ಮೆ ಕೆಲಸಗಾರರ ಜತೆ ಕುಳಿತುಕೊಂಡು ಅಡುಗೆಗೆ ತರಕಾರಿ ಕೊಚ್ಚಿ ಕೊಡುವ ಕೆಲಸವನ್ನೂ ಮಾಡಿದ್ದಾರೆ. ಸಾವಿರ ವರ್ಷ ಇತಿಹಾಸದ ಮಂದಿರಕ್ಕೆ ಮರು ಜೀವ ಕೊಟ್ಟಿರುವ ಸುಧಾ ಮೂರ್ತಿಯವ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Tirupati Laddu Row: ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಬಳಸುವ ತುಪ್ಪದ ಗುಣಮಟ್ಟ ಪರಿಶೀಲನೆಗೆ ಆದೇಶ