Wednesday, 23rd October 2024

Priyanka Gandhi: 12 ಕೋಟಿ ರೂ. ಆಸ್ತಿಯ ಒಡತಿ ಪ್ರಿಯಾಂಕಾ ಗಾಂಧಿ; ಇಲ್ಲಿದೆ ಕಾಂಗ್ರೆಸ್‌ ನಾಯಕಿ ಘೋಷಿಸಿದ ವಿವರ

ತಿರುವನಂತಪುರಂ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣಾ (Wayanad Bypolls) ಕಣ ರಂಗೇರಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ (Priyanka Gandhi) ಸ್ಪರ್ಧಿಸುತ್ತಿದ್ದಾರೆ. ಬುಧವಾರ (ಅಕ್ಟೋಬರ್‌ 23) ಭರ್ಜರಿ ರೋಡ್‌ ಶೋ ನಡೆಸಿ ನಾಮಪತ್ರ ಸಲ್ಲಿಸಿ, ಎದುರಾಳಿಗಳಿಗೆ ಪ್ರಬಲ ಸ್ಪರ್ಧೆಯ ಸೂಚನೆ ನೀಡಿದ್ದಾರೆ. ಹಲವು ವರ್ಷಗಳಿಂದ ರಾಜಕೀಯದಲ್ಲಿ ಸಕ್ರೀಯವಾಗಿದ್ದರೂ ಇದೇ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಪ್ರಿಯಾಂಕಾ ನಾಮಪತ್ರದಲ್ಲಿ ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಪ್ರಿಯಾಂಕಾ ಒಟ್ಟು 12 ಕೋಟಿ ರೂ. ಆಸ್ತಿಯ ಒಡತಿ ಎನಿಸಿಕೊಂಡೊದ್ದಾರೆ.

ಈ ಸಾಲಿನ (2023-2024) ಆದಾಯ 46.39 ಲಕ್ಷ ರೂ. ಎಂದೂ ಅವರು ಬಹಿರಂಗಪಡಿಸಿದ್ದಾರೆ. ಬಾಡಿಗೆ, ಬ್ಯಾಂಕ್‌ನ ಬಡ್ಡಿ ಮತ್ತು ಇತರ ಹೂಡಿಕೆಗಳಿಂದ ಅವರಿಗೆ ಆದಾಯ ಹರಿದು ಬಂದಿದೆ. 3 ಬ್ಯಾಂಕ್ ಖಾತೆಗಳಲ್ಲಿ ವಿವಿಧ ಮೊತ್ತದ ಠೇವಣಿಗಳು, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಗಳು, ಪಿಪಿಎಫ್, ಪತಿ ರಾಬರ್ಟ್ ವಾದ್ರಾ ಉಡುಗೊರೆಯಾಗಿ ನೀಡಿದ ಹೋಂಡಾ ಸಿಆರ್‌ವಿ ಕಾರು ಮತ್ತು 1.15 ಕೋಟಿ ರೂ. ಮೌಲ್ಯದ 4,400 ಗ್ರಾಂ ಚಿನ್ನ ಸೇರಿದಂತೆ 4.24 ಕೋಟಿ ರೂ.ಗಿಂತ ಹೆಚ್ಚಿನ ಚರಾಸ್ತಿಯನ್ನು ಹೊಂದಿದ್ದಾರೆ ಎಂದು ಪ್ರಿಯಾಂಕಾ ತಮ್ಮ ನಾಮಪತ್ರದ ಜತೆಗೆ ಸಲ್ಲಿಸಿದ ಅಫಿಡವಿತ್‌ನಲ್ಲಿ ತಿಳಿಸಿದ್ದಾರೆ.

ಅವರ ಸ್ಥಿರಾಸ್ತಿ ಮೌಲ್ಯ ಸುಮಾರು 7.74 ಕೋಟಿ ರೂ. ಇದರಲ್ಲಿ ದಿಲ್ಲಿಯ ಮೆಹ್ರೌಲಿಯಲ್ಲಿನ ಕೃಷಿ ಭೂಮಿಯ ಎರಡು ಪಿತ್ರಾರ್ಜಿತ ಆಸ್ತಿಯ ಅರ್ಧ ಷೇರುಗಳು ಮತ್ತು ಅದರಲ್ಲಿರುವ ಫಾರ್ಮ್‌ಹೌಸ್‌ ಕಟ್ಟಡದ ಅರ್ಧ ಪಾಲು ಸೇರಿದೆ. ಇದಲ್ಲದೆ ಅವರು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ವಸತಿ ಆಸ್ತಿಯನ್ನು ಹೊಂದಿದ್ದಾರೆ. ಇದರ ಮೌಲ್ಯ ಪ್ರಸ್ತುತ 5.63 ಕೋಟಿ ರೂ. 15.75 ಲಕ್ಷ ರೂ. ಸಾಲ ಇದೆ ಎಂದು ಅಫಿಡವಿತ್‌ನಲ್ಲಿ ವಿವರಿಸಲಾಗಿದೆ.

ಪ್ರಿಯಾಂಕಾ ತಮ್ಮ ಅಫಿಡವಿತ್‌ನಲ್ಲಿ ತಮ್ಮ ರಾಬರ್ಟ್‌ ವಾದ್ರಾ ಅವರ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರಗಳನ್ನೂ ನೀಡಿದ್ದಾರೆ. ರಾಬರ್ಟ್ ವಾದ್ರಾ 37.9 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 27.64 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಪ್ರಿಯಾಂಕಾ ಗಾಂಧಿ ಇಂಗ್ಲೆಂಡ್‌ನ ಸುಂದರ್ಲ್ಯಾಂಡ್ ವಿಶ್ವವಿದ್ಯಾಲಯದಿಂದ ದೂರಶಿಕ್ಷಣದ ಮೂಲಕ ಬೌದ್ಧ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರದಲ್ಲಿ ಬಿಎ ಆನರ್ಸ್ ಪದವಿ ಪಡೆದಿದ್ದಾರೆ. ಅವರ ವಿರುದ್ಧ ಎರಡು ಎಫ್ಐಆರ್ ದಾಖಲಾಗಿದೆ ಮತ್ತು ಅವರಿಗೆ ಅರಣ್ಯ ಇಲಾಖೆಯ ನೋಟಿಸ್ ಬಂದಿದೆ.

ನಾಮಪತ್ರ ಸಲ್ಲಿಕೆ ವೇಳೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ವಿಪಕ್ಷ ನಾಯ ರಾಹುಲ್‌ ಗಾಂಧಿ ಮತ್ತು ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಹೊರ ಬೀಳಲಿದೆ.

ಈ ಸುದ್ದಿಯನ್ನೂ ಓದಿ: Priyanka Gandhi: 35 ವರ್ಷಗಳಲ್ಲಿ ಇದೇ ಮೊದಲ ಬಾರಿ ನನಗಾಗಿ ಚುನಾವಣಾ ಪ್ರಚಾರ: ಪ್ರಿಯಾಂಕಾ ಗಾಂಧಿ