ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ವಿಮಾನವನ್ನು ಇಳಿಸುವಾಗ (ಲ್ಯಾಂಡ್ ಮಾಡುವಾಗ), ಒಂದು ವೇಳೆ ವಿಮಾನದ ಮುಂದಿನ ಅಥವಾ ಹಿಂದಿನ ಚಕ್ರಗಳು ಬಿಚ್ಚಿಕೊಳ್ಳಲಿಲ್ಲವೆನ್ನಿ, ಆಗ ಪೈಲಟ್ ಹೇಗೆ ರನ್ ವೇ ಮೇಲೆ ವಿಮಾನವನ್ನು ಇಳಿಸುತ್ತಾನೆ? ಈ ಪ್ರಶ್ನೆ ವಿಮಾನ ಪ್ರಯಾಣಿಕರ ತಲೆಯಲ್ಲಿ ಆಗಾಗ ಹಾದುಹೋಗಿ ಭಯ ಮೂಡಿಸುವುದುಂಟು. ನಿಜ, ಅಪರೂಪಕ್ಕೆ ವಿಮಾನದ ಲ್ಯಾಂಡಿಂಗ್ ಗೇರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುವುದುಂಟು.
ಆಗ ವಿಮಾನದ ಚಕ್ರಗಳು ಬಿಚ್ಚಿಕೊಳ್ಳುವುದಿಲ್ಲ. ಅಂಥ ಸಂದರ್ಭದಲ್ಲಿ ಲ್ಯಾಂಡ್ ಮಾಡುವುದು ಹೇಗೆ? ಇದು ನಿಜಕ್ಕೂ ಅತ್ಯಂತ ಮೈನವಿರೇಳಿಸುವ ಅನುಭವವೇ. ಅಂಥ ಸನ್ನಿವೇಶದಲ್ಲಿ ‘ಬೆಲ್ಲಿ ಲ್ಯಾಂಡಿಂಗ್’ ಮಾಡುತ್ತಾರೆ. ನಿಮಗೆ ಗೊತ್ತಿರುವಂತೆ, ಬೆಲ್ಲಿ ಅಂದರೆ ಹೊಟ್ಟೆ. ವಿಮಾನದ ಹೊಟ್ಟೆ ಭಾಗ (ಮಧ್ಯ ಭಾಗ) ರನ್ ವೇ ಮೇಲೆ
ಲ್ಯಾಂಡ್ ಆಗುತ್ತದೆ. ಇದನ್ನು ಊಹಿಸಿಕೊಳ್ಳುವುದೂ ಕಷ್ಟ.
ತಾಂತ್ರಿಕ ದೋಷದಿಂದ ಮುಂದು-ಹಿಂದಿನ ಚಕ್ರಗಳು ಬಿಚ್ಚಿಕೊಳ್ಳದಿದ್ದಾಗ, ಪೈಲಟ್ ವಿಮಾನವನ್ನು ಇಳಿಸಲೇ ಬೇಕು. ಆಗ ಚಕ್ರಗಳು ತೆರೆದುಕೊಳ್ಳುವಂತೆ ದುರಸ್ತಿ ಮಾಡುವ ಸಾಧ್ಯತೆಯೇ ಇಲ್ಲ. ಆಗ ಇರುವ ಏಕೈಕ ಆಯ್ಕೆ ಅಂದರೆ ಬೆಲ್ಲಿ ಲ್ಯಾಂಡಿಂಗ್. ಇದು ಪೈಲಟ್ ಮುಂದಿರುವ ಕೊನೆಯ ಆಯ್ಕೆ.
ಇದು ಅತ್ಯಂತ ಅಪಾಯಕಾರಿ. ವಿಮಾನದ ಹೊಟ್ಟೆಯ ಭಾಗ ರನ್ ವೇಗೆ ಜೋರಾಗಿ ಬಂದು ಅಪ್ಪಳಿಸಿ, ಹೊಟ್ಟೆ ಭಾಗ ಉಜ್ಜುತ್ತಾ ಬಹಳ ದೂರದವರೆಗೆ ಕ್ರಮಿಸುತ್ತದೆ. ಆಗ ಹೊಟ್ಟೆಯ ಭಾಗ ‘ಚರ್ರ್’ ಎಂದು ತಿಕ್ಕುವುದರಿಂದ,
ಭಾರಿ ಘರ್ಷಣೆಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಆ ಸಂದರ್ಭ ದಲ್ಲಿ ವಿಮಾನ ಸ್ವಲ್ಪ ಸಮತೋಲನ ತಪ್ಪಿದರೂ ರೆಕ್ಕೆಗಳು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿರುತ್ತದೆ. ಬೆಲ್ಲಿ ಲ್ಯಾಂಡಿಂಗ್ ಮಾಡುವಾಗ ಹೊಟ್ಟೆಯ
ಭಾಗ ಭೂಮಿಗೆ ಮೊದಲು ತಾಗುವ ಬದಲು, ವಿಮಾನದ ಮೂತಿ ನೆಲಕ್ಕೆ ತಾಕುವ ಸಾಧ್ಯತೆಯೂ ಇದೆ. ಆಗ ವಿಮಾನ ನೆಲದ ಮೇಲೆ ಕಪ್ಪೆಯಂತೆ ಕುಪ್ಪಳಿಸುವುದುಂಟು. ಅದೂ ಅಪಾಯಕಾರಿಯೇ.
ಪೈಲಟ್‌ಗಳು ಲ್ಯಾಂಡ್ ಮಾಡಲು ಸಿದ್ಧರಾದಾಗ, ಎಲ್ಲ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಖಾತ್ರಿಪಡಿಸಿಕೊಳ್ಳುತ್ತಾರೆ. ಆಗ ಚಕ್ರ ಬಿಚ್ಚಿಕೊಳ್ಳುತ್ತಿಲ್ಲ ಎಂಬುದು ಮನವರಿಕೆಯಾಗುತ್ತಿದ್ದಂತೆ, ತಕ್ಷಣ ವಿಮಾನ ಸಂಚಾರ ನಿಯಂತ್ರಣ ಕೇಂದ್ರ(ಎಟಿಸಿ)ಕ್ಕೆ ವಿಷಯವನ್ನು ರವಾನಿಸುತ್ತಾರೆ. ಆಗ ವಿಮಾನದೊಳಗೆ ಮತ್ತು ವಿಮಾನ ನಿಲ್ದಾಣದಲ್ಲಿ ತುರ್ತುಸ್ಥಿತಿಯನ್ನು ಘೋಷಿಸಲಾಗುತ್ತದೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಅಗ್ನಿಶಾಮಕ ವಾಹನ ಗಳು ಸಮರ ಸನ್ನದ್ಧವಾಗುತ್ತವೆ. ಕೆಲವು ವಿಶೇಷ ಸಂದರ್ಭಗಳಲ್ಲಿ ರನ್ ವೇ ಮೇಲೆ ವಿಮಾನದ ಹೊಟ್ಟೆ ಭಾಗ ಅಪ್ಪಳಿಸುವುದಕ್ಕೆ ಅನುಕೂಲವಾಗುವಂತೆ ಸುಮಾರು 200-300 ಮೀಟರ್ ದೂರ ಮೆತ್ತನೆಯ ಹಾಸನ್ನು ಹಾಸ ಲಾಗುತ್ತದೆ.
ಈ ಮಧ್ಯೆ ವಿಮಾನದಲ್ಲಿ ಇಂಧನ ಎಷ್ಟಿದೆ ಎಂಬುದು ಬಹಳ ಮುಖ್ಯ. ವಿಮಾನದಲ್ಲಿ ಹೆಚ್ಚಿನ ಪ್ರಮಾಣದ ಇಂಧನವಿದ್ದರೆ ಆಗಸದಲ್ಲಿಯೇ ಅತ್ಯಂತ ಜಾಗರೂಕವಾಗಿ ಅದನ್ನು ಹೊರಕ್ಕೆ ಚೆಲ್ಲಲಾಗುತ್ತದೆ, ಇಲ್ಲವೇ ಇಂಧನ ಖಾಲಿಯಾಗುವ ತನಕ ವಿಮಾನವನ್ನು ಆಗಸದಲ್ಲಿಯೇ ಗಿರಕಿ ಹೊಡೆಸಲಾಗುತ್ತದೆ. ನೆಲಕ್ಕೆ ತಾಕುವ ದೂರ ಕ್ರಮಿಸುವಷ್ಟು ಮಾತ್ರ ಇಂಧನವನ್ನು ಉಳಿಸಿಕೊಂಡು ವಿಮಾನವು ವೇಗದಲ್ಲಿ ನೆಲಕ್ಕೆ ಇಳಿಯುತ್ತದೆ ಮತ್ತು ಹೊಟ್ಟೆಯ ಭಾಗ ನೆಲಕ್ಕೆ ತಾಕಿ ಮುಂದಕ್ಕೆ ಹೋಗುತ್ತದೆ. ಈ ಸಮಯದಲ್ಲಿ ವಿಮಾನದ ಹಲ್‌ಗೆ (hull ಅಂದ್ರೆ body of the plane) ಹಾನಿಯಾಗುವ ಸಾಧ್ಯತೆ ಹೆಚ್ಚು.
ಇಂಧನ ಖಾಲಿಯಾದಾಗ, ವಿಮಾನದ ಹೊಟ್ಟೆಯ ಭಾಗ ಅಪ್ಪಳಿಸಿ ನೆಲದ ಮೇಲೆ ಉಜ್ಜುತ್ತಾ ಸಾಗಿದರೂ, ಬೆಂಕಿ ಹೊತ್ತಿಕೊಳ್ಳುವುದಿಲ್ಲ. ಒಂದು ವೇಳೆ ಹೊತ್ತಿಕೊಂಡರೂ ಅಗ್ನಿಶಾಮಕ ವಾಹನಗಳು ಸನ್ನದ್ಧ ಸ್ಥಿತಿಯಲ್ಲಿರುತ್ತವೆ. ಪೈಲಟ್‌ನ ಕೌಶಲ, ಪರಿಣತಿ ಮತ್ತು ಅನುಭವ ಬೆಲ್ಲಿ ಲ್ಯಾಂಡಿಂಗ್‌ನ ಯಶಸ್ಸಿಗೆ ಬಹಳ ಮುಖ್ಯ. ಬೆಲ್ಲಿ ಲ್ಯಾಂಡಿಂಗ್ ನಲ್ಲಿ ಪ್ರಯಾಣಿಕರಿಗೆ ಗಾಯಗಳಾಗುವ ಸಾಧ್ಯತೆ ಇರುತ್ತದೆ.
ಬೆಲ್ಲಿ ಲ್ಯಾಂಡ್ ಆಗುತ್ತಿದ್ದಂತೆ, ವಿಮಾನದಿಂದ ಜಾರುಬಂಡಿಯಂಥ ಏಣಿಗಳು ಹೊರಚಾಚುವುದರಿಂದ ಪ್ರಯಾಣಿಕ ರನ್ನು ತುರ್ತು ರಕ್ಷಿಸುವ ಕಾರ್ಯಾಚರಣೆಗೆ ಗಮನ ನೀಡಲಾಗುತ್ತದೆ. ಬೆಲ್ಲಿ ಲ್ಯಾಂಡಿಂಗ್ ಆದ ವಿಮಾನವನ್ನು ಮರಳಿ ಬಳಸುವುದು ಸುರಕ್ಷಿತವಲ್ಲ. ಆದ ಹಾನಿಯ ಪ್ರಮಾಣವನ್ನು ಪರಿಗಣಿಸಿ ಅದನ್ನು ಮರಳಿ ಉಪಯೋಗಿಸುವ ಬಗ್ಗೆ ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: Vishweshwar Bhat Column: ಸಮುದ್ರದ ಮೇಲೆ ಡ್ರೋನ್