ಕಾಡು ದಾರಿ
ಹರೀಶ್ ಕೇರ
ಈ ಸಲ ಬಾಬಾಜಿಯ ಮನೆಗೆ ಹೋದಾಗ ಅವರು ಸಿಟ್ಟು ಮಾಡಿಕೊಂಡಿದ್ದರು. “ಬರುತ್ತೇನೆ ಅಂತ ಹೇಳಿದವನು
ಒಂದು ಗಂಟೆ ತಡವಾಗಿ ಬರುವುದೇನಯ್ಯ?” ಎಂದು ಬೈದರು. ಆದರೆ ಬೆಂಗಳೂರಿನ ಟ್ರಾಫಿಕ್ಕು, ಮಳೆ ಬಂದಾಗ ಅದು ಪಡೆಯುವ ಘೋರರೂಪ, ಗಂಟೆಗಟ್ಟಲೆ ಮಳೆಯಲ್ಲಿ ನೆನೆಯುತ್ತ ಹೋಗಬೇಕಾದಲ್ಲಿಗೆ ತಲುಪುತ್ತೇನೋ ಇಲ್ಲವೋ ಅಥವಾ ಯಾವುದಾದರೂ ಮ್ಯಾನ್‌ಹೋಲ್ ಬಾಯಿ ತೆರೆದು ನುಂಗಿಬಿಡುತ್ತದಾ ಎಂಬ ಆತಂಕ- ಇದ
ನ್ನೆಲ್ಲ ವಿವರಿಸಿದ ಬಳಿಕ ಸುಮ್ಮನಾದರು. ಸುಮ್ಮನಾದರು ಅಂದರೆ ಸುಮ್ಮನಾಗಲಿಲ್ಲ.
ಅಲ್ಲಿಂದಲೇ ಹೊಸ ವಿಷಯಕ್ಕೆ ತೆರೆದುಕೊಂಡರು. ನೋಡು, ಒಂದು ನಗರ ಸಾಯುವುದು ಹೇಗೆ ಗೊತ್ತೆ? ಇಂಥ ಸಣ್ಣ ಸಣ್ಣ ಸಂಗತಿಗಳಿಂದಲೇ ಅದರ ವಿನಾಶ ಶುರುವಾಗುತ್ತದೆ. ಒಬ್ಬ ನಾಗರಿಕ ಸರಿಯಾದ ಸಮಯಕ್ಕೆ ಮನೆ ಅಥವಾ ಕಚೇರಿ ತಲುಪಲು ಸಾಧ್ಯವಾಗುವುದಿಲ್ಲ ಎಂದರೆ ಅದರ ಹಿಂದೆ ಕೆಟ್ಟ ರೋಡುಗಳು, ಅದರ ಹಿಂದೆ ಕಳಪೆ ಕಾಮಗಾರಿ, ಅದರ ಹಿಂದೆ ಭ್ರಷ್ಟ ಕಾಂಟ್ರಾಕ್ಟರುಗಳು ಮತ್ತು ಅಧಿಕಾರಿಗಳು, ಅವರ ಹಿಂದೆ ಪರಮಭ್ರಷ್ಟ
ಮಂತ್ರಿ ಗಳೆಲ್ಲ ಇರುತ್ತಾರೆ.
ಇಲ್ಲಿ ಆರು ಅಂತಸ್ತಿನ ಕಟ್ಟಡ ಬಿದ್ದು ಹತ್ತಾರು ಜನ ಸತ್ತರೂ ಪರಿಸ್ಥಿತಿ ಹಾಗೇ ಇರುತ್ತದೆ. ಹೆಚ್ಚೆಂದರೆ ಒಬ್ಬ ಗುತ್ತಿಗೆದಾರನಿಗೆ ದಂಡ ಬೀಳಬಹುದು, ಬಿಬಿಎಂಪಿ ಎಂಜಿನಿಯರ್ ಸಸ್ಪೆಂಡ್ ಆಗಬಹುದು. ಅದರ ಹಿಂದಿರುವ ಭ್ರಷ್ಟ ಕೈಗಳಿಗೆ ಯಾವತ್ತಾದರೂ ಶಿಕ್ಷೆಯಾಗುತ್ತದಾ? ಇಂದು ಹೆಣ್ಣೂರಿನಲ್ಲಿ ನಡೆದದ್ದು ನಾಳೆ ಚಾಮರಾಜಪೇಟೆ ಯಲ್ಲೂ ನಡೆಯುತ್ತದೆ. ಸ್ಥಳ ಬದಲಾಗುತ್ತದೆ, ಆದರೆ ಕತೆ ಬದಲಾಗುವುದಿಲ್ಲ. ಮಳೆ ಬಂದರೆ ಖುಷಿ ಆಗಬೇಕಯ್ಯ. ಊರನ್ನು ನೆನಪು ಮಾಡಿಕೋ. ಮಳೆ ಬಂದರೆ ಬೆಳೆಯುವವನ ಮುಖದಲ್ಲಿ ಎಷ್ಟು ನಗು. ಹಾಗೆಯೇ ನೆನೆಯುತ್ತಾ ದಾರಿಯಲ್ಲಿ ನಿಂತ ನೀರಿನಲ್ಲಿ ಕಾಲಾಡಿಸುತ್ತಾ ಮನೆಗೆ ಹೋಗಬಹುದಾಗಿತ್ತು.
ಆದರೆ ಇಲ್ಲಿ ಏನಾಗಿದೆ ನೋಡು. ದಾರಿಗಳೇ ಮುಳುಗಿಬಿಡುತ್ತವೆ. ಅಲ್ಲಿ ನಡೆಯಲು ಹೋದರೆ ಮ್ಯಾನ್‌ಹೋಲ್
ನ ಒಳಗೆ ಬಿದ್ದು ಕೊಚ್ಚಿ ಹೋಗಿ ರಾಜಕಾಲುವೆ ಸೇರಬಹುದು. ಇಲ್ಲಾ, ಮೈಮೇಲೆ ರಾಡಿ ಸಿಡಿಸುತ್ತ ಹೋಗುವ ವಾಹನಗಳ ಭಯ. ಮಕ್ಕಳು ಶಾಲೆಗೆ ಹೋಗುವ ಬರುವ ವ್ಯಾನುಗಳಿಗೆ ಏನಾಗುತ್ತದೋ ಎಂಬ ಆತಂಕ. ಕೇಬಲ್ ತುಂಡಾಗಿ ಕಂಬದಲ್ಲಿ ಕರೆಂಟ್ ಪಾಸಾಗಿ ಅದನ್ನು ಮುಟ್ಟಿದರೆ ಬೆಂಕಿಯಲ್ಲಿ ಕರಟಿ ಹೋಗುವ ಭೀತಿ. ಆಟವಾಡಲು ಹೊರಗೆ ಹೋದ ಮಗು ಮರಳಿ ಬರುವುದೋ ಇಲ್ಲವೋ ಎಂಬ ಕಂಪನ. ಹೀಗೆ ಖುಷಿಗಳನ್ನು ಕಿತ್ತುಕೊಳ್ಳುವ,
ಭಯವನ್ನೇ ಬಿತ್ತಿ ಬೆಳೆಯುವ ಮಳೆ ನಮಗೆ ಯಾಕಾದರೂ ಬೇಕು ಎಂದು ನಗರಿಗ ಯೋಚಿಸುವುದು ಸಹಜ.
ಆದರೆ ಮಳೆ ಬಾರದಿದ್ದರೆ ನಾಳೆ ಕುಡಿಯುವ ನೀರಿಗೆ ಮಾಡುವುದೇನನ್ನು ಎಂದೂ ಯೋಚಿಸಬೇಡವೇ? ಕೆರೆಗಳನ್ನು ಬತ್ತಿಸಿ ಅಲ್ಲಿ ಸೈಟುಗಳನ್ನು ಮಾಡಿ ಆಗಿದೆ. ಈಗ ನೀರಿಗಾಗಿ ಹಸಿರು ಊರುಗಳನ್ನು ಸುಲಿಯಬೇಕು. ಕೊಡಗಿ ನಿಂದಲೋ ಹಾಸನ ದಿಂದಲೇ ನೀರು ತರಬೇಕು. ಅಲ್ಲಿಂದಲೂ ಬರಲಿಲ್ಲ ಎಂದರೆ ಪಶ್ಚಿಮ ಘಟ್ಟಗಳನ್ನು ಸಿಗಿದು ಭೂಮಿಯ ಎದೆಯನ್ನು ಬಗೆದು ಪೈಪುಗಳನ್ನು ಹಾಕಿ ನೀರು ತರಬೇಕು. ಅಲ್ಲಿನವರು ಏನು ಮಾಡಬೇಕು ಎಂದು ಯಾವತ್ತೂ ಯೋಚಿಸಬಾರದು. ಹಾಗೆ ಯೋಚಿಸುತ್ತಾ ಕೂತರೆ ಅವನು ನಗರದ ನಾಗರಿಕ ಆಗಲಾರ. ನಂತರ ರಾತ್ರಿಗೆ ಸ್ವಿಗ್ಗಿಯ ಜೊಮ್ಯಾಟೊದ ಊಟ ತರಿಸಬೇಕು. ಅವನು ತಂದುಕೊಟ್ಟ ಪ್ಲಾಸ್ಟಿಕ್ ಕವರ್‌ಗಳನ್ನು ಉಂಡೆಕಟ್ಟಿ ಮನೆ ಪಕ್ಕದಲ್ಲಿಯೇ ಇರುವ ಡ್ರೈನೇಜಿಗೆ ಎಸೆದರಾಯಿತು.
ಅದು ನೀರಿನ ಸಹಜ ಹರಿವನ್ನು ಬಂದ್ ಮಾಡಿ ದಾರಿಗೆ ನೀರು ನುಗ್ಗಿದರೆ ಮತ್ತೆ ಒಳಚರಂಡಿಯವರನ್ನು ಬೈಯ ಬೇಕು. ನಗರದ ರಾಶಿ ಕಸ ಎಲ್ಲಿ ಹೋಗುತ್ತದೆ? ಕೋಲಾರಕ್ಕೋ ತುಮಕೂರಿನ ಯಾವುದೋ ಗ್ರಾಮಕ್ಕೋ ಹೋಗುತ್ತದೆ. ಅಲ್ಲಿ ರಾಶಿ ಬಿದ್ದು ದುರ್ನಾತ ಬೀರುತ್ತ ಹಳ್ಳಿಗರ ಆರೋಗ್ಯಕ್ಕೆ ಮಾರಿಯಾಗುತ್ತದೆ. ಅಲ್ಲಿನ ಜನ ಊರಲ್ಲಿರಲಾಗದೆ ನಗರಕ್ಕೆ ಪಲಾಯನ ಮಾಡಬೇಕು. ಮತ್ತದೇ ಚಕ್ರ. ಹೀಗೆ ಹಳ್ಳಿಗಳನ್ನು ವ್ಯವಸ್ಥಿತವಾಗಿ ಕೊಲ್ಲುವವನೇ ‘ನಾಗರಿಕ’. ಆದರೆ ಹೀಗೆ ಕೊಲ್ಲುವ ಪ್ರಕ್ರಿಯೆಯಲ್ಲಿಯೇ ತನ್ನ ಸಾವು ಕೂಡ ಅಡಗಿದೆ ಎಂದು ಒಂದು ನಗರಕ್ಕೆ ಗೊತ್ತೇ ಆಗುವುದಿಲ್ಲವ.
ಒಂದು ಸುಂದರ ಊರು ಎಂದರೆ ಏನಿರಬೇಕು ಅಂತ ಯೋಚಿಸು. ಅದಕ್ಕೆ ಸ್ವಚ್ಛವಾದ ನೀರಿನ ನೆಲೆ ಇರಬೇಕು. ಕೆರೆ ಆಗಿದ್ದರೆ ಚೆನ್ನ. ಆ ಕೆರೆ ಜೀವಂತವಾಗಿರಬೇಕು. ಅಂದರೆ ಅಲ್ಲಿ ಜೀವರಾಶಿಗಳಿರಬೇಕು. ಮೀನುಗಳಿಂದ ಹಿಡಿದು ಏಡಿಗಳವರೆಗೆ ಯಾವುದೇ ಭಯವಿಲ್ಲದೆ, ರಾಸಾಯನಿಕಗಳ ಲೇಪನವಿಲ್ಲದೆ ಈಜಾಡಿಕೊಂಡು ತಮ್ಮ ಸಹಜ
ಬದುಕಿನ ಪಥವನ್ನು ನಡೆಸುವಂತಿರಬೇಕು. ಆದರೆ ನಮ್ಮ ಕೆರೆಗಳು ವಿಷದ ಮಡುಗಳು. ಅಲ್ಲಿ ಯಾವ ಜೀವವೂ ಬದುಕಲು ಸಾಧ್ಯವಿಲ್ಲ. ಮೀನು ಬದುಕದ ಜಾಗದಲ್ಲಿ ಮನುಷ್ಯ ಬದುಕಲು ಹೇಗೆ ಸಾಧ್ಯವೋ? ಈ ಕೆರೆಗಳ ಮೇಲೆ ಕೊಕ್ಕರೆಗಳು ಹಾರುವುದಿಲ್ಲ, ಮಿಂಚುಳ್ಳಿಗಳು ಗೊತ್ತು ಕೂರುವುದಿಲ್ಲ.
ಒಂದು ಊರು ಅಂದರೆ ಅದರ ಆಸುಪಾಸಿನಲ್ಲಿ ನೈಸರ್ಗಿಕವಾದ ಕಾಡು ಸ್ವಲ್ಪವಾದರೂ ಇರಬೇಕು. ಅಲ್ಲಿ ಸಣ್ಣ ಕಳೆಗಿಡಗಳಿಂದ ಹಿಡಿದು ದೊಡ್ಡ ಮರಗಳವರೆಗೆ ಹಲವು ಹಂತಗಳ ಹಸಿರು ಇರಬೇಕು. ಬೆಂಗಳೂರಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಇಂಥವು ಇವೆ. ಆದರೆ ಇವು ಮನುಷ್ಯನ ಮಧ್ಯಪ್ರವೇಶವಿಲ್ಲದೆ ಸಹಜವಾಗಿ ಬೆಳೆದ ಕಾಡಲ್ಲ. ಇಲ್ಲಿ ಮನುಷ್ಯ ಓಡಾಡದ ಒಂದೇ ಒಂದು ದಿನವನ್ನೂ ಊಹಿಸಲು ಸಾಧ್ಯವಿಲ್ಲ.
ಇಲ್ಲಿ ಸಹಜ ಜೀವಜಾತಿಯೊಂದು ತನ್ನಷ್ಟಕ್ಕೇ ಹುಟ್ಟಿ ಬೆಳೆಯಲು ಸಾಧ್ಯವಿಲ್ಲ. ಪಾರಿವಾಳಗಳನ್ನು ಸಹಿಸಿ ಕೊಳ್ಳುತ್ತೇವೆ. ಆದರೆ ನಾಗರಹಾವು ಕಂಡರೆ ಅದು ನಮ್ಮ ಕಣ್ಣಿಂದ ಬಲುದೂರ ಹೋಗಬೇಕು, ಇಲ್ಲವೇ ಸಾಯ
ಬೇಕು- ಅಲ್ಲಿಯವರೆಗೂ ಬಿಡುವುದಿಲ್ಲ. ಬೆಂಗಳೂರಿಗೆ ಹೊರಗಿನಿಂದ ಬರುವವನು, ಇಲ್ಲಿ ದುಡ್ಡು ಬಿತ್ತಿ ದುಡ್ಡು ಬೆಳೆಯಬಹುದು ಅಂದುಕೊಂಡಿರುತ್ತಾನೆ. ಇಲ್ಲಿನ ದೊಡ್ಡ ದೊಡ್ಡ ಕಟ್ಟಡಗಳ 18ನೇ, 26ನೇ ಮಹಡಿಯಲ್ಲಿ ಕುಳಿತು ಮುಂದಿನ ಒಂದು ವರ್ಷದಲ್ಲಿ ಎಷ್ಟು ಲಾಭ ಮಾಡಬಹುದು ಎಂದು ಪ್ಲಾನ್ ಮಾಡುತ್ತಾನೆ.
ಎಲ್ಲಿ ಎಷ್ಟು ಕಾಂಕ್ರೀಟು ಸುರಿಯಬೇಕು, ಸೈಟನ್ನು ಎಷ್ಟು ಎತ್ತರಿಸಿದರೆ ನೀರು ನುಗ್ಗುವುದಿಲ್ಲ ಎಂದು ಯೋಚಿಸು ತ್ತಾನೆ. ಪಕ್ಕದಲ್ಲಿರುವ ಸಣ್ಣ ಸೈಟಿನವನ, ಇದೇ ಊರಿನವನ ಬದುಕು ನರಕವಾಗಿಸುತ್ತಾನೆ. ಇವನು ವೀಕೆಂಡ್ ನಲ್ಲಿ ಗ್ಲೋಬಲ್ ಮಾಲ್‌ಗೆ ಹೋಗಿ ಕಪುಚಿನೊ ಹೀರಿ ಬರುತ್ತಾನೆ. ತನ್ನ ಬಿಎಂಡಬ್ಲ್ಯು ಕಾರಿನ ಚಕ್ರದಿಂದ ಸಿಡಿದ ಮಳೆನೀರು ಡೆಲಿವರಿ ಬಾಯ್‌ನ ಮೈಯನ್ನು ಒದ್ದೆಯಾಗಿಸಿದ್ದು ಇವನಿಗೆ ತಿಳಿಯುವುದೇ ಇಲ್ಲ.
ನಿಮ್ಮದೇ ಊರಿನ ಸಂಸ್ಕೃತಿ ಅನ್ನುವುದನ್ನೇ ನಾದರೂ ಉಳಿಸಿಕೊಂಡಿದ್ದೀರಾ ಹೇಳಿ. ಹಂತಹಂತವಾಗಿ ಎಲ್ಲವನ್ನೂ ಸಾಯಿಸುತ್ತ ಬಂದಿದ್ದೀರಿ, ಕಡಲೆ ಕಾಯಿ ಪರಿಷೆಯಲ್ಲಿ ಕಡಲೆಕಾಯಿಗಿಂತ ತಮಿಳು ನಾಡಿನಿಂದ ಬಂದ ಅಂಗಡಿಗಳೇ ಹೆಚ್ಚಿರುತ್ತವೆ. ಅವರೆಕಾಳು ಸೀಸನ್ನಲ್ಲಿ ನಿಮಗೆ ಫ್ರೆಂಚ್ ಫ್ರೈಸ್ ತಿನ್ನುವ ಹುಕಿ. ಗಾಂಧಿಬಜಾರು, ಮಶ್ವರ, ಅಕ್ಕಿಪೇಟೆ, ಬಳೆಪೇಟೆಗಳ ಮೂಲ ಸ್ವರೂಪ ಎಲ್ಲಿ ಉಳಿಸಿಕೊಂಡಿದ್ದೀರಿ? ಸಿಟಿಯ ಸಾಂಪ್ರದಾಯಿಕ ಊಟ-ತಿಂಡಿ ಮುಂದಿನ ಜನರೇ ಶನ್ನಿಗೆ ಇಷ್ಟವಾಗಿಸೋ ಥರ ಏನಾದರೂ ಮಾಡಿದೀರಾ? ಮತ್ತೆ ಅವರೋ ಚೀಸ್ ಹಾಕಿದ ‘ಮಸಾಲಾ
ಡೋಸಾ’ ತಿನ್ನದೇ ಇನ್ನೇನು ಮಾಡುತ್ತಾರೆ.
ಒಂದು ನಗರದ ಅಥವಾ ಹಳ್ಳಿಯ ಸಾವು ಅಂದರೆ ಅಲ್ಲಿನ ಜನರೆ ಸಾಯುವುದು ಅಂತ ಅಲ್ಲ. ಅಂಥ ನಗರಗಳೂ ಇರಬಹುದು. ಆದರೆ ಒಂದು ನಗರ ಗಾಢವಾಗಿ ನೆಚ್ಚಿದ್ದ ಸಂಸ್ಕೃತಿ- ನಾನು ಅದನ್ನು ಆತ್ಮ ಎಂದು ಕರೆಯುತ್ತೇನೆ- ನಶಿಸುತ್ತಾ ಹೋದಾಗ ಆ ನಗರ ಚೈತನ್ಯ ಕಳೆದುಕೊಳ್ಳುತ್ತದೆ. ಇಂದಿನ ಹಲವು ಹೊಸ ನಗರಗಳ ಪಕ್ಕದ ಹಳೆಯ ನಗರಗಳು ಇದ್ದೂ ಇಲ್ಲದಂತೆ ಇರುತ್ತವೆ, ದಯವಿಟ್ಟು ಅವುಗಳನ್ನು ಗಮನಿಸು. ಹೊಸ ಊರಿನಲ್ಲಿ ಹೊಸ ಕಟ್ಟಡಗಳು, ಹೊಸ ಉದ್ಯಮ ಗಳು ತಲೆ ಎತ್ತಿರುತ್ತವೆ. ಹಳೆ ಊರಿನ ಪ್ರಜೆಗಳು ತಮ್ಮ ಗತವೈಭವ ನೆನಪಿಸಿಕೊಳ್ಳುತ್ತ ಕೊರಗುತ್ತಿ ರುತ್ತಾರೆ. ಆದರೆ ಅಲ್ಲಿಂದ ಜೀವಚೈತನ್ಯವೇ ಮಾಯವಾಗಿರುತ್ತದೆ.
ಹಾಗೆ ನೋಡಿದರೆ ಬೆಂಗಳೂರು ಜಗಮಗಿಸುತ್ತಿದೆ. ಎಲ್ಲ ಕಡೆಗಳಲ್ಲೂ ಹೊಸ ಬಡಾವಣೆಗಳು, ಕಟ್ಟಡಗಳು ತಲೆ ಎತ್ತುತ್ತಿವೆ. ಅಲ್ಲಿ ದುಡಿಯುವವರು ಕೇರಳ, ತಮಿಳುನಾಡು, ಗುಜರಾತು, ಬಿಹಾರಗಳಿಂದ ಬರುತ್ತಾರೆ. ಬರಬಾರ ದೆಂದಲ್ಲ. ಆದರೆ ಅವರೆ ಇಡೀ ನಗರದ ಆತ್ಮವನ್ನು ಅರ್ಥ ಮಾಡಿಕೊಂಡಿರುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರಿಗೆ ಇಲ್ಲಿನ ಭಾಷೆ ಗೊತ್ತಿಲ್ಲ. ಇಲ್ಲಿನ ಆಹಾರ ಗೊತ್ತಿಲ್ಲ. ಹೇಗೆ ಮಾತನಾಡಿದರೆ ಇಲ್ಲಿ ದುಡ್ಡು ಹುಟ್ಟುತ್ತದೆ ಅಂತ ಯೋಚಿಸುತ್ತಾರೆ ಹೊರತು, ಹೇಗೆ ಮಾತನಾಡಿದರೆ ಇಲ್ಲಿನ ಸಾಮಾನ್ಯನೊಬ್ಬನ ಮನಸ್ಸನ್ನು ಮುಟ್ಟಬಹುದು ಎಂದು ಯೋಚಿಸುವುದಿಲ್ಲ.
ನನ್ನ ಬದುಕನ್ನೂ ಕಟ್ಟಿಕೊಂಡು, ಈ ನಗರವನ್ನೂ ಸುಂದರವಾಗಿಸಬಹುದು ಅಂತ ಯೋಚಿಸುವುದಿಲ್ಲ. ಮಧ್ಯರಾತ್ರಿ ಒಂಟಿ ಮಹಿಳೆ ನಡೆದುಹೋಗಬ ಹುದಾದರೆ ಅದು ಸ್ವಾತಂತ್ರ್ಯ ಅಂತ ಹೇಳಿದ ಬಾಪೂಜಿ ಮಾತುಗಳಲ್ಲಿ ಉತ್ಪ್ರೇಕ್ಷೆ ಇರಬಹುದು. ಆದರೆ ಬೆಂಗಳೂರಿನಲ್ಲಿ ಮಧ್ಯರಾತ್ರಿ ಒಂಟಿ ಪುರುಷನಾದರೂ ಹೋಗಬಹುದಾ ಅಂತ ಯೋಚಿಸು. ವಿಧಾನಸೌಧದ ಪಕ್ಕದಲ್ಲಿಯೇ ಲಾಂಗು ಮಚ್ಚು ಝಳಪಿಸಿ ಓಡಾಡುತ್ತಾರೆ. ಸೈಡು ಕೊಡಲಿಲ್ಲ
ಅನ್ನುವ ಸಿಲ್ಲಿ ಕಾರಣಕ್ಕೇ ಹೆಲ್ಮೆಟ್‌ನಿಂದ ಜಜ್ಜಿ ಪ್ರಾಣ ತೆಗೆಯುತ್ತಾರೆ. ಕಾರಣವೇ ಇಲ್ಲದೇ ಹಗಳಾಗುತ್ತವೆ. ತೋಳ್ಬಲ ಇರುವವರು ಕಾನೂನು ಬಲವೂ ತಮ್ಮ ಕಡೆಗೇ ಇದೆ ಎಂದು ಭಾವಿಸಿದರೆ ಅಲ್ಲಿ ನಾಗರಿಕತೆಗೆ ಅಂತ್ಯ ಬಂತೆಂದೇ ಅರ್ಥ.
ಒಂದು ಆದರ್ಶ ನಗರದಲ್ಲಿ ಕಟ್ಟಡಗಳು ಕಟ್ಟುತ್ತಿರುವಾಗಲೇ ಬೀಳುವುದಿಲ್ಲ. ರಾಜಕಾಲುವೆಯಲ್ಲಿ ಯಾರೂ ಕೊಚ್ಚಿಕೊಂಡು ಹೋಗುವುದಿಲ್ಲ. ಕಚೇರಿಗೆ ಹೋದ ಹೆಂಡತಿ ಮನೆಗೆ ಸೇಫಾಗಿ ಬರುತ್ತಾಳೆ ಎಂಬ ಧೈರ್ಯ ಗಂಡನಿಗಿರುತ್ತದೆ.
ಚಾಲಕರು ಮಕ್ಕಳನ್ನು ಶಾಲೆಯಿಂದ ಮನೆಗೆ ತಲುಪಿಸುತ್ತಾರೆ ಎಂಬ ಭರವಸೆ ಹೆತ್ತವರಿಗೆ ಇರುತ್ತದೆ. ತುಸು ಜೋಲಿ ಹೊಡೆದರೂ ಪರವಾಗಿಲ್ಲ, ಮುದಿ ಪ್ರಾಯದ ಅಪ್ಪ ಅಮ್ಮ ಸುರಕ್ಷಿತವಾಗಿ ಪಾರ್ಕಿಗೆ ಹೋಗಿ ಬರುತ್ತಾರೆ ಎಂದು ಮಕ್ಕಳಿಗೆ ಗೊತ್ತಿರುತ್ತದೆ. ತಾವು ಸೇವಿಸುವ ಆಹಾರದಲ್ಲಿ ಕಲಬೆರಕೆ ಆಗಿಲ್ಲ, ತಾವು ತಿನ್ನುವ ಪಾನಿಪುರಿಯಲ್ಲಿ ಯೂರಿಕ್ ಆಸಿಡ್ ಹಾಕಿಲ್ಲ ಎಂಬ ಧೈರ್ಯ ಅಲ್ಲಿನ ನಿವಾಸಿಗಳಿಗೆ ಇರುತ್ತದೆ. ಮನೆಯೊಳಗೇ ಕುಳಿತು ಬೇಸರವಾದರೆ ಸುತ್ತಾಡಿ ಬರಲು ವಿಶಾಲವಾದ ಕಾಲ್ದಾರಿಗಳು, ಹಸಿರು ತುಂಬಿದ ಪಾರ್ಕುಗಳಿರುತ್ತವೆ. ಬಿಸಿಲು ತಡೆಯುವ ನೆರಳು ನೀಡುವ ಮರಗಳಿರುತ್ತವೆ ಮತ್ತು ಅವು ಅಕಾಲದಲ್ಲಿ ಬೀಳುವುದಿಲ್ಲ.
ಒಂದು ಆದರ್ಶ ನಗರದಲ್ಲಿ ಎಲ್ಲರೂ ಹೋಗಿ ಕುಳಿತು ಆರಾಮಾಗಿ ಓದಿ ಬರಬಹುದಾದ, ಎಲ್ಲ ಪ್ರಾಯ ದವರಿಗೂ ಆನಂದ ಕೊಡುವ ಪುಸ್ತಕಗಳಿರುವ ಲೈಬ್ರರಿಗಳಿರುತ್ತವೆ. ವಾಹನಗಳು ಪಾರ್ಕಿಂಗ್ ಜಾಗದ ಇರುತ್ತವೆ ಮತ್ತು ಫುಟ್ ಪಾತುಗಳು ಸುರಕ್ಷಿತವಾಗಿರುತ್ತವೆ. ನಾಯಿಗಳನ್ನು ಪುಟ್ಟಪಥಗಳಲ್ಲಿ ಮಾಲೀಕರು ಕಕ್ಕ ಮಾಡಿಸುವುದಿಲ್ಲ ಮತ್ತು ತಾವೂ ಗೋಡೆಗಳಿಗೆ ಮೂತ್ರ ಮಾಡುವುದಿಲ್ಲ.
ರೋಡ್ ಕ್ರಾಸ್ ಮಾಡಲು ಮಕ್ಕಳಿಗೂ ವೃದ್ಧರಿಗೂ ಅಂಜಿಕೆಯಾಗುವುದಿಲ್ಲ. ರಸ್ತೆಯಲ್ಲಿ ಸಹನೆ ತಪ್ಪಿ ಯಾರೂ ಯಾರಿಗೂ ಹೊಡೆಯಲು ಬರುವುದಿಲ್ಲ. ಇಷ್ಟು ಹೇಳಿ ಬಾಬಾಜಿ ಸುಮ್ಮನಾದರು. ವಾಪಸು ಬರುವಾಗ ಟ್ರಾಫಿಕ್ ಸಿಗ್ನಲ್‌ನಲ್ಲಿ ನೂರಾರು ವಾಹನಗಳು ಸಿಕ್ಕಿಹಾಕಿಕೊಂಡು ಮುಂದಕ್ಕೂ ಹೋಗಲಾಗದೆ ಹಿಂದಕ್ಕೂ ತೆವಳಲಾಗದೆ ಹೊಗೆ ಬಿಡುತ್ತಾ ಹಾರನ್ ಮಾಡುತ್ತಾ ಕಿರುಚಾಡುತ್ತಿದ್ದವು.
ಇದನ್ನೂ ಓದಿ: Harish Kera Column: ಮನುಕುಲದ ಕಳವಳಕ್ಕೆ ನೊಬೆಲ್ ತಂದವನು