ಕಳಕಳಿ
ಸತ್ಯಬೋಧ, ಬೆಂಗಳೂರು
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವ್ಯಾಪ್ತಿಯು ನಾಡಿನ ಮೂಲೆಮೂಲೆಗೂ ವಿಸ್ತರಿಸಿದ್ದು, ಗ್ರಂಥಾಲ
ಯಗಳು ಗ್ರಾಮಗಳಲ್ಲೂ ವಿಜೃಂಭಿಸುತ್ತಿವೆ. ಇಲಾಖೆಯ ಹಿಂದಿನ ನಿರ್ದೇಶಕರ ದೂರದೃಷ್ಟಿಯ ಫಲವಾದ ಡಿಜಿಟಲ್ ಗ್ರಂಥಾಲಯ ಪರಿಕಲ್ಪನೆಯಿಂದಾಗಿ ಮನೆಮನೆಯೂ ಗ್ರಂಥಭಂಡಾರವಾಗಿದೆ.
ಇದು ಕನ್ನಡ ನಾಡಿನ ಹೆಮ್ಮೆ. ಆದರೀಗ ಗ್ರಂಥಾಲಯದ ಹೃದಯವೇ ಆದ ಪುಸ್ತಕಗಳಿಲ್ಲ. ಹೀಗಾಗಿ ಅದು ಎಣ್ಣೆಯಿಲ್ಲದೆ ನಂದಿಹೋಗುವ ಹಣತೆಯಾಗಿಬಿಟ್ಟಿದೆ. ರಾಜಕಾರಣಿಗಳ ಮಾತಿನಲ್ಲಿ ‘ಕನ್ನಡವೇ ನಮ್ಮ ಉಸಿರು, ಕನ್ನಡಕ್ಕಾಗಿ ನಾವು’ ಎಂಬ ಕನ್ನಡಾಭಿಮಾನವು ಹೊಮ್ಮಿದರೂ ಅದು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ.
ಗ್ರಂಥಾಲಯಗಳಿಗೆ ಯಾವ ಕಾರಣಕ್ಕೂ ಅನುದಾನದ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಮನೆ ತೆರಿಗೆಯಲ್ಲಿ ಶೇ.6ರ ಪಾಲನ್ನು ಸರಕಾರವು ಗ್ರಂಥಾಲಯಕ್ಕಾಗಿ ನಿಗದಿಮಾಡಿದೆ. ಆದರೆ ಸತ್ಯಸಂಗತಿಯೇ ಭಿನ್ನ. ಕಾಮಗಾರಿ ಮೊದಲಾದ ಅಭಿವೃದ್ಧಿ ಕಾರ್ಯಗಳೆಡೆಗೆ ಈ ತೆರಿಗೆ ಹಣವನ್ನು ತಿರುಗಿಸುತ್ತಿರುವುದರಿಂದ
ಸಂಪನ್ಮೂಲ ಇದ್ದೂ ಇಲ್ಲದಂತಾಗಿದೆ. 2020ರಲ್ಲಿ ಪ್ರಕಟವಾಗಿ 2023ರಲ್ಲಿ ಗ್ರಂಥಾಲಯವು ಖರೀದಿಸಿರುವ ಸಾಕಷ್ಟು ಪುಸ್ತಕಗಳಿಗೆ ಸಂಬಂಧಿಸಿ ಅವುಗಳ ಪ್ರಕಾಶಕರಿಗೆ ಇನ್ನೂ ಹಣ ಸಂದಾಯವಾಗಿಲ್ಲ.
ಕಳೆದ ವರ್ಷ ಮತ್ತು ಈ ವರ್ಷ ಎಸ್ಸಿ/ಎಸ್ಟಿ ಯೋಜನೆಯಲ್ಲಿ ಪುಸ್ತಕಗಳನ್ನು ಖರೀದಿಸಿಲ್ಲ. ಮುಖ್ಯಮಂತ್ರಿ ಗಳೇನೋ ಅನುದಾನ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದರೂ, ಗ್ರಂಥಾಲಯ ಇಲಾಖೆಗೆ ಅದಿನ್ನೂ ಬಿಡುಗಡೆಯಾಗಿಲ್ಲ. ನಾಡಿನಾದ್ಯಂತ ಇರುವ ಸಾರ್ವಜನಿಕ ಗ್ರಂಥಾಲಯಗಳಿಗೆ ಹೊಸ ಪುಸ್ತಕಗಳನ್ನು ಸರಬರಾಜು ಮಾಡಿ, ಅಸಂಖ್ಯ ಓದುಗರಿಗೆ ಓದುವ ಭಾಗ್ಯ ಕಲ್ಪಿಸಲೆಂದೇ ‘ಏಕಗವಾಕ್ಷಿ’ ಯೋಜನೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಪುಸ್ತಕಗಳನ್ನು ಖರೀದಿಸಲಾಗುತ್ತದೆ.
ಆದರೆ ಹೀಗೆ ಖರೀದಿಸಿದ ಲಕ್ಷ ಲಕ್ಷ ಗ್ರಂಥಗಳು ನಾಡಿನ ವಿವಿಧ ಗ್ರಂಥಾಲಯಗಳಿಗೆ ಸರಬರಾಜಾಗದೆ ಬೆಂಗಳೂರಿನ ಗೋದಾಮಿನಲ್ಲಿ ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. ಇತ್ತೀಚೆಗೆ ಏರ್ಪಡಿಸಿದ, ಆಯ್ಕೆಯಾದ ಮತ್ತು
ಆಯ್ಕೆಯಾಗದ ಪುಸ್ತಕಗಳ ಪ್ರದರ್ಶನವೂ ಹಿಂದಿನ ವರ್ಷದ್ದಕ್ಕೆ ಹೋಲಿಸಿದರೆ ಸಮರ್ಪಕವಾಗಿರಲಿಲ್ಲ. ಹಿಂದಿನ ಪ್ರದರ್ಶನಗಳಲ್ಲಿ ಆಯ್ಕೆ ಸಮಿತಿಯ ಅಧ್ಯಕ್ಷರು ಪ್ರದರ್ಶನ ಸಭಾಂಗಣದಲ್ಲಿದ್ದು, ತಿರಸ್ಕೃತವಾದ ಕೃತಿಗಳ ಲೇಖಕರು ಅವರನ್ನು ನೇರವಾಗಿ ಸಂಪರ್ಕಿಸುವ ವ್ಯವಸ್ಥೆಯಿತ್ತು. ಉತ್ತಮ ಗುಣಮಟ್ಟದ ಪುಸ್ತಕಗಳು ಕಣ್ತಪ್ಪಿನಿಂದಾಗಿ ಆಯ್ಕೆ ಯಾಗದಿರುವುದನ್ನು ಅಧ್ಯಕ್ಷರ ಗಮನಕ್ಕೆ ತಂದರೆ, ಅವರು ಅದನ್ನು ಮರುಪರಿಶೀಲಿಸಿ ಆಯ್ಕೆಮಾಡುವುದಕ್ಕೆ
ಅವಕಾಶ ಕಲ್ಪಿಸಲಾಗಿತ್ತು.
ಇದರಿಂದಾಗಿ ಉತ್ತಮ ಗುಣಮಟ್ಟದ ಪುಸ್ತಕಗಳಿಗೆ ನ್ಯಾಯ ಸಿಗುತ್ತಿತ್ತು. ಆದರೆ ಈ ಸಲ ಅಧ್ಯಕ್ಷರನ್ನು ಆಹ್ವಾನಿಸಿರ ಲಿಲ್ಲವಾದ್ದರಿಂದ, ಪುಸ್ತಕಗಳನ್ನು ಮರುಪರಿಶೀಲನೆಗೆ ನೀಡಲು ಲೇಖಕರು ದ್ರಾವಿಡ ಪ್ರಾಣಾಯಾಮ ಮಾಡ ಬೇಕಾಗಿದೆ. ಸರಕಾರವು ಇನ್ನಾದರೂ ಈ ನ್ಯೂನತೆಗಳನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
(ಲೇಖಕರು ಹವ್ಯಾಸಿ ಬರಹಗಾರರು)
ಇದನ್ನೂ ಓದಿ: Lakshmi Hebbalkar: ಭಾರತೀಯ ಮಹಿಳೆಯರಿಗೆ ಸ್ಫೂರ್ತಿ ಕಿತ್ತೂರು ರಾಣಿ ಚನ್ನಮ್ಮ: ಲಕ್ಷ್ಮೀ ಹೆಬ್ಬಾಳಕರ್