Friday, 22nd November 2024

Jaganmohan Reddy: ಆಸ್ತಿ ವಿಚಾರದಲ್ಲಿ ಸೋದರಿ ವಿರುದ್ಧವೇ ಕೋರ್ಟ್‌ ಮೆಟ್ಟಿಲೇರಿದ ಆಂಧ್ರದ ಮಾಜಿ ಸಿಎಂ ಜಗನ್ ರೆಡ್ಡಿ

Jaganmohan Reddy

ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ (former Andhra Pradesh Chief Minister) ಜಗನ್‌ ಮೋಹನ್‌ ರೆಡ್ಡಿ(Jaganmohan Reddy) ಸಹೋದರಿ ವೈ ಎಸ್‌ ಶರ್ಮಿಳಾ (YS Sharmila) ನಡುವಿನ ಆಸ್ತಿ ವಿವಾದ ಈಗ ಕೋರ್ಟ್‌ ಮೆಟ್ಟಿಲೇರಿದೆ. ಜಗನ್‌ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ( NCLT) ಅರ್ಜಿ ಸಲ್ಲಿಸಿದ್ದು. ಶರ್ಮಿಳಾ ಕಾನೂನು ಬಾಹಿರವಾಗಿ ಸರಸ್ವತಿ ಪವರ್ ಆಂಡ್‌ ಇಂಡಸ್ಟ್ರೀಸ್​ ಪ್ರೈವೇಟ್ ಲಿಮಿಟೆಡ್​ನ ಷೇರ್​ಗಳನ್ನು ತನ್ನ ಹಾಗೂ ತಾಯಿ ವಿಜಯಲಕ್ಷ್ಮೀ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಶೇರ್​ಗಳು ನನ್ನ ಮತ್ತು ನನ್ನ ಪತ್ನಿ ಭಾರತಿ ಹೆಸರಿನಲ್ಲಿದ್ದವು ಎಂದು ಜಗನ್‌ ತಮ್ಮ ಅರ್ಜಿಯಲ್ಲಿಉಲ್ಲೇಖಿಸಿದ್ದಾರೆ.

ಜಗನ್ ಹಾಗೂ ಅವರ ಪತ್ನಿಯ ಪಾಲಿನ ನೂರಾರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಹೋದರಿಗೆ ಉಚಿತವಾಗಿ ವರ್ಗಾಯಿಸುವ ಸಂಬಂಧ 2019ರಲ್ಲಿ ತಿಳಿವಳಿಕೆ ಪತ್ರಕ್ಕೆ ಅವರು ಸಹಿ ಹಾಕಿದ್ದರು. ಬಳಿಕ ಇಬ್ಬರ ಸಂಬಂಧವೂ ಹದಗೆಟ್ಟು ಸೋದರಿಯಿಂದ ಜಗನ್‌ ದೂರವಾಗಿದ್ದರು. ಹೀಗಾಗಿ ಆಸ್ತಿ ಹಸ್ತಾಂತರ ನಿರ್ಧಾರವನ್ನು ಜಗನ್‌ ಕೈಬಿಟ್ಟಿದ್ದರು. ಈ ನಡುವೆ ಕೆಲ ದಿನಗಳ ಹಿಂದೆ ಸರಸ್ವತಿ ಪವರ್‌ನ ಆಡಳಿತ ಮಂಡಳಿ ಸದಸ್ಯೆಯೂ ಆಗಿರುವ ಶರ್ಮಿಳಾ ತಮ್ಮ ಹಾಗೂ ನನ್ನ ಪತ್ನಿ ಹೆಸರಿನಲ್ಲಿದ್ದ ಷೇರು ಪಾಲನ್ನು ಅಕ್ರಮವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Tirupati Laddu Row: ಜಗನ್ ತಿರುಪತಿ ಭೇಟಿ ರದ್ದು; ಮಾನವೀಯತೆಯೇ ನನ್ನ ಧರ್ಮ ಎಂದು ಟಿಡಿಪಿ ಟಾಂಗ್‌

ತಮ್ಮ ತಂದೆ, ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಮತ್ತು ಪೂರ್ವಜರು ಸಂಪಾದಿಸಿದ ಆಸ್ತಿಯನ್ನು ಕುಟುಂಬ ಸದಸ್ಯರಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದೆ ಎಂದು ಜಗನ್ ಹೇಳಿದ್ದಾರೆ. ಈಗ ನನ್ನ ಹಾಗೂ ಶರ್ಮಿಳಾ ನಡುವೆ ಒಡಹುಟ್ಟಿದವರೆಂಬ ಭಾವನೆ ಉಳಿದಿಲ್ಲ ಮೊದಲಿನ ಪ್ರೀತಿಯಿಲ್ಲ ಎಂದು ಹೇಳಿದ್ದಾರೆ. ಈಗ ಇರುವ ಷೇರುಗಳು ನನ್ನ ಸ್ವಂತ ಆಸ್ತಿಯಾಗಿದ್ದು, ಅದರ ಮೇಲೆ ನನ್ನ ಹಾಗೂ ನನ್ನ ಹೆಂಡತಿಯ ಅಧಿಕಾರವಿದೆ. ಅಕ್ರಮವಾಗಿ ಅದನ್ನು ಯಾರಿಂದಲೂ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದರು.

2021ರಲ್ಲಿ ಕಾಂಗ್ರೆಸ್‌ ಪಕ್ಷ ಸೇರಿರುವ ಶರ್ಮಾಳಿ ಆಂಧ್ರಪ್ರದೇಶ ಕಾಂಗ್ರೆಸ್‌ ಅಧ್ಯಕ್ಷೆಯಾಗಿದ್ದಾರೆ. ಜಗನ್ ಸಲ್ಲಿಸಿರುವ ದೂರಿಗೆ ಪ್ರತಿಕ್ರಿಯೆ ನೀಡಿರುವ ಶರ್ಮಿಳಾ ಕೌಟುಂಬಿಕ ಕಲಹ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಸಮಾನ ಪಾಲು ಬಿಟ್ಟು ಕೊಡಲು ಸಿದ್ಧಳಿದ್ದು ಸಹಿಯನ್ನು ಮಾಡಿದ್ದೆ. ಈಗ ನೀವು ನಿಮ್ಮ ತಾಯಿ ಹಾಗೂ ತಂಗಿಯ ವಿರುದ್ಧವೇ ಕೇಸ್‌ ದಾಖಲಿಸಿದ್ದೀರಿ. ನಮ್ಮ ತಂದೆಯ ಆದರ್ಶಗಳನ್ನು ನೀವು ಹೇಗೆ ಪಾಲಿಸುತ್ತಿದ್ದೀರಿ ಎಂಬುದನ್ನು ನೋಡಿ ದಿಗ್ಭ್ರಮೆಗೊಂಡಿದ್ದೇನೆ ಎಂದು ಹೇಳಿದ್ದಾರೆ.