ಮುಂಬೈ: ವಿದ್ಯಾರ್ಥಿಗಳನ್ನು ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ಶಿಕ್ಷಕರದಾಗಿರುತ್ತದೆ. ಅಂದಮಾತ್ರಕ್ಕೆ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರುವಷ್ಟು ಶಿಕ್ಷಿಸುವ ಹಕ್ಕು ಅವರಿಗಿರುವುದಿಲ್ಲ. ಆದರೆ ಇಲ್ಲೊಬ್ಬ ಶಿಕ್ಷಕಿ ತನ್ನ ವಿದ್ಯಾರ್ಥಿನಿಯೊಬ್ಬಳಿಗೆ ಕಪಾಳಮೋಕ್ಷ ಮಾಡಿದ್ದು, ಇದರಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಸುದ್ದಿ ಎಲ್ಲೆಡೆ ವೈರಲ್(Viral News) ಆಗಿದೆ.
ಸಂತ್ರಸ್ತ ವಿದ್ಯಾರ್ಥಿನಿಯ ಹೆಸರು ದೀಪಿಕಾ (9)ಯಾಗಿದ್ದು ಟ್ಯೂಷನ್ ಶಿಕ್ಷಕಿ ರತ್ನಾ ಸಿಂಗ್(20) ಅವರಿಂದ ಏಟು ತಿಂದು ಗಂಭೀರ ಸ್ಥಿತಿಗೆ ತಲುಪಿದ್ದಾಳೆ. ಮುಂಬೈನ ನಲ್ಲಸೋಪಾರ ಎಂಬ ನಗರದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ವಿದ್ಯಾರ್ಥಿನಿಯು ತುಂಬಾ ಚೇಷ್ಟೆ ಮಾಡಿದ್ದಕ್ಕೆ ಟ್ಯೂಷನ್ ಶಿಕ್ಷಕಿಯು ಆಕೆಯ ಎರಡು ಕಪಾಳಕ್ಕೆ ತೀವ್ರವಾಗಿ ಹೊಡೆದಿದ್ದಾಳೆ. ಇದರಿಂದ ಆಕೆಯ ಮೆದುಳಿಗೆ ತೀವ್ರ ಗಾಯವಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆಯಂತೆ.
ಪೊಲೀಸರ ವರದಿ ಪ್ರಕಾರ, 20 ವರ್ಷದ ಖಾಸಗಿ ಟ್ಯೂಷನ್ ಶಿಕ್ಷಕಿ ರತ್ನಾ ಸಿಂಗ್ ತರಗತಿಯಲ್ಲಿ ತುಂಬಾ ಚೇಷ್ಟೆ ಮಾಡುತ್ತಿದ್ದ ದೀಪಿಕಾಗೆ ಕಪಾಳಮೋಕ್ಷ ಮಾಡಿದ್ದಾಳೆ. ಆಕೆ ತುಂಬಾ ತೀವ್ರವಾಗಿ ಕಪಾಳಕ್ಕೆ ಹೊಡೆದ ಕಾರಣ ಸಂತ್ರಸ್ತೆಯ ಕಿವಿಯೋಲೆ ಅವಳ ಕೆನ್ನೆಯೊಳಗೆ ಸಿಲುಕಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಇತ್ತೀಚೆಗೆ ಮೆದುಳಿನ ತೀವ್ರ ಗಾಯ, ದವಡೆ ಬಿಗಿತ, ಶ್ವಾಸನಾಳಕ್ಕೆ ತೀವ್ರ ಗಾಯ ಮತ್ತು ಟೆಟನಸ್ ಸೋಂಕಿನಿಂದ ಬಳಲುತ್ತಿದ್ದ ಒಂಬತ್ತು ವರ್ಷದ ವಿದ್ಯಾರ್ಥಿನಿಯನ್ನು ಮುಂಬೈನ ಕೆಜೆ ಸೋಮಯ್ಯ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಕಳೆದ ಒಂಬತ್ತು ದಿನಗಳಿಂದ ಆಕೆ ವೆಂಟಿಲೇಟರ್‌ನಲ್ಲಿದ್ದು, ಆಕೆಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮನೆಯೊಂದರ ಬೆಡ್‍ರೂಂನಲ್ಲಿ ಜೋಡಿ ಹಾವುಗಳ ಸರಸ; ವಿಡಿಯೊ ವೈರಲ್
ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಶಿಕ್ಷಕಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ವಿಚಾರಣೆಗಾಗಿ ಪೊಲೀಸರು ಶಿಕ್ಷಕಿಗೆ ನೋಟಿಸ್ ಕಳುಹಿಸಿದ್ದಾರೆ. “ನಾವು ಶಿಕ್ಷಕರಿಗೆ ನೋಟಿಸ್ ನೀಡಿದ್ದೇವೆ. ವೈದ್ಯರು ಸಂತ್ರಸ್ತೆಯ ಆರೋಗ್ಯದ ಬಗ್ಗೆ ವಿವರವಾದ ಮಾಹಿತಿ ನೀಡಿದ ಬಳಿಕ ನಾವು ತನಿಖೆ ನಡೆಸಿ ಚಾರ್ಜ್‍ಶೀಟ್ ಮಾಡುವ ಬಗ್ಗೆ ನಿರ್ಧರಿಸುತ್ತೇವೆ” ಎಂದು ಪೊಲೀಸರು ತಿಳಿಸಿದ್ದಾರೆ.