Friday, 22nd November 2024

J&K Statehood: ಅಮಿತ್‌ ಶಾ ಜತೆ ಒಮರ್ ಅಬ್ದುಲ್ಲಾ ಮಾತುಕತೆ; ಜಮ್ಮು & ಕಾಶ್ಮೀರಕ್ಕೆ ಶೀಘ್ರ ರಾಜ್ಯದ ಸ್ಥಾನಮಾನದ ಭರವಸೆ

J&K Statehood

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರ (Jammu and Kashmir) ನಿವಾಸಿಗಳ ಬಹು ದಿನಗಳ ರಾಜ್ಯ ಸ್ಥಾನಮಾನದ ಕನಸು ಶೀಘ್ರದಲ್ಲೇ ನನಸಾಗುವ ಸಾಧ್ಯತೆ ಇದೆ (J&K Statehood). ಯಾಕೆಂದರೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಪ್ರಾರಂಭಿಸಲಿದೆ. ಈ ಬಗ್ಗೆ ನೂತನ ಮುಖ್ಯಮಂತ್ರಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಬುಧವಾರ (ಅಕ್ಟೋಬರ್‌ 23) ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾದ ಬಳಿಕ ಈ ಭರವಸೆ ಮೂಡಿದೆ. ಈ ವೇಳೆ ಅಮಿತ್ ಶಾ ಅವರು ಹೊಸದಾಗಿ ಆಯ್ಕೆಯಾದ ಸರ್ಕಾರಕ್ಕೆ ಕೇಂದ್ರದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು ಮತ್ತು ರಾಜ್ಯಸ್ಥಾನ ಪುನಃ ಸ್ಥಾಪಿಸುವ ಬಗ್ಗೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದರು.

“ಅರ್ಧ ಗಂಟೆ ಕಾಲ ಸಭೆ ನಡೆಯಿತು. ಈ ವೇಳೆ ಅಮಿತ್‌ ಶಾ ಹೊಸದಾಗಿ ಆಯ್ಕೆಯಾದ ಸರ್ಕಾರಕ್ಕೆ ಕೇಂದ್ರದ ಸಂಪೂರ್ಣ ಬೆಂಬಲ ನೀಡಿದರು. ಜತೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವ ಪ್ರಕ್ರಿಯೆಯನ್ನು ಶೀಘ್ರ ಪ್ರಾರಂಭಿಸುವುದಾಗಿ ತಿಳಿಸಿದರುʼʼ ಎಂದು ಮೂಲಗಳು ವರದಿ ಮಾಡಿವೆ. ಕಳೆದ ವಾರ ನಡೆದ ತನ್ನ ಮೊದಲ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಕ್ಯಾಬಿನೆಟ್ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವಂತೆ ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿತ್ತು.

ಒಮರ್ ಅಬ್ದುಲ್ಲಾ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಎರಡೇ ದಿನದಲ್ಲಿ ಕರೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪನೆಯ  ನಿರ್ಣಯವನ್ನು ಅಂಗೀಕರಿಸಿತ್ತು. ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಮತ್ತು ಸಚಿವರಾದ ಸಕೀನಾ ಮಸೂದ್ ಇಟೂ, ಜಾವೇದ್ ಅಹ್ಮದ್ ರಾಣಾ, ಜಾವೈದ್ ಅಹ್ಮದ್ ದಾರ್ ಮತ್ತು ಸತೀಶ್ ಶರ್ಮಾ ಉಪಸ್ಥಿತರಿದ್ದರು. ನಿರ್ಣಯದ ಕರಡನ್ನು ಸಿದ್ಧಪಡಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಲು ಒಮರ್‌ ಅಬ್ದುಲ್ಲಾ ದಿಲ್ಲಿಗೆ ಭೇಟಿ ನೀಡಿದ್ದಾರೆ.

ರಾಜ್ಯ ಸ್ಥಾನಮಾನದ ಜತೆಗೆ ಜಮ್ಮು ಮತ್ತು ಕಾಶ್ಮೀರದ ಜನರ ಗುರುತು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ರಾಜ್ಯ ಸರ್ಕಾರದ ಬದ್ಧತೆಯನ್ನು ನಿರ್ಣಯವು ಒತ್ತಿ ಹೇಳುತ್ತದೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 6 ವರ್ಷಗಳ ರಾಷ್ಟ್ರಪತಿ ಆಡಳಿತದ ನಂತರ ಹೊಸ ಸರ್ಕಾರ ರಚನೆಯಾಗಿದ್ದು, ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪನೆಯಾಗುವ ಕನಸು ಚಿಗುರೊಡೆದಿದೆ.

ಕೇಂದ್ರದೊಂದಿಗೆ ಯಾವುದೇ ಸಂಘರ್ಷ ನಡೆಸಲು ಬಯಸುವುದಿಲ್ಲ ಮತ್ತು ಜಮ್ಮು ಮತ್ತು ಕಾಶ್ಮೀರದ ಉತ್ತಮ ಆಡಳಿತ ಹಾಗೂ ಅಭಿವೃದ್ಧಿಗಾಗಿ ಕೇಂದ್ರದೊಂದಿಗೆ ಉತ್ತಮ ಸಂಬಂಧಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಒಮರ್‌ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ. “ಸಂಕೀರ್ಣ ಭದ್ರತಾ ಪರಿಸ್ಥಿತಿ ಮತ್ತು ಪಾಕಿಸ್ತಾನದ ಗಡಿಗೆ ಹತ್ತಿರವಿರುವ ಜಮ್ಮು ಮತ್ತು ಕಾಶ್ಮೀರವು ಕೇಂದ್ರ ಸರ್ಕಾರದೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಹೊಂದಲು ಬಯಸುವುದಿಲ್ಲ. ರಚನಾತ್ಮಕ ಸಂಬಂಧವನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಒಮರ್‌ ಅಬ್ದುಲ್ಲಾ ಘೋಷಿಸಿದ್ದರು.

ಈ ಸುದ್ದಿಯನ್ನೂ ಓದಿ: JK statehood: ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ; ಮೊದಲ ಕ್ಯಾಬಿನೆಟ್‌ನಲ್ಲೇ ನಿರ್ಣಯ ಪಾಸ್‌ ಮಾಡಿದ ಓಮರ್‌ ಅಬ್ದುಲ್ಲಾ