Thursday, 24th October 2024

Shiggaon By Election: ಶಿಗ್ಗಾಂವಿಯಲ್ಲಿ ಯಾಸೀರ್ ಅಹ್ಮದ್ ಖಾನ್ ಪಠಾಣ್‌ಗೆ ಕಾಂಗ್ರೆಸ್‌ ಟಿಕೆಟ್‌

Shiggaon By Election

ಹಾವೇರಿ: ಶಿಗ್ಗಾಂವಿ ವಿಧಾನಸಭಾ ಉಪ ಚುನಾವಣೆಗೆ (Shiggaon By Election) ಕಾಂಗ್ರೆಸ್‌ ಅಭ್ಯರ್ಥಿಯನ್ನು ಹೈ ಕಮಾಂಡ್‌ ಘೋಷಣೆ ಮಾಡಿದೆ. ಕ್ಷೇತ್ರದ ಕೈ ಅಭ್ಯರ್ಥಿಯಾಗಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಇವರು ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ಅವರ ಪುತ್ರ ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಿಗೆ ಈಗಾಗಲೇ ಟಿಕೆಟ್‌ ಘೋಷಣೆಯಾಗಿದ್ದು, ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್‌ ಹಾಗೂ ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಇದೀಗ ಶಿಗ್ಗಾಂವಿ ಉಪ ಚುನಾವಣೆಗೆ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರಿಗೆ ಕಾಂಗ್ರೆಸ್‌ ಟಿಕೆಟ್ ನೀಡಲಾಗಿದೆ.

ಹಾನಗಲ್​ ತಾಲೂಕಿನ ಬೊಮ್ಮನಳ್ಳಿ ಗ್ರಾಮದವರಾದ ಯಾಸೀರ್​ ಅಹ್ಮದ್​ ಖಾನ್​ ಪಠಾಣ್ , ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಬಸವರಾಜ್ ಬೊಮ್ಮಾಯಿ ವಿರುದ್ಧ ಸೋತಿದ್ದರು. ಇದೀಗ ಉಪಚುನಾವಣೆಯಲ್ಲೂ ಕಾಂಗ್ರೆಸ್​ ಪಕ್ಷ, ಯಾಸೀರ್​ ಅಹ್ಮದ್​ ಖಾನ್​ ಪಠಾಣ್ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾದ ಶಿಗ್ಗಾಂವಿ ಕ್ಷೇತ್ರದ ಟಿಕೆಟ್​ಗಾಗಿ ಕಾಂಗ್ರೆಸ್​​ನಲ್ಲಿ ಭಾರಿ ಪೈಪೋಟಿ ನಡೆದಿತ್ತು. ಕಳೆದ ಐದು ಚುನಾವಣೆಗಳಲ್ಲೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್​ ನೀಡಲಾಗಿದ್ದು, ಈ ಬಾರಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್​ ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಆದರೆ, ಈ ಬಾರಿಯೂ ಅಲ್ಪಸಂಖ್ಯಾತರಿಗೆ ಪಕ್ಷ ಮಣೆ ಹಾಕಿದೆ.

ಅಲ್ಪಸಂಖ್ಯಾ ಸಮುದಾಯದಿಂದ ಅಜ್ಜಂಫೀರ್ ಖಾದ್ರಿ ಹಾಗೂ ಯಾಸೀರ್ ಖಾನ್ ಪಠಾಣ್ ನಡುವೆ ಪೈಪೋಟಿ ಇತ್ತು. ಮತ್ತೊಂದೆಡೆ ಲಿಂಗಾಯತ ಸಮುದಾಯದಿಂದ ಸಂಜೀವ್ ನೀರಲಗಿ , ಸೋಮಣ್ಣ ಬೇವಿನಮರ ಟಿಕೆಟ್​ಗಾಗಿ ಕಸರತ್ತು ನಡೆಸಿದ್ದರು. ಆದರೆ ಅಂತಿಮವಾಗಿ ಮತ್ತೆ ಯಾಸೀರ್ ಖಾನ್ ಪಠಾಣ್ ಅವರಿಗೆ ಟಿಕೆಟ್‌ ದೊರಕಿದೆ.

ಹಾನಗಲ್​ ತಾಲೂಕಿನ ಬೊಮ್ಮನಳ್ಳಿಯವರಾದ ಯಾಸೀರ್​ ಅಹ್ಮದ್​ ಖಾನ್​ ಪಠಾಣ್ , ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಬಸವರಾಜ್ ಬೊಮ್ಮಾಯಿ ವಿರುದ್ಧ ಸೋಲುಕಂಡಿದ್ದರು. ಇದೀಗ ಉಪಚುನಾವಣೆಯಲ್ಲೂ ಅವರನ್ನೇ ಕಾಂಗ್ರೆಸ್‌ ಕಣಕ್ಕಿಳಿಸಿದೆ.

ಈ ಸುದ್ದಿಯನ್ನೂ ಓದಿ | Channapatna by election: ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ; ನಾಳೆಯೇ ನಾಮಪತ್ರ ಸಲ್ಲಿಕೆ

ಸಂಡೂರು, ಶಿಗ್ಗಾಂವಿ ಮತ್ತು ಚನ್ನಪಟ್ಟಣಕ್ಕೆ ನ.13ರಂದು ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅ. 25 ಕೊನೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು ಅ.30 ಅಂತಿಮ ದಿನವಾಗಿದೆ. ನ.23ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಬಿಜೆಪಿಯಿಂದ ಸಂಡೂರಿಗೆ ಬಂಗಾರು ಹನುಮಂತು, ಶಿಗ್ಗಾಂವಿಯಲ್ಲಿ ಭರತ್‌ ಬೊಮ್ಮಾಯಿ ಹಾಗೂ ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರಸ್ವಾಮಿ ಮೈತ್ರಿ ಟಿಕೆಟ್‌ ನೀಡಲಾಗಿದೆ.