Thursday, 24th October 2024

Father Movie: ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್ ನಟನೆಯ ‘ಫಾದರ್’ ಸಿನಿಮಾ ಚಿತ್ರೀಕರಣ ಅಂತಿಮ ಹಂತದಲ್ಲಿ

Father Movie

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ (CM Siddaramaiah) ಅವರಿಂದ 5 ಸಿನಿಮಾಗಳ ಟೈಟಲ್ ಲಾಂಚ್ ಮಾಡಿಸಿ ಸದ್ದು ಮಾಡಿದ್ದ ನಿರ್ಮಾಪಕ ಕಮ್ ನಿರ್ದೇಶಕ ಆರ್.ಚಂದ್ರು ನುಡಿದಂತೆ ಐದು ಸಿನಿಮಾಗಳಲ್ಲಿ ಮೊದಲನೆದಾಗಿ ʼಫಾದರ್ʼ ಸಿನಿಮಾದ (Father Movie) ಶೂಟಿಂಗ್ ಮುಕ್ತಾಯದ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ರಾಜ್ ಮೋಹನ್ ನಿರ್ದೇಶನದಲ್ಲಿ ಫಾದರ್ ಸಿನಿಮಾ ಮೂಡಿಬರುತ್ತಿದ್ದು ಕೊನೆಯ ಹಂತದ ಶೂಟಿಂಗ್ ಆನೇಕಲ್ ತಾಲೂಕಿನ ಐತಿಹಾಸಿಕ ದೇವಾಲಯ ಶ್ರೀ ಚಂಪಕಧಾಮಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದೆ.

ಚಂಪಕಧಾಮಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನೂರಾರು ಜನ ಜೂನಿಯರ್ ಆರ್ಟಿಸ್ಟ್‌ಗಳ ಸಮ್ಮುಖದಲ್ಲಿ ಫಾದರ್ ಚಿತ್ರದ ಸಾಹಸ ದೃಶ್ಯಗಳು ಸೆರೆಯಾಗುತ್ತಿದೆ. ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದ್ದು, ಸುಜ್ಞಾನಮೂರ್ತಿ ಛಾಯಾಗ್ರಹಣದಲ್ಲಿ ಚಿತ್ರ ಮೂಡಿಬರುತ್ತಿದೆ.

ತಂದೆ-ಮಗನ ಬಾಂಧವ್ಯ ಸಾರುವ ಮನಮುಟ್ಟುವ ಸಿನಿಮಾ

ಡಾರ್ಲಿಂಗ್ ಕೃಷ್ಣ , ಪ್ರಕಾಶ್ ರಾಜ್ ನಟನೆಯ ತಂದೆ-ಮಗನ ಬಾಂಧವ್ಯ ಸಾರುವ ಮನಮುಟ್ಟುವ ಸಿನಿಮಾ ಫಾದರ್ ಚಿತ್ರವಾಗಿದೆ. ಸದ್ದಿಲ್ಲದೆ ಶೂಟಿಂಗ್ ಮಾಡುತ್ತಿದ್ದ ಫಾದರ್ ಟೀಮ್ ಈಗ ಕೊನೆ ಹಂತದ ಚಿತ್ರೀಕರಣದಲ್ಲಿದೆ.

ಈ ಸುದ್ದಿಯನ್ನೂ ಓದಿ | Deepavali Party Fashion: ತಾರೆಯರ ದೀಪಾವಳಿ ಪಾರ್ಟಿಯಲ್ಲಿ ಮಿನುಗಿದ ಎಥ್ನಿಕ್‌ ವೇರ್ಸ್!

ಕೆಲವೇ ದಿನಗಳಲ್ಲಿ ಆ್ಯಕ್ಷನ್ ದೃಶ್ಯಗಳಿಗಾಗಿ ಫಾದರ್ ಸಿನಿಮಾ ಚಿತ್ರತಂಡ ವಾರಣಾಸಿಗೆ ಪ್ರಯಾಣ ಬೆಳಸಲಿದೆ. ಶೀಘ್ರದಲ್ಲೇ ಆರ್.ಸಿ. ಸ್ಟುಡಿಯೋಸ್ ನಿರ್ಮಾಣದ ಫಾದರ್ ಚಿತ್ರತಂಡದಿಂದ ಮತ್ತಷ್ಟು ಅಪ್‌ಡೇಟ್‌ಗಳು ಹೊರಬೀಳಲಿವೆ.