Thursday, 24th October 2024

Maharashtra Election: ಮಹಾರಾಷ್ಟ್ರ ಚುನಾವಣೆ; ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

Maharashtra Election

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ (Maharashtra Election)ಗೆ ದಿನಾಂಕ ಘೋಷಣೆಯಾಗಿದ್ದು ರಾಜಕೀಯ ಚಟುವಟಿಕೆ ಗರಿಗೆದರಿವೆ. ಪಕ್ಷಗಳು ಒಂದೊಂದಾಗಿ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿವೆ.‌ ಗುರುವಾರ (ಅ. 24) ಎನ್‌ಸಿಪಿ (ಎಸ್‌ಪಿ) ತನ್ನ ಮೊದಲ ಪಟ್ಟಿ ರಿಲೀಸ್‌ ಮಾಡಿದ ಬೆನ್ನಲ್ಲೇ ಕಾಂಗ್ರೆಸ್‌ ತನ್ನ 48 ಅಭ್ಯರ್ಥಿಗಳನ್ನು ಘೋಷಿಸಿದೆ.

ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (Maha Vikas Aghadi) 85-85-85 ಸ್ಥಾನ ಹಂಚಿಕೆ ಸೂತ್ರವನ್ನು ಘೋಷಿಸಿದ ಒಂದು ದಿನದ ನಂತರ ಕಾಂಗ್ರೆಸ್‌ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಒಪ್ಪಂದದ ಪ್ರಕಾರ ಮಹಾ ವಿಕಾಸ್ ಅಘಾಡಿಯ ಮೈತ್ರಿ ಪಕ್ಷಗಳಾದ ಶಿವಸೇನೆ (ಯುಬಿಟಿ), ಕಾಂಗ್ರೆಸ್‌ ಮತ್ತು ಶರದ್‌ ಪವಾರ್‌ ಅವರ ಎನ್‌ಸಿಪಿ (ಶರದ್‌ಚಂದ್ರ ಪವಾರ್‌) ಬಣ ತಲಾ 85 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಇನ್ನುಳಿದ 33 ಕಡೆ ಮಹಾ ವಿಕಾಸ್ ಅಘಾಡಿಯ ಸಣ್ಣ ಮಿತ್ರಪಕ್ಷಗಳು ಕಣಕ್ಕಿಳಿಯಲಿವೆ.

ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ 25 ಹಾಲಿ ಶಾಸಕರಿಗೆ ಮಣೆ ಹಾಕಿದೆ. ನಾನಾ ಪಟೋಲೆ ಸಕೋಲಿಯಿಂದ, ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರತ್ ಸಂಗಮ್ನರ್‌ನಿಂದ, ಪ್ರತಿಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಬ್ರಹ್ಮಪುರಿಯಿಂದ, ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಕರಡ್ ದಕ್ಷಿಣದಿಂದ ಮತ್ತು ಸಿಡಬಬ್ಲ್ಯುಸಿ ಸದಸ್ಯ ಮತ್ತು ಪ್ರಾದೇಶಿಕ ಕಾರ್ಯಕಾರಿ ಅಧ್ಯಕ್ಷ ನಸೀಮ್ ಖಾನ್ ಚಾಂದಿವಲಿಯಿಂದ ಸ್ಪರ್ಧಿಸಲಿದ್ದಾರೆ.

ಆರಂಭದಲ್ಲಿ ಕಾಂಗ್ರೆಸ್‌ 125 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರೆ, ಶಿವಸೇನೆ (ಯುಬಿಟಿ) 100 ಸ್ಥಾನಗಳನ್ನು ಕೋರಿತ್ತು. ಶರದ್ ಪವಾರ್ ಅವರ ಎನ್‌ಸಿಪಿ 88 ಸ್ಥಾನಗಳನ್ನು ಕೇಳಿತ್ತು. ಆದರೆ ಕೊನೆಗೆ ಶರದ್‌ ಪವಾರ್ ಮಧ್ಯ ಪ್ರವೇಶಿಸಿ, ಚರ್ಚೆ ನಡೆಸಿ 85-85-85 ಸೂತ್ರವನ್ನು ರೂಪಿಸಿದರು. ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಸೇನೆ (ಯುಬಿಟಿ)ಯ ನಾಯಕ ಸಂಜಯ್ ರಾವತ್ 288 ಸ್ಥಾನಗಳಲ್ಲಿ 270 ಸ್ಥಾನಗಳ ಬಗ್ಗೆ ಒಮ್ಮತಕ್ಕೆ ಬರಲಾಗಿದೆ ಎಂದು ತಿಳಿಸಿದ್ದರು.

“ನಮ್ಮ ಮೈತ್ರಿಕೂಟ ಸಮಾಜವಾದಿ ಪಕ್ಷ, ಪಿಡಬ್ಲ್ಯುಪಿ, ಸಿಪಿಐ (ಎಂ), ಸಿಪಿಐ ಮತ್ತು ಎಎಪಿಯನ್ನು ಒಳಗೊಂಡಿದೆ. ನಾವು 270 ಸ್ಥಾನಗಳ ಬಗ್ಗೆ ಸೌಹಾರ್ದಯುತವಾಗಿ ಒಮ್ಮತಕ್ಕೆ ಬಂದಿದ್ದೇವೆ. ಉಳಿದ ಸ್ಥಾನಗಳಿಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವನ್ನು ಸೋಲಿಸಲು ಮಹಾ ವಿಕಾಸ್ ಅಘಾಡಿ ಒಗ್ಗಟ್ಟಾಗಿದೆ” ಎಂದು ರಾವತ್ ಹೇಳಿದ್ದರು.

ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಮುಂದಾಗಿದೆ. ಬಿಜೆಪಿ ನೇತೃತ್ವದ ಈ ಮೈತ್ರಿಕೂಟಕ್ಕೆ ಮಹಾಯುತಿ ಎಂದು ಹೆಸರಿಡಲಾಗಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 288 ಸ್ಥಾನಗಳಿವೆ. 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗೆದ್ದರೆ, ಶಿವಸೇನೆ 56 ಮತ್ತು ಕಾಂಗ್ರೆಸ್ 44 ಸ್ಥಾನಗಳನ್ನು ಗಳಿಸಿತ್ತು.

ಈ ಸುದ್ದಿಯನ್ನೂ ಓದಿ: Maharashtra Election 2024 : ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿಯ 99 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ