Friday, 25th October 2024

Prof R G Hegde Column: ಜಗ್ಗದೆಯೆ ಕುಗ್ಗದೆಯೆ ಹಿಗ್ಗೆ ನಡೆ ಮುಂದೆ

ನಿಜಕೌಶಲ

ಪ್ರೊ.ಆರ್‌.ಜಿ.ಹೆಗಡೆ

ಯಶಸ್ಸಿನ ಹಾದಿ ಹಿಡಿಯಲು ಸಂಕಲ್ಪಿಸಿದವರಿಗೆ ತಾವು ಎಂಥ ಸಂಕೋಲೆಯಲ್ಲಿ ಬಂಧಿತರಾಗಿದ್ದೇವೆ, ಆ ಸಂಕೋಲೆಯನ್ನು ಮುರಿದರೆ ಮುಂದೆ ಎಂಥ ಅನುಪಮ ಸಾಧ್ಯತೆಗಳಿವೆ ಎಂಬುದು ತಿಳಿದುಬಿಡುತ್ತದೆ. ಹೀಗಾಗಿ ಅವರು ‘ಮಾನಸಿಕ ಕೋಳಗಳಿಂದ’ ತಮ್ಮನ್ನು ಬಿಡಿಸಿಕೊಂಡುಬಿಡುತ್ತಾರೆ.

ವ್ಯಕ್ತಿತ್ವ ವಿಕಸನ ಮತ್ತು ‘ಸಾಫ್ಟ್ ಸ್ಕಿಲ್ಸ್’ ವಿಷಯದಲ್ಲಿ ಆಳವಾದ ಅಧ್ಯಯನ, ಸಂಶೋಧನೆ ನಡೆಸಿ‌ ಅದಕ್ಕೆ ವಿಜ್ಞಾನದ ಸ್ವರೂಪ ನೀಡಿದವರಲ್ಲಿ ಪ್ರಮುಖನಾದವನು ಅಮೆರಿಕನ್ ವಿದ್ವಾಂಸ ಸ್ಟೀವನ್ ಕವೀ. ಅಮೆರಿಕನ್ ಮ್ಯಾನೇಜ್‌ಮೆಂಟ್ ತಜ್ಞ ಡೇಲ್ ಕಾರ್ನೆಗಿ ಈ ಕ್ಷೇತ್ರದಲ್ಲಿ ಇನ್ನೊಂದು ಮಹಾನ್ ಹೆಸರು. ವಿಷಯದ ಕುರಿತಂತೆ ಹುಚ್ಚಿಗೆ ಬಿದ್ದಿದ್ದ ಸ್ಟೀವನ್ ಕವೀ, ಸಾವಿರಾರು ಯಶಸ್ವಿ ಜನರ ಜೀವನ ವಿಧಾನ, ಮಾನಸಿಕ ಗುಣಗಳನ್ನು ಆಳವಾಗಿ ಅಧ್ಯಯನ ಮಾಡಿದ. ಹಾಗೆಯೇ, ತುಂಬ ಸಾಧಾರಣ ಜೀವನ ನಡೆಸಿದ ಲಕ್ಷಾಂತರ ಜನರ ಮನಸ್ಥಿತಿಯನ್ನೂ
ಅಧ್ಯಯನ ಮಾಡಿದ.

ಇದರಿಂದಾಗಿ ಅವನಿಗೆ, ಯಶಸ್ವಿ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿರುವ ಕೆಲವು ವಿಶೇಷ ಮಾನಸಿಕ ರೂಢಿಗಳು ಗೊತ್ತಾದವು. ಜತೆಗೆ, ಸಾಧಾರಣ ವ್ಯಕ್ತಿಯ ಮನಸ್ಸನ್ನು ವ್ಯವಸ್ಥಿತ ತರಬೇತಿಯ ಮೂಲಕ ಅಸಾಧಾರಣ ಮಟ್ಟಕ್ಕೆ ಒಯ್ಯಬಹುದು ಎಂಬುದನ್ನೂ ಆತ ಕಂಡುಕೊಂಡ. ಸ್ಟೀವನ್ ಕವೀ ಹೇಳುವಂತೆ, ‘ಯಶಸ್ವಿ’ ವ್ಯಕ್ತಿಯೆಂದರೆ
‘ದುಡ್ಡು ಮಾಡಿರುವಾತ’ ಎಂದಲ್ಲ. ಯಶಸ್ಸು ಒಂದು ಮಾನಸಿಕ ಸ್ಥಿತಿ. ತನ್ನ ವ್ಯಕ್ತಿತ್ವದ ಪೂರ್ಣಚೈತನ್ಯವನ್ನು ಬಳಸುವುದು ಹೇಗೆಂದು ಕಲಿಯುವುದರ, ನೈತಿಕವಾಗಿ ಗಳಿಸುವುದರ- ಗೆಲ್ಲುವುದರ ಜತೆಗೆ, ಬಂದ ಯಶಸ್ಸನ್ನು ಬಳಸುವುದು ಹೇಗೆ ಎಂಬುದನ್ನು ಅರಿಯುವ ಸ್ಥಿತಿ. ಯಶಸ್ಸು ಹಂತಹಂತವಾಗಿ ದಕ್ಕುವಂಥದ್ದು. ಇದರ ಭಾಗವಾಗಿ ಮೊದಲಿಗೆ ಸ್ವಂತ ಮನಸ್ಸಿನ ಮೇಲೆ ಗೆಲುವು ಪಡೆಯಬೇಕು, ಅಂದರೆ ಯಶಸ್ಸು ತರಬಲ್ಲ ರೂಢಿಗಳನ್ನು ತನ್ನದಾಗಿಸಿಕೊಳ್ಳುವುದು. ಏಕೆಂದರೆ, ರೂಢಿಗಳೇ ವ್ಯಕ್ತಿತ್ವವನ್ನು ನಿರೂಪಿಸುತ್ತವೆ. ಇಂಥ ವೈಯಕ್ತಿಕ ಗೆಲುವಿನ ಬೆನ್ನೇರಿ ಬರುವಂಥದ್ದು ಸಾರ್ವಜನಿಕ ಗೆಲುವು. ವ್ಯಕ್ತಿ ಯಶಸ್ವಿಯಾಗುವುದು ಹೀಗೆ.

ವೈಯಕ್ತಿಕ ಗೆಲುವಿಗೆ ಹಲವು ಆಯಾಮಗಳಿವೆ. ವ್ಯಕ್ತಿಯೊಬ್ಬ ತನ್ನೊಳಗೆ ಅಡಗಿರುವ ಚೈತನ್ಯವನ್ನು/ಸಾಮರ್ಥ್ಯ ವನ್ನು ಹೊರತಂದುಕೊಳ್ಳುವುದು ಇವುಗಳ ಪೈಕಿ ಪ್ರಮುಖವಾದದ್ದು. ಯಶಸ್ವಿ ವ್ಯಕ್ತಿಗಳಲ್ಲಿ ಆತ್ಮಚೈತನ್ಯ ಅರಳಿಕೊಂಡಿರುತ್ತದೆ. ಸಾಧಾರಣ ವ್ಯಕ್ತಿಗಳಲ್ಲಿ ಈ ಚೈತನ್ಯ ಮುಚ್ಚಿಬೀಳುವುದಕ್ಕೆ ಕಾರಣಗಳಿವೆ. ಎಳವೆಯಲ್ಲಿ ಅಥವಾ ಬೆಳೆಯುವ ವರ್ಷಗಳಲ್ಲಿ ಯಾವುದೋ ಕಾರಣಕ್ಕಾಗಿ ಮನಸ್ಸು ಸಂಕೋಲೆಗಳಲ್ಲಿ ಕಟ್ಟುಬಿದ್ದುಬಿಡುತ್ತದೆ. ಆನೆಮರಿಗಳು ಚಿಕ್ಕವಿದ್ದಾಗ ಅವುಗಳ ಕಾಲನ್ನು ಸಂಕೋಲೆಗಳಿಂದ ಕಟ್ಟಿರುತ್ತಾರೆ. ಅದನ್ನು ಮುರಿಯಲು ಅವು ಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಕ್ರಮೇಣ ಅವು ಬೆಳೆದು ದೊಡ್ಡವಾದಾಗ ಅಸಾಧಾರಣ ದೈಹಿಕ ಶಕ್ತಿ ಮೈಗೂಡುತ್ತದೆ. ಮರಗಳನ್ನು ಕಿತ್ತೆಸೆಯಬಲ್ಲ, ಬೃಹತ್ ದಿಮ್ಮಿಗಳನ್ನು ಎತ್ತಿಡಬಲ್ಲ ತಾಕತ್ತು ಲಭ್ಯವಾಗುತ್ತದೆ. ಆದರೆ ಅವಕ್ಕೆ ತಮ್ಮ ಕಾಲಿನ ಸಂಕೋಲೆಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕೆ ಅವು ಯತ್ನಿಸು ವುದೂ ಇಲ್ಲ. ಸಂಕೋಲೆ ಕಂಡೊಡನೆಯೇ ಸೋತು ಶರಣಾಗುತ್ತವೆ. ಮಾತ್ರವಲ್ಲ, ತಮ್ಮ ಸಾಮರ್ಥ್ಯದ ಮುಂದೆ ತೃಣಸಮಾನನಾದ ಮಾವುತನನ್ನು ಕಂಡರೆ ಅವು ವಿಪರೀತ ಅಂಜುತ್ತವೆ.

ಇಲ್ಲಿ ಆನೆಮರಿಗಳದು ಮಾನಸಿಕ ಸಮಸ್ಯೆ, ಅವುಗಳ ಮನಸ್ಸು ಕಟ್ಟುಬಿದ್ದಿದೆ. ತಮಗಿರುವ ಆ ಚೌಕಟ್ಟನ್ನು ಅವು ಮುರಿಯಬೇಕು, ಮುರಿಯಲು ಸಾಧ್ಯವಿದೆ. ಮುರಿದರೆ ಅಪರಿಮಿತ ಅವಕಾಶಗಳ ಬದುಕು ಸಿಗುತ್ತದೆ. ಆದರೆ ಅವಕ್ಕೆ
ಹೀಗೆ ಯೋಚಿಸಲೂ ಬರುವುದಿಲ್ಲ. ಹಾಗಾಗಿ ಅವುಗಳಲ್ಲಿನ ಸಾಮರ್ಥ್ಯವು ವ್ಯರ್ಥವಾಗಿ ಹೋಗಿದೆ. ಆದರೆ ಮನುಷ್ಯ
ಜಗತ್ತು ಬೇರೆ. ಬಾಲ್ಯದ ಮತ್ತು ಬೆಳೆಯುವ ಸಂದರ್ಭಗಳಲ್ಲಿ ಅವನ ಮನಸ್ಸು ಕೂಡ ಅರಿವಿಲ್ಲದೆ ಕಟ್ಟುಬೀಳ ಬಹುದು, ಬಿದ್ದಿರುತ್ತದೆ.

ಹಾಗಾದಾಗ ಶಕ್ತಿ ಅಥವಾ ಚೈತನ್ಯವು ಹೊರಬರಲು ಸಾಧ್ಯವಾಗುವುದೇ ಇಲ್ಲ. ಅಂಥವರಿಗೆ ತಮ್ಮನ್ನು ಪೂರ್ತಿ ಯಾಗಿ ಬಿಚ್ಚಿಕೊಳ್ಳಲು ಆಗುವುದೇ ಇಲ್ಲ. ಈ ಸಂಕೋಲೆಗಳ ಜತೆ ಭಯವಿರುತ್ತದೆ. ಅಂದರೆ, ಮುರಿಯಲು ಯತ್ನಿಸಿ ದರೆ ಅಥವಾ ಮುರಿದರೆ ಭಾರಿ ದುರ್ಘಟನೆಯೇ ಸಂಭವಿಸಬಹುದು ಎಂಬ ಭಯ. ಸಂಕೋಲೆಗಳನ್ನು ಮತ್ತು ಭಯವನ್ನು ಬಹುತೇಕವಾಗಿ ಸೃಷ್ಟಿಸುವುದು ಮನೆಯ ವಾತಾವರಣ, ಶಾಲೆ ಅಥವಾ ಸಮಾಜ. ಉದಾ ಹರಣೆಗೆ, ಶಿಕ್ಷಕರು ಕೆಲವು ವಿದ್ಯಾರ್ಥಿಗಳಿಗೆ, ‘ನೀನು ತಿಪ್ಪರಲಾಗ ಹಾಕಿದರೂ ಗಣಿತ ನಿನ್ನ ತಲೆಗೆ ಹತ್ತುವುದಿಲ್ಲ’ ಎಂದು ಹೇಳಿ ಅವರ ಮನಸ್ಸನ್ನು ಸಂಕೋಲೆ ಯಲ್ಲಿ ಬಿಗಿದಿರಬಹುದು. ಹೆತ್ತವರ ಅತಿಶಿಸ್ತು ಅಥವಾ ಅತಿಪ್ರೀತಿಯು ಮಗುವಿನ ಮನಸ್ಸನ್ನು ಕಟ್ಟಿಹಾಕಿರಬಹುದು.

ಸಮಾಜದಲ್ಲಿ ಹಾಸುಹೊಕ್ಕಾಗಿರುವ ಜಾತಿ-ಮತದ ಗ್ರಹಿಕೆಗಳು ಮನಸ್ಸಿಗೆ ಕೋಳ ತೊಡಿಸಿರಬಹುದು. ಗೆಳೆಯರ
ಪ್ರಭಾವವೂ ಇಂಥ ಸ್ಥಿತಿಗೆ ಕಾರಣವಾಗಿರಬಹುದು. ಒಟ್ಟಿನಲ್ಲಿ ಜನರ ಮನಸ್ಸು ಒಂದಲ್ಲಾ ಒಂದು ರೀತಿಯಲ್ಲಿ ‘ಕಂಡೀಷನ್ಡ್’ ಆಗಿಬಿಡುತ್ತದೆ. ಇಂಥ ಬಹುತೇಕರಿಗೆ ತಾವು ಚೌಕಟ್ಟುಗಳಲ್ಲಿ ಸಿಲುಕಿಬಿದ್ದಿರುವುದೂ ಗೊತ್ತಿರುವುದಿಲ್ಲ.
ಆದರೆ, ಬದುಕಿನಲ್ಲಿ ಯಶಸ್ಸಿನ ಹಾದಿ ಹಿಡಿಯಲು ಸಂಕಲ್ಪಿಸಿದವರಿಗೆ ತಾವು ಎಂಥ ಸಂಕೋಲೆ/ಚೌಕಟ್ಟಿನಲ್ಲಿ
ಸಿಲುಕಿದ್ದೇವೆ, ಅದರಿಂದ ಹೊರಬರುವುದು ಹೇಗೆ ಎಂಬುದು ಗೊತ್ತಾಗಿ ಬಿಡುತ್ತದೆ. ಆ ಸಂಕೋಲೆಯನ್ನು ಮುರಿದರೆ ಎಂಥ ಅನುಪಮ ಸಾಧ್ಯತೆಗಳಿವೆ ಎಂಬುದೂ ತಿಳಿದುಬಿಡುತ್ತದೆ.

ಹೀಗಾಗಿ ‘ಮಾನಸಿಕ ಕೋಳಗಳಿಂದ’ ತಮ್ಮನ್ನು ಬಿಡಿಸಿಕೊಂಡು ಬಿಡುತ್ತಾರೆ. ಪಂಡಿತ್ ಭೀಮಸೇನ ಜೋಷಿಯವರಿಗೆ
ಸಂಗೀತ ಕಲಿಯುವ ಆಸೆಯಿತ್ತು; ಆದರೆ ಮನೆಯ, ಸುತ್ತಮುತ್ತಲ ವಾತಾವರಣದಲ್ಲಿ ಸಮಸ್ಯೆಗಳಿದ್ದವು. ಅವರಿಗೆ
ಸಂಕೋಲೆಗಳಿಂದ ತಪ್ಪಿಸಿಕೊಳ್ಳುವುದಕ್ಕಿದ್ದ ಒಂದೇ ದಾರಿಯೆಂದರೆ ಆ ವಾತಾವರಣದಿಂದ ಹೊರಬರುವುದು. ಹಾಗಾಗಿ ಬಾಲಕ ಭೀಮಸೇನ ಜೋಷಿ ಚಿಕ್ಕಂದಿನಲ್ಲಿಯೇ ಮನೆಬಿಟ್ಟು ಪುಣೆಗೆ ಹೋಗಿ ಬಿಟ್ಟರು. ನಂತರದ್ದೆಲ್ಲಾ ಇತಿಹಾಸ!

ಮುರಿಯುವುದು ಏನನ್ನು ಮತ್ತು ಹೇಗೆ ಎಂಬುದನ್ನೂ ಇಲ್ಲಿ ಹೇಳಬೇಕು. ಮುರಿಯಬೇಕಾದ್ದು ಹಳೆಯ ರೂಢಿ
ಗಳನ್ನು ಮತ್ತು ಮನಸ್ಥಿತಿಗಳನ್ನು. ಉದಾಹರಣೆಗೆ, ಉತ್ತಮ ಆರೋಗ್ಯವನ್ನು ಹೊಂದುವುದು ಗುರಿಯಾಗಿದ್ದರೆ, ಅದಕ್ಕೆ ಸಂಬಂಧಿಸಿದ ಹಳೆಯ ರೂಢಿಗಳನ್ನು ಮುರಿದು ಹೊಸದನ್ನು ರೂಪಿಸಿಕೊಳ್ಳಬೇಕು. ಏನನ್ನು ತಿನ್ನಬೇಕು, ಯಾವ ವ್ಯಾಯಾಮ ಮಾಡಬೇಕು ಎಂಬುದನ್ನು ಅರಿಯಬೇಕು. ಮಾನಸಿಕ ಆರೋಗ್ಯಕ್ಕೆ ಸಂಬಂಽಸಿದ್ದಾದರೆ, ಹಳೆಯ ನಕಾರಾತ್ಮಕ ಆಲೋಚನಾ ಕ್ರಮಗಳನ್ನು ಬಿಟ್ಟು ಹೊಸದನ್ನು ರೂಢಿಸಿಕೊಳ್ಳಬೇಕು. ವೃತ್ತಿಜೀವನಕ್ಕೆ ಸಂಬಂಧಿಸಿದ್ದಾದರೆ ಹೊಸ ಕಲಿಕೆ, ಹೊಸ ಕೌಶಲಗಳತ್ತ, ಹೊಸ ಸವಾಲು ಸ್ವೀಕರಿಸುವತ್ತ ಮುನ್ನಡೆಯಬೇಕು. ಒಟ್ಟಾರೆಯಾಗಿ, ಒಮ್ಮೆಲೇ ಮುರಿಯುವುದರ ಬದಲು ಸಾವಕಾಶವಾಗಿ ಮುನ್ನಡೆಯುವುದು ಒಳ್ಳೆಯದು. ಇವೆಲ್ಲ ಸುಲಭವೇನಲ್ಲ. ಎಲ್ಲ ಸಾಮಾನ್ಯರಂತೆ ಬದುಕುವುದು, ಅವರ ಹಾದಿಯಲ್ಲೇ ಹೆಜ್ಜೆಹಾಕುವುದು ಸುಲಭ. ಆದರೆ, ಯಶಸ್ಸಿನದು ಕಲ್ಲು-ಮುಳ್ಳು ತುಂಬಿದ ಬೇರೆಯದೇ ಆದ ದಾರಿ.

ಸಂಕೋಲೆಗಳನ್ನು ಬಿಚ್ಚಿಕೊಂಡು ತನ್ನ ಚೈತನ್ಯವನ್ನು ಕಂಡುಕೊಳ್ಳಬಯಸುವವನು, ಆ ಕುರಿತಾ ಗಿರುವ ಭಯಗಳನ್ನು ಗೆಲ್ಲಬೇಕಾಗುತ್ತದೆ, ಅನುಮಾನಗಳಿಂದ ಹೊರಬರಬೇಕಾಗುತ್ತದೆ, ಜನರಾಡುವ ಸ್ಥೈರ್ಯಗೆಡಿಸುವ ಮಾತನ್ನು ನಿರ್ಲಕ್ಷಿಸುವಂಥ ದಿಟ್ಟತನವನ್ನು ಬೆಳೆಸಿಕೊಳ್ಳಬೇಕಾ ಗುತ್ತದೆ, ಸೋಲುಗಳನ್ನು ಎದುರಿಸಲು ಸಿದ್ಧನಾಗ ಬೇಕಾಗುತ್ತದೆ. ವ್ಯಕ್ತಿಯೊಬ್ಬನು ತನ್ನ ಪೂರ್ಣ ಪ್ರಮಾಣದ ಚೈತನ್ಯವನ್ನು ಕಂಡುಕೊಂಡು, ಯಶಸ್ಸನ್ನೂ ತನ್ಮೂಲಕ ಬದುಕಿನ ಸಾರ್ಥಕತೆಯನ್ನೂ ದಕ್ಕಿಸಿಕೊಳ್ಳಬೇಕೆಂದಿದ್ದರೆ, ಈ ದಾರಿಯನ್ನು ಹಿಡಿಯಲೇಬೇಕು. ಇತಿಹಾಸ ವನ್ನು ಸೃಷ್ಟಿಸಿ ದವರು, ಸಾರ್ಥಕತೆಯ ಬಾಳನ್ನು ಬದುಕಿದವರು ಸಂಕೋಲೆಗಳಿಂದ ತಮ್ಮನ್ನು ಬಿಡಿಸಿಕೊಂಡವರೇ ಆಗಿರುತ್ತಾರೆ ಎಂಬುದನ್ನು ಮರೆಯಬಾರದು.

ಕವಿ ರಾಬರ್ಟ್ ಫಾಸ್ಟ್‌ನ ‘ಇಠ್ಚಿeಛಿo’ ಎಂಬ ಕವಿತೆಯ ಸಾರವನ್ನು ಇಲ್ಲಿ ಉದಾಹರಿಸಬೇಕು: ವ್ಯಕ್ತಿಯೊಬ್ಬ
ಯಾವಾಗಲೂ ಊರುಗೋಲುಗಳ ಆಧಾರದ ಮೇಲೆಯೇ ನಿಂತಿರುತ್ತಾನೆ, ತನಗೆ ಸ್ವತಂತ್ರವಾಗಿ ನಿಲ್ಲಲು ಬರುವುದೇ ಇಲ್ಲ ಎಂದೇ ಅಂದುಕೊಂಡಿರುತ್ತಾನೆ. ‘ನಾನು ನಿಲ್ಲುವಂತೆ ಮಾಡು’ ಎಂದು ದೇವರನ್ನು ಪ್ರಾರ್ಥಿಸುತ್ತಾನೆ. ಅದಕ್ಕೆ ಕರಗಿ ಪ್ರತ್ಯಕ್ಷನಾಗುವ ದೇವರು ಆತನ ಊರುಗೋಲುಗಳನ್ನು ಮುರಿದು ಅದೃಶ್ಯನಾಗಿ ಬಿಡುತ್ತಾನೆ.

ವಿಪರೀತ ಭಯಕ್ಕೆ ಸಿಲುಕುವ ಆ ವ್ಯಕ್ತಿ, ಅದರ ನಡುವೆಯೇ ಅನಿವಾರ್ಯವಾಗಿ ಒಂದು ಹೆಜ್ಜೆ ಮುಂದಿಡುತ್ತಾನೆ, ಆದರೆ ನೋವಾಗುವುದಿಲ್ಲ. ಇನ್ನೊಂದು ಹೆಜ್ಜೆಯಿಟ್ಟಾಗಲೂ ನೋವಾಗುವುದಿಲ್ಲ. ಆಗ ಅವನಿಗೆ, ಆ ಊರುಗೋಲು ಗಳೇ ತನ್ನನ್ನು ನಡೆಯದಂತೆ ಮಾಡಿದ್ದವು ಎಂಬುದು ಅರಿವಾಗುತ್ತದೆ. ಇದ್ದಬದ್ದ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಕೊಂಡು, ಉತ್ಸಾಹಭರಿತನಾಗಿ ಓಡಲು ಶುರುಮಾಡುತ್ತಾನೆ!

ಒಟ್ಟಾರೆ ತಾತ್ಪರ್ಯ ಇಷ್ಟೇ- ನಡೆಯಲು ಕಲಿಯುವ ಆಸೆಯಿದ್ದರೆ, ಊರುಗೋಲುಗಳನ್ನು ಮುರಿದು ಹಾಕಬೇಕು. ವ್ಯಕ್ತಿಯೊಬ್ಬನು, ದೇವರು ತನಗೆ ಕೊಟ್ಟಿರುವ ಚೈತನ್ಯವನ್ನು ಸಂಪೂರ್ಣವಾಗಿ ಬಳಸಿ ಸಂಭ್ರಮದ ಮತ್ತು ಯಶಸ್ವಿ ಬದುಕನ್ನು ಬಾಳಬೇಕಿದ್ದರೆ, ತನ್ನ ಮನಸ್ಸನ್ನು ಯಾವೆಲ್ಲಾ ಸಂಕೋಲೆಗಳು ಮತ್ತು ಭಯಗಳು ಕಟ್ಟಿ ಹಾಕಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಂಡು ಅವನ್ನು ಮುರಿದುಹಾಕ ಬೇಕು, ನಂತರ ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ಮುನ್ನಡೆಯಬೇಕು!

(ಲೇಖಕರು ಮಾಜಿ ಪ್ರಾಂಶುಪಾಲರು ಮತ್ತು ಸಂವಹನಾ
ಸಮಾಲೋಚಕರು)

ಇದನ್ನೂ ಓದಿ: Prof R G Hegde Column: ಆತ್ಮವಿಶ್ವಾಸವನ್ನು ಅನುದಿನವೂ ಬೆಳೆಸಿಕೊಳ್ಳುವುದು ಹೇಗೆ ?