Sunday, 15th December 2024

ಆತ್ಮನಿರ್ಭರ, ಆತ್ಮವಿಶ್ವಾಸ, ಆತ್ಮತೃಪ್ತಿ

ನಾಡಿಮಿಡಿತ

ವಸಂತ ನಾಡಿಗೇರ

ಬೋರ್ಡ್ ಮೀಟಿಂಗ್ ನಡೆಯುತ್ತಿತ್ತು. ಕಂಪನಿಯ ಮುಖ್ಯ ಕಚೇರಿಯನ್ನು ಅಲ್ಲಿಂದ ಬೇರೆಡೆಗೆ ವರ್ಗಾಯಿಸೋಣ ಎಂದು ಸಿಇಒ
ಹೇಳಿದಾಗ ಅಲ್ಲಿದ್ದ ಎಲ್ಲರೂ ಸ್ತಂಭೀಭೂತರಾದರು.

‘ನಮ್ಮದು ಹೇಳಿ ಕೇಳಿ ಸಾಫ್ಟ್‌ವೇರ್ ಕಂಪನಿ. ಬಹುತೇಕ ಕಂಪನಿಗಳ ಮುಖ್ಯ ಕಚೇರಿ ಇರುವುದು ಈ ಬೇ ಏರಿಯಾದಲ್ಲೇ (ಅಂದರೆ ಕ್ಯಾಲಿಫೋರ್ನಿಯಾದಲ್ಲಿ).  ಇದು ಸಿಲಿಕಾನ್ ವ್ಯಾಲಿ. ಎಲ್ಲರೂ ಇಲ್ಲಿ ಬರುವಾಗ ನಾವು ಇಲ್ಲಿಂದ ಬೇರೆಕಡೆ ಹೋಗೋದೆಂದರೆ ಏನು ?’ ಎಂದು ಕೇಳಿದರು. ಇಲ್ಲ ಇಲ್ಲ, ನಾವು ಹೋಗಲೇಬೇಕು ಎಂದು ಸಿಇಒ ಸ್ಪಷ್ಟ ಮಾತುಗಳಲ್ಲಿ ಹೇಳಿದಾಗ, ‘ಹಾಗಾ ದರೆ ಎಲ್ಲಿಗೆ?’ ತೂರಿಬಂತು ಮತ್ತೊಂದು ಪ್ರಶ್ನೆ.

ಬಹುಶಃ ಸಿಯಾಟಲ್, ಹ್ಯೂಸ್ಟನ್‌ಗೆ ಹೋಗೋಣ ಎನ್ನುತ್ತಿರಬೇಕು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ, ಇಲ್ಲಿಂದ 10 ಸಾವಿರ ಕಿಮೀ ದೂರದಲ್ಲಿರುವ ನಮ್ಮ ದೇಶ, ನಮ್ಮ ಊರಿಗೆ ಹೋಗೋಣ ಎಂದು ತಣ್ಣಗೆ, ಆದರೆ ದೃಢವಾದ ಧ್ವನಿಯಲ್ಲಿ ಹೇಳಿ ದಾಗ ಅವರಿಗೆ ಮತ್ತಷ್ಟು ಶಾಕ್ ಆಗಿತ್ತು. ಆದರೆ ತಮ್ಮ ನಿರ್ಧಾರದ ಬಗ್ಗೆ ಅಚಲರಾಗಿದ್ದ ಸಿಇಒ, ‘ಅಮೆರಿಕದ ಅನೇಕ ಕಂಪನಿಗಳು ಭಾರತದಲ್ಲಿ ಕಚೇರಿಯನ್ನು ಸ್ಥಾಪಿಸಬಹುದಾದರೆ ನಾವೇಕೆ ನಮ್ಮ ಕಂಪನಿಯನ್ನು ನಮ್ಮ ದೇಶಕ್ಕೆ ಕೊಂಡೊಯ್ಯಬಾರದು’ ಎಂದು ಮರುಪ್ರಶ್ನೆ ಹಾಕಿದರು.

ಅಲ್ಲದೆ ನನ್ನ ಈ  ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ; ಬದಲಾಗಿ ತಮಿಳುನಾಡಿನಲ್ಲಿ ನಾನೀಗಾಗಲೇ ಇದಕ್ಕಾಗಿ
ಭೂಮಿಯನ್ನು ಖರೀದಿಸಿದ್ದೇನೆ ಎಂದು ಖಚಿತ ಮಾತುಗಳಲ್ಲಿ ಹೇಳಿದರು. ಎಲ್ಲರೂ ಅಮೆರಿಕಾ ಅಮೆರಿಕಾ ಎಂದು ಜಪ ಮಾಡು ತ್ತಿರುವಾಗ ಅಲ್ಲಿಂದ ಸ್ವದೇಶಕ್ಕೆ ಬಂದಿರುವ ಇವರ ಹೆಸರು ಶ್ರೀಧರ್ ವೆಂಬು. ಹೌದು. ಅವರೇ ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾದ ಜೋಹೋ ಕಾರ್ಪೊರೇಶನ್‌ನ ಸ್ಥಾಪಕ, ಒಡೆಯ ಹಾಗೂ ಚೇರ್ಮನ್ ಎಲ್ಲವೂ ಆಗಿರುವಂಥವರು. ಹಾಗೆಂದು ಬಿಸಿನೆಸ್ ಡಲ್ ಅಥವಾ ನಷ್ಟವಾಗಿ ಅಥವಾ ಸಾಲದ ಸುಳಿಯಲ್ಲಿ ಸಿಲುಕಿ, ಅಥವಾ ಮೋಸ, ದಗಾ ಮಾಡಿ ಓಡಿಹೋಗುತ್ತಿರುವುದಲ್ಲ. ಬದಲಾಗಿ ಮಾತೃಭೂಮಿಯ ಬಗೆಗಿನ ತುಡಿತ ಅವರನ್ನು ಮರಳಿ ತಮ್ಮೂರಿಗೆ ಕರೆತಂದಿದೆ. ಹಾಗೆಂದು ಹಠಾತ್ತಾಗಿ, ಪೂರ್ವಾಪರ
ಯೋಚನೆ ಇಲ್ಲದೆ ಕೈಗೊಂಡ ನಿರ್ಧಾರವಲ್ಲವದು.

ಸ್ವದೇಶದ ಬಗ್ಗೆ ಮೊದಲಿನಿಂದಲೂ ಅವರಿಗೆ ಪ್ರೇಮ, ಗೌರವಾದರ. ’ನೋಡಿ ಸ್ವಾಮಿ ನಾವಿರೋದೇ ಹೀಗೆ’ ಎಂಬ ಮನೋಭಾವ ದವರು. ಶ್ರೀಧರ್ ವೆಂಬು ಸಾಮಾನ್ಯ ಕುಟುಂಬದಿಂದ ಬಂದವರು. ಶ್ರೀಮಂತರೇನಲ್ಲ. ಹಾಗೆಂದು ಬಡವರೂ ಅಲ್ಲ. ಅವರ ತಂದೆ ಹೈಕೋರ್ಟ್‌ನಲ್ಲಿ ಸ್ಟೆನೋಗ್ರಾಫರ್. ತಾಯಿ ಗೃಹಿಣಿ. ಒಬ್ಬ ಸೋದರ, ಸೋದರಿ. ಹೀಗೆ ಟಿಪಿಕಲ್ ಮಧ್ಯಮವರ್ಗದ ಕುಟುಂಬ. ಪ್ರಾರಂಭಿಕ ವಿದ್ಯಾಭ್ಯಾಸ ಹಳ್ಳಿಯ ಸರಕಾರಿ ಶಾಲೆಯಲ್ಲೇ. ನಂತರ ಐಐಟಿ ಮದ್ರಾಸ್‌ನಲ್ಲಿ ಎಂಜಿನಿಯರಿಂಗ್ ಪದವಿ. ಬಳಿಕ ಅಮೆರಿಕದ ಪ್ರಿನ್ಸ್‌ಟನ್ ಯುನಿವರ್ಸಿಟಿಯಲ್ಲಿ ಎಂಎಸ್ ಮತ್ತು ಪಿಎಚ್.ಡಿ ಪದವಿ ಗಳಿಸಿದರು.

ಸಾಮಾನ್ಯ ಎಂಜಿನಿಯರಿಂಗ್ ಪದವೀಧರರಂತೆಯೇ ಕ್ವಾಲ್‌ಕಾಮ್ ಕಂಪನಿಯಲ್ಲಿ ನೌಕರಿ ಆರಂಭಿಸಿದರು. ಆದರೆ ಅವರ ಮನಸೆಲ್ಲ ಇದ್ದುದು ಬೇರೆ ಕಡೆ. ಮರಳಿ ಚೆನ್ನೈಗೆ ಬಂದವರೇ ಸೋದರ, ಸೋದರಿ ಹಾಗೂ ಮೂವರು ಮಿತ್ರರೊಡನೆ ಸೇರಿ ಕೊಂಡು 1996ರಲ್ಲಿ ‘ಅಡ್ವೆಂಟ್‌ನೆಟ್’ ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಸಾಲ ಸೋಲ ಮಾಡದೆ, ಯಾರಿಂದಲೂ ಹಣ ಸಂಗ್ರಹಿಸದೆ ತಾವೇ ಪ್ರಾರಂಭಿಸಿದ ಚಿಕ್ಕ ಉದ್ಯಮ ಅದು. ಕ್ಲೌಡ್ ಆಧಾರಿತ ಕಸ್ಟಮರ್ ರಿಲೇಶನ್‌ಶಿಪ್ ಮ್ಯಾನೇಜ್‌ಮೆಂಟ್ ಸಂಬಂಧಿತ ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳನ್ನು ರೂಪಿಸಲಾಗುತ್ತದೆ.

ಆನ್‌ಲೈನ್ ಅಕೌಂಟಿಂಗ್, ಮಾನವ ಸಂಪನ್ಮೂಲ ಮತ್ತಿತರ ಕೆಲಸಗಳನ್ನು ನಿರ್ವಹಿಸುವ ಅಪ್ಲಿಕೇಶನ್ ಗಳಿವು. ಆದರೆ ಕ್ರಮೇಣ ಕಂಪನಿಯ ಗ್ರಾಹಕರು ಬೆಳೆದಂತೆ, ಬೇಡಿಕೆ ಹೆಚ್ಚಾದಂತೆ ವಿದೇಶಗಳಲ್ಲೂ ಕಂಪನಿಯ ಕಚೇರಿಗಳನ್ನು ಸ್ಥಾಪಿಸಲಾಯಿತು. ಚೆನ್ನೈ ನಲ್ಲಿ ಕಾರ್ಪೊರೇಟ್ ಮುಖ್ಯ ಕಚೇರಿ ಇರುವಂತೆಯೇ ಕ್ಯಾಲಿಫೋರ್ನಿಯದಲ್ಲಿ ಜಾಗತಿಕ ಮುಖ್ಯ ಕಚೇರಿಯನ್ನು ಸ್ಥಾಪಿಸಿದರು. 2009 ರಲ್ಲಿ ಕಂಪನಿಯ ಹೆಸರನ್ನು ‘ಜೋಹೊ ಕಾರ್ಪೊರೇಶನ್’ ಎಂದು ಬದಲಾಯಿಸಲಾಯಿತು. ಹೀಗೆ ಕಂಪನಿ ಬೆಳೆಯುತ್ತಾ ಬೆಳೆಯುತ್ತಾ ಹೋಯಿತು. ಈಗ ಕಂಪನಿಯು 50ಕ್ಕೂ ಹೆಚ್ಚು ಆಪ್‌ಗಳನ್ನು ಅಭಿವೃದ್ಧಿ ಪಡಿಸಿದೆ. 5 ಕೋಟಿಗೂ ಮಿಕ್ಕಿ ಗ್ರಾಹಕ ರಿದ್ದಾರೆ.

ಕಂಪನಿಯ ವಹಿವಾಟು 18000 ಕೋಟಿ ರು. ಗಳಷ್ಟಾಗಿದೆ. ಅದರಲ್ಲಿ 3600 ಕೋಟಿ ರು.ಲಾಭ. ಹಾಗೆಂದು ಇದು ಪಬ್ಲಿಕ್ ಕಂಪನಿಯಲ್ಲ. ಖಾಸಗಿ ಒಡೆತನದಲ್ಲೇ ಇದೆ. ಅದರಲ್ಲಿ ಶೇ.88ರಷ್ಟು ಷೇರು ವೆಂಬು ಅವರದು. ಬಹುಶಃ ಆ ಕಾರಣದಿಂದಲೂ
ತಾವಂದುಕೊಂಡಂಥ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ವೆಂಬುಗೆ ಸಾಧ್ಯವಾಗಿರಲೂಬಹುದು. ಅದೇನೇ ಇರಲಿ. ಆದರೆ ಅಂಥದೊಂದು ಮನಸ್ಸು ಇರಬೇಕಾದುದು ಮುಖ್ಯ. ವೆಂಬು ವಿಷಯದಲ್ಲಿ ಆಗಿರುವುದೂ ಅದೇ. ಕಂಪನಿಯ ಕಾರ‍್ಯಾಚರಣೆ ಯನ್ನು ಭಾರತಕ್ಕೆ ಕೊಂಡೊಯ್ಯಬೇಕೆಂಬ ಪ್ರಸ್ತಾಪವನ್ನು ಬೋರ್ಡ್ ಮೀಟಿಂಗ್‌ನಲ್ಲಿ ಇಟ್ಟಾಗ, ಅದಕ್ಕೆ ಬಹುತೇಕರು ನಕಾರಾ ತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಆದರೆ ಆ ವೇಳೆಗಾಗಲೇ ಅವರು ಆ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಾಗಿತ್ತು. ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಮಥಾಲುಪುರಂ ಎಂಬ ಸಣ್ಣ ಹಳ್ಳಿಯಲ್ಲಿ ನಾಲ್ಕೆಕರೆ ಜಾಗವನ್ನು ಅದಾಗಲೇ ಖರೀದಿಸಿಯಾಗಿತ್ತು. ಇಂಥದೊಂದು ಅಪರೂಪದ, ಕೊಂಚ ವಿಚಿತ್ರ ಹಾಗೂ ವಿಕ್ಷಿಪ್ತ ನಿರ್ಧಾರದ ಫಲವಾಗಿ ಕಳೆದ ವರ್ಷ ಅಂದರೆ 2019 ರಲ್ಲಿ ಈ ಹಳ್ಳಿಗೆ ಕಾರ್ಪೊರೇಟ್ ಕಚೇರಿ ಸ್ಥಳಾಂತರ ಗೊಂಡಿದೆ. ಕರೋನಾ ಹಾವಳಿ ಶುರುವಾದ ಬಳಿಕ ಬಹುತೇಕ ಸಾಫ್ಟ್ವೇರ್ ಕಂಪನಿಗಳು ವರ್ಕ್ ಫ್ರಂ ಹೋಮ್ ಕಲ್ಪನೆಯನ್ನು ಅಳವಡಿಸಿಕೊಂಡಿವೆ.

ತಾವಿರುವ ಸ್ಥಳದಲ್ಲೇ ಕೆಲಸ, ಸ್ಥಳೀಯರಿಗೇ ಉದ್ಯೋಗ ಇತ್ಯಾದಿ ಘೋಷಣೆಗಳು ಮೊಳಗುತ್ತಿವೆ. ಕೂಗು ಜೋರಾಗಿದೆ. ಆದರೆ ಇದಕ್ಕೆ ನಾಲ್ಕು ತಿಂಗಳು ಮೊದಲೇ ವೆಂಬು ಆ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಪ್ರಧಾನಮಂತ್ರಿಯವರ ‘ಆತ್ಮನಿರ್ಭರ್’ ಕಲ್ಪನೆಗೂ ಅದಾಗಲೇ ಸ್ವಯಂ ಸೂರ್ತಿಯಿಂದ ಮೂರ್ತರೂಪ ನೀಡಿದ್ದರು. ಆ ಸಂದರ್ಭದಲ್ಲಿ, ಇಂಥ ದಿನಗಳು ಬರಬಹು ದೆಂಬ ಕಲ್ಪನೆ ಅವರಿಗೆ ಬಿಡಿ, ಯಾರಿಗೂ ಬಂದಿರಲಿಲ್ಲ. ಈಗ ವೆಂಬು ಈ ಹಳ್ಳಿಯಿಂದಲೇ ಕೆಲಸ ಮಾಡುತ್ತಾರೆ. ಇದಲ್ಲದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೇಣಿಗುಂಟಾದಲ್ಲೂ ಕೂಡ ಇಂಥದೊಂದು ಕಚೇರಿ ತೆರೆಯಲಾಗಿದೆ.

‘ಪ್ರಮುಖ ಐಟಿ ದಿಗ್ಗಜ ಕಂಪನಿಗಳೆಲ್ಲ ಸಿಲಿಕಾನ್ ವ್ಯಾಲಿಯಲ್ಲೇ ಕಾರ್ಯ ನಿರ್ವಹಿಸುತ್ತಿರುವಾಗ ನಾವೇಕೆ ಈ ನಿರ್ಧಾರ
ಕೈಗೊಳ್ಳಬೇಕು’ ಎಂಬುದೇ ಕಂಪನಿ ಅಧಿಕಾರಿಗಳ ಪ್ರಮುಖ ತಕರಾರು. ಅದಕ್ಕೆ ಆಗ ವೆಂಬು ನೀಡಿದ ಉತ್ತರವೂ ಅಷ್ಟೇ ಮಾರ್ಮಿಕ ವಾಗಿತ್ತು. ‘ಇವೇ ದಿಗ್ಗಜ ಕಂಪನಿಗಳು ಭಾರತದಲ್ಲೂ ಕಾರ‍್ಯಾಚರಣೆ ನಡೆಸುತ್ತಿವೆಯಲ್ಲ. ಅವರು ಇಲ್ಲಿಗೆ ಬಂದು ಕಾರ್ಯ ನಿರ್ವಹಿಸುವುದು ಸಾಧ್ಯವಾಗಬಹುದಾದರೆ ನಾವು ನಮ್ಮ ದೇಶದಲ್ಲೇ ಇದ್ದುಕೊಂಡು ಕೆಲಸ ಮಾಡುವುದು ಏಕೆ ಅಸಾಧ್ಯವಾಗುತ್ತದೆ ?’ ಜೋಹೋನಲ್ಲಿ ಸುಮಾರು 9300 ಉದ್ಯೋಗಿಗಳಿದ್ದಾರೆ. 500 ಜನರು ತೆಂಕಾಸಿ, ರೇಣಿಗುಂಟಾದಲ್ಲಿ ಸದ್ಯ ಕೆಲಸ ಮಾಡುತ್ತಿದ್ದಾರೆ.

ಕ್ರಮೇಣ ಸುಮಾರು 8500 ಜನರು ಇಲ್ಲಿಯೇ ಕಾರ್ಯನಿರ್ವಹಿಸಬೇಕು ಎಂಬ ಯೋಜನೆ ಹಾಕಿಕೊಳ್ಳಲಾಗಿ . ಈಗ ಕರೋನಾ ದಿಂದಾಗಿ ಜನರು ಅನಿವಾರ್ಯವಾಗಿ ಮನೆಯಿಂದ ಕೆಲಸ ಮಾಡತೊಡಗಿದ್ದಾರೆ. ಆದರೆ ಇದರಿಂದ ಸಾಕಷ್ಟು ಲಾಭವಾಗುತ್ತಿದೆ. ತಮ್ಮ ಕುಟುಂಬದ, ಬಂಧು ಬಾಂಧವರ ಜೊತೆ ಇರುವುದು ಸಾಧ್ಯವಾಗುತ್ತಿದೆ. ನಗರ ಪ್ರದೇಶದ ಜಂಜಾಟ ಇಲ್ಲವಾಗಿದೆ. ವೆಂಬು
ತಮ್ಮ ಕಾರ್ಯಕ್ಷೇತ್ರವನ್ನು ಮರಳಿ ತಮ್ಮೂರಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದುದರ ಹಿಂದೆಯೂ ಇದೇಫಿಲಾಸಫಿ ಅಡಗಿದೆ. ’ಈಗ ನಾನು ನನ್ನ ಬೇರುಗಳಿರುವಲ್ಲಿಗೆ ಬಂದಿದ್ದೇನೆ. ನಾನು ಹುಟ್ಟಿ ಆಡಿ ಬೆಳೆದ ಪರಿಸರದಲ್ಲೇ ಕೆಲಸ ಮಾಡುವದರಲ್ಲಿರುವ ಅನುಕೂಲ ಆನಂದ ಬೆಲೆ ಕಟ್ಟಲಾಗದು’ ಎಂಬುದು ಅವರ ಅಭಿಪ್ರಾಯ.

ಹಾಗೆಂದು ವೆಂಬು ಅವರು ತಮ್ಮ ಕಾರ್ಯಕ್ಷೇತ್ರವನ್ನು ಇಲ್ಲಿಗೆ ಸ್ಥಳಾಂತರಿಸಲು ಇನ್ನಿತರ ಕಾರಣಗಳೂ ಇವೆ. ಅವುಗಳನ್ನು ತಿಳಿದುಕೊಂಡರೆ ಅವರ ಬಗೆಗಿನ ಅಭಿಮಾನ ಯಾರಿಗಾದರೂ ಇಮ್ಮಡಿಸುವಂಥದ್ದೇ. ಜನರು ತಮ್ಮ ಊರಿನಲ್ಲೇ, ಅಥವಾ ಊರಿಗೆ
ಸಮೀಪದಲ್ಲೇ ಇದ್ದುಕೊಂಡು ಶಿಕ್ಷಣ, ಉದ್ಯೋಗ ಮಾಡಬೇಕು; ಅವರಿಗೆ ವಿದ್ಯಾಭ್ಯಾಸ, ಉದ್ಯೋಗಗಳು ಮರೀಚಿಕೆಯಾಗ ಬಾರದು. ಅವರಿಗೂ ಸಮಾನ ಅವಕಾಶ ಸಿಗಬೇಕು ಎಂಬುದು ಅವರ ಮನದಿಂಗಿತ. ಗ್ರಾಮೀಣ ಪ್ರದೇಶದಲ್ಲೇ ಸಣ್ಣ ಕಚೇರಿ ತೆರೆದು ಅಲ್ಲಿಗೆ ಸ್ಥಳಿಯ ಪ್ರತಿಭೆಗಳನ್ನೇ ಆಕರ್ಷಿಸಬೇಕೆಂಬುದು ಅವರ ಇಚ್ಛೆ.

ಹಾಗೆಂದು ಇದು ಕೇವಲ ಹಾರೈಕೆ, ಆಶಯ ಅಲ್ಲ. ಇದನ್ನು ಸ್ವತಃ ಕಾರ್ಯಗತಗೊಳಿಸಲು ಮುಂದಾಗಿದ್ದಾರೆ. ತಮ್ಮ ಕಚೇರಿ ಇರುವ ಹಳ್ಳಿಯಲ್ಲೇ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಇದೂ ಒಂದು ರೀತಿಯ ಸ್ಟಾರ್ಟ್ ಅಪ್. ಅಲ್ಲಿ ಹಳ್ಳಿ ಮಕ್ಕಳಿಗೆ ಕಲಿಸ ಲಾಗುತ್ತದೆ. ಹಾಗೆಂದು ಇದು ಅನೌಪಚಾರಿಕ ಶಿಕ್ಷಣ. ಅಲ್ಲಿ ಗ್ರೇಡು, ಮಾರ್ಕ್ಸುಗಳ ಗೋಜಲು ಇರುವುದಿಲ್ಲ. ಅವರಿಗೆ ಕೆಲಸಕ್ಕೆ ಅಗತ್ಯವಾದ ತರಬೇತಿ ನೀಡಲಾಗುತ್ತದೆ. ಹಾಗೆಂದು ಹಳ್ಳಿ ಮಕ್ಕಳು ಶಾಲೆಯ ಮೆಟ್ಟಿಲು ಹತ್ತುವುದೇ ವಿರಳ. ಅದಕ್ಕಾಗಿಯೇ ಅವರ
ಮನವೊಲಿಸಲು, ಅನುಕೂಲವಾಗಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಶಾಲಾ ಶುಲ್ಕ ಇಲ್ಲ. ಅಂದರೆ ಶಿಕ್ಷಣ ಸಂಪೂರ್ಣ ಉಚಿತ. ಜತೆಗೆ ಎರಡು ಹೊತ್ತು ಊಟ, ಸಂಜೆ ಲಘು ಉಪಾಹಾರ ನೀಡಲಾಗುತ್ತದೆ.

ಐವರಿಂದ ಪ್ರಾರಂಭವಾದ ಈ ಶಾಲೆಯಲ್ಲೀಗ 800ಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ. ಇದರ ಜತೆಗೆ 11,11,12 ನೇ ತರಗತಿಯ ಡ್ರಾಪೌಟ್ ಆದವರಿಗೂ ತರಬೇತಿ ನೀಡುವ ವ್ಯವಸ್ಥೆ ಇದೆ. ಇಲ್ಲಿಯೂ ಶುಲ್ಕವಿಲ್ಲ. ಬದಲಾಗಿ ವಿದ್ಯಾರ್ಥಿಗಳಿಗೇ 10 ಸಾವಿರ ರುಪಾಯಿ ಸ್ಟೈಪೆಂಡ್ ನೀಡಲಾಗುತ್ತಿದೆ. ಹೀಗೆ ತರಬೇತಿ ಪಡೆದವರಿಗೆ ಅವರ ಕಂಪನಿಯಲ್ಲೇ ಉದ್ಯೋಗಾವಕಾಶ ಕಲ್ಪಿಸಲಾಗು ತ್ತದೆ. ಉದಾಹರಣೆಗೆ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ವ್ಯಕ್ತಿಯೊಬ್ಬರು ತರಬೇತಿ ಪಡೆದು ಈಗ ಪ್ರೋಗ್ರಾ ಮರ್ ಆಗಿದ್ದಾರೆ. ಈ ಶಾಲೆಯಲ್ಲಿ ಕಲಿತು, ತರಬೇತಿ ಪಡೆದ ಕಾರಣ ತಾವು ಕೂಡ ಸಾಫ್ಟ್‌ವೇರ್ ಪ್ರೊಫೆಶನಲ್ ಆಗುವುದು ಸಾಧ್ಯವಾಗಿದೆ ಎಂಬುದು ಅನೇಕರ ಅಭಿಪ್ರಾಯ.

ಒಟ್ಟಾರೆಯಾಗಿ,  ಗ್ರಾಮೀಣ ಮಕ್ಕಳಿಗೆ, ಯುವಕರಿಗೆ ಶಿಕ್ಷಣ, ಉದ್ಯೋಗ ಒದಗಿಸುವ ಕೈಂಕರ್ಯವನ್ನು ಜೋಹೊ ಕೈಗೊಂಡಿದೆ.
ಇಷ್ಟೆಲ್ಲ ಹೇಳಿದ ಮೇಲೆ ಮತ್ತೊಂದು ಪ್ರಶ್ನೆ ಎದುರಾಗುತ್ತದೆ. ದುಡ್ಡಿದೆ. ಖರ್ಚು ಮಾಡುತ್ತಾರೆ. ಏನು ಮಹಾ ಎಂದು ಅನೇಕರು ಮೂಗು ಮುರಿಯಬಹುದು. ಆದರೆ ನಿಮಗೆ ತಿಳಿದಿರಲಿ. ವೆಂಬು ಬರಿ ಹೇಳುವುದಿಲ್ಲ, ಮಾತನಾಡುವುದಿಲ್ಲ. ಮಾಡಿ ತೋರಿಸು ತ್ತಾರೆ. ಅವರ ವ್ಯಕ್ತಿತ್ವವೇ ಅಂಥದ್ದು, ಅವರದು ಸರಳ ಜೀವನ. 18 ಸಾವಿರ ಕೋಟಿ ರುಪಾಯ ವಹಿವಾಟು ಇರುವ , ಸ್ವತಃ 4-5 ಸಾವಿರ ಕೋಟಿ ರು. ಸಂಪತ್ತು ಹೊಂದಿರುವ ವ್ಯಕ್ತಿ ಭಾರತದ ನೂರು ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು.

ನಿಖರವಾಗಿ ಹೇಳಬೇಕೆಂದರೆ 76 ನೇ ಸ್ಥಾನದಲ್ಲಿದ್ದಾರೆ. ಬಯಸಿದ್ದರೆ ಅಮೆರಿಕಾದಲ್ಲೇ ಹಾಯಾಗಿ ಇರಬಹುದಿತ್ತು. ಆದರೆ ವೆಂಬು ಐಷಾರಾಮಿ ಜೀವನ ನಡೆಸುವವವರಲ್ಲ. ಒಂದು ಟಿ ಶರ್ಟ್, ಜೀನ್ಸ್ ಪ್ಯಾಂಟ್, ಜೊತೆಗೊಂದು ಸ್ಯಾಂಡಲ್ಸ್. ಶೂ ಕೂಡ ಧರಿಸುವು ದಿಲ್ಲ. ’ನಾನು ಬಂಡವಾಳ ಶಾಹಿ ಹೌದು. ಆದರೆ ನನ್ನ ಒಟ್ಟು ಸಂಪತ್ತಿನ ಬಗೆಗೆ ನನಗೆ ಆಸಕ್ತಿ ಇಲ್ಲ’ ಎನ್ನುತ್ತಾರೆ. ಹೀಗಾಗಿಯೇ ಹಳ್ಳಿಗೆ ಬಂದು ನೆಲೆಸಿದ್ದಾರೆ. ಅಲ್ಲಿ ಅವರ ಜೀವನ ಬೆಳಗ್ಗೆ 4 ಕ್ಕೇ ಆರಂಭ. ಆ ವೇಳೆಗೆ ಅಮೆರಿಕದಲ್ಲಿರುವ ಕಚೇರಿಯ ಅಧಿಕಾರಿ ಗಳ ಜತೆ ಒಂದು ಸುತ್ತಿನ ಚರ್ಚೆ ಮತ್ತಿತರ ವ್ಯವಹಾರ ಸಂಬಂಧಿ ಕೆಲಸ. 6 ಗಂಟೆಗೆಲ್ಲ ಸುದೀರ್ಘ ವಾಕ್. 9 ಗಂಟೆಯ ಹೊತ್ತಿಗೆ ಬ್ರೇಕ್ ಫಾಸ್ಟ್ ಮಾಡಿದ ಬಳಿಕ ಮತ್ತೆ ಕಂಪನಿಯ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಈ ನಡುವೆ ತಮ್ಮ ಶಾಲೆಯಲ್ಲಿ ಮಕ್ಕಳಿಗೆ ಪಾಠವನ್ನೂ ಮಾಡುತ್ತಾರೆ.

ಸಂಜೆ ಕೃಷಿಯಲ್ಲಿ ತೊಡಗುತ್ತಾರೆ. ಈಜುತ್ತಾರೆ. ಹಾವು ಹಿಡಿಯುತ್ತಾರೆ. ಬಳಿಕ ಒಂದಷ್ಟು ಓದು ಇಲ್ಲವೆ ಸಾಮಾಜಿಕ ಜಾಲತಾಣ ಗಳನ್ನು ಗಮನಿಸುತ್ತಾರೆ. ಟಿವಿ ನೋಡುವುದಿಲ್ಲ. ರಾತ್ರಿ 9 ಗಂಟೆಗೆಲ್ಲ ನಿದ್ದೆಗೆ ಜಾರುತ್ತಾರೆ. ಅಲ್ಲಿ ಒಂದು ಪಂಚೆ, ಶರ್ಟ್ ಅಷ್ಟೇ ಅವರ ಉಡುಪು. ಹಳ್ಳಿಯಲ್ಲಿ ಸಂಚರಿಸುವಾಗ ಸೈಕಲ್ ಏರುತ್ತಾರೆ. 10-12 ಕಿಮೀ ದೂರದಲ್ಲಿ ಸಂಚರಿಸಲು ಒಂದು ಎಲಿಕ್ಟ್ರಿಕ್ ಆಟೊ ಬಳಸುತ್ತಾರೆ. ಹೀಗೆ ತಮ್ಮ ಹಳ್ಳಿಯಲ್ಲಿ ಸಾಮಾನ್ಯರಂತೆ ಬದುಕು ಸಾಗಿಸುತ್ತಿರುವುದನ್ನು ನೋಡಿದಾಗ ಅವರೊಬ್ಬ ದೊಡ್ಡ ಕಂಪನಿಯ ಮಾಲೀಕ ಎಂಬುದೇ ಗೊತ್ತಾಗದು. ಇದರ ಜತೆಗೆ ಅದೇ ಹಳ್ಳಿಯಲ್ಲಿ ಆಸ್ಪತ್ರೆ ಮತ್ತಿತರ ಸೌಲಭ್ಯಗಳನ್ನೂ ಕಲ್ಪಿಸುತ್ತಿದ್ದಾರೆ.

ಹೀಗೆ ಲಕ್ಷ್ಮಿ- ಸರಸ್ವತಿ ಎರಡೂ ಒಲಿದಿರುವ ಅವರು ಜೊತೆಜೊತೆಯಲ್ಲೇ ಸರಳ ಸಜ್ಜನಿಕೆಯನ್ನೂ ಮೈಗೂಡಿಸಿಕೊಂಡಿದ್ದಾರೆ. ಸಣ್ಣ ಕಚೇರಿ, ಮನೆಯೇ ಕಚೇರಿ; ಸ್ಥಳಿಯರಿಗೆ ಅವಕಾಶ ಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟು ಕೆರೆಯ ನೀರನು ಕೆರೆಗೆ ಚೆಲ್ಲುತ್ತಿದ್ದಾರೆ. ಅವರ ಪ್ರಯೋಗ ಯಶಸ್ವಿಯಾಗುವುದೇ ಎಂಬುದನ್ನು ಕಾದುನೋಡಬೇಕು. ಹಾಗಾದರೆ ಹಳ್ಳಿ ಕಚೇರಿಗಳೇ ಭವಿಷ್ಯದ ಕಾರ್ಯಸೌಧ ಗಳಾಗಬಹುದು.

ನಾಡಿಶಾಸ್ತ್ರ
ಜೋಹೋ ಮೂಲಕ ಓಹೋ ಎನ್ನುವಂಥ
ಅದ್ಭುತ ಸಾಧನೆ ಮಾಡಿರುವ ಧೀಮಂತ
ಇಷ್ಟಾದರೂ ವೆಂಬುಗೆ ಬಂದಿಲ್ಲ ಕೊಂಬು
ಹಳ್ಳಿಯೇ ಈತನ ಕಾರ್ಯಕ್ಷೇತ್ರ ನಂಬು