Saturday, 23rd November 2024

Gold Pledging: ಹೆಂಡತಿ ಒಪ್ಪಿಗೆಯಿಲ್ಲದೆ ಆಭರಣ ಅಡವಿಟ್ಟರೆ ಜೈಲು ಶಿಕ್ಷೆ; ಹೈಕೋರ್ಟ್ ತೀರ್ಪು

Gold Pledging

ಕೇರಳ : ಮನೆಯಲ್ಲಿ ಚಿನ್ನವಿದ್ದರೆ ಯಾವುದಾದರೂ ಕಷ್ಟಕಾಲಕ್ಕೆ ಆಗುತ್ತದೆ ಎನ್ನುವುದು ಎಲ್ಲರ ಮಾತು. ಯಾಕೆಂದರೆ ಅದನ್ನು ಹೋಗಿ ಅಡವಿಟ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಪತ್ನಿಯ ಬಳಿ ಚಿನ್ನವಿದ್ದರೆ ಪತಿಗೆ ಕೂಡ ಸಹಾಯವಾಗುತ್ತದೆ. ಹಾಗಾಗಿ ಮದುವೆ ಸಮಯದಲ್ಲಿ ತವರು ಮನೆಯ ಕಡೆಯಿಂದ ಹೆಣ್ಣಿಗೆ ಒಂದಷ್ಟು ಒಡವೆ ಮಾಡಿಸಿಕೊಡುತ್ತಾರೆ. ತುಂಬಾ ಕಷ್ಟ ಎದುರಾದಾಗ ಪತಿಯು ಪತ್ನಿಯ ಒಪ್ಪಿಗೆಯ ಮೇರೆಗೆ ಚಿನ್ನ ಅಡವಿಟ್ಟು(Gold Pledging) ಹಣ ಪಡೆದು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುತ್ತಾನೆ. ಆದರೆ ಕೆಲವೊಬ್ಬರು ಹಣದ ದುರಾಸೆಗೆ ಪತ್ನಿಯನ್ನು ಕೇಳದೆ ಆಕೆಯ ಚಿನ್ನವನ್ನು ಅಡವಿಟ್ಟು ಹಣ ತೆಗೆದೆದುಕೊಳ್ಳುತ್ತಾರೆ. ಅಂತವರ ದುಷ್ಕೃತ್ಯಕ್ಕೆ ಇದೀಗ ಬ್ರೇಕ್ ಬೀಳಲಿದೆ.

ಪತ್ನಿಯ ಒಪ್ಪಿಗೆಯಿಲ್ಲದೆ ಚಿನ್ನದ ಆಭರಣಗಳನ್ನು ಅಡವಿಡುವುದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 406 ರ ಅಡಿಯಲ್ಲಿ ಕ್ರಿಮಿನಲ್ ನಂಬಿಕೆ ದ್ರೋಹ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಎ. ಬದರುದ್ದೀನ್ ಅವರು ಈ ತೀರ್ಪನ್ನು ನೀಡಿದ್ದಾರೆ. ಕಾಸರಗೋಡು ಮೂಲದ ಸುರೇಂದ್ರ ಕುಮಾರ್ ಸಲ್ಲಿಸಿದ್ದ 2024ರ ಕ್ರಿಮಿನಲ್ ಪರಿಶೀಲನಾ ಅರ್ಜಿ ಸಂಖ್ಯೆ 1006ರ ಅನ್ನು ನ್ಯಾಯಮೂರ್ತಿ ಎ.ಬದರುದ್ದೀನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಕ್ರಿಮಿನಲ್ ನಂಬಿಕೆ ದ್ರೋಹದ ಅಪರಾಧಕ್ಕಾಗಿ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ವಿಚಾರಣಾ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯದ ಈ ಆದೇಶವನ್ನು ಆರೋಪಿ ಸುರೇಂದ್ರ ಕುಮಾರ್ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

Gold Pledging

ಹೆಂಡತಿಯ ಚಿನ್ನದ ಆಭರಣಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸುರೇಂದ್ರ ಕುಮಾರ್ ಅವರು ಹೆಂಡತಿಯ ನಂಬಿಕೆಯನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಅವರ ಕ್ರಿಮಿನಲ್ ನಂಬಿಕೆ ಉಲ್ಲಂಘನೆಯ ಅಪರಾಧವು ಸಾಬೀತಾಗಿರುವುದರಿಂದ ವಿಚಾರಣಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಘೋಷಿಸಿದೆ.

ಏನಿದು ಪ್ರಕರಣ :
ಮದುವೆಯ ಸಮಯದಲ್ಲಿ ಸುರೇಂದ್ರ ಕುಮಾರ್ ಪತ್ನಿಯ ತಾಯಿ ತನ್ನ ಮಗಳಿಗೆ 50 ಪವನ್ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ ಪತ್ನಿ ತನ್ನ ಚಿನ್ನದ ಜವಾಬ್ದಾರಿಯನ್ನು ತನ್ನ ಗಂಡನಿಗೆ ನೀಡಿದ್ದರು ಆದರೆ, ಸುರೇಂದ್ರ ಕುಮಾರ್ ತನ್ನ ಪತ್ನಿಯನ್ನು ಕೇಳದೆ ಚಿನ್ನವನ್ನು ಬ್ಯಾಂಕ್‍ನಲ್ಲಿ ಅಡವಿಟ್ಟಿದ್ದಾರೆ. ಹಾಗಾಗಿ ವಿಚಾರಣಾ ನ್ಯಾಯಾಲಯವು ಆ ವ್ಯಕ್ತಿಗೆ ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿತ್ತು. ಮತ್ತು ಸೆಷನ್ಸ್ ನ್ಯಾಯಾಲಯವು ಈ ಆದೇಶವನ್ನು ಎತ್ತಿಹಿಡಿದಿದೆ ಹಾಗೂ ಅದರ ಜೊತೆಗೆ ಪತ್ನಿಗೆ 5,00,000 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸುವಂತೆ ವ್ಯಕ್ತಿಗೆ ಆದೇಶಿಸಿದೆ.

ಕ್ರಿಮಿನಲ್ ನಂಬಿಕೆ ಉಲ್ಲಂಘನೆಗಾಗಿ ಐಪಿಸಿಯ ಸೆಕ್ಷನ್ 406 ರ ಅಡಿಯಲ್ಲಿ ಶಿಕ್ಷೆ
ಐಪಿಸಿಯ ಸೆಕ್ಷನ್ 406 ರ ಅಡಿಯಲ್ಲಿ ಕ್ರಿಮಿನಲ್ ನಂಬಿಕೆ ಉಲ್ಲಂಘನೆಗೆ ಶಿಕ್ಷೆಯನ್ನು ವ್ಯಾಖ್ಯಾನಿಸಲಾಗಿದೆ. “ಕ್ರಿಮಿನಲ್ ನಂಬಿಕೆ ಉಲ್ಲಂಘನೆಯನ್ನು ಮಾಡುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ” ಎಂದು ಅದು ಹೇಳುತ್ತದೆ. ಆರೋಪಿಯು ಇನ್ನೊಬ್ಬರ ಆಸ್ತಿಯನ್ನು ತನ್ನ ಸ್ವಂತ ಬಳಕೆಗಾಗಿ ಬಳಸಿಕೊಂಡರೆ ಅಥವಾ ತನ್ನದಾಗಿ ಬದಲಾಯಿಸಿಕೊಂಡರೆ ಈ ಅಪರಾಧವನ್ನು  ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಎನ್ನಲಾಗುತ್ತದೆ.  ಕ್ರಿಮಿನಲ್ ನಂಬಿಕೆ ಉಲ್ಲಂಘನೆಯು ಜಾಮೀನು ರಹಿತ ಅಪರಾಧವಾಗಿದೆ.

ಇದನ್ನೂ ಓದಿ: ಅತ್ಯಾಚಾರಿಗಳಿಗಲ್ಲ, ಅತ್ಯಾಚಾರಕ್ಕೆ ಒಳಗಾದವರಿಗೆ ಈ ದೇಶದಲ್ಲಿ ಗಲ್ಲು ಶಿಕ್ಷೆ!

ಸ್ತ್ರೀಧನ್ ಮತ್ತು ಸೆಕ್ಷನ್ 406
ಮದುವೆಯ ಸಮಯದಲ್ಲಿ ಪೋಷಕರು ನೀಡಿದ ಚಿನ್ನದ ಆಭರಣಗಳು ಮತ್ತು ಇತರ ಆಸ್ತಿಗಳನ್ನು ಒಳಗೊಂಡಿರುವ ತನ್ನ ‘ಸ್ತ್ರೀಧನ್’ ನ ಏಕೈಕ ಮಾಲೀಕ ಮಹಿಳೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಾನೂನಿನ ಪ್ರಕಾರ, ತಂದೆಗೆ ಸಹ ತನ್ನ ಮಗಳ ‘ಸ್ತ್ರೀಧನ್’ ವಸೂಲಿ ಮಾಡುವ ಹಕ್ಕಿಲ್ಲ. ಹಾಗಾಗಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಗಮನದಲ್ಲಿಟ್ಟುಕೊಂಡು, ಗಂಡಂದಿರು ಸಹ ಪತ್ನಿಯರ ಒಪ್ಪಿಗೆಯಿಲ್ಲದೆ ಅವರ ‘ಸ್ತ್ರೀಧನ್’ ಅನ್ನು ಬಳಸುವಂತಿಲ್ಲ.