Friday, 25th October 2024

National Investigation Agency : ಬಿಷ್ಣೋಯ್ ಸಹೋದರನ ಸುಳಿವು ಕೊಟ್ಟವರಿ 10 ಲಕ್ಷ ರೂ. ಇನಾಮು ಘೋಷಿಸಿ ಎನ್‌ಐಎ

National Investigation Agency 

ಮುಂಬೈ : ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್ (Lawrence Bishnoi) ಸಹೋದರ ಅನ್ಮೋಲ್‌ ಬಿಷ್ಣೋಯ್ (Anmol Bishnoi) ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (National Investigation Agency) ಘೋಷಿಸಿದೆ. ರಾಷ್ಟ್ರೀಯ ತನಿಖಾ ದಳದ ಮೋಸ್ಟ್‌ ವಾಂಟೆಂಡ್‌ ವ್ಯಕ್ತಿಗಳ ಪಟ್ಟಿಯಲ್ಲಿ ಅನ್ಮೋಲ್‌ ಬಿಷ್ಣೋಯ್ ಹೆಸರನ್ನು ಸೇರಿಸಲಾಗಿದೆ. ಬಾಬಾ ಸಿದ್ದಿಕಿ ಹತ್ಯೆ (Baba Siddiqui murder) ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಶಂಕಿತ ಶೂಟರ್‌ಗಳು ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಮುಂಬೈ ಕ್ರೈಂ ಬ್ರಾಂಚ್ ಹೇಳಿದೆ.

ಬಾಬಾ ಸಿದ್ದಿಕಿಗೆ ಗುಂಡಿಕ್ಕುವ ಮುನ್ನ ಶೂಟರ್‌ಗಳು ಅನ್ಮೋಲ್ ಬಿಷ್ಣೋಯ್ ಜತೆ ಸ್ನ್ಯಾಪ್‌ಚಾಟ್ ಮೂಲಕ ಮಾತನಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಶೂಟರ್‌ಗಳು ಮಾಸ್ಟರ್‌ಮೈಂಡ್ ಪ್ರವೀಣ್ ಲೋಂಕರ್ ಮತ್ತು ಅನ್ಮೋಲ್ ಬಿಷ್ಣೋಯ್ ಪರಸ್ಪರ ನೇರವಾಗಿ ಸಂಪರ್ಕದಲ್ಲಿದ್ದು, ಸ್ನ್ಯಾಪ್‌ಚಾಟ್‌ನಲ್ಲಿ ಸಂದೇಶಗಳನ್ನು ಸ್ವೀಕರಿಸಿ ನಂತರ ಅದನ್ನು ಡಿಲಿಟ್‌ ಮಾಡುತ್ತಿದ್ದರು. ಅಮೆರಿಕ ಮತ್ತು ಕೆನಡಾದಲ್ಲಿದ್ದುಕೊಂಡೇ ಅನ್ಮೋಲ್‌ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಊಹಿಸಲಾಗಿದೆ.

ಅನ್ಮೋಲ್‌ ಆರೋಪಿಗಳಿಗೆ ಸೂಚನೆ ಕೊಡುತ್ತಿದ್ದ. ಕಳೆದ ವರ್ಷ ನಕಲಿ ಪಾಸ್‌ಪೋರ್ಟ್‌ ಸೃಷ್ಟಿಸಿ ಭಾರತದಿಂದ ಅನ್ಮೋಲ್‌ ಪರಾರಿಯಾಗಿದ್ದ. ನಂತರ ಕೆನಡಾ ಹಾಗೂ ಅಮೆರಿಕದಲ್ಲಿ ಕಾಣಿಸಿಕೊಂಡಿದ್ದ ಎಂದು ಗುಪ್ತಚರ ಮಾಹಿತಿ ತಿಳಿಸಿದೆ. 2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಈತನ ಹೆಸರು ತಳುಕುಹಾಕಿಕೊಂಡಿದೆ. ಈ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದ ನಂತರ ಮುಂಬೈ ಪೊಲೀಸರು ಆತನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಇದೀಗ ಆತನ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಎನ್‌ಐಎ ಹೇಳಿದೆ.

ಇದನ್ನೂ ಓದಿ: Zeeshan Siddique: ಬಾಬಾ ಸಿದ್ದಿಕಿ ಪುತ್ರ ಅಜಿತ್‌ ಪವಾರ್‌ ನೇತೃತ್ವದ NCPಗೆ ಸೇರ್ಪಡೆ

ಮುಂಬೈನ ಬಾಂದ್ರಾ ಪೂರ್ವದ ನಿರ್ಮಲ್ ನಗರದಲ್ಲಿನ ಬಾಬಾ ಸಿದ್ದಿಕಿ ಮಗನ ಕಚೇರಿಯ ಹೊರಗೆ ಬಾಬಾ ಸಿದ್ದಿಕಿ ಮೇಲೆ ಗುಂಡು ಹಾರಿಸಲಾಯಿತು. ತುರ್ತು ಚಿಕಿತ್ಸೆಗಾಗಿ ಅವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಗಂಟೆಗಳ ನಂತರ ಮೃತಪಟ್ಟಿದ್ದಾರೆ. ಇಬ್ಬರು ಶೂಟರ್‌ಗಳು ಮತ್ತು ಶಸ್ತ್ರಾಸ್ತ್ರ ಪೂರೈಕೆದಾರರು ಸೇರಿದಂತೆ 10 ಶಂಕಿತರನ್ನು ಮುಂಬೈ ಅಪರಾಧ ವಿಭಾಗವು ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಬಂಧಿತರು ಸಂದೇಶವನ್ನು ಕಳುಹಿಸಲು ಸ್ನಾಪ್‌ ಚಾಟ್‌ ಬಳಕೆ ಮಾಡಿದ್ದು ಹತ್ಯೆಗೂ ಮುನ್ನ, ಬಾಬಾ ಸಿದ್ದಿಕಿ ಹಾಗೂ ಅವರ ಮಗನ ಫೋಟೋವನ್ನು ಅನ್ಮೋಲ್‌ ಶೂಟರ್‌ಗಳಿಗೆ ಕಳಿಸಿದ್ದ ಎಂದು ತಿಳಿದು ಬಂದಿದೆ. ಲಾರೆನ್ಸ್‌ ಬಿಷ್ಣೋಯ್ ಗುಜರಾತಿನ ಸಬರಮತಿ ಜೈಲಿನಲ್ಲಿರುವ ಕಾರಣ ಆತನ ಸಹೋದರ ಅನ್ಮೋಲ್‌ ಬಿಷ್ಣೋಯ್ ನಾಯಕತ್ವ ವಹಿಸಿಕೊಂಡಿದ್ದಾನೆ. ಕೃಷ್ಣಮಗ ಕೊಂದ ಆರೋಪ ಎದುರಿಸುತ್ತಿರುವ ಸಲ್ಮಾನ ಖಾನ್‌ ಮೇಲೆ ನಿರಂತರವಾಗಿ ದ್ವೇಷ ಸಾಧಿಸುತ್ತಿರುವ ಬಿಷ್ಣೋಯ್ ಗ್ಯಾಂಗ್‌ ಸಲ್ಮಾನ್‌ ಹತ್ಯೆಗೆ ಸಂಚು ರೂಪಿಸಿತ್ತು. ಬಾಬಾ ಸಿದ್ದಿಕಿ ಮರಣದ ನಂತರ ಸಲ್ಮಾನ್‌ಗೆ ಹೆಚ್ಚು ಭದ್ರತೆ ಒದಗಿಸಲಾಗಿದೆ.